ಹೊಸತನದ ಹಂಬಲ ಅರಳಿದಾಗ...

7

ಹೊಸತನದ ಹಂಬಲ ಅರಳಿದಾಗ...

Published:
Updated:

ಕಲಾಪ

ಯುವ ಕಲಾವಿದ ರುದ್ರಗೌಡ ಇಂಡಿ ತಮ್ಮ ಕಲಾಕೃತಿಗಳ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಹೊರಟಿದ್ದಾರೆ. ಪ್ರತಿಯೊಬ್ಬರೂ ಗಿಡ ನೆಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂಬುದು ಇವರ ಹಂಬಲ. ಹಾಗಾಗಿಯೇ ಇವರು ತಮ್ಮ ಕಲಾಪ್ರದರ್ಶನವನ್ನು `ಎವರ್‌ಗ್ರೀನ್~ ಎಂದು ಕರೆದುಕೊಂಡಿದ್ದಾರೆ.ಇವರು ತಮ್ಮ ಪರಿಸರ ಪ್ರೀತಿಯನ್ನು ಕಲೆಯ ಮೂಲಕ ಜಾಹೀರುಗೊಳಿಸಿದ್ದಾರೆ. ವಿಶ್ವದ ಅನೇಕ ಖ್ಯಾತನಾಮರನ್ನು ತಮ್ಮ ಕಲಾ ಚೌಕಟ್ಟಿಗೆ ಒಳಪಡಿಸಿಕೊಂಡು, ಅವರನ್ನು ಸಾದೃಶವಾಗಿಟ್ಟುಕೊಂಡು ಪರಿಸರ ಕಾಳಜಿ ಬಿಂಬಿಸಿರುವುದು ಇವರ ಅಗ್ಗಳಿಕೆ. ಈ ಕಾರಣಕ್ಕಾಗಿಯೇ ಇವರ ಕಲಾಕೃತಿಗಳಿಗೆ ವಿಶೇಷ ಮನ್ನಣೆ ಲಭಿಸಿದೆ.ಪ್ರತಿ ಕ್ಷೇತ್ರದಲ್ಲೂ ಒಬ್ಬೊಬ್ಬರು ಐಕಾನ್‌ಗಳಿದ್ದಾರೆ. ಅವರು ಮಾಡಿದ ಕೆಲಸ ಅವರನ್ನು ಜನಪ್ರಿಯರನ್ನಾಗಿಸಿದೆ. ಇವರೆಲ್ಲರೂ ಹೇಗೆ ಸಾಧಕರಾದರು ಎಂಬ ಪ್ರಶ್ನೆ ಈ ಕಲಾವಿದನಿಗೆ ಅನೇಕ ಬಾರಿ ಕಾಡಿತ್ತಂತೆ. ಅವರ ಸಾಧನೆಯ ಗುಟ್ಟನ್ನು ಅರಿಯಲು ಯತ್ನಿಸಿದಾಗ ಇಂಡಿ ಅವರಿಗೆ ಅನೇಕ ಬಾರಿ ಅನಿಸಿದ್ದು- ಅವರ ಕೆಲಸಗಳೇ ಇದಕ್ಕೆ ಕಾರಣ- ಎಂದು. ತಮ್ಮ ಕಲಾ ಪ್ರದರ್ಶನಕ್ಕೆ `ಎವರ್‌ಗ್ರೀನ್~ ಎಂದು ಹೆಸರಿಡಲು ಇದು ಒಂದು ಕಾರಣವಂತೆ.