ಹೊಳೆಆಲೂರ ಕೆರೆ ನಿರ್ಮಾಣ ಶೀಘ್ರ: ಪಾಟೀಲ

7

ಹೊಳೆಆಲೂರ ಕೆರೆ ನಿರ್ಮಾಣ ಶೀಘ್ರ: ಪಾಟೀಲ

Published:
Updated:

ಹೊಳೆಆಲೂರ (ರೋಣ): ಹೊಳೆಆಲೂರ, ಗಾಡಗೋಳಿ ಹೊಳೆಮಣ್ಣೂರ ಗ್ರಾಮಗಳಿಗಾಗಿ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರೂ 4 ಕೋಟಿ 61ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೆರೆ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಯ ಬಳಕೆಗಾಗಿ ಸಮರ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.ಅವರು ಶನಿವಾರ ಹೊಳೆಆಲೂರ ಗ್ರಾಮದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆರೆ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನೂತನ ಕೆರೆ ದಂಡೆಯಲ್ಲಿ ಜಾಕ್‌ವೆಲ್ ನಿರ್ಮಾಣ ಸ್ವಿಲಿಂಗ್ ಬೇಸಿನ್ ನಿರ್ಮಿಸುವುದು, ಪವರ್ ಹೌಸ್ ಮತ್ತು ಪಂಪಹೌಸ್ ನಿರ್ಮಾಣ ಕೆರೆಯ ಹೊರಗಡೆ 1ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಮೇಲ್ಮಟ್ಟದ ನೀರಿನ ಟ್ಯಾಂಕ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು. ನೂತನ ಕೆರೆಯು 3 ಲಕ್ಷ 40 ಸಾವಿರ ಕ್ಯುಬಿಕ್ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಕೆರೆ ನಿರ್ಮಾಣ ಕಾಮಗಾರಿಯನ್ನು ರಾಜೀವಗಾಂಧಿ ಸಬ್‌ಮಷಿನ್ ಯೋಜನೆ ಅಡಿಯಲ್ಲಿ ಕಾಮಗಾರಿಯನ್ನು  ಕೈಗೆತ್ತಿಕೊಳ್ಳಲಾಯಿತು. 22 ಎಕರೆ ಭೂಮಿ ವ್ಯಾಪ್ತಿಯನ್ನು ನೂತನ ಕೆರೆಯು ಹೊಂದಿದೆ ಎಂದು ಸಚಿವ ಪಾಟೀಲ ಹೇಳಿದರು.ಕೆರೆಯು ಸೋಮನಕಟ್ಟಿ ಗ್ರಾಮದಿಂದ 3ಕಿ.ಮೀ. ಅಂತರದಲ್ಲಿರುವುದರಿಂದ ಕೆರೆಯಲ್ಲಿ ಸಂಗ್ರಹವಾದ ನೀರನ್ನು ಸೋಮನಕಟ್ಟಿ ಗ್ರಾಮಕ್ಕೆ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಚಿವರನ್ನು ಆಗ್ರಹಿಸಿದರು.ಸಚಿವರು ಕೆರೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಸೋಮನಕಟ್ಟಿ ಗ್ರಾಮಕ್ಕೆ ಕೆರೆಯಿಂದ ನೀರು ಪೂರೈಸುವ ಸಾಧ್ಯತೆ ಕುರಿತು ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.ಜಿ.ಪಂ ಎಂಜಿನಿಯರ್ ವಿ.ಕೆ. ಕಾಳಪ್ಪನವರ, ಮಂಡಸೂಪ್ಪಿ, ಗ್ರಾ.ಪಂ. ಅಧ್ಯಕ್ಷ ಜಗದೀಶ ಬ್ಯಾಡಗಿ ,ತಾ.ಪಂ. ಉಪಾಧ್ಯಕ್ಷ ಶಿವಕುಮಾರ ನೀಲಗುಂದ, ಬಸವರಾಜ ಖವಾಸ್ತ್, ವಿ.ಎಸ್.ಹಿರೇಮಠ, ಡಾ.ಡಿ.ಕೆ. ಕುಲಕರ್ಣಿ,ಎಂ.ಡಿ. ನೀರಲಗಿ, ಸೋಮು ಹುಡೇದಮನಿ, ಬಿ.ಎಸ್. ಗಿರಿತಮ್ಮಣ್ಣವರ, ಮುತ್ತಣ್ಣ ಬಿಳೆಕಲ್ಲ, ಬಸವರಾಜ ಬ್ಯಾಡಗಿ, ಭೀಮಸಿ ಬಾಲಣ್ಣವರ,ಮಹಾಂತೇಶ ಬ್ಯಾಡಗಿ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry