ಶುಕ್ರವಾರ, ಮೇ 7, 2021
26 °C

ಹೊರಗುತ್ತಿಗೆ ಶಿಕ್ಷಕರ ಮುಂದುವರಿಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರಿ ಆದರ್ಶ ವಿದ್ಯಾಲಯ(ಇಂಗ್ಲಿಷ್ ಮಾಧ್ಯಮ)  ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಗಳ ಹೊರಗುತ್ತಿಗೆ ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ಅವಧಿಗೂ ಸೇವೆಯಲ್ಲಿ ಮುಂದುವರೆಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಆದರ್ಶ ವಿದ್ಯಾಲಯಗಳ ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಗಳ ಹೊರ ಗುತ್ತಿಗೆ ಶಿಕ್ಷಕರುಗಳ, ಶಿಕ್ಷಕೇತರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿತು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಲೀಲಮ್ಮ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ ಆದರ್ಶ ವಿದ್ಯಾಲಯಗಳು ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಗಳಲ್ಲಿ 2011 ಆಗಸ್ಟ್‌ನಿಂದ 3 ಸಾವಿರ ಶಿಕ್ಷಕರು ಹಾಗೂ ಶಿಕ್ಷಕೇತರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ಈ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸೇವಾ ಭತ್ಯೆಯಾಗಲಿ, ವೈದ್ಯಕೀಯ ಭತ್ಯೆಯಾಗಲಿ ನೀಡುತ್ತಿಲ್ಲ. ಜೊತೆಗೆ ಗುತ್ತಿಗೆ ಅವಧಿ ಮುಗಿದಿರುವ ಮಾಹಿತಿ ನೀಡದೆ ಶಿಕ್ಷಕರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ. ಕೆಲಸಕ್ಕೆ ಸೇರುವಾಗ ಪಡೆದಿದ್ದ ಭದ್ರತಾ ಠೇವಣಿ ಮೊತ್ತವನ್ನೂ ಸಹ ಆಡಳಿತ ಮಂಡಳಿ ನೀಡುತ್ತಿಲ್ಲ. ಇದರಿಂದ ಶಿಕ್ಷಕರ ಬದುಕು ಬೀದಿಗೆ ಬಂದಿದೆ ಎಂದು ಆರೋಪಿಸಿದರು.  ಸಂಘದ ಸದಸ್ಯ ಮುರಳಿ ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿಯಲ್ಲಿ ಆದರ್ಶ ವಿದ್ಯಾಲಯಗಳು ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಿ, ಕೃಪಾಂಕವನ್ನು ನಿಗದಿ ಮಾಡಬೇಕು. ಕಾಯಂ ನೌಕರರಿಗೆ ನೀಡುವ ರಜೆ ಸೌಲಭ್ಯವನ್ನೂ ಹೊರ ಗುತ್ತಿಗೆ ಶಿಕ್ಷಕರಿಗೂ ನೀಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ಇದೇ 6ರ ಒಳಗಾಗಿ ಸೂಕ್ತ ಕ್ರಮ ಜರುಗಿಸದೇ ಹೋದರೆ ಆಮರಣಾಂತ ಉಪವಾಸ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.