ಮನಸ್ಸಿನೊಳಗೆ ನೂರಾರು ನೋವಿದ್ದರೂ ಇತರರಿಗೆ ಕೇವಲ ಖುಷಿಯನ್ನೇ ನೀಡಿದವನು ಚಾರ್ಲಿ ಚಾಪ್ಲಿನ್. ಒಮ್ಮೆ ಈತ ತನ್ನ ಪಾದದ ಅಳತೆಗಿಂತ ದೊಡ್ಡದಾದ ಶೂ ಧರಿಸಿ ಸ್ಟೇಜ್ ಮೇಲೆ ಬಂದು ನಿಂತ. ಅದು ಜನರಲ್ಲಿ ನಗೆ ಉಕ್ಕಿಸಿತು. ಕಪ್ಪು ಕೋಟು, ಕಪ್ಪು ಟೊಪ್ಪಿ ಹಾಗೂ ಕೈಲ್ಲೊಂದು ಸ್ಟಿಕ್ ಹಿಡಿದ ಚಾಪ್ಲಿನ್ ಮುಂದೆ ನಗಿಸುವುದನ್ನೇ ವೃತ್ತಿಯಾಗಿಸಿಕೊಂಡ. ಅದು ಅವನಿಗೆ ಖ್ಯಾತಿ, ಹಣ ಎಲ್ಲವನ್ನು ತಂದುಕೊಟ್ಟಿತು.ಇಂಡಿ ಅವರು ರಚಿಸಿರುವ ಚಾಪ್ಲಿನ್ ಕಲಾಕೃತಿ ಅವನ ಜೀವನಕ್ಕೆ ಕನ್ನಡಿ ಹಿಡಿಯುತ್ತದೆ. ಚಾಪ್ಲಿನ್ ಕಾರ್ಯಕ್ರಮ ನೀಡುತ್ತಿರುವ ವೇದಿಕೆಯ ಹಿಂಭಾಗದ ಪರದೆಯಲ್ಲಿ ಕೋತಿಗಳಿವೆ. ಇವು ಚಾಪ್ಲಿನ್ ಜನರನ್ನು ನಗಿಸುವುದಕ್ಕಾಗಿ ಹಾಕುತ್ತಿದ್ದ ವೇಷ ಎಂಬುದನ್ನು ಸೂಚಿಸಿದರೆ, ಆತ ನಿಂತಿರುವ ಕಾರ್ಪೆಟ್ ಡಾಲರ್ ಪ್ರತಿನಿಧಿಸುತ್ತದೆ. ಈತನಿಗೆ ಎಷ್ಟೇ ಹೆಸರು, ಸಂಪತ್ತು, ಹಣ ಬಂದರೂ ಜೀವನದುದ್ದಕ್ಕೂ ಕಷ್ಟ ಇದ್ದೇ ಇತ್ತು ಎಂಬುದನ್ನು ಪಕ್ಕದಲ್ಲಿಯೇ ಇರುವ ಬೋಳುಮರ ಸೂಚಿಸುತ್ತದೆ.ಡಾಲಿ ಸ್ಪೇನ್‌ನ ಕಲಾವಿದ. ಈತ ತನ್ನ ವಿಲಕ್ಷಣ ವ್ಯಕ್ತಿತ್ವದಿಂದ ಖ್ಯಾತನಾಗಿದ್ದ. ಆತನ ಆಲೋಚನೆಗಳೇ ಭಿನ್ನ, ವಿಕ್ಷಿಪ್ತ. ಯಾವುದೇ ವಿಷಯ ಅಥವಾ ವಿಚಾರವನ್ನು ತುಂಬಾ ಭಿನ್ನವಾಗಿ ಕಲೆಯ ಮೂಲಕ ಪ್ರಸ್ತುತ ಪಡಿಸುತ್ತಿದ್ದ. ಇವನ ಕಲಾಕೃತಿಗಳು ನೋಡುಗರನ್ನು ಕನ್‌ಫ್ಯೂಸ್ ಮಾಡುತ್ತಿದ್ದವು; ಆದರೆ ಅಷ್ಟೇ ಆಕರ್ಷಕವಾಗಿಯೂ ಇರುತ್ತಿದ್ದವು.ಡಾಲಿ ಒಮ್ಮೆ ಕಡಲ ತೀರದಲ್ಲಿ ನಿಂತು ತನ್ನನ್ನೇ ತಾನು ಚಿತ್ರಿಸಿಕೊಳ್ಳುತ್ತಿದ್ದಂತೆ, ಒಂದು ದೊಡ್ಡ ಪಾತ್ರೆಯಲ್ಲಿ ಮೀನಿನ ದೇಹಕ್ಕೆ ಹೆಣ್ಣಿನ ಮುಖವನ್ನಿರಿಸಿ, ಆನಂತರ ನದಿಯಾಚೆ ಇರುವ ಕಲ್ಲುಬಂಡೆಗಳಲ್ಲಿ ತನ್ನ ಹೆಂಡತಿ ಗಾಲಾಳ ಮುಖವನ್ನು ಚಿತ್ರಿಸಿಕೊಟ್ಟಿದ್ದಾನೆ. ಈ ಕಲಾಕೃತಿ ತನ್ನ ವಿಭಿನ್ನತೆಯಿಂದ ಮನ ಸೆಳೆಯುತ್ತದೆ.ಚಿತ್ರಕಲೆ ಹಿಂದಿನಿಂದಲೂ ಇತ್ತು. ಆದರೆ ಅದಕ್ಕೊಂದು ಹೊಸ ಭಾಷ್ಯ ಬರೆದವನು ಪಿಕಾಸೊ. ಈತ ಜಗತ್ತಿಗೆ `ಸ್ಕೂಬಿಸಂ~ ಪರಿಚಯಿಸಿದವನು. ಕಲಾಕೃತಿಗಳಿಗೆ ಹೊಸ ಆಯಾಮ ತಂದುಕೊಟ್ಟ ಕೀರ್ತಿ ಪಿಕಾಸೊಗೆ ಸಲ್ಲುತ್ತದೆ. ಇಂಡಿ ಪಿಕಾಸೊನನ್ನು ಚಿತ್ರಿಸಿರುವ ಕಲಾಕೃತಿಯಲ್ಲಿ ಎರಡು ಜೀಬ್ರಾಗಳು ಇವೆ.ಅಂದಿನಿಂದಲೂ ಜೀಬ್ರಾ ಒಂದೇ ಮಾದರಿಯಲ್ಲಿದೆ. ಇದು ಕಲೆ ಕೂಡ ಹಿಂದಿನಿಂದಲೂ ಹಾಗೆಯೇ ಇದೆ ಎಂಬುದರ ಸಂಕೇತ. ಪಿಕಾಸೊ ಸಿದ್ಧ ಮಾದರಿಯನ್ನು ಬದಿಗೊತ್ತಿರುವುದನ್ನು ಈ ಕಲಾಕೃತಿಯಲ್ಲಿರುವ ಗೂಳಿ ಸೂಚಿಸುತ್ತದೆ. ಈ ಗೂಳಿಯನ್ನು ಸೈಕಲ್‌ನ ಹ್ಯಾಂಡಲ್ ಬಳಸಿ ರಚಿಸಿರುವುದು ಬದಲಾವಣೆಯ ರೂಪಕ.ಜಗತ್ತನ್ನೇ ಗೆಲ್ಲಬೇಕು ಎಂಬ ಹುಂಬತನ ಇದ್ದವನು ಹಿಟ್ಲರ್. ಅದಕ್ಕಾಗಿ ಆತ ಹರಿಸಿದ ರಕ್ತಪಾತ ಅಷ್ಟಿಷ್ಟಲ್ಲ. ಈತನಲ್ಲಿದ್ದ ವಿಲ್ ಪವರ್ ಅದ್ಭುತವಾಗಿತ್ತು. ಆದರೆ ತನ್ನ ಈ ಶಕ್ತಿಯನ್ನು ಅವನು ವಿರುದ್ಧ ದಿಕ್ಕಿನಲ್ಲಿ ಬಳಸಿಕೊಂಡ. ಹಿಟ್ಲರ್‌ನ ಹಾದಿಯನ್ನು ಅನುಸರಿಸಿದರೆ ಜಗತ್ತು ನಾಶವಾಗುತ್ತದೆ ಎಂಬುದನ್ನು ಸೂಚಿಸುತ್ತವೆ ಇವರ ಹಿಟ್ಲರ್ ಕಲಾಕೃತಿ.

