ಹೊಲಕ್ಕಿಲ್ಲ ರಾಸಾಯನಿಕ ಹಂಗು

7
ಅಮೃತ ಭೂಮಿ 43

ಹೊಲಕ್ಕಿಲ್ಲ ರಾಸಾಯನಿಕ ಹಂಗು

Published:
Updated:

ಹೆಚ್ಚು ಫಸಲು ತೆಗೆಯುವ ಭರಾಟೆಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಬಳಸಿ ಭೂಮಿಯ ಸತ್ವವನ್ನು ಹಾಳುಮಾಡಿಕೊಳ್ಳುತ್ತಿರುವ ರೈತರೇ ಹೆಚ್ಚು. ಇಂಥವರ ಮಧ್ಯೆ ನೈಸರ್ಗಿಕ ಕೃಷಿಯಲ್ಲಿಯೇ ಯಶೋಗಾಥೆ ಬರೆದ ವಿಭಿನ್ನ ಯುವ ರೈತನೊಬ್ಬ ಎಲ್ಲರಿಗೂ ಮಾದರಿ.ಶೂನ್ಯ ಬಂಡವಾಳದಲ್ಲಿ ಉತ್ತಮ ಫಸಲನ್ನು ತೆಗೆದು ಯಶಸ್ವೀ ಕೃಷಿಕ ಎನಿಸಿದ್ದಾರೆ ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ನರಸಲಗಿ ಗ್ರಾಮದ ಗಿರಿಧರಗೌಡ ಸಂಗನಗೌಡ ಪಾಟೀಲ. ಮೂರು ವರ್ಷಗಳಿಂದ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಇವರು. ತಮ್ಮಲ್ಲಿರುವ 10 ಎಕರೆ ಜಮೀನಿನಲ್ಲಿ ನಿಂಬೆ, ಪೇರಲ, ಮಾವು, ತೊಗರಿ, ಮೆಕ್ಕೆಜೋಳ, ಶೇಂಗಾ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ.ನೈಸರ್ಗಿಕ ಆಸಕ್ತಿ

‘ಒಮ್ಮೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ತಜ್ಞ ಸುಭಾಷ್ ಪಾಳೇಕರ ಅವರ ನೈಸರ್ಗಿಕ ಕೃಷಿ ಪದ್ಧತಿ ಕುರಿತಾದ ಉಪನ್ಯಾಸ ಕೇಳಿದ ನಂತರ ನೈಸರ್ಗಿಕ ಕೃಷಿ ಬಗ್ಗೆ ಆಸಕ್ತಿ ಮೂಡಿತು. ಆದರೆ ಅದನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮುನ್ನ ಈ ಪದ್ಧತಿ ಅಳವಡಿಸಲು  ಅನುಸರಿಸಬೇಕಾದ ವಿಧಾನಗಳ ಕುರಿತು  ಇನ್ನಷ್ಟು ವಿಷಯಗಳನ್ನು ತಿಳಿಯುವ ಹಂಬಲ ಹೆಚ್ಚಾಯಿತು. ಇದೇ ಕೃಷಿ ಪದ್ಧತಿ ಅನುಸರಿಸಿ ಉತ್ತಮ ಬೆಳೆ ಬೆಳೆದ ಬಸವನಬಾಗೇವಾಡಿಯ ರೈತ ಸಿದ್ದಣ್ಣ ಕಲ್ಲೂರ ಅವರನ್ನು ಭೇಟಿ ಮಾಡಿ ಮಾಹಿಸಿ ಸಂಗ್ರಹಿಸಿದೆ. ಅವರ ಮಾರ್ಗದರ್ಶನದೊಂದಿಗೆ ನಾನೂ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದೇನೆ’ ಎನ್ನುತ್ತಾರೆ ಗಿರಿಧರಗೌಡ.‘ನಾನು ನೈಸರ್ಗಿಕ ಕೃಷಿ ಆರಂಭಿಸಿದ ಎರಡು ವರ್ಷಗಳಲ್ಲಿ ನಿರೀಕ್ಷಿತ ಲಾಭ ಬರಲಿಲ್ಲ. ಆದರೆ ಮೂರನೇ ವರ್ಷ ಉತ್ತಮ ಫಸಲನ್ನು ಕಂಡುಕೊಂಡೆ. ಕಳೆದ ವರ್ಷ ಪೇರು ಮತ್ತು ಸೂರ್ಯಕಾಂತಿ ಬೆಳೆಯಿಂದ 80 ಸಾವಿರಗಳಿಗಿಂತ ಅಧಿಕ ಆದಾಯ ಬಂದಿದೆ.  ಈ ವರ್ಷ ತೊಗರಿ, ಶೇಂಗಾ, ಮೆಕ್ಕೆಜೋಳ ಹಾಗೂ ಪೇರು ಗಿಡಗಳು ಉತ್ತಮವಾಗಿ ಬೆಳೆದು ನಿಂತಿವೆ. ಅವುಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಆದಾಯ  ಪಡೆಯುತ್ತೇನೆ’ ಎನ್ನುತ್ತಾರೆ ಅವರು.‘ಈ ಪದ್ಧತಿ ಆರಂಭಿಸಿದ ವರ್ಷ ಹೊಲದಲ್ಲಿನ ಕಸ ಕಂಡು ಕೆಲವರು ಹೀಗೆ ಮಾಡದಂತೆ ಸಲಹೆ ನೀಡಿದರು. ಹೊಲವನ್ನು ಸ್ವಚ್ಛವಾಗಿಟ್ಟರೆ ಮಾತ್ರ ಉತ್ತಮ ಬೆಳೆ ಬರುತ್ತದೆ ಎಂದರು. ಆದರೆ ಅವರ ಮಾತನ್ನು ನಾನು ಕೇಳಲಿಲ್ಲ. ನಿಸರ್ಗದತ್ತವಾಗಿ ಬೆಳೆಯುವ ಕಸ ಕಡ್ಡಿಗಳು ನಾವು ಬೆಳೆಯುವ ಬೆಳೆಗಳಿಗೆ ತಂಪನ್ನು ಒದಗಿಸುವುದರೊಂದಿಗೆ ಭೂಮಿಯ ಮಣ್ಣನ್ನು ಹದಗೊಳಿಸಲು ಅಗತ್ಯವಿರುವ ಜೀವಿಗಳ ರಕ್ಷಣೆಗೆ ಸಹಕಾರಿಯಾಗುತ್ತದೆ ಎನ್ನುವುದು ನನ್ನ ಅನಿಸಿಕೆ.

ಕಸ–ಕಡ್ಡಿಗಳಿಂದಲೇ ಉತ್ತಮ ಬೆಳೆ ಬರುತ್ತದೆ ಎಂದು ನನಗೆ ಬುದ್ಧಿ ಮಾತು ಹೇಳಲು ಬಂದವರಿಗೆ ವಿವರಿಸಿದೆ. ಆಗ ಹಾಸ್ಯ ಮಾಡಿದ ಅನೇಕ ಮಂದಿ ಈಗ ಅಚ್ಚರಿಯಿಂದ ನನ್ನ ಹೊಲ ನೋಡುತ್ತಿದ್ದಾರೆ. ತಾವೂ ತಮ್ಮ ಹೊಲದಲ್ಲಿ ನೈಸರ್ಗಿಕದತ್ತ ಕಸ ಕಡ್ಡಿಯನ್ನು ಉಳಿಸಿ, ಉತ್ತಮ ಬೆಳೆ ಬೆಳೆಯಲು ಮುಂದೆ ಬಂದಿದ್ದಾರೆ. ಅವರಲ್ಲಿಯೂ ನೈಸರ್ಗಿಕ ಕೃಷಿ ಬಗ್ಗೆ ಆಸಕ್ತಿ ಮೂಡುತ್ತಿದೆ’ ಎಂದು ಸಂತಸದಿಂದ ನುಡಿಯುತ್ತಾರೆ ಗಿರಿಧರಗೌಡ.ಕೀಟ ನಾಶಕವಿಲ್ಲ

ಮೂರು ವರ್ಷಗಳಿಂದ ಬೆಳೆಗಳನ್ನು ಕೀಟಬಾಧೆಯಿಂದ ರಕ್ಷಿಸುವುದಕ್ಕಾಗಿ ಕ್ರಿಮಿನಾಶಕ, ರಾಸಾಯನಿಕವನ್ನು ಪಾಟೀಲ್‌ ಅವರು ಬಳಸಿಲ್ಲ. ಬೇವಿನ ಎಲೆ ಸೇರಿದಂತೆ ವಿವಿಧ ಗಿಡಗಳ ಎಲೆಗಳನ್ನು ದೇಶೀಯ ಗೋಮೂತ್ರದೊಂದಿಗೆ  ಸಿಂಪಡಿಸುತ್ತಿದ್ದಾರೆ. ತೊಗರಿ ಬೆಳೆ ಸೇರಿದಂತೆ ಇತರ ಬೆಳೆಗಳಿಗೆ ಕೀಟಬಾಧೆ ಕಂಡುಬಂದಿಲ್ಲ ಎಂದು ಹೇಳುವ ಇವರು ಜೀವಾಮೃತ, ಬೀಜಾಮೃತ ಹಾಗೂ ಹೊದಿಕೆ ವಿಧಾನಗಳನ್ನು ಅನುಸರಿಸಿ ಉತ್ತಮ ಫಸಲನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.  ಸಂಪರ್ಕಕ್ಕೆ: 9901215299.

-ಪ್ರಕಾಶ ಮಸಬಿನಾಳ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry