ಗುರುವಾರ , ಮೇ 6, 2021
24 °C

ಹೊಲ-ತೋಟದ ಮಾಲೀಕರ ಹೊಟ್ಟೆಗೆ ಬೆಂಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೇಸಿಗೆಯಲ್ಲಿ ಕಾಡಿನ ಬೆಂಕಿ ಕಾಣಿಸಿಕೊಂಡು ಅಪಾರ ಅರಣ್ಯ ಸಂಪತ್ತು ನಾಶವಾಗುವುದು ಸರ್ವೇ ಸಾಮಾನ್ಯ. ಆದರೆ ನಗರದ ಕಾರವಾರ ರಸ್ತೆಯ ಹೇಸಿಗೆ ಮಡ್ಡಿಗೆ ಬೇಸಿಗೆಯಲ್ಲಿ ಪ್ರತಿದಿನ ಬೀಳುವ ಬೆಂಕಿ ಪರೋಕ್ಷವಾಗಿ ಹೊಲ-ತೋಟದ ಮಾಲೀಕರ ಹೊಟ್ಟೆಯನ್ನು ಸುಡುತ್ತದೆ.ಹೇಸಿಗೆ ಮಡ್ಡಿಗೆ ಪಾಲಿಕೆಯವರು ಬೆಂಕಿ ಹಾಕುತ್ತಾರೆ ಎಂದು ಹೇಳುವ ಹೊಲಗಳ ಮಾಲೀಕರು ಈ ಬೆಂಕಿ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತದೆ ಎಂದು ದೂರುತ್ತಾರೆ. ಕಳೆದ ಬಾರಿ ಈ ರೀತಿ ಬಿದ್ದ ಬೆಂಕಿಯಿಂದ ಹುಸೇನ್ ಸಾಬ್ ಬಿಜಾಪುರ ಅವರ ತೆಂಗು ಹಾಗೂ ಚಿಕ್ಕು ತೋಟದ ಬಹುತೇಕ ಭಾಗ ನಾಶವಾಗಿತ್ತು. ಅಂದು ಪರಿಹಾರದ ಭರವಸೆ ಸಿಕ್ಕಿದ್ದರೂ ಮೊತ್ತ ಇನ್ನೂ ಕೂಡ ಕೈ ಸೇರಲಿಲ್ಲ ಎಂದು ಬಿಜಾಪುರ ದೂರಿದರು.ಬೆಂಕಿಯಿಂದ ಆಗುವ ತೊಂದರೆ ಒಂದೆಡೆಯಾದರೆ ಕಸ ಹಾಗೂ ಹೇಸಿಗೆ ಎಸೆಯುವುದರಿಂದಾಗಿ ತೋಟ ಹಾಗೂ ಹೊಲದಲ್ಲಿ ಭಾರಿ ನಷ್ಟ ಉಂಟಾಗುತ್ತದೆ ಎಂದು ಮಾಲೀಕರು ದೂರಿದರು.ಹೇಸಿಗೆ ಮಡ್ಡಿಗೆ ನುಗ್ಗುವ ಹಂದಿ-ನಾಯಿಗಳು ಅಲ್ಲಿ ಎಸೆದ ಪ್ರಾಣಿಗಳ ಶರೀರದ ಭಾಗಗಳನ್ನು ಎಳೆದುಕೊಂಡು ಹೊಲಕ್ಕೆ ಅಥವಾ ತೋಟಕ್ಕೆ ನುಗ್ಗುತ್ತವೆ. ಹೊಲದಲ್ಲಿ ಬೆಳೆಯನ್ನು ನಾಶ ಮಾಡುತ್ತವೆ ಎಂದು ಅವರು ಆರೋಪಿಸಿದರು.`ಹಂದಿ-ನಾಯಿಗಳ ಕಾಟದಿಂದಾಗಿ ಒಂದು ಪೀಕು ಕೂಡ ಸರಿಯಾಗಿ ಕೈಗೆ ಸಿಗುವುದಿಲ್ಲ. ದೂರು ಕೊಟ್ಟರೆ ಯಾರು ಕೂಡ ಗಮನ ಹರಿಸಲು ಸಿದ್ಧರಿಲ್ಲ. ಕಳೆದ ಬಾರಿ ಬೆಂಕಿ ಬಿದ್ದಾಗ ಶೀಘ್ರದಲ್ಲೇ ಸುತ್ತ ಆವರಣ ಗೋಡೆ ನಿರ್ಮಿಸುವುದಾಗಿ ಪಾಲಿಕೆಯಿಂದ ಭರವಸೆ ಲಭಿಸಿತ್ತು. ಆದರೆ ಇಲ್ಲಿಯ ವರೆಗೆ ಪಾಲಿಕೆ ಮಾತು ಪಾಲಿಸಲಿಲ್ಲ.ಹೇಸಿಗೆ ಮಡ್ಡಿಯನ್ನು ಸ್ಥಳಾಂತರಿಸುವ ಕಾರ್ಯಕ್ಕೂ ಚಾಲನೆ ನೀಡಲಿಲ್ಲ~ ಎಂದು ಹಾಸಿಫ್ ಬಿಜಾಪುರ ದೂರಿದರು.

ಹೇಸಿಗೆ ಮಡ್ಡಿಯ ಸಮೀಪದಲ್ಲಿ ಹೊಲ ಇರುವ ಎಸ್.ಆರ್. ಗೌಡರ್ ಅವರದ್ದು ಕೂಡ ನಷ್ಟದ ಕಥೆಯೇ. ದನ, ಕೋಳಿ ಮುಂತಾದವುಗಳ ಶರೀರದ ಭಾಗಗಳನ್ನು ಇವರ ಹೊಲದ ಸಮೀಪದಲ್ಲೇ ಅಲ್ಲಿ ಗುಂಡಿ ತೋಡಿ ಹಾಕಲಾಗುತ್ತದೆ. ಅಲ್ಲಿಂದ ಬರುವ ಅಸಹನೀಯ ದುರ್ವಾಸನೆ ಅತ್ತ ಯಾರೂ ಸುಳಿಯದಂತೆ ಮಾಡಿದೆ. ಹೀಗಾಗಿ ಅವರ ಹೊಲಕ್ಕೆ ಯಾರೂ ಕೆಲಸಕ್ಕೆ ಕೂಡ ಬರುತ್ತಿಲ್ಲ.`ಇಲ್ಲಿ ಹೊಲ-ತೋಟವನ್ನು ನೋಡಿಕೊಳ್ಳುವುದೇ ಕಷ್ಟ. ಕಳೆದ ಹಲವಾರು ವರ್ಷಗಳಿಂದ ನಷ್ಟದ ಕೃಷಿ ಮಾಡುತ್ತಿದ್ದೇವೆ. ಕೆಲವರು ಈ ಭಾಗದಲ್ಲಿ ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ~ ಎಂದು ಗೌಡರ್ ಹೇಳಿದರು.ವಿಚಿತ್ರವೆಂದರೆ ಇವರು ಪಾಲಿಕೆಯ ನಿವೃತ್ತ ಉದ್ಯೋಗಿ. ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.