ಶುಕ್ರವಾರ, ನವೆಂಬರ್ 22, 2019
22 °C

ಹೊಳೆ ಇಳಿದ ಹೊತ್ತಿನಲ್ಲಿ...

Published:
Updated:

1983ರ ಆಸುಪಾಸು. ಇಡೀ ದೇಶದಲ್ಲಿ ಅತಿ ಹೆಚ್ಚು ಅಭಿಮಾನಿ ಸಂಘಗಳು ಡಾ. ರಾಜ್‌ಕುಮಾರ್ ಹೆಸರಿನಲ್ಲಿ ನೋಂದಾಯಿತವಾಗಿದ್ದವು. ಅವುಗಳ ಒಟ್ಟು ಸಂಖ್ಯೆ ಒಂಬತ್ತು ಸಾವಿರಕ್ಕೂ ಹೆಚ್ಚು. ಅಷ್ಟೂ ಸಂಘಗಳಲ್ಲಿ ಸುಮಾರು ಎರಡು ಲಕ್ಷ ಸದಸ್ಯರಿದ್ದರು. ಆಗಿನ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ಅಭಿಮಾನದ ಉತ್ತುಂಗದ ದ್ಯೋತಕ. ಇನ್ನು ನೋಂದಾಯಿಸದ ಸಂಘಗಳಿಗೆ ಲೆಕ್ಕವೇ ಇಲ್ಲ. ಎಂಜಿಆರ್, ಎನ್‌ಟಿಆರ್‌ರಂಥ ಘಟಾನುಘಟಿಗಳು ಪಕ್ಕದ ರಾಜ್ಯಗಳಲ್ಲಿ ಇದ್ದ ಸಂದರ್ಭದಲ್ಲಿಯೂ ರಾಜ್‌ರಿಗೆ ಇದ್ದ ಜನ ಬೆಂಬಲ ಅವರಿಗೆ ಇರಲಿಲ್ಲ. ಇದನ್ನು ಫಿಲ್ಮ್‌ಫೇರ್ ಸಮೀಕ್ಷೆ ಕೂಡ ದೃಢಪಡಿಸಿತ್ತು.ಒಂದೊಮ್ಮೆ ರಾಜ್ ಆರಾಧನೆಗಷ್ಟೇ ಸೀಮಿತವಾಗಿದ್ದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಕೂಡ ದೊಡ್ಡದಾಗಿ ಬೆಳೆಯಿತು. ಗೋಕಾಕ್ ಆಂದೋಲನ, ಕಾವೇರಿ ಹೋರಾಟ, ಡಬ್ಬಿಂಗ್ ವಿರೋಧಿ ಚಳವಳಿ, ರಾಷ್ಟ್ರೀಕೃತ ಬ್ಯಾಂಕು, ಕಾರ್ಖಾನೆಗಳಲ್ಲಿ ಕನ್ನಡ ವಾತಾವರಣ ಸೃಷ್ಟಿ, ಮರಾಠಿಗರ ದಬ್ಬಾಳಿಕೆ ವಿರುದ್ಧ ಹೋರಾಟ, ದೂರದರ್ಶನದಲ್ಲಿ ಅನ್ಯಭಾಷೆಯ ಪಾರಮ್ಯದ ವಿರುದ್ಧ ದನಿ ಹೀಗೆ ಅಭಿಮಾನಿಗಳ ಸಂಘದ ಹೋರಾಟಕ್ಕೆ ನಾನಾ ಮುಖಗಳು.ರಾಜ್ ದೈಹಿಕವಾಗಿ ಇಲ್ಲವಾದರು. ಆಮೇಲೆ ರಾಜ್ ಪರವಾದ ಹೋರಾಟದ ಹೊಳೆಯೂ ಇಳಿಮುಖವಾಯಿತು. ಉದಾಹರಣೆಗೆ ಡಬ್ಬಿಂಗ್ ಪರ ನಿಲುವು ತಾರಕಕ್ಕೇರಿದ ಸಂದರ್ಭದಲ್ಲೂ ರಾಜ್ ಅಭಿಮಾನಿ ಸಂಘಗಳು ಸಮಗ್ರವಾಗಿ ದನಿ ಎತ್ತಲಿಲ್ಲ. ರಾಜ್ ಹುಟ್ಟುಹಬ್ಬಕ್ಕೋ ಅವರ ಪುಣ್ಯತಿಥಿಗೋ ಸಂಘಗಳು ಸೀಮಿತವಾದವು. ರಕ್ತದಾನ ಶಿಬಿರ ನೇತ್ರದಾನ ಶಿಬಿರದಂಥ ಸೇವೆಗಳಿಗೆ ತಮ್ಮನ್ನು ಮಿತಿಗೊಳಿಸಿಕೊಂಡವು. ಇದಕ್ಕೂ ಮಿಗಿಲಾದ ರಾಜ್ ಅವರ ಅನೇಕ ಕನಸುಗಳನ್ನು ಈಡೇರಿಸಲಿಲ್ಲ. ಸ್ಥಾನಮಾನದ ಕಾರಣಕ್ಕೆ ಕೆಲವು ಸಂದರ್ಭದಲ್ಲಿ ಅಭಿಮಾನಿಗಳಲ್ಲೇ ಒಡಕು ಮೂಡಿತು ಎಂಬ ಅಪವಾದವನ್ನು ಈ ಸಂಘಟನೆಗಳು ಎದುರಿಸಬೇಕಾಯಿತು.ಸವಾಲಿನ ತೊಡಕು

ಏಕೆ ಹೀಗಾಯ್ತು ಎಂಬ ಕಾರಣ ಹುಡುಕುತ್ತ ಹೋದರೆ, ರಾಜ್‌ಕುಮಾರ್ ಅಭಿಮಾನಿ ಸಂಘಗಳ ಎದುರಿರುವ ಹಲವು ಸವಾಲುಗಳು ಗೋಚರಿಸತೊಡಗುತ್ತವೆ. ಮುಖ್ಯವಾಗಿ ರಾಜ್ ಇಲ್ಲದ ಶೂನ್ಯತೆ ಸಂಘದ ಸದಸ್ಯರನ್ನು ಆವರಿಸಿಕೊಂಡಿದೆ. ಆ ಅನಾಥ ಪ್ರಜ್ಞೆಯಲ್ಲೇ ಅನೇಕರು ದಿನ ದೂಡುತ್ತಿದ್ದಾರೆ.`ಅಖಿಲ ಕರ್ನಾಟಕ ರಾಜ್‌ಕುಮಾರ್ ಅಭಿಮಾನಿಗಳ ಸಂಘ'ದ ಅಧ್ಯಕ್ಷರಾದ ಸಾ.ರಾ. ಗೋವಿಂದು ಅವರನ್ನು ಈ ನಿರ್ವಾತ ಸ್ಥಿತಿ ಬಹಳವಾಗಿ ಕಾಡುತ್ತಿದೆ. ಯಾವುದೇ ಹೋರಾಟಗಳ ಪರ ಎಲ್ಲರೂ ಎಷ್ಟೇ ಧ್ವನಿ ಎತ್ತಿದರೂ ಅದು ರಾಜ್ ದನಿಯನ್ನು ಸರಿಗಟ್ಟುವುದಿಲ್ಲ. ಈಗ ಬೆನ್ನೆಲುಬೇ ಮುರಿದ ಸ್ಥಿತಿ ಎನ್ನುವುದು ಅವರ ವಾದ.ಅಭಿಮಾನಿಗಳ ನಡುವೆ ಒಡಕು ಮೂಡಿದೆ ಎಂಬುದನ್ನು ಅನೇಕರು ಒಪ್ಪುವುದಿಲ್ಲ. ಸೈದ್ಧಾಂತಿಕ ಕಾರಣಗಳಿಗಾಗಿ ಕೆಲವರು ದೂರವಾದರೇ ಹೊರತು ಈಗಲೂ ಅಭಿಮಾನಿ ಸಂಘಟನೆ ಒಡೆದಿಲ್ಲ ಎಂಬ ಮಾತಿದೆ. ಆದರೆ ಸಂಘಟನೆಯಿಂದ ದೂರವಾಗುವುದು ಕೂಡಾ ಒಡಕಲ್ಲವೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.  ಹೋರಾಟಗಳೆಂದರೆ ಜನ ಅನುಮಾನ ಪಡುವ ಸ್ಥಿತಿಯನ್ನು ಪ್ರಸ್ತುತ ಕೆಲವು ಕನ್ನಡ ಪರ ಸಂಘಟನೆಗಳು ತಂದೊಡ್ಡಿವೆ. ಅವು ಕನ್ನಡ ಪರ ಹೋರಾಟವನ್ನು ಬದುಕುವ ದಾರಿ ಮಾಡಿಕೊಂಡಿವೆ. ಚಳವಳಿಯೂ ವ್ಯವಹಾರವಾಗಿದೆ. ಇಂಥ ಮುಜುಗರದ ಸ್ಥಿತಿಯಲ್ಲಿ ಯಾವ ಮುಖ ಇಟ್ಟುಕೊಂಡು ಹೋರಾಟ ಮಾಡುವುದು ಎಂಬ ಅಳುಕು ಅಭಿಮಾನಿ ಸಂಘಟನೆಗಳನ್ನು ಕಾಡುತ್ತಿದೆ.ಚಿತ್ರರಂಗದಲ್ಲಿರುವವರೇ ಡಬ್ಬಿಂಗ್ ವಿರೋಧಿ ಚಳವಳಿಯನ್ನು ತುಳಿಯುತ್ತಿದ್ದಾರೆ. ಡಬ್ಬಿಂಗ್ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುವ ಕೆಲ ನಿರ್ಮಾಪಕರು ಒಳಗೊಳಗೆ ಡಬ್ಬಿಂಗ್ ಪರ ಧೋರಣೆ ತಳೆದಿದ್ದಾರೆ. ಡಬ್ಬಿಂಗ್ ವಿರುದ್ಧ ಹೋರಾಟ ಮಾಡುತ್ತಿರುವ ಶಿವರಾಜ್‌ಕುಮಾರ್ ಏಕಾಂಗಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಹೊರಗೆ ಒಳಗೆ ಸಾಕಷ್ಟು ಚರ್ಚೆಗಳನ್ನೂ ನಡೆಸಿದರೂ ಅವು ಫಲಪ್ರದವಾಗದ ಅಸಮಾಧಾನ ಅಭಿಮಾನಿ ಸಂಘಗಳಿಗೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಢವಾಗಿ ಹೋರಾಟ ನಡೆಸುವ ಇರಾದೆ ಇವುಗಳದು.ಇನ್ನು ರಾಜ್ ಅಭಿಮಾನಿ ಸಂಘದ ಅನೇಕ ಸದಸ್ಯರಿಗೆ ಬದುಕು ಕೂಡ ಮುಖ್ಯವಾಗಿ ತೋರಿದೆ. ಅವರಲ್ಲಿ ಬಹುಪಾಲು ಜನ ಉತ್ತಮ ಉದ್ಯೋಗಗಳಲ್ಲಿ ಇಲ್ಲ. ಆರ್ಥಿಕವಾಗಿ ಸಶಕ್ತರೂ ಅಲ್ಲ. ತುತ್ತು ಅನ್ನಕ್ಕೂ ಯೋಚಿಸಬೇಕಾದ ಅಸ್ಥಿರ ಸ್ಥಿತಿಯಲ್ಲಿ ಹೋರಾಟ ಮುಂದುವರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ.ಹೋರಾಟ ಮಂಕಾಗಲು ಮತ್ತೊಂದು ಕಾರಣ ನೀಡುತ್ತಾರೆ `ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ' ಹಾಗೂ `ಮಯೂರ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ'ವನ್ನು ಮುನ್ನಡೆಸುತ್ತಿರುವ ಮತ್ತಿಕೆರೆ ನಾಗರಾಜ್. ಅವರ ಪ್ರಕಾರ ಅಂದಿನ ಅನೇಕ ಹೋರಾಟಗಾರರು ಈಗ ವೃದ್ಧರಾಗಿದ್ದಾರೆ. ಕೆಲವರು ಸಾವನ್ನಪ್ಪಿದ್ದಾರೆ. ರಾಜ್ ಅವರನ್ನು ಕಳೆದುಕೊಂಡ ದುಃಖದ ಜೊತೆಗೆ ಸಂಘಗಳಿಗೆ ಹೆಗಲು ಕೊಡುತ್ತಿದ್ದವರನ್ನೂ ಕಳೆದುಕೊಂಡ ನೋವು ಆವರಿಸಿದೆ. ಯುವಕರಿಗೆ ಅನೇಕ ಕನಸುಗಳಿವೆ. ರಾಜ್ ಸಿನಿಮಾಗಳು ಅವರಿಗೆ ಸ್ಫೂರ್ತಿ. ಆದರೆ ರಾಜ್ ಸಿನಿಮಾ ಬಿಡುಗಡೆಯಾದಾಗ ಹಿರಿಯ ಅಭಿಮಾನಿಗಳು ಒಂದೆಡೆ ಸೇರುತ್ತಿದ್ದ, ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದ ಅವಕಾಶ ಹೊಸಬರಿಗೆ ಇಲ್ಲವಾಗಿದೆ. ಟೀವಿ ಮತ್ತಿತರ ಮಾಧ್ಯಮಗಳು ಪ್ರಭಾವಿಯಾಗತೊಡಗಿದಂತೆ ಅಭಿಮಾನ ಕೂಡ ಮನೆ ಬಿಟ್ಟು ಆಚೆ ಬರುತ್ತಿಲ್ಲ ಎಂಬ ಅಭಿಪ್ರಾಯ ಅವರದು.ರಾಜ್ ನಿಲುವುಗಳ ಕುರಿತಂತೆ ಸದಾ ಮಾರ್ಗದರ್ಶನ ನೀಡುವ ಸತ್ವಯುತ ನಾಯಕನೊಬ್ಬನನ್ನು ಅವರು ಎದುರು ನೋಡುತ್ತಿದ್ದಾರೆ. ಸಾ.ರಾ. ಗೋವಿಂದು ಅವರಲ್ಲಿ ಇಂಥ ನಾಯಕತ್ವವನ್ನು ಕೆಲಕಾಲ ಕಂಡರೂ ಅದು ನಿರಂತರವಾಗಿ ಆಂದೋಲನ ರೂಪಿಸಲು ಸಾಧ್ಯವಾಗಲಿಲ್ಲ ಎನ್ನುವುದು ಸ್ವತಃ ಗೋವಿಂದು ಅವರಿಗೂ ತಿಳಿದಿರುವ ವಾಸ್ತವ.ಇಷ್ಟಾದರೂ ಗ್ರಹಣ ಬಿಡುಗಡೆಯಾಗುವ ಕಾಲ ದೂರ ಉಳಿದಿಲ್ಲ ಎಂಬ ಆಶಾಭಾವ ಅನೇಕ ಸಂಘಟನೆಗಳದು. ನಿರಂತರವಾಗಿ ಹೊಸ ಹೊಸ ಸಂಘಗಳು ಹುಟ್ಟಿಕೊಳ್ಳುತ್ತಿರುವ, ಹಳೆಯ ಸಂಘಗಳು ಕ್ರಿಯಾಶೀಲವಾಗಿರುವ ಉದಾಹರಣೆಗಳನ್ನು ಕೆಲವರು ನೀಡುತ್ತಾರೆ. ಹಳಬರಲ್ಲಿ ಜೀವಗಂಗೆಯಂತೆ ಹರಿಯುತ್ತಿರುವ ಅಭಿಮಾನ ಹೊಸಬರಲ್ಲೂ ಹರಿಯಲಿದೆ ಎಂಬ ವಿಶ್ವಾಸ ಹಲವರದು.`ರಾಜ್ ಇಲ್ಲದ ಹೊತ್ತಿನಲ್ಲೂ ಅಭಿಮಾನಿ ಸಂಘಟನೆಗಳ ಹೋರಾಟ ನಿಂತಿಲ್ಲ. ಬೇರೆ ಭಾಷೆಗಳ ನಟರಿಗೆ ಅವರ ಮರಣದ ನಂತರವೂ ಇಂಥ ನಿರಂತರ ಬೆಂಬಲ ದೊರೆತಿಲ್ಲ. ರಾಜ್ ಅವರನ್ನು ಪ್ರೀತಿಸುವ ಮಂದಿ ಹುಟ್ಟುತ್ತಲೇ ಇದ್ದಾರೆ. ಕೆಲ ದಿನಗಳಲ್ಲಿಯೇ ಇನ್ನೂ ಒಳ್ಳೆಯ ಕಾಲ ಬರಲಿದೆ' ಎನ್ನುತ್ತಾರೆ `ಮನಸ್ಸು ಮಲ್ಲಿಗೆ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ'ದ ಅಧ್ಯಕ್ಷ ಯತೀಶ್. ರಾಜ್ ಬದುಕಿನ ಆದರ್ಶ ಇವರ ಆದರ್ಶವೂ ಆಗಿದೆ. ಹಾಗಾಗಿ ದುಶ್ಚಟಗಳಿಂದ ಸದಾ ದೂರ. ಕನ್ನಡ ಚಿತ್ರ ನೋಡಲು ಮೊದಲ ಪ್ರಾಶಸ್ತ್ಯ. `ಸಾಂಘಿಕ ಹೋರಾಟದ ಜೊತೆಗೆ ರಾಜ್ ಹೆಸರು ಚಿರಸ್ಥಾಯಿಯಾಗಲು ಇಂಥ ವ್ಯಕ್ತಿಗತ ದೃಢಸಂಕಲ್ಪ ಸಾಕಲ್ಲವೇ?' ಎಂಬ ಪ್ರಶ್ನೆ ಎಸೆಯುತ್ತಾರೆ ಅವರು.ಇದೇ ವೇಳೆ ರಾಜ್ ಹೆಸರಿನ ಸಂಘಟನೆಗಳಿಗೂ ಇತರೆ ನಟರ ಸಂಘಟನೆಗಳಿಗೂ ಇರುವ ಮುಖ್ಯ ವ್ಯತ್ಯಾಸವನ್ನು `ಹಾಸನ ಜಿಲ್ಲಾ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ'ದ ಶ್ರೀನಿವಾಸಮೂರ್ತಿ ಗುರುತಿಸುತ್ತಾರೆ. `ಕೆಲವು ನಟರು ದುಡ್ಡು ಕೊಟ್ಟು ಅಭಿಮಾನಿ ಸಂಘಗಳನ್ನು ಸೃಷ್ಟಿಸಿಕೊಳ್ಳುವ ಪರಿಪಾಠ ಇದೆ. ಆದರೆ ರಾಜ್‌ಕುಮಾರ್ ಅಭಿಮಾನಿ ಸಂಘಟನೆಗಳು ಸ್ವಯಂ ಪ್ರೇರಣೆಯಿಂದ ಹುಟ್ಟಿವೆ. ಇದೇ ದೀರ್ಘಕಾಲ ಬಾಳುವ ಪ್ರಾಮಾಣಿಕ ಅಭಿಮಾನ' ಎಂಬ ಹೆಮ್ಮೆ ಅವರಲ್ಲಿದೆ.

 

ಪ್ರತಿಕ್ರಿಯಿಸಿ (+)