ಹೊರಟ್ಟಿ ಪಾದಯಾತ್ರೆಗೆ ಗದಗ ರೊಟ್ಟಿ

7

ಹೊರಟ್ಟಿ ಪಾದಯಾತ್ರೆಗೆ ಗದಗ ರೊಟ್ಟಿ

Published:
Updated:

ಗದಗ: 1994-95ರ ನಂತರ ಆರಂಭಗೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನುದಾನ ನೀಡುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇದೇ 22ರಂದು ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದು ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗಾಗಿ ರೊಟ್ಟಿ ತಯಾರಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.ನಗರದ ಹೊರವಲಯದಲ್ಲಿರುವ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ರೊಟ್ಟಿ ತಟ್ಟುವ ಕಾರ್ಯ ಸಾಂಕೇತಿಕವಾಗಿ ಆರಂಭ ಗೊಂಡಿತು. ಈ ಸಂದರ್ಭ ಮಾತ ನಾಡಿದ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ  ಮಂಡಳಿಗಳ ಸಂಘದ ಅಧ್ಯಕ್ಷ ಧೀರೇಂದ್ರ ಹುಯಿಲ ಗೋಳ, ಕಳೆದ 65 ದಿನಗಳಿಂದ ಧಾರವಾಡದಲ್ಲಿ ಶಿಕ್ಷಕರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಅವರ ಮನವಿಗೆ ಸ್ಪಂದಿಸುತ್ತಿಲ್ಲ. ಈ ಹಿಂದೆ ಹೊರಟ್ಟಿಯವರು ಉಪವಾಸ ಕೈಗೊಂಡ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನೂ ಈಡೇರಿಸಿಲ್ಲ. ಹೀಗಾಗಿ, ಬಸವರಾಜ ಹೊರಟ್ಟಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.  ಮಾರ್ಚ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಈ ಪಾದಯಾತ್ರೆ ಸಮಾವೇಶಗೊಳ್ಳಲಿದೆ ಎಂದು ತಿಳಿಸಿದರು.ಪಾದಯಾತ್ರೆಯಲ್ಲಿ ಸಾಗುವವರಿಗೆ ಊಟೋಪಚಾರದ ಜವಾಬ್ದಾರಿಯನ್ನು ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ವಹಿಸಿಕೊಂಡಿದೆ. ಇದಕ್ಕಾಗಿ 10,000 ರೊಟ್ಟಿ ಜೊತೆಗೆ ಬೆಟಗೇರಿ ಬದನೇಕಾಯಿ, ಚಟ್ನಿಪುಡಿ ಸೇರಿದಂತೆ ಆರು ಬಗೆಯ ಪದಾರ್ಥಗಳನ್ನು ಸಿದ್ಧಪಡಿಸಲಾಗುತ್ತಿದೆ. ಪಾದಯಾತ್ರೆ ಆರಂಭಗೊಳ್ಳುವ ಮುನ್ನವೇ ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.ಸಂಘದ ಕಾರ್ಯದರ್ಶಿ ಬಸವರಾಜ ಧಾರವಾಡ ಮಾತನಾಡಿ, 1994-95ರಲ್ಲಿ ಪ್ರಾರಂಭಗೊಂಡ ತುಮಕೂರಿನ ಮೂರು ಖಾಸಗಿ ಶಾಲೆಗಳಿಗೆ ಸರ್ಕಾರ ಈಗಾಗಲೇ ಅನುದಾನ ನೀಡಿದೆ. ಉಳಿದ ಶಾಲೆಗಳಿಗೆ ಮಾತ್ರ ಮಿತವ್ಯಯದ ನೆಪವೊಡ್ಡಿ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.ಅನುದಾನ ಬಿಡುಗಡೆ ಸಂಬಂಧ ಶುಕ್ರವಾರ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರ್ಥಿಕ ಇಲಾಖೆ ಸ್ಪಷ್ಟ ಆದೇಶ ನೀಡುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಗಣೇಶಸಿಂಗ್ ಬ್ಯಾಳಿ, ಗೋವಿಂದೇ ಗೌಡ, ಸೂರ್ಯನಾರಾಯಣ ನರಗುಂದಕರ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry