ಸೋಮವಾರ, ಡಿಸೆಂಬರ್ 16, 2019
18 °C

ಹೊರಬಿತ್ತು ಕೆಜೆಪಿ 3ನೇ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಸ್.ಸಿ.ಮಾಳಗಿ, ಇತ್ತೀಚೆಗಷ್ಟೇ ಬಿಜೆಪಿ ತೊರೆದಿದ್ದ ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಮೋಹನ ಲಿಂಬಿಕಾಯಿ, ಶಿವರಾಜ ಸಜ್ಜನ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ ಸೇರಿದಂತೆ 41 ಅಭ್ಯರ್ಥಿಗಳ ಪಟ್ಟಿಯನ್ನು ಕೆಜೆಪಿ ಭಾನುವಾರ ಬಿಡುಗಡೆ ಮಾಡಿದೆ.ಚುನಾವಣಾ ಪ್ರಚಾರ  ಸಮಿತಿ ಅಧ್ಯಕ್ಷ ವಿ.ಧನಂಜಯಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು. ಮಾರ್ಚ್ 21ರಂದು ಮೊದಲ ಪಟ್ಟಿಯಲ್ಲಿ 69 ಕ್ಷೇತ್ರಗಳ ಅಭ್ಯರ್ಥಿಗಳನ್ನು ಹೆಸರಿಸಿದ್ದ ಪಕ್ಷ, ಎರಡನೇ ಪಟ್ಟಿಯಲ್ಲಿ 33 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಮೂರನೇ ಪಟ್ಟಿಯೊಂದಿಗೆ ಕೆಜೆಪಿ ಒಟ್ಟು 143 ಅಭ್ಯರ್ಥಿಗಳ ಹೆಸರು ಘೋಷಿಸಿದಂತಾಗಿದೆ. ಇನ್ನೂ 81 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಣೆ ಬಾಕಿ ಇದೆ.ಮೋಹನ ಲಿಂಬಿಕಾಯಿ ಮತ್ತು ಶಿವರಾಜ ಸಜ್ಜನ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ತೊರೆಯುವುದಕ್ಕೂ ಮುನ್ನವೇ ಅವರೊಂದಿಗೆ ಗುರುತಿಸಿಕೊಂಡಿದ್ದರು. ಕೆಜೆಪಿಯಿಂದ ಸ್ಪರ್ಧಿಸುವುದಕ್ಕಾಗಿಯೇ ಇತ್ತೀಚೆಗೆ ಪರಿಷತ್ ಸದಸ್ಯತ್ವ ಹಾಗೂ ಬಿಜೆಪಿಗೆ ವಿದಾಯ ಹೇಳಿದ್ದರು. ಸಜ್ಜನ ಅವರಿಗೆ ಬ್ಯಾಡಗಿ ಮತ್ತು ಲಿಂಬಿಕಾಯಿ ಅವರಿಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ.2008ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ರಾಮಚಂದ್ರ ನಂತರ `ಆಪರೇಷನ್ ಕಮಲ'ದಲ್ಲಿ ಬಿಜೆಪಿ ಸೇರಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಇತ್ತೀಚೆಗೆ ವಿಧಾನಸಭೆ ಸದಸ್ಯತ್ವ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದರು. 41 ಅಭ್ಯರ್ಥಿಗಳ ಪೈಕಿ ಏಳು ಜನ ಪರಿಶಿಷ್ಟ ಜಾತಿ, ನಾಲ್ಕು ಜನ ಪರಿಶಿಷ್ಟ ಪಂಗಡ, ತಲಾ ಇಬ್ಬರು ಮಹಿಳೆಯರು ಮತ್ತು ಮುಸ್ಲಿಂ ಅಭ್ಯರ್ಥಿಗಳಿದ್ದಾರೆ.ನಿವೃತ್ತ ಅಧಿಕಾರಿಗೂ ಪಕ್ಷಾಂತರದ ಚಾಳಿ

ಕೆಲ ತಿಂಗಳ ಹಿಂದಷ್ಟೇ ಸೇವೆಯಿಂದ ನಿವೃತ್ತರಾಗಿದ್ದ ಪುಟ್ಟಸ್ವಾಮಿ ಕಾಂಗ್ರೆಸ್ ಸೇರಿದ್ದರು. ಅವರು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ, ಅಲ್ಲಿ ಹಾಲಿ ಶಾಸಕ ಎ.ಮಂಜು ಅವರಿಗೆ ಕಾಂಗ್ರೆಸ್ ಟಿಕೆಟ್ ಖಾತರಿಯಾಗಿದೆ. ಹೀಗಾಗಿ ಭಾನುವಾರ ಬೆಳಿಗ್ಗೆ ಯಡಿಯೂರಪ್ಪ ಸಮ್ಮುಖದಲ್ಲಿ ಪುಟ್ಟಸ್ವಾಮಿ ಕೆಜೆಪಿ ಸೇರಿದರು. ತಕ್ಷಣವೇ ಅರಕಲಗೂಡು ಕ್ಷೇತ್ರದಿಂದ ಅವರಿಗೆ ಟಿಕೆಟ್ ಪ್ರಕಟಿಸಲಾಯಿತು.ಪ್ರಣಾಳಿಕೆಗೆ ತಯಾರಿ

ಬೆಂಗಳೂರು: ಕೆಜೆಪಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವ ಕಾರ್ಯ ಚುರುಕಿನಿಂದ ಸಾಗಿದ್ದು, ರೈತರಿಗೆ ಪಿಂಚಣಿ ನೀಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಭಾಗ್ಯಲಕ್ಷ್ಮಿ ಯೋಜನೆಯನ್ನು ಮಧ್ಯಮ ವರ್ಗದವರಿಗೂ ವಿಸ್ತರಿಸುವ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಅಂಶಗಳು ಪ್ರಣಾಳಿಕೆಯಲ್ಲಿ ಇರಲಿವೆ. ಇದೇ 10ರಂದು ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು' ಎಂದು ಹೇಳಿದರು.ಸಚಿವರಾದ ಉಮೇಶ ಕತ್ತಿ ಮತ್ತು ಮುರುಗೇಶ ನಿರಾಣಿ ಅವರು ಕೆಜೆಪಿ ಸೇರದಿರುವ ನಿರ್ಧಾರ ಕೈಗೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ, `ನಾವು ಯಾರೊಬ್ಬರನ್ನೂ ನಂಬಿ ಪಕ್ಷ ಕಟ್ಟಿಲ್ಲ' ಎಂದು ಉತ್ತರಿಸಿದರು. ಕಾಂಗ್ರೆಸ್ ಪರವಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡರೆ ಕೆಜೆಪಿಗೆ ಯಾವುದೇ ಧಕ್ಕೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪ್ರತಿಕ್ರಿಯಿಸಿ (+)