ಹೊರಗುತ್ತಿಗೆ ಸೇವಾ ಏಜೆನ್ಸಿಗಳ ವಿರುದ್ಧ ಕ್ರಮ

7

ಹೊರಗುತ್ತಿಗೆ ಸೇವಾ ಏಜೆನ್ಸಿಗಳ ವಿರುದ್ಧ ಕ್ರಮ

Published:
Updated:
ಹೊರಗುತ್ತಿಗೆ ಸೇವಾ ಏಜೆನ್ಸಿಗಳ ವಿರುದ್ಧ ಕ್ರಮ

ರಾಮನಗರ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕನಿಷ್ಠ ವೇತನ, ಪಿ.ಎಫ್, ಇಎಸ್‌ಐ ಸೌಲಭ್ಯ ಒದಗಿಸದೆ ಹಾಗೂ ಎರಡು - ಮೂರು ತಿಂಗಳಾದರೂ ವೇತನ ನೀಡದೆ ಸತಾಯಿಸುತ್ತಿರುವ ಹೊರಗುತ್ತಿಗೆ ಸೇವಾ ಏಜೆನ್ಸಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಅಂತಹ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದರ ಜತೆಗೆ ಕಾರ್ಮಿಕ ಇಲಾಖೆಗೆ ದೂರು ನೀಡಿ ಕಾನೂನು ಹೋರಾಟ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ವಿ.ಹಂಸಕುಮಾರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಸದಸ್ಯ ಎಂ.ಕೆ.ಧನಂಜಯ್ ಅವರು ಕೇಳಿದ ಪ್ರಶ್ನೆಗೆ ಸುದೀರ್ಘ ಚರ್ಚೆ ನಡೆದ ನಂತರ ಈ ನಿರ್ಧಾರಕ್ಕೆ ಬರಲಾಯಿತು.ಬಿಸಿಎಂ ಇಲಾಖೆಯಡಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಗುತ್ತಿಗೆ ಸಿಬ್ಬಂದಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಅಡುಗೆ ಮಾಡುವವರು, ಅವರ ಸಹಾಯಕರು, ಶಿಕ್ಷಕರು ಸೇರಿದಂತೆ ಯಾರಿಗೂ ನಿಗದಿ ಪಡಿಸಿದ ವೇತನ ನೀಡುತ್ತಿಲ್ಲ. ನಿಗದಿಗಿಂತ ಎರಡು ಸಾವಿರ ರೂಪಾಯಿ ಕಡಿಮೆ ವೇತನ ನೀಡಲಾಗುತ್ತಿದೆ. ಪಿ.ಎಫ್ ಮತ್ತು ಇಎಸ್‌ಐ ಸೌಲಭ್ಯವನ್ನೂ ಕಲ್ಪಿಸದೆ ಗುತ್ತಿಗೆ ಏಜೆನ್ಸಿಗಳು ವಂಚಿಸಿವೆ ಎಂದು ಧನಂಜಯ್ ದೂರಿದರು.ಮೂರು- ನಾಲ್ಕು ತಿಂಗಳಿಂದ ಗುತ್ತಿಗೆ ಸಿಬ್ಬಂದಿಗೆ ಏಜೆನ್ಸಿ ವೇತನ ನೀಡಿಲ್ಲ. ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಿಸಿಎಂ (ಪ್ರಬಾರ) ಅಧಿಕಾರಿ ಲಕ್ಷ್ಮೀಪತಿ ರೆಡ್ಡಿ ಅವರು ಗುತ್ತಿಗೆ ಏಜೆನ್ಸಿಯ ಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ. ಅವರಿಂದ ಅನ್ಯಾಯ ಆಗುತ್ತಿದೆ ಎಂದು ಹಲವರು ದೂರುಗಳನ್ನು ನೀಡಿದ್ದಾರೆ. ಅಂತಹ ಏಜೆನ್ಸಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.ಅದಕ್ಕೆ ಪ್ರತಿಕ್ರಿಯಿಸಿ ಜಿ.ಪಂ ಸಿಇಒ (ಪ್ರಭಾರ) ನಿಯಮಗಳನ್ನು ಪಾಲಿಸದೆ, ವಂಚಿಸುತ್ತಿರುವ ಸಂಸ್ಥೆಗಳನ್ನು ತೆಗೆದು ಹಾಕುವ ಅಥವಾ ಕಪ್ಪು ಪಟ್ಟಿಗೆ ಸೇರಿಸುವ ಅಧಿಕಾರ ಆಯಾ ಇಲಾಖೆಯ ಹಿರಿಯ ಅಧಿಕಾರಿಗೆ ಇದೆ. ಕ್ರಮ ತೆಗೆದುಕೊಂಡು ಆ ಬಗ್ಗೆ ಮಾಹಿತಿಯನ್ನು ಜಿ.ಪಂಗೆ ತಿಳಿಸುವಂತೆ ಹೇಳಿದರು.