ಹೊರವಲಯದಲ್ಲಿ ಕಸ ಸುರಿಯಲು ಬಿಡುವುದಿಲ್ಲ

7

ಹೊರವಲಯದಲ್ಲಿ ಕಸ ಸುರಿಯಲು ಬಿಡುವುದಿಲ್ಲ

Published:
Updated:

ದೊಡ್ಡಬಳ್ಳಾಪುರ: `ಬಿಬಿಎಂಪಿ ವ್ಯಾಪ್ತಿಯ ಕಸವನ್ನು ತಂದು ಹೊರವಲಯದ ತಾಲ್ಲೂಕಿನ ಗ್ರಾಮಗಳಲ್ಲಿ ಸುರಿಯಲು ಆಸ್ಪದ ನೀಡುವುದ್ಲ್ಲಿಲ. ಈ ಮೂಲಕ ಮಹಾನಗರದ ಸುತ್ತಲಿನ ಗ್ರಾಮಗಳನ್ನು ಕಸದ ತೊಟ್ಟಿಯಾಗಲು ಬಿಡುವುದಿಲ್ಲ' ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪಮೊಯಿಲಿ ಎಚ್ಚರಿಸಿದರು.ತಾಲ್ಲೂಕಿನ ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಮುಂಬೈ, ಪುಣೆಯಂತಹ ಮಹಾನಗರಗಳಲ್ಲಿ ಪ್ರತಿ ವಾರ್ಡ್‌ಗಳ ಕಸವನ್ನು ಅಲ್ಲಿಯೇ ಸಂಸ್ಕರಿಸುವ ಹೊಸ ತಂತ್ರಜ್ಞಾನವನ್ನು ಅನುಷ್ಠಾನಕ್ಕೆ ತರಲಾಗಿದೆ. ಇಂತಹುದೇ ತಂತ್ರಜ್ಞಾನವನ್ನು ಬೆಂಗಳೂರು ಸೇರಿದಂತೆ ಇತರೆ ಮಹಾನಗರಗಳೂ ಆಳವಡಿಸಿಕೊಳ್ಳಲು ಮುಂದಾಗಬೇಕು' ಎಂದು ಅವರು ಸೂಚಿಸಿದರು.ಈ ವಿಷಯವಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆ ಶೀಘ್ರವೇ ಚರ್ಚಿಸುವುದಾಗಿ ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್.ಅಶ್ವತ್ಥ್ ನಾರಾಯಣಕುಮಾರ್ ಮಾಡಿದ ಮನವಿಯ ಹಿನ್ನೆಲೆಯಲ್ಲಿ ಮೊಯಿಲಿ ಬಿಬಿಎಂಪಿಗೆ ಈ ಎಚ್ಚರಿಕೆ ರವಾನಿಸಿದರು.`ದೊಡ್ಡಬೆಳವಂಗಲ ಸಮೀಪದ ಗುಂಡ್ಲಹಳ್ಳಿ ಸಮೀಪದ ಟೆರ‌್ರಾ ಫರ್ಮಾದಲ್ಲಿ ಕಸ ತಂದು ಹಾಕಿರುವುದರಿಂದ ಈಗ ಉಂಟಾಗಿರುವ ಸಮಸ್ಯೆಯೇ ದೊಡ್ಡದಾಗಿದೆ. ಮತ್ತೆ 2ನೇ ಹಂತದಲ್ಲಿ ಆರೂಢಿ ಸಮೀಪ ಕಸ ತಂದು ಸುರಿಯಲು 250 ಎಕರೆ ಪ್ರದೇಶ ಗುರುತಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂಬ ಅಶ್ವತ್ಥ್ ನಾರಾಯಣಕುಮಾರ್ ಮನವಿಯ ಅಂಶವನ್ನು ಪ್ರಸ್ತಾಪಿಸಿದ ಮೊಯಿಲಿ ಅವರು, `ಮಹಾನಗರದ ಸುತ್ತಲಿನ ಗ್ರಾಮಗಳೆಲ್ಲಾ ಕಸದ ತೊಟ್ಟಿಗಳಾದರೆ ಗತಿಯೇನು' ಎಂದು ಪ್ರಶ್ನಿಸಿದರು.