ಗುರುವಾರ , ಜೂನ್ 24, 2021
27 °C

ಹೊರೆಯಾದ ಕಿರು ಮೃಗಾಲಯಗಳು

ಪ್ರಜಾವಾಣಿ ವಾರ್ತೆ/ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ಮೈಸೂರು: ರಾಜ್ಯದಲ್ಲಿರುವ ಐದು ಕಿರು ಮೃಗಾಲಯಗಳು ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ~ಬಿಳಿಯಾನೆ~ಗಳಂತಾಗಿವೆ. ಇವುಗಳ ನಿರ್ವಹಣೆಗಾಗಿ  ಪ್ರಾಧಿಕಾರವು ವರ್ಷಕ್ಕೆ 1.5 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ.ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯ, ಬನ್ನೇರುಘಟ್ಟದ ಜೈವಿಕ ಉದ್ಯಾನವನ, ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಗದಗಿನ ಬಿಂಕದಕಟ್ಟೆಯ ಕಿರು ಮೃಗಾಯಲ, ದಾವಣಗೆರೆ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯ, ಬೆಳಗಾವಿಯ ಕಿತ್ತೂರುರಾಣಿ ಚೆನ್ನಮ್ಮ ನಿಸರ್ಗಧಾಮ, ಬಳ್ಳಾರಿಯ ರೇಡಿಯೊ ಪಾರ್ಕ್ ಕಿರು ಮೃಗಾಲಯ ಹಾಗೂ ಗುಲ್ಬರ್ಗದ ಕಿರು ಮೃಗಾಲಯಗಳಿವೆ.ಇವುಗಳಲ್ಲಿ ಮೈಸೂರು, ಬನ್ನೇರುಘಟ್ಟ ಮತ್ತು ತಾವರೆಕೊಪ್ಪ ಮೃಗಾಲಯಗಳ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಪ್ರಾಧಿಕಾರದ ಆರ್ಥಿಕ ಸಹಾಯವಿಲ್ಲದೆ  ನಡೆಯುತ್ತಿವೆ.ಆದಾಯವಿಲ್ಲ: ಬಳ್ಳಾರಿ ಕಿರು ಮೃಗಾಲಯದಲ್ಲಿ 39 ಲಕ್ಷ ಖರ್ಚು, 3 ರಿಂದ 4 ಲಕ್ಷ ಆದಾಯವಿದೆ. ಗುಲ್ಬರ್ಗ ಕಿರು ಮೃಗಾಲಯದಲ್ಲಿ 28 ಲಕ್ಷ ಖರ್ಚು, 2.5 ಲಕ್ಷ ಆದಾಯ, ದಾವಣಗೆರೆ ಕಿರು ಮೃಗಾಲಯ 14 ಲಕ್ಷ ಖರ್ಚು, 2.20 ಲಕ್ಷ ಆದಾಯ, ಗದಗ ಕಿರು ಮೃಗಾಲಯ 45 ಲಕ್ಷ ಖರ್ಚು, 6.60 ಆದಾಯವಿದೆ.ಈ ಕಿರು ಮೃಗಾಲಯಗಳಿಗೆ ಭೇಟಿ ನೀಡುವ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ. ಹೀಗಾಗಿ ಪ್ರವೇಶ ದರ ಹಾಗೂ ಇತರ ಮೂಲಗಳಿಂದ ಬರುವ ಆದಾಯವೂ  ತೀರಾ ಕಡಿಮೆಯಾಗಿದೆ.

ಆದರೆ ಮೃಗಾಲಯಗಳಲ್ಲಿರುವ ಪ್ರಾಣಿ, ಪಕ್ಷಿಗಳ ಆಹಾರ ಮತ್ತು ನಿರ್ವಹಣೆಗೆ ಅಗತ್ಯವಾದ ಖರ್ಚು ಮಾಡಲೇಬೇಕು. ಇಲ್ಲವಾದರೆ ಪ್ರಾಣಿ, ಪಕ್ಷಿಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ.ಈ ಕಿರು ಮೃಗಾಲಯಗಳಲ್ಲಿ ಹುಲಿ, ಸಿಂಹ, ಚಿರತೆ, ಕರಡಿ, ಮೊಸಳೆ, ಜಿಂಕೆಗಳು, ಸಾರಂಗ, ನವಿಲು, ಹಂಸ ಹಾಗೂ ಬಗೆ ಬಗೆಯ ಪಕ್ಷಿಗಳಿವೆ. ಇವುಗಳಲ್ಲಿ ಜಿಂಕೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಅವುಗಳಿಗೆ ಆಹಾರ ನೀಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಜಿಂಕೆಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಪ್ರಾಧಿಕಾರ ಚಿಂತಿಸಿದೆ.ತಾವರೆಕೊಪ್ಪದತ್ತ ವೀಕ್ಷಕರು: ಈಗಾಗಲೇ ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವನ್ನು ಪ್ರಾಧಿಕಾರ ಆಕರ್ಷಣೀಯಗೊಳಿಸಿದೆ. ಆದ್ದರಿಂದಲೇ ಇದು ಸ್ವಂತ ನಿರ್ವಹಣೆಯ ಹಂತಕ್ಕೆ ಬಂದು ನಿಂತಿದೆ.ಪ್ರಸಕ್ತ ವರ್ಷದಲ್ಲಿ ಇಲ್ಲಿಗೆ 2.20 ಲಕ್ಷ ವೀಕ್ಷಕರು ಭೇಟಿ ನೀಡಿದ್ದು, ಪ್ರವೇಶ ದರ, ಸಫಾರಿ, ಕ್ಯಾಂಟೀನ್ ಸೇರಿದಂತೆ ವಿವಿಧ ಮೂಲಗಳಿಂದ 1.10 ಕೋಟಿಯಷ್ಟು ಆದಾಯಬಂದಿದೆ. ಪ್ರತಿ ತಿಂಗಳು ಸರಾಸರಿ 20 ಸಾವಿರ ವೀಕ್ಷಕರು ಭೇಟಿ ನೀಡುತ್ತಿರುವುದರಿಂದ ಸ್ವಂತ ಕಾಲ ಮೇಲೆ ನಿಲ್ಲುವಂತಾಗಿದೆ.ಅಭಿವೃದ್ಧಿಗೆ ಒತ್ತು: ಪ್ರಾಧಿಕಾರಕ್ಕೆ ಹೊರೆಯಾಗಿರುವ ಐದು ಕಿರು ಮೃಗಾಲಯಗಳನ್ನು ಆಕರ್ಷಣೀಯಗೊಳಿಸಲು ಮುಂದಾಗಿದ್ದೇವೆ. ಈಗಾಗಲೇ ಬೆಳಗಾವಿಯಲ್ಲಿ 30 ಲಕ್ಷ ವೆಚ್ಚದಲ್ಲಿ ಪಕ್ಷಿ ಆವರಣವನ್ನು ನಿರ್ಮಿಸಲಾಗಿದೆ.ಗುಲ್ಬರ್ಗದಲ್ಲಿ ಮಕ್ಕಳ ರೈಲು ಆರಂಭಿಸಲು 25 ಲಕ್ಷ ನೀಡಲಾಗಿದೆ. ಅಲ್ಲದೇ ಪ್ರಾಣಿ, ಪಕ್ಷಿಗಳ ದತ್ತು ಯೋಜನೆಯನ್ನು ಈ ಭಾಗಗಳಲ್ಲಿ ಜನಪ್ರಿಯಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ~ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.