ಕಾರ್ಮಿಕ ಇಲಾಖೆಗೆ ದೂರು ನೀಡಿ: `ಗುತ್ತಿಗೆ ಸೇವೆಯ ಏಜೆನ್ಸಿಗಳಿಂದ ಆಗುತ್ತಿರುವ ಅನ್ಯಾಯ ಮತ್ತು ಶೋಷಣೆ ಬಗ್ಗೆ ಕಾರ್ಮಿಕ ಇಲಾಖೆಗೂ ಸಾಕಷ್ಟು ದೂರುಗಳು ಬಂದಿವೆ~ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗರಾಜು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಸಂಬಂಧಿಸಿದ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ದಂಡವನ್ನು ವಿಧಿಸುತ್ತದೆ. ಆದ್ದರಿಂದ ಸಂಬಂಧಿಸಿದ ಇಲಾಖೆಗಳು ಮತ್ತು ಗುತ್ತಿಗೆ ಸಿಬ್ಬಂದಿ ಕಾರ್ಮಿಕ ಇಲಾಖೆಗೆ ದೂರು ನೀಡುವಂತೆ ಮನವಿ ಮಾಡಿದರು.ಅಲ್ಲದೆ ಗ್ರಾಮ ಪಂಚಾಯಿತಿಗಳು ಸಹ ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಕನಿಷ್ಠ ವೇತನ ನೀಡದೆ ಕೇವಲ 1000 ಮತ್ತು 2000 ರೂಪಾಯಿ ವೇತನ ನೀಡುತ್ತಿದೆ. ಈ ಬಗ್ಗೆಯೂ ದೂರುಗಳು ಬಂದಿದ್ದು 45 ಪ್ರಕರಣ ದಾಖಲಿಸಲಾಗಿದೆ ಎಂದರು. ಎಲ್ಲ ಗ್ರಾ.ಪಂಗಳು ಕನಿಷ್ಠ ವೇತನ ಕಾಯ್ದೆಯನ್ನು ಅನುಸರಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.ಅಧಿಕಾರಿ ಹೊಣೆ: ಮಾಗಡಿ ತಾಲ್ಲೂಕಿನಲ್ಲಿ ಕೃಷಿ ಇಲಾಖೆಯ ಕಟ್ಟಡವೊಂದರ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಗುತ್ತಿಗೆದಾರರಿಂದ ಕಟ್ಟಡ ಹಸ್ತಾಂತರ ಮಾಡಿಸಿ ಕೊಂಡು ಕೃಷಿ ಇಲಾಖೆ ತಪ್ಪು ಮಾಡಿದೆ ಎಂದು ಸದಸ್ಯ ಧನಂಜಯ್ ಆಕ್ರೋಶ ವ್ಯಕ್ತಪಡಿಸಿದರು.ಕಾಮಗಾರಿ ಪೂರ್ಣಗೊಳಿಸದೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಿರುವುದೂ ಅಲ್ಲದೆ, ಅವರಿಂದ ಕಟ್ಟಡವನ್ನು ಹಸ್ತಾಂತರ ಮಾಡಿಕೊಳ್ಳಲಾಗಿದೆ. ಆದರೆ ಉಳಿದ ಕಾಮಗಾರಿಯನ್ನು ಯಾರು ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.ಕಟ್ಟಡವನ್ನ ಹಸ್ತಾಂತರಿಸಿಕೊಂಡ ಮಾಗಡಿ ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕರೇ ಇದಕ್ಕೆ ಹೊಣೆಗಾರರಾಗಿದ್ದಾರೆ. ತಿಂಗಳೊಳಗೆ ಅವರು ಗುತ್ತಿಗೆದಾರನ್ನು ಹಿಡಿದು ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಜಿ.ಪಂ ಎಂಜಿನಿಯರಿಂಗ್ ವಿಭಾಗದಿಂದ ಬಾಕಿ ಇರುವ ಕೆಲಸದ ವೆಚ್ಚವನ್ನು ಲೆಕ್ಕ ಹಾಕಿ, ಬಾಕಿ ಹಣವನ್ನು ಸಂಬಂಧಿಸಿದ ಅಧಿಕಾರಿಯಿಂದ ಪಡೆದು, ಕೆಲಸ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಾದೇವಿ, ಮುಖ್ಯ ಯೋಜನಾಧಿಕಾರಿ ಭೀಮಯ್ಯ, ಜಿ.ಪಂ ಸದಸ್ಯ ಚಂದ್ರಣ್ಣ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry