ಸೋಮವಾರ, ಜೂನ್ 14, 2021
22 °C

ಹೊಸಕೋಟೆಗೆ 24 ಗಂಟೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚರಂಡಿ ನೀರನ್ನು ಕೆರೆಗೆ ಹರಿಸುವ ಸಣ್ಣ ನೀರಾವರಿ ಇಲಾಖೆಯ ಯೋಜನೆ ಸಫಲವಾಗಿದ್ದು, ಹೊಸಕೋಟೆ ಜನರಿಗೆ ಇದು ವರವಾಗಿ ಪರಿಣಮಿಸಿದೆ.ಇದರಿಂದಾಗಿ ಅಂತರ್ಜಲ ಮಟ್ಟ ಏರಿಕೆಯಾಗಿದೆ ಮತ್ತು ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯ ಎಂಬುದು ಪ್ರಯೋಗದಿಂದ ದೃಢಪಟ್ಟಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಪರದಾಡುತ್ತಿದ್ದ ಹೊಸಕೋಟೆ ಜನರಿಗೆ ಈಗ ದಿನದ 24 ಗಂಟೆಯು ನೀರು ಲಭ್ಯವಾಗುತ್ತಿದೆ. ಇದರಿಂದಾಗಿ 60 ಸಾವಿರ ಜನರಿಗೆ ಉಪಯೋಗವಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೊಡ್ಡಕೆರೆಗೆ ಕೆ.ಆರ್.ಪುರ ಸಮೀಪದ ಎಲೆಮಲ್ಲಪ್ಪಶೆಟ್ಟಿ ಕೆರೆಯಿಂದ ಚರಂಡಿ ನೀರು ಹರಿಸುವ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಯು ಪೂರ್ಣಗೊಳಿಸಿದೆ. `ಕೆರೆಗೆ ಚರಂಡಿ ನೀರು ಹರಿಸಿದ್ದೇ ತಡ ಈ ಭಾಗದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ.ಮೊದಲು 1,250 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಆದರೆ ಈಗ 250 ಅಡಿ ಕೊರೆದರೆ ಸಾಕು ನೀರು ಸಿಗುತ್ತಿದೆ~ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಚಾರ್ಯ `ಪ್ರಜಾವಾಣಿ~ಗೆ ತಿಳಿಸಿದರು.ದೊಡ್ಡಕೆರೆ ಇಪ್ಪತ್ತು ವರ್ಷಗಳಿಂದ ಖಾಲಿಯಾಗಿತ್ತು. ಪರಿಣಾಮ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಕೊಳವೆ ಬಾವಿಯ ನೀರು ನಂಬಿ ಕೃಷಿಯಲ್ಲಿ ತೊಡಗಿದ್ದ ರೈತರು ಕೃಷಿಯನ್ನು ತ್ಯಜಿಸಿದ್ದರು. ಆದ್ದರಿಂದ ನೀರಾವರಿ ಇಲಾಖೆಯು 1999ರಲ್ಲಿ ಕೆರೆಗೆ ಬೆಂಗಳೂರಿನ ಉತ್ತರ ಮತ್ತು ಈಶಾನ್ಯ ಭಾಗದಿಂದ ಚರಂಡಿ ನೀರು ಹರಿಸುವ 2.49 ಕೋಟಿ ರೂಪಾಯಿ ಮೊತ್ತದ ಯೋಜನೆ ರೂಪಿಸಿತ್ತು. ಚರಂಡಿ ನೀರನ್ನು ಕೆರೆಗೆ ಹರಿಸುವುದಕ್ಕೆ ಮೊದಲು ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು.

 

ಕೊನೆಗೂ ಇಲಾಖೆ 2011ರಲ್ಲಿ ಯೋಜನೆ ಪೂರ್ಣಗೊಳಿಸಿತು. ಕೆರೆಗೆ ಆರು ಅಡಿಗಳಷ್ಟು ನೀರು ಹರಿಸಲಾಯಿತು. ಇದಾದ ನಂತರ ಅಂತರ್ಜಲ ಹೆಚ್ಚಾಯಿತು. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ನಡೆಸಿದ ಪರೀಕ್ಷೆಯಲ್ಲಿ ಅಂತರ್ಜಲ ಕುಡಿಯಲು ಯೋಗ್ಯವಾಗಿದೆ ಎಂಬುದು ದೃಢಪಟ್ಟಿತು. ನೀರು ಕುಡಿಯಲು ಯೋಗ್ಯ ಎಂಬ ವರದಿಯನ್ನು ಕಾಲೇಜು ನೀಡಿದೆ.`ಈ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬ ಕಲ್ಪನೆ ನಮಗೆ ಇರಲಿಲ್ಲ. ಆದರೆ ನೀರು ಕುಡಿಯಲು ಯೋಗ್ಯ ಎಂದು ಗೊತ್ತಾದ ನಂತರ ಆಶ್ಚರ್ಯವಾಯಿತು. ಮೂವತ್ತು ಹಳ್ಳಿಗಳ ಜನರು ಇದರ ಉಪಯೋಗ ಪಡೆಯಲಿದ್ದಾರೆ~ ಎಂದು ಇಲಾಖೆಯ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಜಿ.ಕೃಷ್ಣಮೂರ್ತಿ ಹೇಳುತ್ತಾರೆ. ಎರಡು ಕೆರೆಗಳ ನಡುವಿನ ಅಂತರ ಎಂಟು ಕಿ.ಮೀ. ಇಷ್ಟು ದೂರ ನೀರು ಹರಿಯುವ ಪ್ರಕ್ರಿಯೆಯಲ್ಲಿ ನೀರು ಶುದ್ಧವಾಗಬಹುದು. ಬಹಳ ವರ್ಷದ ನಂತರ ಹೊಸಕೋಟೆಯ ಜನರು ನೀರಿನ ಸಮಸ್ಯೆಯಿಂದ ಮುಕ್ತರಾಗಿದ್ದಾರೆ ಎಂದು ಅವರು ಹೇಳುತ್ತಾರೆ.ಮತ್ತೊಂದು ಯೋಜನೆ: ವರ್ತೂರು ಕೆರೆಯಿಂದ 12 ಕೆರೆಗಳಿಗೆ ಹೆಚ್ಚಿನ ನೀರನ್ನು (ಮುಖ್ಯವಾಗಿ ಚರಂಡಿ ನೀರು) ಹರಿಸುವ ಯೋಜನೆ ಕೈಗೊಳ್ಳಲು ಇಲಾಖೆ ಸಿದ್ಧತೆ ನಡೆಸಿದೆ.

ಮುಖ್ಯವಾಗಿ ಅಗ್ರಹಾರ ಕೆರೆ ಮತ್ತು ಪಡಿತನ ಕೆರೆಗೆ ನೀರು ಹರಿಸುವ ಉದ್ದೇಶವಿದೆ. ಇದು ಪೂರ್ಣಗೊಂಡರೆ ಸರ್ಜಾಪುರ ಸುತ್ತಮುತ್ತ ಅಂತರ್ಜಲ ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.