ಸೋಮವಾರ, ಏಪ್ರಿಲ್ 19, 2021
25 °C

ಹೊರನಾಡು ಅನ್ನಪೂರ್ಣೆಶ್ವರಿ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಕ್ಷೇತ್ರ ಅನ್ನದಾನದ ಆತಿಥ್ಯಕ್ಕೆ ಹೆಸರುವಾಸಿ. ಅನ್ನಪೂಣೇಶ್ವರಿ ಕ್ಷೇತ್ರದ ಅಧಿದೇವತೆ. ಅನ್ನದಾನ ಹಾಗೂ ಆತಿಥ್ಯ ಕ್ಷೇತ್ರದ ವಿಶೇಷ. ಅನ್ನಪೂರ್ಣೇಶ್ವರಿ ಸನ್ನಿಧಿಗೆ ಬರುವ ಪ್ರತಿಯೊಬ್ಬ ಭಕ್ತನೂ ಇಲ್ಲಿ ‘ಪ್ರಸಾದ’ ಸ್ವೀಕರಿಸುವುದು ಈ ಕ್ಷೇತ್ರದ ವಿಶೇಷ. 

ಹೊರನಾಡು ಬೆಂಗಳೂರಿನಿಂದ 330 ಕಿ.ಮೀ. ದೂರದಲ್ಲಿದೆ. ಕರ್ನಾಟಕದ ನಾನಾ ಊರುಗಳ ಜನರು ಮಾತ್ರವಲ್ಲದೆ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಂದ ಜನರು ದೇವರ ದರ್ಶನಕ್ಕೆ ಬರುತ್ತಾರೆ.ಹೊರನಾಡು ಕ್ಷೇತ್ರವನ್ನು ಅಗಸ್ತ್ಯ ಮಹರ್ಷಿಗಳು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅನ್ನಪೂರ್ಣೇಶ್ವರಿ ತಾಯಿಯ ಕೃಪೆಗೆ ಪಾತ್ರರಾದವರಿಗೆ ಜೀವನದ ಉದ್ದಕ್ಕೂ ಅನ್ನ ಸಿಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹೀಗಾಗಿ  ವರ್ಷವಿಡೀ ಲಕ್ಷಾಂತರ ಭಕ್ತರು ಹೊರನಾಡಿಗೆ ಬಂದು ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ. ಅನ್ನಪೂಣೇಶ್ವರಿಯ ಕೃಪೆ ಇದ್ದರೆ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಹೊರನಾಡು ಸುತ್ತ ಮುತ್ತಲಿನ ಗ್ರಾಮಗಳ ರೈತರಲ್ಲಿದೆ. ಹೀಗಾಗಿ ಅವರು ವರ್ಷಕ್ಕೊಮ್ಮೆ ತಾವು ಬೆಳೆದ ಭತ್ತ, ಅಡಿಕೆ, ಕಾಫಿ, ಏಲಕ್ಕಿ, ಕಾಳು ಮೆಣಸು ಇತ್ಯಾದಿ ಉತ್ಪನ್ನಗಳನ್ನು ತಾಯಿಯ ಸನ್ನಿಧಿಗೆ ಕಾಣಿಕೆ ರೂಪದಲ್ಲಿ ತಂದು ಒಪ್ಪಿಸುವ ಸಂಪ್ರದಾಯವಿದೆ.ಹೊರನಾಡು ಅನ್ನಪೂಣೇಶ್ವರಿ ಬೇಡಿದ್ದನ್ನು ಕರುಣಿಸುವ ತಾಯಿ ಎಂಬ ನಂಬಿಕೆಯಿಂದ ಭಕ್ತರು ನಾನಾ  ಬಗೆಯ ಹರಕೆ ಮಾಡಿಕೊಳ್ಳುತ್ತಾರೆ. ಸಂತಾನ, ಆರೋಗ್ಯ, ವ್ಯವಹಾರಗಳಲ್ಲಿ ಯಶಸ್ಸು ಇತ್ಯಾದಿಗಳನ್ನು ಕರುಣಿಸುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ. ಬೇಡಿದ್ದು ದಕ್ಕಿದಾಗ ಹರಕೆ ತೀರಿಸಲು ಮತ್ತೆ ಬರುತ್ತಾರೆ.   1950ರ ಆಸುಪಾಸಿನ ವರ್ಷಗಳಲ್ಲಿ ಈ ಕ್ಷೇತ್ರದ ಧರ್ಮಕರ್ತರಾಗಿದ್ದ ದಿ.ವೆಂಕಟಸುಬ್ಬಾ ಜೋಯಿಸರ ದೂರದರ್ಶಿತ್ವದ ಫಲವಾಗಿ ಅನ್ನದಾನದ ‘ಆತಿಥ್ಯ’ದ ಪರಿಕಲ್ಪನೆ ಜಾರಿಗೆ ಬಂತು. ಈಗಿನ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅವರ ನೇತೃತ್ವದಲ್ಲಿ ಅದು ಮುಂದುವರಿದುಕೊಂಡು ಬರುತ್ತಿದೆ.ಹೊರನಾಡು ಕ್ಷೇತ್ರದಲ್ಲಿ ದಿನಕ್ಕೆ ಮೂರು ಸಲ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬೆಳಿಗ್ಗೆ ಉಪಹಾರ ಮತ್ತು ಕಾಫಿ , ಹನ್ನೊಂದು ಗಂಟೆ ವೇಳೆಗೆ ಪಾನಕ ಹಾಗೂ ಮಹಾಮಂಗಳಾರತಿ ನಂತರ ಮಧ್ಯಾಹ್ನ ಹಾಗೂ ರಾತ್ರಿ ಕೆಂಪಕ್ಕಿ ಅನ್ನದ ಪುಳಿಯೋಗರೆ, ಪಾಯಸ ಸಹಿತ ಪುಷ್ಕಳ ಭೋಜನವನ್ನು ನೀಡುವ ಸಂಪ್ರದಾಯವಿದೆ. ಎಷ್ಟೇ ಜನರು ಬಂದರೂ ಊಟೋಪಚಾರಗಳಲ್ಲಿ ಸ್ವಲ್ಪ ಲೋಪವಾಗದಂತೆ ನೋಡಿಕೊಳ್ಳುವುದು ಈ  ಕ್ಷೇತ್ರದ ವಿಶೇಷ.ದೇವಸ್ಥಾನದ ಸಿಬ್ಬಂದಿ ಅತ್ಯಂತ ಸ್ನೇಹಪರರು. ಕ್ಷೇತ್ರದಲ್ಲಿ ಉಳಿಯಲು ಬಯಸುವ ಭಕ್ತರಿಗಾಗಿ 200 ಸುಸಜ್ಜಿತ ಕೊಠಡಿಗಳ ಅತಿಥಿ ಗೃಹವಿದೆ. ಕೊಠಡಿ ನಿರ್ವಹಣೆಗೆ 120 ರೂ ಶುಲ್ಕ ನೀಡಬೇಕು. ಕೊಠಡಿ ಸಿಕ್ಕದಿದ್ದವರು ದೇವಸ್ಥಾನದ ಆವರಣದಲ್ಲೇ ಮಲಗಲು ಅವಕಾಶವಿದೆ. ಅಲ್ಲಿನ ಸಿಬ್ಬಂದಿ ಭಕ್ತರಿಗೆ ಹಾಸಲು ಮತ್ತು ಹೊದೆಯಲು ಅಗತ್ಯ ಪರಿಕರಗಳನ್ನು ನೀಡುತ್ತಾರೆ. ‘ಚಂಡಿಕಾ ಹೋಮ’ ಈ ಕ್ಷೇತ್ರದ ವಿಶೇಷ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಿಂದ ಭಕ್ತರು ಚಂಡಿಕಾ ಹೋಮ ನಡೆಸಲು ಬರುತ್ತಾರೆ.ಹೆಚ್ಚಿನ ಮಾಹಿತಿ ಪಡೆಯಲು ಸಂಪರ್ಕಿಸಬೇಕಾದ ದೂರವಾಣಿ ಹಾಗೂ ಮೊಬೈಲ್ ನಂಬರ್: 08263- 214614/269714, 9448282410.ಸೇವಾ ವಿವರ

*  ಚಂಡಿಕಾ ಹೋಮ             12,000 ರೂ

*   ಗಣಪತಿ ಹೋಮ             10,000 ರೂ

* ಎರಡು ಹೊತ್ತಿನ ಅನ್ನದಾನ    8,000 ರೂ

*  ಒಂದು ಹೊತ್ತಿನ ಅನ್ನದಾನ   4,000 ರೂ

*  ಕೈಂಕರ್ಯ ಪೂಜೆ              1,000 ರೂ

*  ದೀಪಾರಾಧನೆ                  400 ರೂ

*  ನವಗ್ರಹ ಪೂಜೆ                250 ರೂ

*  ಮಹಾಪೂಜೆ                   200 ರೂ

*  ಸತ್ಯನಾರಾಯಣ ಪೂಜೆ     200ರೂ

* ಸರ್ವಪೂಜೆ                    50 ರೂ

* ಕುಂಕುಮಾರ್ಚನೆ             30ರೂ    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.