`ಹಿಂದೂಪುರದಿಂದ ಗೌರಿಬಿದನೂರು, ದೊಡ್ಡಬಳ್ಳಾಪುರ ಮಾರ್ಗವಾಗಿ ಯಲಹಂಕದವರೆಗೆ ಅಡುಗೆ ಅನಿಲ ಪೈಪ್‌ಲೈನ್ ಆಳವಡಿಕೆ ಕೆಲಸಕ್ಕೆ ಸರ್ವೆ ಕಾರ್ಯ ನಡೆದಿದೆ. ಇದರಿಂದ ಈ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಪ್ರತಿ ವರ್ಷದಂತೆ 2013ರ ಜೂನ್‌ನಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲಾಗುವುದು' ಎಂದರು.ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ನರಸಿಂಹಸ್ವಾಮಿ, `ಸಾಸಲು ಹೋಬಳಿಯಲ್ಲಿ ಸಾಕಷ್ಟು ಬೆಟ್ಟ ಪ್ರದೇಶ ಇರುವ ಹಿನ್ನೆಲೆಯಲ್ಲಿ ಇಲ್ಲಿನ ಹಳ್ಳಗಳಿಗೆ ಚಕ್‌ಡ್ಯಾಮ್‌ಗಳನ್ನು ನಿರ್ಮಿಸಿದರೆ ಇಡೀ ತಾಲ್ಲೂಕಿಗೆ ಸಾಕಾಗುಷ್ಟು ನೀರು ದೊರೆಯಲಿದೆ. ಕೇಂದ್ರ ಸರ್ಕಾರದ ವತಿಯಿಂದ ಹಣಕಾಸಿನ ನೆರವು ನೀಡಬೇಕು' ಎಂದು ಸಚಿವರಲ್ಲಿ ಮನವಿ ಮಾಡಿದರು.`ಕೆಲಸದ ಒತ್ತಡದ ನಡುವೆಯೂ ಗ್ರಾಮ ಸಭೆಯಲ್ಲಿ ಭಾಗವಹಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಕೇಂದ್ರ ಸಚಿವ ಎಂ.ವೀರಪ್ಪಮೊಯಿಲಿ ಅವರು ಅಭಿನಂದನಾರ್ಹರು' ಎಂದರು.ಇದೇ ಸಂದರ್ಭದಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿಗಳಿಗೆ, ವಿವಿಧ ಗ್ರಾಮಗಳ ಸಂಪರ್ಕ ರಸ್ತೆಗಳ ಕಾಮಗಾರಿಗಾಗಿ ಸಾರ್ವಜನಿಕರು ಮನವಿಗಳನ್ನು ಸಲ್ಲಿಸಿದರು.ಜನಸಂಪರ್ಕ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಅರವಿಂದ್, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ.ನಾರಾಯಣ ಸ್ವಾಮಿ,  ಹೊಸಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಸುಜಾತಾ, ತಾ.ಪಂ.ಸದಸ್ಯ ಎಸ್.ಆರ್.ನಾಗರಾಜ್, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣ ಗೌಡ, ಕಾಂಗ್ರೆಸ್ ಸಮಿತಿ ತಾ.ಅಧ್ಯಕ್ಷ ಅಪ್ಪಕಾರನಹಳ್ಳಿ ವೆಂಕಟೇಶ್, ನಗರ ಅಧ್ಯಕ್ಷ ತಿ.ರಂಗರಾಜ್, ಬೆಂಗಳೂರು ಗ್ರಾಮಾಂತರ ಕಾರ್ಮಿಕ  ಕಾಂಗ್ರೆಸ್ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಜಿ.ನಾಗೇಶ್, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವೆಂಕಟೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry