ಶನಿವಾರ, ಡಿಸೆಂಬರ್ 14, 2019
22 °C

ಹೊಸದಾಗಿ 162 ಸ್ವಉದ್ಯೋಗ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದಾಗಿ 162 ಸ್ವಉದ್ಯೋಗ ಕೇಂದ್ರ ಆರಂಭ

ಬೆಳ್ತಂಗಡಿ: ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ನಿರುದ್ಯೋಗಿ ಯುವಜನತೆ ಸ್ವ-ಉದ್ಯೋಗ ಆರಂಭಿಸಲು ಬೇಕಾದ ಮಾಹಿತಿ, ಮಾರ್ಗದರ್ಶನ ಮತ್ತು ತರಬೇತಿಯನ್ನು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ. ಹೊಸದಾಗಿ 162 ಕೇಂದ್ರಗಳನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.ಧರ್ಮಸ್ಥಳದಲ್ಲಿ ಮಂಗಳವಾರ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸದ್ಯ ದೇಶದಲ್ಲಿ 458 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಸಂಖ್ಯೆ ಸದ್ಯದಲ್ಲೇ 620ಕ್ಕೆ ಹೆಚ್ಚಲಿದೆ ಎಂದರು.ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರುಡ್‌ಸೆಟ್ ಮಾದರಿಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ಯೋಜಿಸಿದ್ದು, ಪ್ರತಿ ಕೇಂದ್ರಕ್ಕೆ ರೂ. 1 ಕೋಟಿ ಅನುದಾನ ನೀಡಲಾಗುತ್ತಿದೆ. ಈ ಎಲ್ಲಾ ಕೇಂದ್ರಗಳ ಮೇಲುಸ್ತುವಾರಿ ನೋಡಿಕೊಳ್ಳಲು ರುಡ್‌ಸೆಟ್‌ನ ರಾಷ್ಟ್ರೀಯ ಅಕಾಡೆಮಿ ಆರಂಭಿಸಲಾಗಿದೆ.ನಿರ್ದೇಶಕರು ಅಲ್ಪಾವಧಿ ತರಬೇತಿ ಮೂಲಕ ಹೊಸ ಅವಕಾಶಗಳನ್ನು ಬಳಸಿಕೊಂಡು ಸ್ವಉದ್ಯೋಗ ಆರಂಭಿಸಲು ಪ್ರೋತ್ಸಾಹ, ಪ್ರೇರಣೆ ನೀಡಬೇಕು ಎಂದು ಅವರು ಮಾರ್ಗದರ್ಶನ ಮಾಡಿದರು.ಯುವಜನತೆ ನೌಕರಿ ಬೇಟೆಯ ಬದಲು ಆತ್ಮವಿಶ್ವಾಸದಿಂದ ಜೀವನದ ಸವಾಲುಗಳನ್ನು ಎದುರಿಸಿ ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅವರು ಉತ್ತೇಜಿಸಿದರು.ಬ್ಯಾಂಕ್ ಆಫ್ ಬರೋಡ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್.ಶ್ರೀನಾಥ್ ಮಾತನಾಡಿ, ಬ್ಯಾಂಕ್‌ಗಳು ಆರ್ಥಿಕ ವ್ಯವಹಾರದ ಜತೆಗೇ ಗ್ರಾಹಕರ ಪ್ರಗತಿಗೂ ಸಕಾಲಿನ ನೆರವು ನೀಡಬೇಕು ಎಂದು ಹೇಳಿದರು.

ಸೋಮಶೇಖರ್, ಜಿ.ಟಿ.ಹೆಗ್ಡೆ ಇದ್ದರು.

ಪ್ರತಿಕ್ರಿಯಿಸಿ (+)