ಹೊಲ ತುಂಬ ಹೂವು; ಕೈತುಂಬ ಕಾಸು

7
ಪ್ರಜಾವಾಣಿ ವಿಶೇಷ : ಕೃಷಿ– ಋಷಿ

ಹೊಲ ತುಂಬ ಹೂವು; ಕೈತುಂಬ ಕಾಸು

Published:
Updated:

ಗುಲ್ಬರ್ಗ:  ‘ಬ್ಯಾಸಿಗಿ ಉರಿಬಿಸಿಲ ಅಂಗಾಲ ಸುಡತಾವ.. ನೀರಿಲ್ಲ, ನೆರಳಿಲ್ಲ ಕೇಳಲಿ ಯಾರನ್ನ’..ಎನ್ನುವ ಊರಲ್ಲೀಗ ತಂಗಾಳಿ ಬೀಸುತ್ತಿದೆ. ಈ ಗ್ರಾಮದತ್ತ ಪಯಣ ಬೆಳೆಸಿದರೆ ರಸ್ತೆಯ ಇಕ್ಕೆಲ­ಗಳಲ್ಲಿ ಬಣ್ಣ ಬಣ್ಣದ ಹೂವಿನ ತೋಟ­ಗಳು ಸ್ವಾಗತಿಸುವ ಮೂಲಕ ‘ಪ್ರಯಾಸ’­­ವನ್ನು ಹೋಗಲಾಡಿಸುತ್ತವೆ. ಇಡೀ ಊರು ಹೂ ರಾಶಿಯನ್ನು ಹೊತ್ತು ಮಲಗಿದಂತೆ ಭಾಸವಾಗುತ್ತದೆ.ನಗರ ಹೊರಭಾಗದಲ್ಲಿ ಕೇವಲ 10 ಕಿ.ಮೀ. ದೂರದಲ್ಲಿರುವ ಮಾಲಗತ್ತಿ ಗ್ರಾಮ ಹೂವಿನ ಬೆಳೆಯಿಂದ ಗಮನ ಸೆಳೆಯುತ್ತಿದೆ. 1992 ರಿಂದಲೇ ಈ ಗ್ರಾಮ­ದಲ್ಲಿ ಸೇವಂತಿಗೆ, ಗುಲಾಬಿ, ಹಳದಿ, ಬಿಳಿ, ಕೆಂಪು ಚೆಂಡು ಹೂ ಬೆಳೆಯ­ಲಾಗುತ್ತದೆ. ಕಬ್ಬು, ತೊಗರಿಗೆ ಮಾತ್ರ ಸೀಮಿತವಾಗಿದ್ದ ಮಾಲಗತ್ತಿ­ಯಲ್ಲೀಗ ತರಹೇವಾರಿ ಹೂಗಳು ಅರಳಿ ನಿಂತಿವೆ. ಇತ್ತೀಚಿನ ದಿನಗಳಲ್ಲಿ ಹೂವಿನ ಬೇಸಾಯದತ್ತ ರೈತರು ಹೆಚ್ಚು ಆಕರ್ಷಿತರಾಗಿದ್ದಾರೆ.ಆರಂಭದಲ್ಲಿ ನಷ್ಟ: 6 ವರ್ಷಗಳ ಹಿಂದೆ ಹೂವಿನ ಕೃಷಿ ಆರಂಭಿಸಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿರುವ ಶಿವ­ಕುಮಾರ ಹೊಸಮನಿ ಅವರ ತೋಟಕ್ಕೆ ಭೇಟಿ ನೀಡಿದರೆ ಒಂದು ಕ್ಷಣ ಅಚ್ಚರಿ­ಯಾ­ಗುತ್ತದೆ. ನೆತ್ತಿ ಸುಡುವ ಬಿಸಿಲಿ­ನಲ್ಲೂ ಹೂಗಳು ಅರಳಿರುವುದು ಶಿವಕು­ಮಾರ ಅವರ ಶ್ರಮವನ್ನು ಎತ್ತಿ ತೋರಿಸುತ್ತದೆ.‘ಹೂವಿನ ಬೇಸಾಯ ಮಾಡಬೇಕು ಎಂದು ನಿರ್ಧರಿಸಿ 2008ರಲ್ಲಿ ಶಹಾ­ಬಾದ್ ಬಳಿಯ ನಂದೂರಿನಿಂದ ಸೇವಂ­ತಿಗೆ ಹಾಗೂ ಚೆಂಡು ಹೂವಿನ ಸಸಿ­ಗಳನ್ನು ತಂದು ನಾಟಿ ಮಾಡಿದೆ. ಆದರೆ, ಹೂವಿನ ಕೃಷಿ ಹೊಸದಾದ್ದರಿಂದ ಮೊದಲ ವರ್ಷ ನಷ್ಟ ಅನುಭವಿಸಿದೆ. ನಾಟಿ ಮಾಡುವ ವಿಧಾನ, ನೀರು, ಔಷಧಿ ಸಿಂಪಡಣೆಯಲ್ಲಿ ವ್ಯತ್ಯಾಸವಾ­ಗಿದ್ದೇ ಬೆಳೆ ನಷ್ಟವಾಗಲು ಕಾರಣ ಎಂದು ನಂತರದ ದಿನಗಳಲ್ಲಿ ಗೊತ್ತಾ­ಯಿತು. ಆದರೆ, ಮಾರನೇ ವರ್ಷದಿಂದ ಇಲ್ಲಿಯವರೆಗೆ ಹೂವು ನನ್ನ ಕೈಬಿಟ್ಟಿಲ್ಲ. ಲಕ್ಷಾಂತರ ರೂಪಾಯಿ ಆದಾಯ ತಂದು­ಕೊಡುತ್ತಿದೆ’ ಎಂದು ಶಿವ­ಕುಮಾರ ಖುಷಿಯಿಂದಲೇ ಹೇಳುತ್ತಾರೆ.ಸಸಿಗಳ ನಾಟಿ ಯಾವಾಗ?: ಸೇವಂತಿಗೆ ಹೂವಿನ ಬೆಳೆಯನ್ನು ಸಾಮಾನ್ಯವಾಗಿ ಮೇ-, ಜೂನ್ ಮತ್ತು ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ಬೆಳೆಯಲಾಗುತ್ತದೆ. ಇದು ಆರು ತಿಂಗಳ ಬೆಳೆಯಾಗಿದ್ದು, ನಾಲ್ಕೂವರೆ ತಿಂಗಳಿಗೆ ಹೂ ಬಿಡಲು ಪ್ರಾರಂಭಿಸುತ್ತದೆ. ಈ ಮಧ್ಯೆ ತುಕ್ಕು­ರೋಗಕ್ಕೂ ಒಳಗಾಗುತ್ತದೆ. ಹೀಗಾಗಿ, ಕನಿಷ್ಠ ಮೂರು ಬಾರಿ ಔಷಧಿ ಸಿಂಪಡಣೆ ಮಾಡಲೇ ಬೇಕು. ರಾಶಿ ರಾಶಿ ಹೂಗಳು ಅರಳಿ ನಿಲ್ಲುತ್ತಿ­ದ್ದಂತೆಯೇ ಲಕ್ಷಾಂತರ ರೂಪಾಯಿ ಆದಾಯ ರೈತನ ಜೇಬು ಸೇರುತ್ತದೆ.ಹನಿ ನೀರಾವರಿ: ಎಲ್ಲ ರೈತರಂತೆ ಶಿವ­ಕುಮಾರ ಕೂಡ ಆರಂಭದಲ್ಲಿ ನೀರಿನ ಸಮಸ್ಯೆ ಅನುಭವಿಸಿದರು. ಮಳೆಯನ್ನೇ ನಂಬಿಕೊಂಡರೆ ಕೃಷಿ ಕಷ್ಟ ಎಂದು ಅರಿತು ಪಾಳುಬಿದ್ದ ಬಾವಿಯಲ್ಲೇ ಕೊಳವೆಬಾವಿ ಕೊರೆಸಿದರು. ಆಗ ಒಂದೂವರೆ ಇಂಚು ನೀರು ಲಭ್ಯವಾಯಿತು. ಎಕರೆಗೆ ₨ 10 ಸಾವಿರ ಖರ್ಚು ಮಾಡಿ ಹನಿ ನೀರಾವರಿ ಅಳವಡಿಸಿಕೊಂಡರು. ಸೊಗಸಾದ ಹೂವಿನ ಫಸಲಿನ ಜತೆಗೆ ಕೈತುಂಬ ಕಾಸು ಸಂಪಾದಿಸಲು ಆರಂಭಿಸಿದರು.ಗುಲ್ಬರ್ಗ ಮಾರುಕಟ್ಟೆ: ಗಣೇಶ ಚತುರ್ಥಿ, ದೀಪಾವಳಿ, ದಸರಾ, ಯುಗಾದಿ ಹಬ್ಬಗಳಲ್ಲಂತೂ ಹೂವಿಗೆ ಎಲ್ಲಿಲ್ಲದ ಬೇಡಿಕೆ. ಒಂದು ಕೆ.ಜಿ.ಗೆ ₨ 100 ರಿಂದ 120 ಬೆಲೆ ಇರುತ್ತದೆ. ಸಾಮಾನ್ಯ ದಿನಗಳಲ್ಲಿ ₨ 30 ರಿಂದ 35 ದರವಿರುತ್ತದೆ. ಹೀಗಾಗಿ, ರೈತರು ಹಬ್ಬಗಳನ್ನೇ ನೆಚ್ಚಿಕೊಳ್ಳುತ್ತಾರೆ. ಹಬ್ಬಕ್ಕೆ ಹೂ ಲಭ್ಯವಾಗುವಂತೆ ಬೆಳೆ ಬೆಳೆ­ಯುತ್ತಾರೆ.ಇಲ್ಲಿ ಬೆಳೆದ ಹೂಗಳನ್ನು ಗುಲ್ಬರ್ಗ ಮಾರುಕಟ್ಟೆಗೆ ತೆಗೆದು­ಕೊಂಡು ಹೋಗಲಾಗುತ್ತದೆ. ‘ವ್ಯಾಪಾರ­ವಾದ ತಕ್ಷಣವೇ ಹಣ ಕೈ ಸೇರುತ್ತದೆ. ಆದರೆ, ಹೂ ಬಾಡುವ ಮುನ್ನ ಮಾರುಕಟ್ಟೆ ತಲುಪಿ, ಮಾರಾಟ ಮಾಡಬೇಕು. ಇಲ್ಲವಾದಲ್ಲಿ ನಷ್ಟ ಖಚಿತ’ ಎಂಬುದು ಶಿವಕುಮಾರ ಅವರ ಅನುಭವದ ಮಾತು. (ಮೊ: 8050636460)‘ರೂ 2–3 ಲಕ್ಷ ಆದಾಯ ಖಚಿತ’

ಒಟ್ಟು 5 ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ಸೇವಂತಿಗೆ, ಕರಾಮತಿ (ಚೆಂಡು ಹೂ) ಬೆಳೆದಿದ್ದೇನೆ. ಆರು ತಿಂಗಳ ಬೆಳೆ ಇದಾಗಿದ್ದು, ₨ 50 ಸಾವಿರ ಖರ್ಚು ತಗಲುತ್ತದೆ. ವರ್ಷಕ್ಕೆ ₨ 2 ರಿಂದ 3 ಲಕ್ಷ ಆದಾಯಕ್ಕೆ ಮೋಸವಿಲ್ಲ. ಮಾರನೇ ವರ್ಷ ಸ್ಥಳ ಬದಲಾವಣೆ ಮಾಡಿ ಬೇರೆಡೆ ಸಸಿ ನೆಡುತ್ತೇನೆ. ಹೀಗೆ ಮಾಡುವುದರಿಂದ ಒಳ್ಳೆಯ ಆದಾಯ ಬರುತ್ತದೆ.

–ಶಿವಕುಮಾರ ಹೊಸಮನಿ, ರೈತ, ಮಾಲಗತ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry