ಶುಕ್ರವಾರ, ಅಕ್ಟೋಬರ್ 18, 2019
27 °C

ಹೊರ ಹೋಗಲು ಬಾಗಿಲು ಮುಕ್ತ

Published:
Updated:

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್- ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವಿನ ಬಿಕ್ಕಟ್ಟು ತೀವ್ರ ತರಹದಲ್ಲಿ ಉಲ್ಬಣವಾಗುತ್ತಿದ್ದು, ಟಿಎಂಸಿ ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ವಿರುದ್ಧ ಸೋಮವಾರ ರ‌್ಯಾಲಿ ನಡೆಸಿ ಮೈತ್ರಿಕೂಟದಿಂದ ಹೊರಹೋಗುವಂತಿದ್ದರೆ ಧಾರಾಳವಾಗಿ ಹೋಗಬಹುದು ಎಂದು ಖಡಾಖಂಡಿತವಾಗಿ ಹೇಳಿದೆ.ಇದಕ್ಕೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ, `ಆ ಪಕ್ಷದ (ಟಿಎಂಸಿ) ಮುಖಂಡರು ಮೈತ್ರಿಕೂಟ ಬಿಟ್ಟುಹೋಗಿ ಎನ್ನಲು ನಾವು (ಕಾಂಗ್ರೆಸ್) ಯಾರದೇ ದಯೆಯಿಂದೇನು ರಾಜ್ಯ ಸರ್ಕಾರದಲ್ಲಿ ಇಲ್ಲ~ ಎಂದಿದ್ದಾರೆ.`ಕೆಲವು ಕಾಂಗ್ರೆಸ್ ಮುಖಂಡರು ತಾವು ಹಿಂಬಾಗಿಲಿನಿಂದ ಹೋಗುವವರಲ್ಲ ಎಂದಿದ್ದಾರೆ. ಆದರೆ, ಅವರು ಹೊರಹೋಗುವಂತಿದ್ದರೆ ಎಲ್ಲಾ ಬಾಗಿಲುಗಳು ತೆರೆದೇ ಇವೆ~ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ, ಕಾಂಗ್ರೆಸ್ ಸಂಸದೆ ದೀಪಾ ಮುನ್ಷಿ ಹೇಳಿಕೆಗೆ ರ‌್ಯಾಲಿಯಲ್ಲಿ ತಿರುಗೇಟು ನೀಡಿದ್ದಾರೆ.`ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್, ಇದಕ್ಕೆ ಮಮತಾ ಬ್ಯಾನರ್ಜಿ ಅವರ ವರ್ಚಸ್ಸನ್ನು ಬಳಸಿಕೊಳ್ಳುತ್ತಿದೆ. ಆ ಪಕ್ಷಕ್ಕೆ ನಿಜಕ್ಕೂ ಧೈರ‌್ಯವಿದ್ದರೆ ಮಮತಾ ಅವರ ಭಾವಚಿತ್ರವನ್ನು ಬಳಸದೇ ಚುನಾವಣೆಯಲ್ಲಿ ಗೆದ್ದು ಬರಲಿ ನೋಡೋಣ~ ಎಂದು ಸಚಿವರೂ ಆಗಿರುವ ಚಟರ್ಜಿ ಸವಾಲು ಹಾಕಿದ್ದಾರೆ.`ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತಡೆಯುವ ಉದ್ದೇಶದಿಂದಲೇ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಮುಖ್ಯಮಂತ್ರಿ ವಿರುದ್ಧ ಸಮರ ಸಾರಿವೆ. ಕಾಂಗ್ರೆಸ್, ಸಿಪಿಎಂ ಪರವೋ ಅಥವಾ ನಮ್ಮ (ಟಿಎಂಸಿ) ಪರವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇಬ್ಬಗೆತನವನ್ನು ನಾವು ಸಹಿಸುವುದಿಲ್ಲ~ ಎಂದು ಕಿಡಿಕಾರಿದ್ದಾರೆ.`ಮಮತಾ ಬ್ಯಾನರ್ಜಿ ಅವರ ಜನಪ್ರಿಯತೆಯನ್ನು ಕಂಡು ಕಾಂಗ್ರೆಸ್‌ಗೆ ಹೊಟ್ಟೆಕಿಚ್ಚು~ ಎಂದು ಪಶ್ಚಿಮ ಬಂಗಾಳದ ಸಚಿವ ಸುಬ್ರತೊ ಮುಖರ್ಜಿ ಹೇಳಿದ್ದಾರೆ.ರಾಜ್ಯದಲ್ಲಿ ಮೈತ್ರಿಕೂಟದಿಂದ ಹೊರಹೋಗುವಂತೆ ಕಾಂಗ್ರೆಸ್‌ಗೆ ಶನಿವಾರ ಸವಾಲು ಹಾಕಿದ್ದ ಟಿಎಂಸಿ ಮುಖ್ಯಸ್ಥೆಯೂ ಆದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ರ‌್ಯಾಲಿಯಲ್ಲಿ ಭಾಗವಹಿಸಿರಲಿಲ್ಲ. ಆದರೆ, ಪಕ್ಷದ ಅನೇಕ ಸಂಸದರು ಮತ್ತು ಮುಂಚೂಣಿ ನಾಯಕರು ಪಾಲ್ಗೊಂಡಿದ್ದರು.ಎರಡೂ ಪಕ್ಷಗಳ ನಡುವೆ ಉಂಟಾಗಿರುವ ಕಂದಕವನ್ನು ಮತ್ತಷ್ಟು ವಿಸ್ತರಿಸುವ ಯತ್ನವೋ ಎಂಬಂತೆ ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿರುವ ಕಾಂಗ್ರೆಸ್‌ನ ಸಚಿವರು ಟಿಎಂಸಿ ವಿರುದ್ಧ ಪ್ರತಿ ದಾಳಿಗೆ ಇಳಿದಿದ್ದಾರೆ.`ಟಿಎಂಸಿ ವರ್ತನೆ ಅತಿಯಾಯಿತು. ಮೈತ್ರಿಕೂಟದ `ರಾಜಧರ್ಮ~ವನ್ನು ಅದು ಪಾಲಿಸಬೇಕು~ ಎಂದು ಸಣ್ಣ ಕೈಗಾರಿಕೆ ಇಲಾಖೆಯ ರಾಜ್ಯ ಖಾತೆ ಸಚಿವರೂ ಆದ ಕಾಂಗ್ರೆಸ್‌ನ ಮನೋಜ್ ಚಕ್ರವರ್ತಿ ತಿರುಗೇಟು ನೀಡಿದ್ದಾರೆ.ಈ ಮಧ್ಯೆ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಟಿಎಂಸಿ ಮುಖಂಡ ಸುದೀಪ್ ಬಂಡೋಪಾಧ್ಯಾಯ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. `ಲೋಕಸಭೆಯಲ್ಲಿ ಕಾಂಗ್ರೆಸ್‌ನ 273 ಸದಸ್ಯರೇನೂ ಇಲ್ಲ. ಇದನ್ನು ಆ ಪಕ್ಷ ಮರೆಯಬಾರದು~ ಎಂದು ಎಚ್ಚರಿಸಿದ್ದಾರೆ.

Post Comments (+)