ಮಂಗಳವಾರ, ಮಾರ್ಚ್ 9, 2021
23 °C

ಹೊಲದಲ್ಲಿ ಸಾಗಣೆಗೆ ಮೋಟೊಕಾರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಲದಲ್ಲಿ ಸಾಗಣೆಗೆ ಮೋಟೊಕಾರ್ಟ್

`ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ~ ಸಾಗರದ ಹೆಗಡೆ ಫಾರಂನ ಕೆ.ವಿ.ಲಕ್ಷ್ಮಿನಾರಾಯಣ ಹೆಗಡೆ ಅವರಿಗೆ ಸದಾ ಏನಾದರೊಂದು ಹೊಸತನ್ನು ಕಂಡುಹಿಡಿಯುವ ಬಯಕೆ. ಅದಕ್ಕಾಗಿ ಒಂದಿಲ್ಲೊಂದು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ.ಅವರು ಈ ಹಿಂದೆ ಭಾರೀ ತೂಕದ ಕೃಷಿ ಸಾಮಗ್ರಿಗಳನ್ನು ಯಾರದೇ ನೆರವಿಲ್ಲದೆ ಸಾಗಿಸುವ ಹೆಗಡೇಸ್ ಮೋಟೊಕಾರ್ಟ್ -100 ತಯಾರಿಸಿದ್ದರು. ಈಗ ಮೋಟೊ ಕಾರ್ಟ್ -350 ಅಭಿವೃದ್ಧಿಪಡಿಸಿದ್ದಾರೆ.ಇದು ಸುಮಾರು 400 ಕಿಲೊ ಭಾರ ಸಾಗಿಸಬಲ್ಲದು. ಕೂಲಿಯಾಳುಗಳ ಕೊರತೆಗೆ ಪರ್ಯಾಯವಾಗಿ ರೂಪುಗೊಂಡಿದ್ದು, ಎಲ್ಲ ರೀತಿಯ ಬೆಳೆಗಾರರಿಗೆ ಅನುಕೂಲಕರ.ಈಗಂತೂ ಹಳ್ಳಿಗಳಲ್ಲಿ ಕೂಲಿಗಳದೇ ಸಮಸ್ಯೆ. ರೈತರು ಬೆಳೆಯುವ ಅಡಿಕೆ, ಭತ್ತ , ತೆಂಗು, ಕಬ್ಬು ಇನ್ನಿತರ ಕೃಷಿ ಉತ್ಪನ್ನಗಳನ್ನು, ಸಾಮಗ್ರಿಗಳನ್ನು ಬೆಳೆದ ಸ್ಥಳದಿಂದ ಸಾಗಿಸಲು ಕೂಲಿಗಳು ಬೇಕೇಬೇಕು. ಈ ಕೊರತೆಯನ್ನು ನೀಗಿಸುವ ಯತ್ನವೇ ಹೆಗಡೆಯವರ ಈ ಡಂಪಿಂಗ್ ಯಂತ್ರ.ಇದರ ಸಹಾಯದಿಂದ ಅಡಕೆ ಗೊನೆಯಾಗಲೀ, ಭತ್ತದ ಚೀಲಗಳನ್ನಾಗಲೀ ಅಥವಾ ಮಣ್ಣನ್ನು ಹೊತ್ತೊಯ್ಯುವುದಕ್ಕಾಗಲೀ ಕೂಲಿಗಳ ಅಗತ್ಯವಿಲ್ಲ. ಮೋಟೊ ಕಾರ್ಟ್ ಚಾಲನೆ ತಿಳಿದು ಇದನ್ನು ಬಳಸಿದರೆ ರೈತರು ನಿರಾಳರಾಗಿರಬಹುದು.ಇದಕ್ಕೆ 5.5 ಅಶ್ವಶಕ್ತಿಯ ಪೆಟ್ರೋಲ್ ಹೊಂಡಾ ಎಂಜಿನ್ ಅಳವಡಿಸಲಾಗಿದೆ. ಹಿಂಭಾಗ ದಲ್ಲಿ ಟ್ರ್ಯಾಕ್ಟರ್ ಮಾದರಿಯ ಎರಡು ಚಕ್ರಗಳು ಹಾಗೂ ಮುಂದುಗಡೆ ಸಾಲಿಡ್ ರಬ್ಬರ್ ಟೈರ್ ಜೋಡಿಸಲಾಗಿದೆ.ಹೆಲಿಕಲ್ ಗೇರ್ ಬಾಕ್ಸ್ ಇದ್ದು ಹೈಡ್ರಾಲಿಕ್ ಬ್ರೇಕ್‌ನಿಂದ ಇಳಿಜಾರಿನಲ್ಲಿ ಹಂತ ಹಂತವಾಗಿ ಬ್ರೇಕ್ ಹಾಕುವ ವ್ಯವಸ್ಥೆಯಿದೆ. ಇದಕ್ಕೆ 8.5 ಅಡಿ ಟ್ರೇ ಅಳವಡಿಸಿದ್ದು, ಮೂರೂ ಕಡೆಯಿಂದ ತೆರೆಯಬಹುದಾದ ಲೋಹದ ಬಾಗಿಲು ಇಡಲಾಗಿದೆ.2 ಲೀಟರ್ ಪೆಟ್ರೋಲ್ ಟ್ಯಾಂಕ್ ಇದ್ದು, ಎರಡೂವರೆ ಗಂಟೆ ಕಾಲ ಓಡುತ್ತದೆ.

ಏರುತಗ್ಗುಗಳನ್ನು ಸುಲಭವಾಗಿ ದಾಟುತ್ತದೆ. ಗಂಟೆಗೆ ನಾಲ್ಕು ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ ಎಂದು ಸಂಶೋಧಕ ಲಕ್ಷ್ಮೀನಾರಾಯಣ ಹೆಗಡೆ ವಿವರಿಸುತ್ತಾರೆ.ಇನ್ನೊಂದು ವಿಶೇಷ ಎಂದರೆ ಇದನ್ನು ಹೇಗೆ ಬೇಕಾದರೂ ಉಪಯೋಗಿಸಬಹುದು. ಯಾವುದೇ ಸಾಮಗ್ರಿಯನ್ನು ತುಂಬಿ ಎಲ್ಲಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಖಾಲಿ ಮಾಡುವ ವ್ಯವಸ್ಥೆಯಿದೆ.ಹೀಗಾಗಿ ಕೃಷಿಕರು ಆಂತರಿಕ ಸಾಗಾಣಿಕೆಗೆ ಇದನ್ನು ಬಳಸಬಹುದು. ಇದರಿಂದ ಕೂಲಿಯ ಕೊರತೆ ನಿವಾರಿಸಿಕೊಳ್ಳಬಹುದು. ಮಹಿಳಾ ಕಾರ್ಮಿಕರೂ ಇದನ್ನು ಸುಲಲಿತವಾಗಿ ಓಡಿಸಬಹುದು. ಈ ಯಂತ್ರದ ಬಗ್ಗೆ ಮತ್ತಷ್ಟು ವಿವರಗಳಿಗೆ 08183 229363, 96322 26404 ಸಂಪರ್ಕಿಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.