ಹೊಳಲ್ಕೆರೆ: ರಸ್ತೆ ಪಕ್ಕದಲ್ಲೇ ವಾರದ ಸಂತೆ!

7
ವಾಹನ ಚಾಲಕರಿಗೆ ಕಿರಿಕಿರಿ, ಸಂಚಾರ ಅಸ್ತವ್ಯಸ್ಥ

ಹೊಳಲ್ಕೆರೆ: ರಸ್ತೆ ಪಕ್ಕದಲ್ಲೇ ವಾರದ ಸಂತೆ!

Published:
Updated:

ಹೊಳಲ್ಕೆರೆ: ಪಟ್ಟಣದ ಬಸ್‌ ನಿಲ್ದಾಣದ ಸಮೀಪ ಹೊಸದುರ್ಗ ಮಾರ್ಗದ ರಾಜ್ಯಹೆದ್ದಾರಿ– 47ರ ಎರಡೂ ಬದಿಯಲ್ಲಿ ಪ್ರತೀ ಭಾನುವಾರ ವಾರದ ಸಂತೆ ನಡೆಯುತ್ತಿದ್ದು ವಾಹನ ಚಾಲಕರು, ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಕೆಸರುಗಟ್ಟೆ ಕೆರೆ ಪಕ್ಕದ ಜಾಗದಲ್ಲಿ ಸಂತೆ ನಡೆಯುತ್ತಿದ್ದು, ಅಲ್ಲಿ ಜಾಗ ಸಾಕಾಗದೆ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತರಕಾರಿ, ಸೊಪ್ಪು, ಹೂವು, ಕಿರಾಣಿ ಅಂಗಡಿ ನಡೆಸುತ್ತಾರೆ. ಸಂತೆಗೆ ಆಟೊರಿಕ್ಷಾ, ಕೈಗಾಡಿ, ಬೈಕ್‌ಗಳು ಹೆಚ್ಚು ಬರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಸಂತೆಯಲ್ಲಿ ಬಿಡಾಡಿ ದನಗಳು ಎಲ್ಲೆಂದರಲ್ಲಿ ಓಡಾಡುವುದರಿಂದ ಗ್ರಾಹಕರಿಗೆ ಸಂತೆಯ ಸಹವಾಸವೇ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ.ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಸಾಲು, ಸಾಲು ಅಂಗಡಿ ಇಡುವುದರಿಂದ ಹೊಸದುರ್ಗ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಪಟ್ಟಣ ದಾಟುವುದು ದೊಡ್ಡ ಸವಾಲಾಗಿದೆ. ಪಟ್ಟಣದಿಂದ ಹೊಸದುರ್ಗ ಮಾರ್ಗದಲ್ಲಿ ಪ್ರತೀ 5 ನಿಮಿಷಕ್ಕೆ ಒಂದು ಖಾಸಗಿ ಬಸ್‌ ಸಂಚರಿಸಲಿದ್ದು, ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನ ಚಾಲಕರು ಬಸ್‌ ಓಡಿಸಲು ದೊಡ್ಡ ಸಾಹಸವನ್ನೇ ಮಾಡಬೇಕು.ಸಂಚಾರಿ ಸಂತೆ: ಇಲ್ಲಿನ ಪಟ್ಟಣ ಪಂಚಾಯ್ತಿ ಸಂತೆ ನಡೆಸಲು ಒಂದು ಕಾಯಂ ಜಾಗ ಹೊಂದಿಲ್ಲ. ಕಳೆದ 3–4ವರ್ಷಗಳಲ್ಲಿ ಸಂತೆಯನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂಬಂತೆ ಎರಡು ಮೂರು ಜಾಗಗಳಿಗೆ ಬದಲಾಯಿಸಿದೆ. ಕಳೆದ ವರ್ಷ ಇದೇ ಮುಖ್ಯರಸ್ತೆಯ ಬಲಭಾಗದಲ್ಲಿ ನಡೆಯುತ್ತಿದ್ದ ಸಂತೆಯನ್ನು ಈಗ ಎಡಭಾಗಕ್ಕೆ ಸ್ಥಳಾಂತರಿಸಿದೆ. ಮಳೆಗಾಲದಲ್ಲಂತೂ ಸಂತೆಯಲ್ಲಿ ಕೆಸರು ತುಂಬುತ್ತಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳ ಗೋಳು ಹೇಳತೀರದು. ಪಟ್ಟಣದಲ್ಲಿ ಪ್ರತಿದಿನದ ತರಕಾರಿ ಮಾರುಕಟ್ಟೆ ಇಲ್ಲವಾದ್ದರಿಂದ ವಾರದ ಸಂತೆಗೆ ಹೆಚ್ಚು ಜನ ಸೇರುತ್ತಾರೆ. ಆದರೆ ಮೂಲ ಸೌಕರ್ಯಗಳು ಇಲ್ಲದೆ ಕೆಲವರು ಸಂತೆಗೆ ಬರಲು ಹಿಂದೇಟು ಹಾಕುತ್ತಾರೆ.ಮೂಲಸೌಕರ್ಯ ಇಲ್ಲದಿದ್ದರೂ ಕರ ವಸೂಲಿ

ಪಟ್ಟಣ ಪಂಚಾಯ್ತಿಯವರು ವ್ಯಾಪಾರಿಗಳಿಗೆ ಕುಡಿಯುವ ನೀರು, ಫ್ಲಾಟ್‌ಫಾರ್ಮ್, ಛಾವಣಿ,  ಶೌಚಾಲಯ, ನಿಗದಿತ ಜಾಗ ಮತ್ತಿತರ ಮೂಲಸೌಕರ್ಯ ಒದಗಿಸದಿದ್ದರೂ ಜಕಾತಿ (ಕರ) ವಸೂಲಿ ಮಾಡುತ್ತಾರೆ. ಹಳ್ಳಿಗಳಿಂದ ವ್ಯಾಪಾರಿಗಳಿಗೆ ಮಾರಾಟ ಮಾಡಲು ತರಕಾರಿ ತರುವ ರೈತರಿಂದಲೂ ಹಣ ವಸೂಲಿ ಮಾಡುತ್ತಾರೆ. ಅದನ್ನು ಮಾರಾಟ ಮಾಡುವ ವ್ಯಾಪಾರಿಗಳಿಂದಲೂ ಹಣ ಪಡೆಯುತ್ತಾರೆ. ಸಂತೆಯಲ್ಲಿ ಕರ ವಸೂಲಿಗೆ ಟೆಂಡರ್‌ ಕರೆದು ಹಣ ಪಡೆಯುತ್ತಾರೆ. ಸಂತೆಗೆ ಮೂಲ ಸೌಕರ್ಯ ಒದಗಿಸುವುದು ಪಟ್ಟಣ ಪಂಚಾಯ್ತಿಯ ಮುಖ್ಯ ಜವಾಬ್ದಾರಿ.

–ಈಚಘಟ್ಟದ ಸಿದ್ದವೀರಪ್ಪ, ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಸಂತೆಗೆ ಜಾಗ ಇಲ್ಲ


ಪಟ್ಟಣದಲ್ಲಿ ಸಂತೆ ನಡೆಸಲು ಸೂಕ್ತ ಜಾಗ ಇಲ್ಲ. ಪಟ್ಟಣ ಪಂಚಾಯ್ತಿಗೆ ಸೇರಿದ್ದ 2 ಎಕರೆ ಜಾಗ ವಿವಾದಕ್ಕೆ ಒಳಗಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಚುನಾವಣೆ ಮುಗಿದ ನಂತರ ಈಗ ಸಂತೆ ನಡೆಯುತ್ತಿರುವ ಜಾಗದ ಪಕ್ಕದಲ್ಲೇ ಇರುವ ಖಾಲಿ ಜಾಗವನ್ನು ಸ್ವಚ್ಛಗೊಳಿಸಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು.

–ಚಂದ್ರಪ್ಪ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry