ಸೋಮವಾರ, ಮಾರ್ಚ್ 1, 2021
24 °C
ಅಂಕದ ಪರದೆ

ಹೊಸತನವ ಹಂಬಲಿಸಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸತನವ ಹಂಬಲಿಸಿ...

ಬೇರೆ ಬೇರೆ ನಾಟಕ ತಂಡಗಳಲ್ಲಿದ್ದ ಸಮಾನ ಮನಸ್ಕರು ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಹಂಬಲದಿಂದ ಪ್ರಾರಂಭಿಸಿದ ನಾಟಕ ತಂಡವೇ ‘ಆಕೃತಿ’.ಹೊಸ ಕಲಾವಿದರು, ಲೇಖಕರಿಗೆ ಅವಕಾಶ ನೀಡುವ ಜೊತೆಗೆ ನಾಟಕದಲ್ಲಿ ಹೊಸತನ್ನು ಪ್ರದರ್ಶಿಸಬೇಕು ಎನ್ನುವುದು ಈ ತಂಡದ ಉದ್ದೇಶ.ನಾಲ್ವರು ಸ್ನೇಹಿತರಿಂದ ಪ್ರಾರಂಭವಾದ ತಂಡದಲ್ಲಿ ಈಗ 30 ಸದಸ್ಯರಿದ್ದಾರೆ. ಪ್ರದರ್ಶನದ ವೇಳೆ ನಾಟಕಗಳನ್ನು ಮೆಚ್ಚಿ ತಂಡಕ್ಕೆ ಸೇರಿಕೊಳ್ಳಲು ಆಸಕ್ತಿ ವಹಿಸುವವರಿಗೂ ಇಲ್ಲಿ ಮುಕ್ತ ಅವಕಾಶವಿದೆ. ವೇದಿಕೆ  ಮೇಲಿನ ಪ್ರದರ್ಶನದ ಜೊತೆಗೆ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ  ಜಾಗೃತಿ ಮೂಡಿಸುವ ಕೆಲಸವನ್ನು ತಂಡ ಮಾಡುತ್ತಿದೆ. ಇಲ್ಲಿಯವರೆಗೂ ತಂಡ ಆರು ಬೀದಿ ನಾಟಕಗಳನ್ನು ಪ್ರದರ್ಶಿಸಿದೆ. ‘ನಾಟಕ ಪ್ರದರ್ಶನದ ವೇಳೆ ಹಲವು ಮಂದಿ ವಸ್ತು ವಿಷಯವನ್ನು ಮೆಚ್ಚಿ ನಮ್ಮೊಂದಿಗೆ ಕೆಲಸ ಮಾಡುವ ಆಸಕ್ತಿ ತೋರಿಸಿದ್ದಾರೆ. ಅಂಥವರಿಗೂ ಮುಕ್ತ ಅವಕಾಶ ನೀಡಿದ್ದೇವೆ. ತೆರೆಯ ಮೇಲೆ ಮಾತ್ರವಲ್ಲದೆ ನಿರ್ದೇಶನ ಸೇರಿದಂತೆ ತೆರೆಯ ಹಿಂದೆ ಸಹಾಯಕರಾಗಿಯೂ ಅವಕಾಶ ನೀಡುತ್ತೇವೆ’ ಎನ್ನುತ್ತಾರೆ ತಂಡದ ರೂವಾರಿ ನಂದೀಶ್‌.ತಂಡದ ಹಿನ್ನೆಲೆ

ಈ ತಂಡದ ನಂದೀಶ್‌, ಶ್ರೀಕಂಠ, ವಿಜಯ್‌ ಜೋಯಿಸ್ ಎಲ್ಲರೂ ನಾಟಕದ ಗೀಳನ್ನು ಕಾಲೇಜು ದಿನಗಳಲ್ಲಿಯೇ ಹಚ್ಚಿಕೊಂಡವರು. ಇವರೆಲ್ಲರೂ ಬೇರೆ ಬೇರೆ ನಾಟಕ ತಂಡಗಳಲ್ಲಿದ್ದವರು. ನಾಟಕದಲ್ಲಿ ವಿಭಿನ್ನ ಪ್ರಯೋಗ ಮಾಡಬೇಕೆನ್ನುವುದು ಇವರ ಹಂಬಲ. ಆದರೆ ಅಲ್ಲಿ ಸ್ವಂತಿಕೆಯ ಅಭಿವ್ಯಕ್ತಿಗೆ ಕೆಲವು ಮಿತಿಗಳಿವೆ ಎಂದು ಅನ್ನಿಸತೊಡಗಿದಾಗ ಹೊಸ ನಾಟಕ ತಂಡವನ್ನು ಹುಟ್ಟುಹಾಕುವ ಆಲೋಚನೆ ಇವರಲ್ಲಿ ಮೂಡಿತ್ತು. ಅದರ ಫಲವಾಗಿ ರೂಪುತಳೆದದ್ದೇ ಆಕೃತಿ. ತಂಡ ಪ್ರಾರಂಭವಾಗಿ ಮೂರು ವರ್ಷಗಳಾಗಿವೆ. ‘ನಮ್ಮ ಆಲೋಚನೆಗಳಿಗೆ ಒಂದು ರೂಪು ನೀಡಿರುವುದರ ಪರಿಣಾಮವಾಗಿಯೇ ಹುಟ್ಟಿಕೊಂಡ ತಂಡವಿದು. ಆದ್ದರಿಂದ ಆಕೃತಿ ಎಂಬ ಹೆಸರಿಟ್ಟಿದ್ದೇವೆ’ ಎನ್ನುತ್ತಾರೆ ನಂದೀಶ್.ತಂಡದ ಸದಸ್ಯರೆಲ್ಲರೂ ಅನ್ಯ ವೃತ್ತಿಯಲ್ಲಿರುವುದರಿಂದ ಬೆಳಿಗ್ಗೆ ಎಲ್ಲರೂ ಸೇರುವುದು ಕಷ್ಟ. ಹಾಗಾಗಿ ಸಂಜೆ ಏಳರಿಂದ ರಾತ್ರಿ ಹತ್ತರವರೆಗೆ  ತಾಲೀಮು ನಡೆಸುತ್ತಾರೆ. ನಾಟಕದ ಪ್ರದರ್ಶನದ ದಿನ ಸಮೀಪಿಸಿದಾಗ ಅಥವಾ ಅಗತ್ಯವಿದ್ದಾಗ ಬೆಳಿಗ್ಗೆ ನಾಟಕದ ಅಭ್ಯಾಸ ಮಾಡುತ್ತಾರೆ.  ಪ್ರಾರಂಭದಲ್ಲಿ ಜಯನಗರದ ಒಂದು ಉದ್ಯಾನದಲ್ಲಿ ಇವರೆಲ್ಲ ಅಭ್ಯಾಸ ಮಾಡುತ್ತಿದ್ದರು. ಅಲ್ಲಿ ಜಾಗದ ಕೊರತೆ ಇತ್ತು. ಜೊತೆಗೆ ಜನರ ಗುಂಪು ಸೇರುತ್ತಿದ್ದುದರಿಂದ ಅಭ್ಯಾಸಕ್ಕೆ ತೊಂದರೆಯಾಗುತ್ತಿತ್ತು. ಆದ್ದರಿಂದ ಈಗ ಗಾಂಧಿಬಜಾರ್‌ನಲ್ಲಿರುವ ಟ್ಯಾಗೋರ್‌ ಉದ್ಯಾನದೊಳಗಿನ ರಂಗಮಂದಿರಲ್ಲಿ ನಿತ್ಯ ಅಭ್ಯಾಸ ಮಾಡುತ್ತಾರೆ. ಪ್ರಾರಂಭದಲ್ಲಿ ತಂಡದ ಸದಸ್ಯರೇ ಸ್ವಂತ ಹಣ ಖರ್ಚು ಮಾಡಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಇತ್ತೀಚೆಗೆ ಖಾಸಗಿ ಕಂಪೆನಿಗಳು, ರಂಗಾಸಕ್ತರು ತಂಡಕ್ಕೆ ಬೆನ್ನೆಲುಬಾಗಿದ್ದಾರೆ.ಪ್ರಮುಖ ನಾಟಕಗಳು

ರಾಜಕೀಯ ವಿಡಂಬನೆಯ ಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ   ಪ್ರತಿಯೊಂದು ವಿಷಯವೂ ವಿಜೃಂಭಿಸುತ್ತಿದೆ. ಇದನ್ನೇ ವಸ್ತುವಾಗಿಸಿದ. ಸಾಮಾಜಿಕ ಕಳಕಳಿಯನ್ನೂ ಉಳ್ಳ ‘ಬೀದಿ ಬಿಂಬ ರಂಗದ ತುಂಬಾ’ ತಂಡದ ಮೊದಲ ನಾಟಕ.  ಕೆ.ಎಚ್‌. ಕಲಾಸೌಧದಲ್ಲಿ ಈ ನಾಟಕದ ಮೊದಲ ಪ್ರದರ್ಶನ ಮಾಡಲಾಯಿತು. ರಾಜ್ಯದ ಹಲವೆಡೆ ಸುಮಾರು 30 ಪ್ರದರ್ಶನಗಳನ್ನು ಈ ನಾಟಕ ಕಂಡಿದೆ.  ಎರಡು ಸಣ್ಣ ಬೀದಿ ನಾಟಕಗಳನ್ನು ಈ ನಾಟಕದಲ್ಲಿ ಅಳವಡಿಸಿರುವುದು ವಿಶೇಷ. ರಂಗಭೂಮಿಯಲ್ಲಿ ತಮ್ಮ ನಟನಾ ಪ್ರತಿಭೆಯಿಂದ ಮೆರೆದಿದ್ದ ಕಲಾವಿದರು ಕೊನೆಗಾಲದಲ್ಲಿ ಎದುರಿಸುವ ಸಮಸ್ಯೆಯನ್ನು ಬಿಂಬಿಸುವ ‘ಬಲು ಅಪರೂಪ ನಮ್ಮ ಜೋಡಿ’ ತಂಡದ ಎರಡನೇ ನಾಟಕ. ಇದನ್ನು ರಾಜೇಂದ್ರ ಕಾರಂತ್‌ ಬರೆದು ನಿರ್ದೇಶಿಸಿದ್ದಾರೆ. ಒಂಟಿತನ, ಆರೋಗ್ಯದ ಸಮಸ್ಯೆಯಿಂದ ನರಳುವ ಕಲಾವಿದರ ಬದುಕನ್ನು ವಿನೋದಮಯವಾಗಿ ಈ ನಾಟಕ ಹೇಳುತ್ತದೆ.ಕರಣಂ ಪವನ್‌ ಪ್ರಸಾದ್ ರಚಿಸಿ, ನಿರ್ದೇಶಿಸಿರುವ ‘ಪುರಹರ’ ಮತ್ತು ‘ಸಿಟಿ ಹಾಸ್ಟೆಲ್‌’ ಈ ತಂಡದ ಮತ್ತೆರಡು ನಾಟಕಗಳು.ತಂಡದ ಸದಸ್ಯರು

ತಂಡದಲ್ಲಿ ವಿದ್ಯಾರ್ಥಿಗಳು, ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡವರು, ಖಾಸಗಿ ಕಂಪೆನಿಯಲ್ಲಿರುವವರು ಇದ್ದಾರೆ. ಶ್ರೀಕಂಠ, ವಿಜಯ್‌ ಜೋಯಿಸ್,  ಶ್ರೇಯಸ್‌ ಶರ್ಮಾ, ಪವನ್‌ ಶರ್ಮಾ, ನವ್ಯಾ, ಸಂಜನಾ, ಚೈತನ್ಯಾ,  ವಾದಿರಾಜ್‌, ಭರತ್‌, ತೇಜಸ್ವಿ, ಸುಷ್ಮಾ.ಗಗನ್‌ ಗೋಡ್ಗಲ್‌ ಹಾಗೂ ಮನಸ್‌ ಸಂಪತ್ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ರೊ. ಹುಚ್ಚುರಾಯ’ ಧಾರಾವಾಹಿಯಲ್ಲಿ ನಂದೀಶ್‌ ನಟಿಸಿದ್ದಾರೆ. ಅಮೃತವರ್ಷಿಣಿ, ಪಾರ್ವತಿ ಪರಮೇಶ್ವರ ಸೇರಿದಂತೆ ಹಲವು ಧಾರವಾಹಿ ಮತ್ತು ಸಿನಿಮಾಗಳಲ್ಲಿ ಸಮೀರ್‌ ನಟಿಸಿದ್ದಾರೆ.ಕೆ.ಎಚ್‌. ಕಲಾಸೌಧ, ರಂಗಶಂಕರ, ಕಲಾಗ್ರಾಮ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ತಂಡದ ನಾಟಕಗಳು ಪ್ರದರ್ಶನಗೊಂಡಿವೆ.ಮುಂದಿನ ಯೋಜನೆಗಳು

ರೋಹಿತ್‌ ಅವರು ಬರೆದಿರುವ  ವಿಜಯ್‌ ಜೋಯಿಷ್‌ ನಿರ್ದೇಶನದ ‘ಸಿಂಹ ಗಿರಿ’ ಮತ್ತು ಕರಣಂ ಪವನ್‌ ಪ್ರಸಾದ್ ಬರೆದಿರುವ ‘ಇತಿಹಾಸದ ಎಳ್‌ಗಂಡರು’ ಎರಡು ಹೊಸ ನಾಟಕದ ತಯಾರಿಲ್ಲಿದೆ ತಂಡ. ರಾಜ್ಯದ ಇತರೆಡೆ ನಾಟಕವನ್ನು ಪ್ರದರ್ಶಿಸುವ ಜೊತೆಗೆ ಪ್ರಪಂಚದಾದ್ಯಂತ ನಾಟಕದ ಮೂಲಕ ನಮ್ಮ ಸಂಸ್ಕೃತಿ ಪರಿಚಯಿಸುವ ಉದ್ದೇಶ ವನ್ನು ತಂಡ ಹೊಂದಿದೆ.***

ರೂವಾರಿ ನಂದೀಶ್‌ ಸಂದರ್ಶನ

*ಇಲ್ಲಿಯವರೆಗೆ ತಂಡ ಎದುರಿಸಿದ ಸವಾಲುಗಳೇನು?

ಹಲವು ಸಮಸ್ಯೆಗಳಿವೆ. ಅದರಲ್ಲಿ ಬಂಡವಾಳದ ಕೊರತೆಯೂ ಒಂದು. ಕೆಲವೊಮ್ಮೆ ನಾಟಕವನ್ನು ನೋಡಲು ಜನರೇ ಬರುವುದಿಲ್ಲ. ಅಂತಹ ಸಮಯದಲ್ಲಿ ಹಾಕಿದ ಬಂಡವಾಳವೂ ಸಿಗದಂತಾಗುತ್ತದೆ. ಜೊತೆಗೆ ನಾಟಕದ ಅಭ್ಯಾಸಕ್ಕೆ ಸೂಕ್ತ ಸ್ಥಳ ಹುಡುಕುವುದು ದೊಡ್ಡ ಸಮಸ್ಯೆ. ಅಲ್ಲದೆ ಪ್ರದರ್ಶನಕ್ಕೆ ಸಭಾಂಗಣವೇ ಸಿಗುವುದಿಲ್ಲ.  ಹೊಸ ತಂಡ ಎಂದಾಕ್ಷಣ ಸಭಾಂಗಣವನ್ನು ಪ್ರದರ್ಶನಕ್ಕೆ ನೀಡಲು ಹಿಂದೇಟು ಹಾಕುತ್ತಾರೆ. ಖಾಯಂ ಸದಸ್ಯರ ಕೊರತೆಯನ್ನು ಎದುರಿಸುತ್ತೇವೆ. ಇನ್ನೇನು ನಾಟಕ ಪ್ರದರ್ಶನಕ್ಕೆ ಎರಡು ದಿನಗಳಿವೆ ಎನ್ನುವಾಗ ಕೆಲವರು ಬೇರೆ ಕೆಲಸದ ನೆಪ ಹೇಳಿ ಪ್ರದರ್ಶನದಿಂದ ಹಿಂದೆ ಸರಿಯುತ್ತಾರೆ.  ಇದರಿಂದ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

*ಇಂದು ನಾಟಕದಲ್ಲಿ ಆಗಿರುವ ಬದಲಾವಣೆ ಏನು? ಈ ಬದಲಾವಣೆ ಅನಿವಾರ್ಯವೇ?

ಕಾಲಕ್ಕೆ ತಕ್ಕಂತೆ ನಾಟಕದಲ್ಲಿಯೂ ಬದಲಾವಣೆ ತರುವುದು ಅನಿವಾರ್ಯ.  ಹಳೆಯದನ್ನೇ ಹೇಳಿದರೆ ಯಾರೂ ಕೇಳುವುದಿಲ್ಲ. ಆದರೆ ಇದರಿಂದ ನಾಟಕದ ಗುಣಮಟ್ಟಕ್ಕೆ ಯಾವುದೇ ತೊಂದರೆಯಾಗಬಾರದು.*ರಂಗಭೂಮಿಯ ಮುಂದಿನ ದಿನಗಳು ಹೇಗಿವೆ?

ರಂಗಭೂಮಿಗೆ ಉತ್ತಮ ಭವಿಷ್ಯವಿದೆ. ಒಳ್ಳೆಯ ನಾಟಕ ಪ್ರದರ್ಶಿಸಿದರೆ ಖಂಡಿತವಾಗಿಯೂ ಜನ ನೋಡುತ್ತಾರೆ. ನಮ್ಮ ತಂಡದ ನಾಟಕವನ್ನು ನೋಡುವ ಎಷ್ಟೋ ಮಂದಿ ಮುಂದಿನ ಪ್ರದರ್ಶನವಿದ್ದಾಗ ಹೇಳಿ ಎಂದು ತಮ್ಮ ದೂರವಾಣಿ ಸಂಖ್ಯೆಯನ್ನು ನೀಡುತ್ತಾರೆ. ರಂಗಭೂಮಿಗೆ ಎಂದಿಗೂ ಸಾವಿಲ್ಲ.

   

*ಬೀದಿ ನಾಟಕಗಳಿಗೆ ಪ್ರೇಕ್ಷಕರು ಇದ್ದಾರೆಯೇ?

ಇತ್ತೀಚಿನ ದಿನಗಳಲ್ಲಿ ಬೀದಿ ನಾಟಕಗಳು ಜನಮನ್ನಣೆ ಕಳೆದುಕೊಳ್ಳುತ್ತಿರುವುದು ನಿಜ. ಗಲ್ಲಿ, ಬಸ್‌ಸ್ಟಾಂಡ್‌, ಹೋಟೆಲ್‌, ಪಾರ್ಕ್‌ಗಳಲ್ಲಿ ಹೆಚ್ಚು ಜನರು ಇರುವುದರಿಂದ ಇಂತಹ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.