ಹೊಸಹಟ್ಟಿ ಕೆಂಡದ ಮಳೆ

7

ಹೊಸಹಟ್ಟಿ ಕೆಂಡದ ಮಳೆ

Published:
Updated:

ಹೊಸಹಟ್ಟಿ(ಕೂಡ್ಲಿಗಿ):  ತಾಲ್ಲೂಕಿನಲ್ಲಿ ವಿವಿಧ ಬಗೆಯ ವಿಶಿಷ್ಟ ರೀತಿಯ ಆಚರಣೆಗಳಿದ್ದು, ಅವುಗಳಲ್ಲಿ ಹೊಸಹಟ್ಟಿ ಗ್ರಾಮದ ಬೊಗ್ಗುಲು ಓಬಳೇಶ್ವರ ಜಾತ್ರೆಯೂ ಒಂದು.ಅಕ್ಷರಶಃ ಬೆಂಕಿಯ ಮಳೆಯೇ ಸುರಿಯುತ್ತಿದೆಯೇನೋ ಎಂಬಂತೆ ಕಾಣುವ ಈ ಜಾತ್ರೆಯ ವೈಶಿಷ್ಟ್ಯವೆಂದರೆ ನಿಗಿ ನಿಗಿ ಕೆಂಡವನ್ನು ಹೂ ತೂರಿದಂತೆ ಕೈಯಿಂದ ತೂರುವುದು. ಪ್ರತಿ 3 ವರ್ಷಗಳಿಗೊಮ್ಮೆ ಈ ವಿಶಿಷ್ಟ ಜಾತ್ರೆ ನಡೆಯುತ್ತದೆ. ಭಾನುವಾರ ರಾತ್ರಿ ಈ ಜಾತ್ರೆ ವಿಜೃಂಭಣೆಯಿಂದ ಜರುಗಿತು.ತಾಲ್ಲೂಕಿನಿಂದ ಸುಮಾರು 35 ಕಿ.ಮೀ. ದೂರವಿರುವ ಹೊಸಹಟ್ಟಿ ಗ್ರಾಮ ಸುಮಾರು 400 ಜನಸಂಖ್ಯೆಯುಳ್ಳ ಗ್ರಾಮ. ಇಲ್ಲಿನ ಆರಾಧ್ಯ ದೈವ ಬೊಗ್ಗುಲು ಓಬಳೇಶ್ವರ ಸ್ವಾಮಿ. ಸ್ಥಳೀಯರು ಇದನ್ನು `ಗುಗ್ಗರಿ ಹಬ್ಬ~ವೆಂದೂ ಕರೆಯುತ್ತಾರೆ. ಪರಿಶಿಷ್ಟ ಜನಾಂಗದವರೇ ಹೆಚ್ಚಾಗಿ ವಾಸಿಸುವ ಈ ಗ್ರಾಮದಲ್ಲಿ ಬೇಡ ಸಂಸ್ಕೃತಿಯ ಆಚರಣೆ ಇಂದಿಗೂ ಉಳಿದುಕೊಂಡು ಬಂದಿದೆ.ಕೆಂಡವನ್ನು ತೂರುವ ಈ ಜಾತ್ರೆಗೆ ಒಂದು ಹಿನ್ನೆಲೆಯಿದೆ. ಬೊಗ್ಗುಲು ಎಂದರೆ ತೆಲುಗಿನಲ್ಲಿ ಬೆಂಕಿಯ ಕೆಂಡಗಳಿಂದಾಗುವ ಇದ್ದಿಲು ಎಂದರ್ಥ. ಇಲ್ಲಿನ ಪೂಜಾರಿ ಮನೆತನದ ಪೂರ್ವಿಕರು ಕಾಡಿನಲ್ಲಿ ಕಟ್ಟಿಗೆ ಕಡಿದು, ರಾತ್ರಿ ಸುಟ್ಟು ಬರುತ್ತಿದ್ದರು. ಬೆಳಗಿನಲ್ಲಿ ಇದ್ದಿಲುಗಳನ್ನು ಒಯ್ದು ಮಾರುತ್ತಿದ್ದರು. ಒಮ್ಮೆ, ಬೆಳಿಗ್ಗೆ ಇದ್ದಿಲು ತರಲು ಕಾಡಿಗೆ ಹೋದಾಗ, ಇದ್ದಿಲಿನ ರಾಶಿಗೇ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದುದರಿಂದ ತಮ್ಮ ದೇವರು ಇಲ್ಲಿಯೇ ಪ್ರತ್ಯಕ್ಷವಾಗಿದ್ದಾನೆಂಬ ನಂಬಿಕೆಯಿಂದ ಭಕ್ತರು ಕೆಂಡ ತೂರುವ ಸೇವೆಯನ್ನು ಆರಂಭಿಸಿದರು ಎಂದು ಪೂಜಾರಿ ಮನೆತನದ ಚಿನ್ನಪಲ್ಲಿ ಓಬಯ್ಯ ತಿಳಿಸುತ್ತಾರೆ.ಶಿವರಾತ್ರಿ ಅಮವಾಸ್ಯೆಗೂ ಮುಂಚೆ ನಡೆಯುವ ಈ ಜಾತ್ರೆಯಲ್ಲಿ ರಾತ್ರಿಯ ಕೆಂಡ ತೂರುವ ಉತ್ಸವಕ್ಕಾಗಿಯೇ ಕೆಂಡವನ್ನು ಸಿದ್ಧಪಡಿಸಲು ಕಟ್ಟಿಗೆಯ ರಾಶಿಯನ್ನು ಹಾಕಿ ಪೂಜಿಸಲಾಗುತ್ತದೆ. ಓಬಳೇಶ್ವರ ಸ್ವಾಮಿಯ ಪೂಜಾರಿ ಅಗ್ನಿ ಕುಂಡದ ಸ್ವಲ್ಪ ಭಾಗವನ್ನು ಮಣ್ಣಿನ ಮಡಕೆಯಲ್ಲಿ ಹಾಕಿ ದೇವಸ್ಥಾನದ ಒಳಗಿಡುತ್ತಾನೆ. ನಂತರ ಹರಕೆ ಹೊತ್ತ ಭಕ್ತರು ಅಗ್ನಿಸ್ಪರ್ಶ ಮಾಡಿ, ಕೆಂಡ ತೂರಾಡತೊಡಗುತ್ತಾರೆ.

 

ಈ ಸಂದರ್ಭದಲ್ಲಿ ಬರಿಮೈಯಲ್ಲಿ ಇರುವ ಈ ಭಕ್ತರು ಕೆಂಡವನ್ನು ಬೊಗಸೆಯಲ್ಲಿ ತೆಗೆದುಕೊಂಡು ಒಬ್ಬರ ಮೈಮೇಲೊಬ್ಬರು ತೂರಾಡತೊಡಗುತ್ತಾರೆ.ಇಷ್ಟ್ಲ್ಲೆಲ ಕೆಂಡ ತೂರಿದರೂ ಯಾರಿಗೂ ಸುಟ್ಟ ಗಾಯಗಳಾಗುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ರಾತ್ರಿಯ ಕತ್ತಲಲ್ಲಿ ಕೆಂಡವನ್ನು ತೂರುವ ದೃಶ್ಯ ಕೆಂಡದ ಮಳೆಯೇನೋ ಎಂಬಂತೆ ಭಾಸವಾಗುತ್ತದೆ. ಭಕ್ತರು ಭಾವಾವೇಶದಿಂದ ಕೆಂಡ ತೂರಾಟದಲ್ಲಿ ತೊಡಗುತ್ತಾರೆ.ಶಾಸಕ ಬಿ.ನಾಗೇಂದ್ರ, ವಿವಿಧ ಜನಪ್ರತಿನಿಧಿಗಳು, ಕುರಿಹಟ್ಟಿ, ಕರಡಿಹಳ್ಳಿ, ಹುಲಿಕುಂಟೆ, ಭೀಮಸಮುದ್ರ, ಮಡಕಲಕಟ್ಟೆ, ಓಬಳಶೆಟ್ಟಿಹಳ್ಳಿ ಗ್ರಾಮಗಳೂ ಸೇರಿದಂತೆ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry