ಗುರುವಾರ , ಡಿಸೆಂಬರ್ 12, 2019
25 °C

ಹೊಸವೇಷದಲ್ಲಿ ಸದಾರಮೆ

Published:
Updated:
ಹೊಸವೇಷದಲ್ಲಿ ಸದಾರಮೆ

ಏಳು ದಶಕಗಳ ಹಿಂದೆ ಪ್ರಕಟವಾದ ಬೆಳ್ಳಾವೆ ನರಹರಿ ಶಾಸ್ತ್ರಿಗಳ ‘ಸದಾರಮೆ’ ನಾಟಕವನ್ನು ಮೂರು ಗಂಟೆಗಳ ಕಾಲದ ನಾಟಕವಾಗಿಸಿ ವೇದಿಕೆಗೆ ಏರುವುದರ ಮೂಲಕ ಮೈಸೂರಿನ ‘ರಂಗಾಯಣ’ ಮತ್ತೆ ಸುದ್ದಿಯಲ್ಲಿದೆ.ಕಳೆದ, ಡಿ. 25ರ ಶನಿವಾರದಂದು ಎರಡು ಮೂರು ಪ್ರದರ್ಶನಗಳಿಗಾಗುವಷ್ಟು ಜನ ರಂಗಾಯಣ-ಭೂಮಿಗೀತದ ಮುಂದೆ ನೆರೆದಿದ್ದರು. ‘ರಂಗಮಂದಿರ ತುಂಬಿದೆ’ ಎಂಬ ಫಲಕವೂ ಇತ್ತು. ಹೊಸ ತಲೆಮಾರಿನ ಹುಡುಗರು ಹಳೆಯ ತಲೆಮಾರಿನವರ ಆಸ್ಥಾನ, ಅರಣ್ಯ ಸೀನುಗಳ ನಾಟಕ ಹೇಗಿರಬಹುದೆಂಬ ಕುತೂಹಲದಲ್ಲಿದ್ದರೆ, ಹಿರಿಯ ತಲೆಮಾರಿನ ಗುಂಪು ತಮ್ಮ ಕಾಲದ ರಮ್ಯ ನಾಟಕವನ್ನು ಇದೀಗ ರಂಗಾಯಣ ಹೇಗೆ ನೆನಪಿಸಿಕೊಡಬಹುದೆಂಬ ನೆನಪುಗಳ ನೇವರಿಕೆಯಲ್ಲಿತ್ತು. ಇಷ್ಟೆಲ್ಲದರ ನಡುವೆ ರಾತ್ರಿಯಿಡೀ ಪ್ರದರ್ಶನಗೊಳ್ಳುತ್ತಿದ್ದ ಅಸಂಖ್ಯಾತ ರಂಗಗೀತೆ ಮತ್ತು ಸಾವಧಾನಗತಿಯ ಕಥಾನಕವನ್ನು ಹದಿನೆಂಟು ಗೀತೆಗಳಿಗೆ ಇಳಿಸಿ, ಒಟ್ಟು ನಾಟಕವನ್ನು ಹೊಸ ಜಗತ್ತಿನ ಕಣ್ಣಮುಂದೆ ತಂದು ತೋರಿಸುವ ತವಕ ಮತ್ತು ಆತಂಕದಲ್ಲಿ ನಿರ್ದೇಶಕರು ಮತ್ತು ನಟರೆಲ್ಲ ಇದ್ದು, ಅಂತ್ಯದ ಮಂಗಳ ಗೀತೆಯೊಡನೆ ಬಿಟ್ಟ ರೇಖಾಚಿತ್ರಗಳೊಡನೆ ನಾಟಕ ನಿಲುಗಡೆಗೆ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಗುಬ್ಬಿವೀರಣ್ಣ ಮತ್ತು ಹಿರಣ್ಣಯ್ಯನವರ ನಾಟಕ ಮಂಡಳಿಗಳಿಂದ ಒಂದು ಕಾಲಕ್ಕೆ ಕರ್ನಾಟಕದಾದ್ಯಂತ ಜನಪ್ರಿಯವೆನಿಸಿದ್ದ ನಾಟಕ ‘ಸದಾರಮೆ’. ಆ ಸಂದರ್ಭಕ್ಕೆ ಬೇಕಾಗಿದ್ದ ಎಲ್ಲ ಆಶಯಗಳು ಈ ನಾಟಕದಲ್ಲಿ ಅಡಕವಾಗಿವೆ. ಬಹುತೇಕ ಜನಪದ ಕಥೆಗಳಲ್ಲಿ ಕಂಡುಬರುವ ಒಂದು ಜನಪ್ರಿಯ ಆಶಯ, ಹೆಣ್ಣು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಮತ್ತು ಅದರಿಂದ ಪಾರಾಗುವುದು. ಸಾಮಾನ್ಯವಾಗಿ ಎಲ್ಲ ಜನಪದ ಕಥೆಗಳಲ್ಲಿ ಹೆಣ್ಣು ಹೆಚ್ಚು ಧಾರಣಶಕ್ತಿಯುಳ್ಳವಳಾಗಿ ಕಾಣಿಸಿಕೊಳ್ಳುತ್ತಾಳೆ. ನಾಟಕದ ಆರಂಭಕ್ಕೆ ಕೊಡ ಹೊತ್ತು ನೃತ್ಯಗೈಯ್ಯುವ ಹೆಣ್ಣು ಮಗಳು ನಾಟಕಾಂತ್ಯದಲ್ಲಿ ಕತ್ತಿ, ದಂಡ ಹಿಡಿದವರನ್ನಲ್ಲದೆ ಕಾಮವಾಂಛಿತ ಪುರುಷರನ್ನೆಲ್ಲ ತಳ್ಳಿ ಹಾಕುತ್ತ ಸಿಂಹಾಸನವೇರಿ ಕೂರುವ ಒಂದು ಸಾಂಕೇತಿಕ ನಾಟಕ ‘ಸದಾರಮೆ’.ಅಧ್ಯಯನ, ಅಧ್ಯಾತ್ಮ ಮನುಷ್ಯ ಜನ್ಮಕಂಟಿದ ಪ್ರಲೋಭನೆಗಳು, ಸಿಂಹಾಸನ ವಿಯೋಗ, ಅರಣ್ಯವಾಸ, ಸಂಕಷ್ಟ ಇದೆಲ್ಲದರ ನಡುವಣ ನೈತಿಕನಿಷ್ಠೆ- ಇವೆಲ್ಲ ಆ ಕಾಲದ ಬರವಣಿಗೆಯಲ್ಲಿನ ಮುಖ್ಯ ಆಶಯಗಳು. ಪೌರಾಣಿಕ ಎಳೆ, ಒಂದಷ್ಟು ಐತಿಹಾಸಿಕ ವಿವರ, ಇದರೊಂದಿಗೆ ಜನಪದ ಕಥಾ ಮಾದರಿಯ ಸಂಗತಿಗಳನ್ನು ಒಂದು ಸೂತ್ರದಲ್ಲಿ ತರುವ ಬೆಳ್ಳಾವೆಯವರು ಕಾಸು ಕೊಟ್ಟ ಪ್ರೇಕ್ಷಕರಿಗೆ ಎಲ್ಲಿ ಏಕತಾನತೆ ಅನ್ನಿಸಿಬಿಡುತ್ತದೋ ಎಂಬ ಕಾರಣಕ್ಕಾಗಿ ಲಘು ಹಾಸ್ಯವನ್ನೂ ತಂದಿರುತ್ತಾರೆ. ಈ ಕಾರಣಕ್ಕಾಗಿ ಆ ಕಾಲದ ನಾಟ್ಯ ಮಂಡಳಿಗಳು ತಮ್ಮ ರಸಿಕ ವರ್ಗದ ರಂಜನೆಗಾಗಿ, ನೀತಿಪಾಠ ಪ್ರದರ್ಶನಕ್ಕಾಗಿ ಇದೇ ನಾಟಕವನ್ನು ಆಯ್ಕೆಮಾಡಿಕೊಂಡವು. ಆಯ್ಕೆಯ ನಂತರದಲ್ಲಿ ಅಪಾರ ಯಶಸ್ಸನ್ನೂ ಗಳಿಸಿದ್ದು ಈಗ ಇತಿಹಾಸಕ್ಕೆ ಸೇರಿದ ಮಾತು. ಈ ಬಗೆಯ ಐತಿಹಾಸಿಕದ ನೆನಪಿನ ಗುಂಗಿನ ಮೇಲೆ, ಇದೀಗ ಈ ಹೊತ್ತಿನ ಸದಾರಮೆ ಹೇಗೆ ಮೂಡುವುದೋ ಎನ್ನಿಸಿ ನೆರೆದಿದ್ದ ಎರಡು ತಲೆಮಾರಿನ ಪ್ರೇಕ್ಷಕರಲ್ಲಿ ನಾನಾ ಬಗೆಯ ಕುತೂಹಲ ಮೂಡಿದ್ದು, ರಂಗಾಯಣಕ್ಕೆ

ಹೊಸಜೀವ ಬಂದದ್ದರ ಸಂಕೇತವೆನಿಸುತ್ತಿತ್ತು. ನಾಟಕದ ಆರಂಭದಲ್ಲಿಯ ಪ್ರಾರ್ಥನಾಗೀತೆ ‘ದೇವಿ ಭುವನ ಮನಮೋಹಿನಿ’ ಹಾಡಿನ ಲಯಕ್ಕೆ ತಕ್ಕಂತೆ ಬೆಳಕಿನ ವಿನ್ಯಾಸ ಮೂಡಿದ್ದೇ ಪ್ರೇಕ್ಷಕರು ತಲೆಯಾಡಿಸುವಂತಾಯಿತು. ರಾಜಕುಮಾರನು ತನ್ನ ಯೌವನಕ್ಕೆ ಅನುಗುಣವೆನಿಸುವ ಭಾವನೆಗಳನ್ನು ದಾಟುತ್ತ ಅಧ್ಯಯನ, ಅಧ್ಯಾತ್ಮದಲ್ಲಿ ತೊಡಗುವ ಸಂಭಾಷಣೆಯಿಂದ ಹೊರಬಂದು ಸ್ತ್ರೀಮೋಹಕ್ಕೆ ಸಿಲುಕುವವರೆಗೆ ನಾಟಕ ನಿಧಾನಗತಿಯಲ್ಲಿ ಚಲಿಸಿ, ಅರ್ಧವಿರಾಮದ ನಂತರ ಭಿನ್ನ ಸನ್ನಿವೇಶಗಳಿಂದ ಮುಂದುವರೆಯುವ ಮೂರು ಗಂಟೆ ಹದಿನೈದು ನಿಮಿಷಗಳ ನಾಟಕ ಪ್ರೇಕ್ಷಕರನ್ನು ಹಿಡಿದಿರಿಸುವಲ್ಲಿ ಯಶಸ್ವಿಯಾಯಿತು. ಈವರೆಗೆ ಒಂದೂವರೆ ಇಲ್ಲ ಎರಡು ಗಂಟೆ ಅವಧಿಯ ನಾಟಕಗಳನ್ನು ನೋಡಿಯಷ್ಟೇ ಅಭ್ಯಾಸವಿದ್ದ  ರಂಗಾಯಣದ ಪ್ರೇಕ್ಷಕರು ಮೂರು ತಾಸಿಗೂ ಹೆಚ್ಚು ಸಮಯದ ನಾಟಕವನ್ನು ಅಷ್ಟೇ ಸಾವಧಾನ ಚಿತ್ತದಿಂದ ನೋಡಿದ್ದನ್ನು ಗಮನಿಸಿದರೆ ಮುಂದೆಯೂ ರಂಗಾಯಣ ಈ ಬಗೆಯ ಪ್ರಯೋಗಗಳನ್ನು ಕೈಗೆತ್ತಿಕೊಳ್ಳಬಹುದೆಂಬ ಸೂಚನೆಯನ್ನು ನೀಡಿದಂತಾಗಿದೆ. ಈ ನಿಟ್ಟಿನಲ್ಲಿ ರಂಗಾಯಣದ ಕಲಾವಿದರ ಶ್ರಮವೂ, ಗುಬ್ಬಿವೀರಣ್ಣನವರ ಕಂಪನಿಯ ನಾಟಕಗಳ ನೆನಪಿನಲ್ಲಿದ್ದು ರಂಗಾಯಣಕ್ಕೆ ಈ ನಾಟಕ ಪ್ರದರ್ಶನದ ಸಲುವಾಗಿಯೇ ಬಂದು ಸಹಕರಿಸಿದ ವೈ.ಎಂ.ಪುಟ್ಟಣ್ಣಯ್ಯ ಮತ್ತಿತರ ನೇಪಥ್ಯ ಕಲಾವಿದರ ಸಹಕಾರವೂ ಶ್ಲಾಘನೀಯ. ವೇದಿಕೆಯ ಸಿದ್ಧತೆಗಾಗಿ ಇಳಕಲ್ ಕಡೆಯ ಚಿತ್ರ ಕಲಾವಿದ ಅಮೀನ್ ಅವರಿಂದ ಪರದೆಗಳ ತಯಾರಿ, ಆದರೊಂದಿಗೆ ಬೆಳಕಿನ ವ್ಯವಸ್ಥೆ, ಹಾರ್ಮೋನಿಯಂ, ತಬಲಾ, ಕ್ಲಾರಿಯೊನೇಟ್ ವಾದನಗಳ ಸಾಥ್- ಇವೆಲ್ಲ ಒಟ್ಟು ನಾಟಕದ ಆಕರ್ಷಣೆಗೆ ಸಹಕಾರಿಯಾಗಿದ್ದವು. ಹಾಗೆ ನೋಡಿದರೆ ಈ ಬಗೆಯ ನವೋದಯ ಸಂದರ್ಭದ ನಾಟಕಗಳ ಪುನರ್ ನವೀಕರಣ ಪ್ರದರ್ಶನಗಳು ಎಂದೋ ಆರಂಭವಾಗಬೇಕಿತ್ತು. ಎಪ್ಪತ್ತರ ದಶಕದಲ್ಲಿಯೇ ಆಧುನಿಕ ಅಲೆಯ ನಾಟಕಕ್ಕೆ ಸಂವಾದಿಯಾಗಿಯೇ ಈ ಬಗೆಯ ಪ್ರಯತ್ನ ಬೆಳೆದಿದ್ದರೆ ಒಟ್ಟು ಕನ್ನಡ ನಾಟಕ ಪರಂಪರೆಗೇ ಒಂದು ಆರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿತ್ತು.

ಮುಂಬಯಿಯಂಥ ಮಹಾನಗರದ ನಾಟ್ಯಮಂದಿರಗಳಲ್ಲಿ ಜಾನಪದ, ಗ್ರಾಮ್ಯ, ಪೌರಾಣಿಕ, ಸಾಮಾಜಿಕ ಹಿನ್ನೆಲೆಯ ಹಳೆಯ ನಾಟಕಗಳಿಗೆ ತಕ್ಕಷ್ಟು ರಂಗಸಂಗೀತದೊಡನೆ ಕಾಯಕಲ್ಪ ಚಿಕಿತ್ಸೆ ನೀಡಿ ಪ್ರೇಕ್ಷಕರ ಮುಂದೆ ತಂದು ಯಶಸ್ಸು ಪಡೆದು ದಶಕಗಳೇ ಸಂದಿವೆ. ನಾಲ್ಕೈದು ಗಂಟೆಗಳಷ್ಟು ದೀರ್ಘಕಾಲ ಕುಳಿತು ಹಳೆಯ ನಾಟಕಗಳನ್ನು ನೋಡುವ ಅಭಿರುಚಿಯೊಂದಿಗೆ, ಅದೇ ಬಗೆಯ ಚಲನಚಿತ್ರ ನಿರ್ಮಾಣಗಳೂ ಆಗುತ್ತಿವೆ. ಅವು ಬಾಲಿವುಡ್ ಚಿತ್ರಗಳ ಮುಂದೆ ಸೆಡ್ಡು ಹೊಡೆಯುತ್ತಲಿವೆ. ರಂಗಾಯಣ ಆರಂಭಿಸಿರುವ ನವೋದಯ ಪೂರ್ವ ನಾಟಕಗಳ ನವೀಕರಣ ಪ್ರಯತ್ನದ ಯಶಸ್ಸು ನಿರ್ದೇಶಕರಾದ ಲಿಂಗದೇವರು ಹಳೆಮನೆ ಮತ್ತು ರಂಗಾಯಣದ ಎಲ್ಲ ಕಲಾವಿದರಿಗೆ ಸಲ್ಲಬೇಕಾಗಿದೆ.

 

ಪ್ರತಿಕ್ರಿಯಿಸಿ (+)