ಸೋಮವಾರ, ನವೆಂಬರ್ 18, 2019
21 °C

ಹೊಳೆವ ಕಾಗದ ವಿನ್ಯಾಸ ಪರಿಕರವಾದಾಗ...

Published:
Updated:

ಕಾತರದಿಂದ ಕಾಯುತ್ತಿದ್ದ ಫ್ಯಾಷನ್ ಅಭಿಮಾನಿಗಳನ್ನು ಮೊದಲು ರಂಜಿಸಿದ್ದು `ವಂದೇ ಮಾತರಂ' ಗೀತೆ. ಈ ದೇಶಭಕ್ತಿಗೀತೆಗೆ ನೃತ್ಯ ಮಾಡಿದ ಕಿರಣ್ ಗ್ರೂಪ್ಸ್ ತಂಡದ ಸದಸ್ಯರಿಗೆ ಚಪ್ಪಾಳೆಯ ಪ್ರೋತ್ಸಾಹ. ನಂತರ ಪ್ರಾರಂಭವಾಗಿದ್ದು ರ್‍ಯಾಂಪ್ ನಡಿಗೆ. ಕೆಂಪು, ಹಳದಿ ಬಣ್ಣಗಳ ಶೈನಿಂಗ್ ಪೇಪರ್‌ಗಳಲ್ಲಿ ವಿನ್ಯಾಸ ಮಾಡಿದ ಉಡುಪುಗಳನ್ನು ತೊಟ್ಟ ಎಂಟು ರೂಪದರ್ಶಿಯರು ಹಾಗೂ ಕೋಟ್ ಜೊತೆಗೆ ಬಣ್ಣ ಬಣ್ಣದ ಪ್ಯಾಂಟ್‌ತೊಟ್ಟು ಹೆಜ್ಜೆ ಹಾಕಿದ ಎಂಟು ಯುವಕರು ವೇದಿಕೆಯನ್ನು ಆವರಿಸಿದರು. ಇಡೀ ವೇದಿಕೆಯೇ ಬಣ್ಣಬಣ್ಣ!`ಇನ್ಫೆಂಟ್ ಸ್ಕೂಲ್ ಆಫ್ ಫ್ಯಾಷನ್' ಇತ್ತೀಚೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ `ಮಿಸ್ಟರ್ ಅಂಡ್ ಮಿಸ್ ಬೆಂಗಳೂರು 2013'ರ ಫ್ಯಾಷನ್ ಷೋನಲ್ಲಿ ಕಂಡು ಬಂದ ದೃಶ್ಯವಿದು. ಫ್ಯಾಷನ್ ಷೋಗಿಂತ ಹಾಡು, ನೃತ್ಯ ಕಾರ್ಯಕ್ರಮಗಳೇ ಹೆಚ್ಚಾಗಿದ್ದವು. ಕಿರಣ್ ಗ್ರೂಪ್ಸ್ ಹಾಗೂ ಶಿಲ್ಪಾ ತಂಡ ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮಗಳು ಫ್ಯಾಷನ್‌ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾದವು.ಮೊದಲ ಸುತ್ತಿನಲ್ಲಿ 16 ರೂಪದರ್ಶಿಯರು ದಿನೇಶ್ ರಾಜ್ ವಿನ್ಯಾಸ ಮಾಡಿದ ಉಡುಪುಗಳೊಂದಿಗೆ ರ್‍ಯಾಂಪ್ ಮೇಲೆ ಕಾಣಿಸಿಕೊಂಡರು. ರೂಪದರ್ಶಿಯರು ರ್‍ಯಾಂಪ್ ಗೆ ಬರುವ ವೇಳೆಗೆ ಡಿಸ್ಕೋ ಜಾಕಿಯ ತಪ್ಪಿನಿಂದಾಗಿ ಆಡಿಯೊ ಟ್ರ್ಯಾಕ್ ಮಧ್ಯೆ ಮಧ್ಯೆ ನಿಲ್ಲುತ್ತಿತ್ತು. ಆಡಿಯೊ ಇಲ್ಲದೆ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ ರೂಪದರ್ಶಿಯರು ಮುಜುಗರಕ್ಕೊಳಗಾಗಿದ್ದು ಅವರ ಮುಖಭಾವದಿಂದ ಎದ್ದುಕಾಣುತ್ತಿತ್ತು.ಎರಡನೇ ಸುತ್ತಿನಲ್ಲಿ ಪುರಾತನ, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ರೂಪದರ್ಶಿಯರು ಗಮನ ಸೆಳೆದರು. ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಗುಂಪಿನಲ್ಲಿ ಕಾಣಿಸಿಕೊಂಡರು. ಯುವತಿಯರು ಗಾಘ್ರಾ ಚೋಲಿ ಹಾಗೂ ಮದುವೆ ಉಡುಪುಗಳನ್ನು ಧರಿಸಿದ್ದರೆ, ಯುವಕರು ಅಯ್ಯಪ್ಪ ಸ್ವಾಮಿ ಭಕ್ತರಂತೆ ಕಪ್ಪು ಪಂಚೆ ತೊಟ್ಟು ಹುರಿಗೊಳಿಸಿದ ಮೈಯನ್ನು ಪ್ರದರ್ಶಿಸಿದರು. ನಂತರ ಬಂದ ನಾಲ್ವರು ರೂಪದರ್ಶಿಯರೂ ಆಕರ್ಷಿಸಿದ್ದು ಸಾಂಪ್ರದಾಯಿಕ ಉಡುಪಿನಿಂದ. ರೂಪದರ್ಶಿಯರ ಕೊರಳಿನಲ್ಲಿ ಮಿಂಚುತ್ತಿದ್ದ ನೆಕ್ಲೇಸ್ ಮಾತ್ರ ಗಾಘ್ರಾ ಚೋಲಿಗೆ ಹೊಂದುವಂತಿತ್ತು. ಇಲ್ಲಿಯೂ ಇಬ್ಬರು ಯುವಕರು ಕೇಸರಿ ಪಂಚೆ ಉಟ್ಟು ದೇಹ ಪ್ರದರ್ಶಿಸಿದರು.ಈ ರೂಪದರ್ಶಿಯರ ಉಡುಪುಗಳನ್ನು ವಿನ್ಯಾಸ ಮಾಡಿದ ವಿನ್ಯಾಸಕ ದಿನೇಶ್ ರಾಜ್ `ಮೆಟ್ರೊ'ದೊಂದಿಗೆ ಮಾತನಾಡಿದರು. `ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ. ಅದರಲ್ಲೂ ಪ್ಲಾಸ್ಟಿಕ್ ಹಾವಳಿ. ಹಾಗಾಗಿ ಶೈನಿಂಗ್ ಪೇಪರ್ ಆಯ್ಕೆ ಮಾಡಿಕೊಂಡು, ಚೆಂದವಾಗಿ ಕಾಣುವಂತೆ ವಿನ್ಯಾಸ ಮಾಡಿದ್ದೇನೆ. ಪೇಪರ್‌ನಿಂದ ಬ್ಯಾಗ್, ಗೃಹಾಲಂಕಾರದ ಉತ್ಪನ್ನಗಳನ್ನು ಮಾಡಬಹುದು.ಪೇಪರ್ ತ್ಯಾಜ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ವಸ್ತು ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ' ಎಂದರು ದಿನೇಶ್ ರಾಜ್.“ಮೂರನೇ ಸುತ್ತಿನಲ್ಲಿ `ಈವ್ನಿಂಗ್ ಗೌಸ್' ಹೆಸರಿನ ಸಂಗ್ರಹಗಳನ್ನು ಧರಿಸಿದ ರೂಪದರ್ಶಿಯರು ರ್‍ಯಾಂಪ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಕೆಂಪು, ಬಿಳಿ, ಹಸಿರು ಹಾಗೂ ಕಿತ್ತಳೆ ಬಣ್ಣದ ಉಡುಪುಗಳಿಗೆ ಪ್ರಾಧಾನ್ಯ ನೀಡಿದ್ದೇನೆ. ಕಡಿಮೆ ಹಣದಲ್ಲಿ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ನಾನು ಸಿನಿಮಾಗಳಲ್ಲೂ ಕೆಲಸ ಮಾಡುತ್ತಿದ್ದೇನೆ. ತಮಿಳಿನ `ವಾನತ್ತಿಲ್ ಒರು ದೇವತೆ' ಹಾಗೂ ತೆಲುಗಿನ `ನಾಲೋ ವಸಂತ ರಾಗಂ' ಚಿತ್ರಗಳಲ್ಲಿ ವಿನ್ಯಾಸ ಮಾಡಿದ್ದೇನೆ” ಎಂದು ದಿನೇಶ್ ಮಾತು ಮುಗಿಸಿದರು.

ಪ್ರತಿಕ್ರಿಯಿಸಿ (+)