 

ಇವರು ಈ ಕಲಾಕೃತಿಯಲ್ಲಿ ಆನೆ ಮತ್ತು ಹೈನಾ ಪ್ರಾಣಿಯನ್ನು ಚಿತ್ರಿಸಿದ್ದಾರೆ. ಹೈನಾ ಪ್ರಾಣಿಗೆ  ಮೊಂಡು ಧೈರ್ಯ. ಇದು ಹುಲಿ, ಸಿಂಹ ಮೊದಲಾದ ಪ್ರಾಣಿಗಳು ಬೇಟೆಯಾಡಿ ಸಂಗ್ರಹಿಸಿದ ಆಹಾರವನ್ನೇ ಕಬಳಿಸುವ ಛಾತಿಯುಳ್ಳ ಪ್ರಾಣಿ. ನನಗೆ ನಾಲ್ಕು ಜನರ ಬೆಂಬಲವಿದ್ದರೆ ಸಾಕು ಇಡೀ ಜಗತ್ತನ್ನೇ ಮಣಿಸುತ್ತೇನೆ ಎಂಬ ಹುಂಬತನ ಈ ಪ್ರಾಣಿಗೆ. ಹಾಗಾಗಿ ಈ ಪ್ರಾಣಿಯನ್ನು ಇಂಡಿ ಹಿಟ್ಲರ್‌ಗೆ ಹೋಲಿಕೆ ಮಾಡಿ ಚಿತ್ರಿಸಿರುವುದು ಇವರ ಕಲಾಕೃತಿಗೊಂದು ಶಕ್ತಿ ತಂದುಕೊಟ್ಟಿದೆ. ಮರ್ಲಿನ್ ಮನ್ರೊ ಸೌಂದರ್ಯದ ಸಂಕೇತ. ಅದು ಇಂಡಿ ಅವರ ಕಲಾಕೃತಿಯಲ್ಲೂ ನವಿರಾಗಿ ಮೂಡಿದೆ. ಈ ಕಲಾಕೃತಿಯಲ್ಲಿರುವ ಜಿಂಕೆ ಹೆಣ್ಣು ಕೂಡ ಜಿಂಕೆಯಂತೆ ಕೋಮಲ ಭಾವದವಳು ಎಂಬುದನ್ನು ಸೂಚಿಸುತ್ತದೆ. ಬ್ರೂಸ್ಲಿ ವೇಗ ಮತ್ತು ಶಕ್ತಿಯ ಸಂಕೇತ. ಇಂಡಿ ಬ್ರೂಸ್ಲಿಯನ್ನು ಕಲ್ಲಿನ ರೂಪದಲ್ಲಿ ಚಿತ್ರಿಸಿದ್ದಾರೆ.ಈ ಕಲಾಕೃತಿಯಲ್ಲಿರುವ ಓತಿಕ್ಯಾತ ಅವನ ವೇಗದ ಹೊಡೆತಕ್ಕೆ ಹಾಗೂ ಫ್ರೇಮ್‌ನಲ್ಲಿರುವ ಬಿದಿರು ಆತನ ಬಾಗುವಿಕೆ ಮತ್ತು ಬಲವನ್ನು ಸೂಚಿಸುತ್ತದೆ.ಗಾಂಧಿ ಶಾಂತಿಯ ಸಂಕೇತ. ಬ್ರಿಟಿಷರು ಪ್ರಾಬಲ್ಯವನ್ನು ಮುರಿದು ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಗಾಂಧೀಜಿ ಅವರು ಚರಕದಲ್ಲಿ ಬಾವುಟ ನೇಯ್ಗೆ ಮಾಡುತ್ತಿರುವ ಕಲಾಕೃತಿ ಅರ್ಥಪೂರ್ಣವಾಗಿ ಮೂಡಿಬಂದಿದೆ. ಹಾಗೆಯೇ ಮದರ್ ಥೆರೆಸಾ ಅವರ ಸೇವಾ ಮನೋಭಾವ ಮನಸೆಳೆಯುತ್ತವೆ. ವ್ತಕ್ತಿಯೊಬ್ಬ ಪೇಪರ್ ಪಾಟ್ ಹಿಡಿದು ಅದರಲ್ಲಿ ಹಸಿರು ಗಿಡಗಳನ್ನು ಹಿಡಿದುಕೊಂಡಿರುವುದು ಇವರ ಪರಿಸರ ಕಾಳಜಿಯನ್ನು ಬಿಂಬಿಸುತ್ತದೆ.ಇವರು 19 ಹಾಗೂ 20ನೇ ಶತಮಾನದ ಖ್ಯಾತನಾಮರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೂ ಒಂದು ಕಾರಣವಿದೆ. ಸಾಮಾನ್ಯ ಜನ ಕೂಡ ಪರಿಸರ ಕಾಳಜಿ ತೋರುವ ಮೂಲಕ ಖ್ಯಾತಿ ಗಳಿಸಬಹುದು ಎಂಬುದು ಇವರ ನಂಬಿಕೆ. ಇದೇ ಇವರ 12 ಕಲಾಕೃತಿಯಲ್ಲೂ ಬಿಂಬಿತವಾಗಿದೆ. ಈ ಅಪರೂಪದ ಕಲಾಕೃತಿಗಳ ಪ್ರದರ್ಶನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಫೆ.22ರವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry