ಭಾನುವಾರ, ಅಕ್ಟೋಬರ್ 20, 2019
27 °C

ಹೊರೆಯಾಗುತ್ತಿರುವ ಸರ್ಕಾರಿ ರಜೆಗಳು

Published:
Updated:

ಈ 2012ನೇ ವರ್ಷದಲ್ಲಿ ಒಟ್ಟು 21 ಸಾರ್ವತ್ರಿಕ ರಜೆಗಳು! ಹಾಗಂತ  ಕರ್ನಾಟಕ ಸರ್ಕಾರದ ಪ್ರಕಟಣೆ ತಿಳಿಸಿದೆ. ಈ ರಜೆ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಮಕರ ಸಂಕ್ರಾಂತಿ, ಈದ್ ಮಿಲಾದ್, ಮೊಹರಂ ಹಾಗೂ ಎರಡನೇ ಶನಿವಾರದಂದು ಬರುವ ಅಂಬೇಡ್ಕರ್ ಜಯಂತಿ ಒಳಗೊಂಡಿಲ್ಲ.

 

ಇವೆಲ್ಲವೂ ಸೇರಿದರೆ ರಜಾದಿನಗಳ ಸಂಖ್ಯೆ 25ಕ್ಕೆ ಏರುತ್ತಿತ್ತು. ಆದಾಗ್ಯೂ ಇದು 21 ದಿನಗಳಿಗೆ ಸೀಮಿತವಾಗಬೇಕಾಗಿಲ್ಲ. ಬಂದ್, ಗಣ್ಯರ ಸಾವು ಇತ್ಯಾದಿ ಕಾರಣಗಳಿಂದ ಇನ್ನೊಂದಷ್ಟು ರಜೆಗಳು ಸೇರ್ಪಡೆಗೊಂಡರೆ ಅಚ್ಚರಿ ಪಡಬೇಕಾಗಿಲ್ಲ.ದೇಶದಲ್ಲಿ ಸಾರ್ವಜನಿಕ ರಜೆಗಳು ಮಿತಿ ವಿಾರಿವೆ ಎಂಬ ಕೂಗು ಹಿಂದಿನಿಂದಲೇ ಇದೆ. ಆದರೆ ಸರ್ಕಾರಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ರಜೆಗಳ ಸಂಖ್ಯೆ ಏರುತ್ತಲೇ ಇದೆ.

 

ಇಂತಹ ರಜೆಗಳ ಘೋಷಣೆ ಹಿಂದೆ ಜನರ ಒತ್ತಾಯ, ರಜೆಗಳಿಗೆ ಕಾರಣವಾಗುವ ಅಂಶಗಳ ಮಹತ್ವ ಇತ್ಯಾದಿಗಳಿಗಿಂತ ರಾಜಕೀಯ ಲೆಕ್ಕಾಚಾರದ ನಡೆಗಳೇ ಹೆಚ್ಚು ಕೆಲಸ ಮಾಡುತ್ತವೆ.ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಸೇರದೆ ಹಾಗೆಯೇ ಅಂತರ್ಗತವಾಗಿರುವ ರಜೆಗಳ ಲೆಕ್ಕವೂ ಕುತೂಹಲಕಾರಿ. ತಿಂಗಳಿಗೊಂದರಂತೆ ಎರಡನೇ ಶನಿವಾರಗಳ ಲೆಕ್ಕದಲ್ಲಿ ವರ್ಷಕ್ಕೆ 12 ರಜೆಗಳು. ತಿಂಗಳಿಗೆ ನಾಲ್ಕು ಭಾನುವಾರಗಳ ಲೆಕ್ಕದಲ್ಲಿ ವರ್ಷಕ್ಕೆ 52 ರಜೆಗಳು. ಇವೆಲ್ಲ ಸೇರಿದರೆ ಒಟ್ಟು 85 ರಜೆ ದಿನಗಳಾಗುತ್ತವೆ. ಅಂದರೆ ವರ್ಷದಲ್ಲಿ ಹೆಚ್ಚು ಕಡಿಮೆ ಮೂರು ತಿಂಗಳು ಸರ್ಕಾರಿ ಯಂತ್ರ ಸ್ಥಗಿತಗೊಳ್ಳುತ್ತದೆ. ಇದು ಸಮರ್ಥನೀಯವೇ?ಈ 85 ರಜೆ ದಿನಗಳ ಜೊತೆ ಸರ್ಕಾರಿ ನೌಕರರು ವೈಯಕ್ತಿಕವಾಗಿ ಅನುಭವಿಸುತ್ತಿರುವ ರಜೆಗಳ ಲೆಕ್ಕವೂ ಮುಖ್ಯವಾದದ್ದು. ಇವರಿಗೆ ವರ್ಷದಲ್ಲಿ 15 ಸಾಂದರ್ಭಿಕ ರಜೆಗಳು, 2 ನಿರ್ಬಂಧಿತ ರಜೆಗಳು, 30 ಗಳಿಕೆ ರಜೆಗಳು ಮತ್ತು 10 ಪರಿವರ್ತಿತ ರಜೆಗಳಿವೆ. ಈ 57 ರಜೆಗಳನ್ನು 85 ಸಾರ್ವತ್ರಿಕ ರಜೆಗಳಿಗೆ ಸೇರಿಸಿದರೆ ಒಟ್ಟು 162 ರಜೆಗಳಾಗುತ್ತವೆ.

 

ಅಂದರೆ ವರ್ಷದಲ್ಲಿ 5 ತಿಂಗಳು ರಜೆ. ಉಳಿದ ಕೇವಲ 7 ತಿಂಗಳು ಮಾತ್ರ ಕೆಲಸದ ಅವಧಿ! ಇದರ ಸೃಷ್ಟಿಕರ್ತರು ಈ ತಾಳ ಮೇಳವಿಲ್ಲದ ಕರ್ತವ್ಯ ಹಾಗೂ ರಜೆಗಳ ಅವಧಿಯನ್ನು ಯಾವ ಮಾನದಂಡಗಳಿಂದ ಸಮರ್ಥಿಸುತ್ತಾರೆ?ಬಡತನ, ಅನಕ್ಷರತೆಗಳಂತಹ ಗಂಭೀರ ಸಮಸ್ಯೆಗಳಲ್ಲಿ ತೊಳಲಾಡುತ್ತಿರುವ ಭಾರತಕ್ಕೆ ಇಷ್ಟೊಂದು ರಜಾ ದಿನಗಳು ಅವಶ್ಯಕವೇ? ದೈನಂದಿನ ದುಡಿಮೆಯಿಂದ ಮನಸ್ಸು, ದೇಹಗಳನ್ನು ಹಗುರ ಮಾಡಿಕೊಳ್ಳಲು ರಜೆಗಳು ಬೇಕು. ಹಾಗೆಯೇ ಹಬ್ಬ ಹರಿದಿನಗಳನ್ನು ಸಂತೋಷ, ಸಂಭ್ರಮದೊಡನೆ ಆಚರಿಸಲು ರಜಾದಿನಗಳು ಅಗತ್ಯ ಬೇಕು.

 

ಆದರೆ ಇಂತಹ ರಜೆಗಳಿಗೆ ಒಂದು ಮಿತಿ ಇರಬೇಕು. ನಮ್ಮ ದೇಶದ ಪರಿಸ್ಥಿತಿಯ ದೃಷ್ಟಿಯಿಂದ ನೋಡಿದರೆ ನಾವು ಸಮಯದ ಸದುಪಯೋಗ ಹಾಗೂ ಪರಿಶ್ರಮದ ದುಡಿಮೆಗೆ ಹೆಚ್ಚು ಒತ್ತುನೀಡಬೇಕಾದ ಅವಶ್ಯಕತೆ ಕಂಡು ಬರುತ್ತದೆ. ಆದರೆ ನಾವು ಅದಕ್ಕೆ ವಿರುದ್ಧವಾದ ಮನೋಭಾವ ಹೊಂದಿದ್ದೇವೆ.ಸರ್ಕಾರದ ಕಚೇರಿಗಳು ವರ್ಷದಲ್ಲಿ ಮಿತಿ ವಿಾರಿ ಸ್ಥಗಿತಗೊಂಡಾಗ ಸಾರ್ವಜನಿಕ ಕೆಲಸ ಕಾರ್ಯಗಳು ಕುಂಠಿತಗೊಳ್ಳುತ್ತದೆ. ಇದರಿಂದ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳದೆ ವಿಳಂಬವಾಗುತ್ತದೆ. ಕಚೇರಿಗಳು ಮುಚ್ಚುವುದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಾರೆ.

 

ಮೊದಲೇ ವಿಳಂಬ. ಭ್ರಷ್ಟಾಚಾರಗಳಿಂದ ಸರ್ಕಾರಿ ಕಚೇರಿಗಳ ಕಂಬ ಸುತ್ತುವ ಸಾರ್ವಜನಿಕರು ರಜಾದಿನಗಳು ಸರಣಿಯಂತೆ ಬಂದಾಗ ನಿಗದಿತ ಕಾಲಾವಧಿಯಲ್ಲಿ ತಮ್ಮ ಕೆಲಸವಾಗದೆ ಹತಾಶರಾಗುತ್ತಾರೆ. ಸರ್ಕಾರಕ್ಕೆ, ಸರ್ಕಾರಿ ಉದ್ಯೋಗಿಗಳಿಗೆ ಯಾವಾಗಲೂ ರಜೆ ಎಂದು ಗೊಣಗುತ್ತಾರೆ. ಕೆಲವರು ಶಾಪ ಹಾಕುತ್ತಾರೆ.ಭಾರತ ಬಹು ಸಂಸ್ಕೃತಿ, ಬಹುಮತಗಳ ರಾಷ್ಟ್ರವಾಗಿರುವುದರಿಂದ ಸಾರ್ವತ್ರಿಕ ರಜೆಗಳನ್ನು ನಿಗದಿಪಡಿಸುವುದು ಸುಲಭವಲ್ಲ. ಇದು ಸರ್ಕಾರಕ್ಕೆ ಸವಾಲು. ಈ ನಿಟ್ಟಿನಲ್ಲಿ ಸ್ಪಷ್ಟ, ನಿಷ್ಠುರ ಹಾಗೂ ದೂರದೃಷ್ಟಿಯುಳ್ಳ ನಿಲುವು ತಾಳುವುದು ಸರ್ಕಾರಕ್ಕೆ ಅಗತ್ಯವಿದೆ.ರಾಷ್ಟ್ರೀಯ ಹಬ್ಬಗಳು ಮತ್ತು ವ್ಯಾಪಕ ಆಚರಣೆಯುಳ್ಳ ಪ್ರಮುಖ ಧಾರ್ಮಿಕ ಆಚರಣೆಗಳಂದು  ಸಾರ್ವತ್ರಿಕ ರಜೆಗಳನ್ನು ಘೋಷಿಸುವುದು ಸರಿಯಾದುದೇ. ಆದರೆ ಐತಿಹಾಸಿಕ ಹಿನ್ನೆಲೆಯುಳ್ಳ ಮಹನೀಯರು, ದಾರ್ಶನಿಕರು, ಮಹಾತ್ಮರ ಜಯಂತಿಗಳಿಗೆ ರಜೆಗಳನ್ನು ಘೋಷಿಸುವುದು ಅನೇಕ ಬಾರಿ ಗೊಂದಲಗಳಿಗೆ ಕಾರಣವಾಗುತ್ತದೆ. ದೇಶದ ವೈವಿಧ್ಯಮಯ ಸಂಸ್ಕೃತಿಯಿಂದಾಗಿ ಪುರಾಣ ಪುರುಷರು, ಸಾಧು ಸಂತರು ಪ್ರದೇಶವಾರು, ಜಾತಿವಾರು ನೆಲೆಯಲ್ಲಿ ಹಂಚಿ ಹೋಗಿದ್ದಾರೆ.

 

ಸಾಕಷ್ಟು ಸಂಖ್ಯೆಯಲ್ಲಿರುವ ಇಂಥವರ ಜಯಂತಿಯನ್ನು ಸಾರ್ವತ್ರಿಕ ರಜೆಗಳಾಗಿ ಘೋಷಿಸುತ್ತಾ ಹೋದಂತೆ ಭವಿಷ್ಯದಲ್ಲಿ ಸಮಸ್ಯೆ ಸೃಷ್ಟಿಯಾಗುವುದು ನಿಶ್ಚಿತ. ಜೊತೆಗೆ ಇಂಥವರ ಮಹತ್ವವನ್ನು ರಜೆಗಳ ಮೂಲಕವೇ ಗುರುತಿಸುವುದು ಸರಿಯಲ್ಲ. ಬದಲಿಗೆ ಅವರನ್ನು ಅರ್ಥಪೂರ್ಣವಾಗಿ ಸ್ಮರಿಸುವಂತಹ ದೂರಗಾಮಿ ಪರಿಣಾಮ ಬೀರಬಲ್ಲ ಕಾರ್ಯಕ್ರಮಗಳನ್ನು ಸರ್ಕಾರವೇ ರೂಪಿಸಬಹುದಾಗಿದೆ.ಹಾಗೇ ನೋಡಿದರೆ ಇಂತಹ ಜಯಂತಿಗಳನ್ನು ರಜೆಯ ಮೂಲಕ ಆಚರಣೆ ಮಾಡುವುದೇ ಒಂದು ವಿಪರ್ಯಾಸದ ಕ್ರಮ. ಜನ ಸಮುದಾಯಗಳನ್ನು ಪ್ರತಿನಿಧಿಸುವ ಸರ್ಕಾರ ಮಹಾನ್ ವ್ಯಕ್ತಿಗಳ ಸ್ಮರಣೆಗಾಗಿ ರಜೆ ನೀಡುವ ಮೂಲಕ ಗೌರವಿಸುತ್ತದೆ ಎನ್ನುವುದು ಸರಿಯಾದರೂ ರಜೆಯ ಫಲ ಯಾರಿಗೆ ಸಿಗುತ್ತಿದೆ? ಜನಸಂಖ್ಯೆಯ ಶೇಕಡಾ 5ಕ್ಕಿಂತಲೂ ಕಡಿಮೆ ಇರುವ ಸರ್ಕಾರಿ ಉದ್ಯೋಗಿಗಳು ಮಾತ್ರ ರಜೆಯನ್ನು ಅನುಭವಿಸುತ್ತಾರೆ.ಈ ಸರ್ಕಾರಿ ವಲಯದ ಹೊರಗಡೆ ಇರುವಂತಹ ಬೃಹತ್ ಜನವರ್ಗಕ್ಕೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಇತ್ತ ಸರ್ಕಾರಿ ಉದ್ಯೋಗಿಗಳು ರಜೆಯ ಮಜಾ ತೆಗೆದುಕೊಳ್ಳುತ್ತಿದ್ದರೆ ಅತ್ತ ಖಾಸಗಿ ವಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಉದ್ಯೋಗಿಗಳು ಎಂಟು ಗಂಟೆಯ  ಅವಧಿಯಲ್ಲಿ ಕಷ್ಟಪಟ್ಟು ದುಡಿಯುತ್ತಲೇ ಇರುತ್ತಾರೆ. ಇದು ದೇಶದ ದುರಂತ!ಸಾರ್ವತ್ರಿಕ ರಜೆಗಳ ಬಗ್ಗೆ ಸರ್ಕಾರ ಒಂದು ಸಮಗ್ರ ಪುನರಾವಲೋಕನ ನಡೆಸಬೇಕಾದ ಅವಶ್ಯಕತೆ ಇದೆ.

Post Comments (+)