ಭಾನುವಾರ, ಮೇ 16, 2021
22 °C

ಹೊರೆಯಾದ ಬಸ್ ಪ್ರಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಲೆ ಏರಿಕೆಯ ಭೂತ ಸಾಮಾನ್ಯ ಜನರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ತರಕಾರಿಯನ್ನು ಮುಟ್ಟಿದರೆ ಕೈ ಸುಡುತ್ತದೆ. ಅಕ್ಕಿ ಬೆಲೆ ಮೊದಲೇ ಮುಗಿಲು ಮುಟ್ಟಿದೆ. ಇದೀಗ ಎ.ಪಿ.ಎಲ್ ಕಾರ್ಡುದಾರರಿಗೆ ಅಕ್ಕಿ ನೀಡುವುದನ್ನು ನಿಲ್ಲಿಸುವ ರಾಜ್ಯ ಸರ್ಕಾರದ ಚಿಂತನೆ, ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ದರ ಮತ್ತಷ್ಟು ಹೆಚ್ಚುವ ಸಾಧ್ಯತೆಗಳನ್ನು ನಿಚ್ಚಳಗೊಳಿಸಿದೆ.

ವಿದ್ಯುತ್ ದರದಲ್ಲಿ ಹೆಚ್ಚಳ ಆಗಿದೆ. ಪೆಟ್ರೋಲ್ ತುಟ್ಟಿಯಾಗಿದೆ. ಇವುಗಳೊಂದಿಗೆ ಬಸ್ ಪ್ರಯಾಣ ದರವೂ ಏರಿದರೆ ಜನಸಾಮಾನ್ಯರ ಬದುಕಿನ ಬಂಡಿ ಮುಂದಕ್ಕೆ ಸಾಗುವುದಾದರೂ ಹೇಗೆ? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಬಸ್ ಪ್ರಯಾಣ ದರದಲ್ಲಿ ಶೇ 10.50ರಷ್ಟು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮವು ಸಾಮಾನ್ಯ ಬಸ್‌ಗಳ ಪ್ರಯಾಣ ದರದಲ್ಲಿ ಶೇ 16ರಷ್ಟು ಭಾರಿ ಪ್ರಮಾಣದ ಏರಿಕೆ ಮಾಡಿ ಜನರ ನೆಮ್ಮದಿಯನ್ನು ಇನ್ನಷ್ಟು ಕದಡಿವೆ.

ಆರು ತಿಂಗಳಲ್ಲಿ ಡೀಸೆಲ್ ಬೆಲೆ ಐದು ಬಾರಿ ಏರಿಕೆ ಆಗಿದೆ. ಜತೆಗೆ ಸಿಬ್ಬಂದಿಯ ವೇತನ ಏರಿಕೆಯೂ ಆಗಿರುವುದರಿಂದ ಸಾರಿಗೆ ನಿಗಮಗಳು ನಷ್ಟದ ಹಾದಿ ಹಿಡಿದಿದ್ದವು ಎಂಬುದು ಬೆಲೆ ಏರಿಕೆಗೆ ನಿಗಮಗಳು ನೀಡಿರುವ ಪ್ರಮುಖ ಕಾರಣ. ವೆಚ್ಚ ಸರಿದೂಗಿಸಲು ಬೆಲೆಯಲ್ಲಿ ಅಲ್ಪಸ್ವಲ್ಪ ಏರಿಕೆ ಸಮರ್ಥನೀಯವೇ ಆದರೂ ಈ ಪ್ರಮಾಣದಲ್ಲಿ ಏರಿಸುವ ಅಗತ್ಯ ಇತ್ತೇ ಮತ್ತು ಎಲ್ಲದಕ್ಕೂ ಟಿಕೆಟ್ ದರ ಏರಿಕೆಯೊಂದೇ ಪರಿಹಾರವೇ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ.ಬಸ್‌ಗಳಂತಹ ಅಗತ್ಯ ಸೇವೆಯೂ ಸೇರಿದಂತೆ ಯಾವುದೇ ಉದ್ಯಮ ನಷ್ಟಕ್ಕೆ ಸಿಲುಕಿ ಅವನತಿಯ ಹಾದಿ ಹಿಡಿಯಬಾರದು. ಆದರೆ, ಸರ್ಕಾರಿ ಸಾರಿಗೆ ನಿಗಮಗಳಿಗೆ ಲಾಭ ಮಾಡುವುದೇ ಉದ್ದೇಶ ಆಗಬಾರದು. ಸರ್ಕಾರಿ ಬಸ್‌ಗಳು ರಾಜ್ಯದ ಬಡವರು ಮತ್ತು ಮಧ್ಯಮ ವರ್ಗದ ಪಾಲಿಗೆ ಇರುವ ಪ್ರಮುಖ ಸಂಚಾರ ಸೌಕರ್ಯ. ಇಂಧನ ಬೆಲೆ ಏರಿಕೆಯಾದಾಗೆಲ್ಲ ಅದರ ಹೊರೆಯನ್ನು ಪ್ರಯಾಣಿಕರ ಹೆಗಲಿಗೆ ವರ್ಗಾಯಿಸಿ ನಿರಾಳ ಆಗುವುದು ನಿಗಮಗಳ ಕೆಲಸ ಆಗಬಾರದು.

ಅವುಗಳು ತಮ್ಮ ಸೇವೆಯ ಮಟ್ಟವನ್ನು ಮತ್ತಷ್ಟು ಸುಧಾರಿಸುವ ಮೂಲಕ ಪ್ರಯಾಣಿಕರನ್ನು ಹೆಚ್ಚಿಗೆ ಸೆಳೆಯಬೇಕು. ಇತ್ತೀಚಿನ ವರ್ಷಗಳಲ್ಲಿ ಸೇವೆಯ ಗುಣಮಟ್ಟ ಹೆಚ್ಚಿದೆ. ಆದರೆ, ಖಾಸಗಿಯವರಿಗೆ ಹೋಲಿಸಿದರೆ ಗುಣಮಟ್ಟದಲ್ಲಿ ಕೊರತೆ ಕಾಣದಿರದು. ಬಸ್ ನಿಲ್ದಾಣಗಳನ್ನು ಶುಚಿಯಾಗಿಡುವುದರಿಂದ, ಬಸ್‌ಗಳು ನಿಗದಿತ ಸಮಯಕ್ಕೆ ಹೊರಟು, ಸಕಾಲದಲ್ಲಿ ತಲುಪಲು ಸಾಧ್ಯವಾದರೆ ಸೇವಾ ಗುಣಮಟ್ಟದಲ್ಲಿ ಸುಧಾರಣೆ ಆಗುತ್ತದೆ.

ಸರ್ಕಾರಿ ಬಸ್ ಸೇವೆಯ ಭಾಗ್ಯ ಹೊಂದಿಲ್ಲದ ಹಳ್ಳಿಗಳು ಅಪಾರ ಸಂಖ್ಯೆಯಲ್ಲಿ ಇವೆ. ಅಲ್ಲಿಗೂ ತಲುಪುವ ಕೆಲಸ ಆಗಬೇಕು. ವರಮಾನ ಸೋರಿಕೆಯನ್ನು ತಡೆಗಟ್ಟಲು ಸಾರಿಗೆ ನಿಗಮಗಳ ಆಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ. ಟಿಕೆಟ್‌ನಿಂದ ಬರುವ ಆದಾಯ ಸೋರಿಕೆ ಒಂದು ಬಗೆಯದಾದರೆ, ಡಿಪೊಗಳಲ್ಲಿ ಬಿಡಿಭಾಗಗಳ ಖರೀದಿ ಮುಂತಾದ ಬಾಬತ್ತುಗಳಲ್ಲಿ ಸೋರಿಕೆ ಇನ್ನೊಂದು ವಿಧ. ಇದನ್ನೆಲ್ಲ ತಡೆಗಟ್ಟಿ ಉತ್ಪಾದಕತೆಯನ್ನು ಹೆಚ್ಚಿಸಿದರೆ ವರಮಾನ ತಾನಾಗಿಯೇ ಏರುತ್ತದೆ. ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಅಗತ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.