ಭಾನುವಾರ, ಮೇ 16, 2021
28 °C

ಹೊಸಗದ್ದೆ ಕೊರಗ ಕುಟುಂಬಕ್ಕೆ ಬೇಕು ನೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ಪರಿಶಿಷ್ಟರಿಗೆ ಅದರಲ್ಲೂ ಕೊರಗ ಜನಾಂಗದ ಕುಟುಂಬಗಳಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗಿದ್ದೂ ಅದು ಮಾತ್ರ ಅವರಿಗೆ ತಲುಪುತ್ತಿಲ್ಲ ಎನ್ನುವುದಕ್ಕೆ ಸುಳ್ಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೊಸಗದ್ದೆ ಎಂಬಲ್ಲಿರುವ ಕುಟುಂಬ ಉತ್ತಮ ಉದಾಹರಣೆ.ಗೋಪಾಲ ಹಾಗೂ ಸುನಂದಾ ದಂಪತಿ ಕಳೆದ ಹಲವು ವರ್ಷಗಳಿಂದ ಈ ಜೋಪಡಿಯಲ್ಲೇ ವಾಸಿಸುತ್ತಿದ್ದಾರೆ. ಕೆಂಪು ಕಲ್ಲುಗಳನ್ನು ಪೇರಿಸಿಟ್ಟ ಗೋಡೆ, ಅದೂ ಆಗಲೋ ಈಗಲೋ ಬೀಳುವಂತಿದೆ. ಅದರ ಮೇಲೆ ತೆಂಗಿನ ಗರಿ ಹಾಕಿದ ಮಾಡು. ಅದಕ್ಕೆ ಪ್ಲಾಸ್ಟಿಕ್ ಹೊದಿಕೆ. ಅದೂ ಬಿಸಿಲಿಗೆ ಹರಿದು ಹೋಗಿದೆ. ಮಳೆ ಬಂದಾಗ ನೀರೆಲ್ಲಾ ಒಳಗೆ. ತಮ್ಮ ಬಟ್ಟೆ ಬರೆ- ಆಹಾರ ಸಾಮಾಗ್ರಿ ಎಲ್ಲಾ ಒದ್ದೆಯಾಗುತ್ತದೆ ಎನ್ನುತ್ತಾರೆ ಸುನಂದಾ.ಅಂಗಳದಲ್ಲಿ ಒಂದು ಒಲೆಯನ್ನು ಹಾಕಿಕೊಂಡಿದ್ದಾರೆ. ಅಲ್ಲೇ ಅಡುಗೆ ಮಾಡುವುದು. ತಮ್ಮ ಮೊದಲ ಹೆರಿಗೆ ತವರಿನಲ್ಲಿ ಅಗಿದೆ. ಸ್ವಲ್ಪ ಸಮಯ ಅಲ್ಲಿದ್ದೆ ಎನ್ನುವ ಅವರು ಈಗ ಮತ್ತೆ ತುಂಬು ಗರ್ಭಿಣಿ. ಕೇವಲ ಮತ ಕೇಳಲು ಮಾತ್ರ ಇಲ್ಲಿ ರಾಜಕೀಯದವರು ಬರುತ್ತಾರೆ. ಮತ್ತೆ ಬರುವುದು ಚುನಾವಣೆ ಬಂದಾಗ. ನಮ್ಮ ಸಮಸ್ಯೆಯನ್ನು ಹೇಳಿ ಹೇಳಿ ಸಾಕಾಯಿತು. ಆದರೆ ಫಲಿತಾಂಶ ಶೂನ್ಯ ಎನ್ನುತ್ತಾರೆ ಗೋಪಾಲ.

 

ಅವರಿವರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಬದುಕು ನಡೆಸುವ ಅವರಿಗೆ ಚಿಕ್ಕ-ಚೊಕ್ಕ ಮನೆಯ ಕನಸು. ಆದರೆ ಅದು ನನಸಾಗುವುದೇ? ಹಲವಾರು ವಸತಿ ಯೋಜನೆಗಳಿವೆ. ಅದರಲ್ಲೂ ಶೇ.50ರಿಂದ ಶೇ.100ರವರೆಗೂ ಮೀಸಲಾತಿ ನಿಗದಿ ಮಾಡಲಾಗಿದೆ. ಆದರೆ ಈ ಕುಟುಂಬಕ್ಕೆ ಇನ್ನೂ ಸರಿಯಾದ ನೆಲೆಯನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಮಾತ್ರ ದುರಂತ. ಜಿಲ್ಲಾಡಳಿತ ತಕ್ಷಣ ಈ ಕಡೆ ಗಮನ ಹರಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.