ಹೊಸ ಆಶಯದ ನಿರೀಕ್ಷೆಯಲ್ಲಿ ಪಾಕ್!

7

ಹೊಸ ಆಶಯದ ನಿರೀಕ್ಷೆಯಲ್ಲಿ ಪಾಕ್!

Published:
Updated:
ಹೊಸ ಆಶಯದ ನಿರೀಕ್ಷೆಯಲ್ಲಿ ಪಾಕ್!

ಹಗರಣಗಳಿಗೂ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೂ ಯಾವತ್ತು ನಂಟು ಬಿಟ್ಟಿದ್ದಲ್ಲ. ಮೋಸದಾಟದಲ್ಲಿ ಭಾಗಿಯಾದ ಘಟನೆಯಿಂದ ಹಿಡಿದು ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಹೋದಾಗ ‘ಸ್ಪಾಟ್ ಫಿಕ್ಸಿಂಗ್’ನಲ್ಲಿ ಆಟಗಾರರು ಭಾಗಿಯಾಗಿದ್ದ ಘಟನೆಯವರೆಗೂ ಹಗರಣಗಳು ತಂಡವನ್ನು ನೆರಳಂತೆ ಕಾಡಿವೆ. ಈ ಸಂಬಂಧವಾಗಿಯೇ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಅಮೇರ್ ಅಮಾನತು ಶಿಕ್ಷೆಗೂ ಒಳಗಾಗಿದ್ದಾರೆ. ಅದೆಲ್ಲವೂ ಈಗ ಇತಿಹಾಸ.ಡ್ರೆಸ್ಸಿಂಗ್ ಕೊಠಡಿಯಲ್ಲಿ ಆಟಗಾರರ ನಡುವಿನ ಹೊಂದಾಣಿಕೆಯ ಕೊರತೆ, ಹಲವು ಹಗರಣಗಳ ಇತಿಹಾಸ ಆ ತಂಡವನ್ನು ಬೆಂಬಿಡದೇ ಕಾಡುತ್ತಿದ್ದರೂ ಆಟಗಾರರ ಸೈರ್ಯ ಮಾತ್ರ ಕುಂದಿಲ್ಲ. ಕ್ರಿಕೆಟ್ ಜಗತ್ತು ಪಾಕ್‌ನತ್ತ ‘ಬೆರಳು’ ಮಾಡಿ ತೋರಿಸಿದಾಗ ಮತ್ತೆ ಪುಟಿದೆದ್ದು ಈ ಸಲದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ವರೆಗೂ ನಡೆದ ಹಾದಿ ಮೆಚ್ವುವಂತದ್ದು!.ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋತರೂ ನಾಯಕ ಅಫ್ರಿದಿ ಅವರ ಸಕಾರಾತ್ಮಕ ವರ್ತನೆ ಹಾಗೂ ತಮ್ಮ ತಂಡದ ಆಟಗಾರರ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ತಂಡದಲ್ಲಿ ಹೊಸ ಬದಲಾವಣೆಗೆ ಅವಕಾಶ ನೀಡಿದಂತಿದೆ. ಇದು ಪಾಕ್ ತಂಡದ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಇರುವ ಅಭಿಪ್ರಾಯವನ್ನು ಬದಲಿಸುವ ಯತ್ನವು ಅದಂತಿದೆ.‘ಭಾರತ ವಿರುದ್ಧದ ಪಂದ್ಯವೆಂದರೇ ಅದೇಕೆ ಯುದ್ಧದ ರೀತಿಯಲ್ಲಿ ಬಿಂಬಿಸುತ್ತಾರೆ. ಕ್ರಿಕೆಟ್ ಮೂಲಕವೇ ಭಾರತ ಮತ್ತು ಪಾಕಿಸ್ತಾನದ ರಾಯಭಾರ ಮಾಡುತ್ತಾರೆ. ಅವರೇನಾದರೂ ಮಾಡಿಕೊಳ್ಳಲಿ. ನಾವು ಕ್ರಿಕೆಟ್ ಆಟವಷ್ಟೇ ಆಡುತ್ತೇವೆ’ ಎಂದು ಹೇಳಿಕೆ ನೀಡಿ ಅಫ್ರಿದಿ ಅಚ್ಚರಿಗೆ ಕಾರಣವಾದರು.1999, 2003 ಹಾಗೂ 2007ರ ಮೂರು ವಿಶ್ವಕಪ್ ಪಂದ್ಯಗಳಲ್ಲಿ ಸತತ ಗೆಲುವಿನ ನಾಗಲೋಟ ಮುಂದುವರಿಸಿದ್ದ, ಸತತ ಮೂರು ಬಾರಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡವನ್ನು ಈ ಸಲದ ವಿಶ್ವಕಪ್‌ನಲ್ಲಿ  ಪಾಕಿಸ್ತಾನ ಮಣಿಸಿತು.ಆಸೀಸ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿತು. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿಯೂ ಭಾರತದ ಎದುರು ಸೋಲು ಅನುಭವಿಸಿದ ಆಸೀಸ್ ವಿಶ್ವಕಪ್ ಟೂರ್ನಿಯಿಂದ ಹೊರಬಿತ್ತು. ಅದಕ್ಕಾಗಿಯೇ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬಂದಿದ್ದು,  ರಿಕಿ ಪಾಂಟಿಂಗ್ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಯಿತು.2009ರಲ್ಲಿ ಶ್ರೀಲಂಕಾ ತಂಡದ ಆಟಗಾರರು ಪಾಕ್ ಪ್ರವಾಸ ಕೈಗೊಂಡಾಗ ನಡೆದ ಆಟಗಾರರ ಮೇಲಿನ ಭಯೋತ್ಪಾದನಾ ದಾಳಿ ನಂತರ ಅಲ್ಲಿ ಪ್ರವಾಸಕ್ಕೆ ತೆರಳಲು ಯಾವ ದೇಶಗಳ ಆಟಗಾರರು ಮುಂದೆ ಬರುತ್ತಿಲ್ಲ. ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ ಭಾರತ ಮತ್ತು ಪಾಕ್ ನಡುವಿನ ಸಂಬಂಧವು  ಹಳಿಸಿತ್ತು. ಇದು ಕ್ರಿಕೆಟ್‌ನ ಮೇಲೂ ಪರಿಣಾಮ ಬೀರಿತ್ತು.ಲಂಕಾ ಆಟಗಾರರ ಮೇಲೆ ಭಯೋತ್ಪಾಕರ ದಾಳಿ ನಡೆದ ಎರಡು ವರ್ಷಗಳ ಬಳಿಕ (ಮಾರ್ಚ್ 3, 2009ರಂದು ದಾಳಿ ನಡೆದಿತ್ತು) ಈಗ ಪಾಕ್‌ನಲ್ಲಿ ಮತ್ತೆ ಕ್ರಿಕೆಟ್ ಪ್ರೀತಿ ಚಿಗುರೊಡೆಯುವ ಲಕ್ಷಣಗಳು ಕಂಡು ಬರುತ್ತವೆ. ಅಫ್ರಿದಿ ಪಡೆಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕೂಡಾ ಅದಕ್ಕೆ ಕಾರಣವಾಗಿವೆ.‘ಪಾಕ್‌ಗೆ ಯಾವುದೇ ದೇಶಗಳ ತಂಡಗಳು ಬಂದು ಆಡುತ್ತಿಲ್ಲವಾದ್ದರಿಂದ ಅಲ್ಲಿ  ಕ್ರಿಕೆಟ್ ಜೀವಕಳೆ ಕಳೆದುಕೊಂಡಿದೆ. ಆದ್ದರಿಂದ ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ  ಪಾಕ್ ಪ್ರವಾಸ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ನಿಶಾಂತ್ ರಣತುಂಗ ಇತ್ತೀಚಿಗೆ ಹೇಳಿರುವುದು ಕೂಡಾ ಪಾಕ್‌ನಲ್ಲಿ ಮತ್ತೆ ಕ್ರಿಕೆಟ್ ವೈಭವ ಮರುಕಳಿಸುವಲ್ಲಿ ನೆರವಾಗಬಹುದು.

 

ಜಿಂಬಾಬ್ವೆ ತಂಡವು ಈ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ.

‘ಬೇರೆ ದೇಶಗಳ ತಂಡಗಳು ನಮ್ಮ ದೇಶದಲ್ಲಿ ಕ್ರಿಕೆಟ್ ಸರಣಿಗಳನ್ನು ಆಡುತ್ತವೆ. ಭಯೋತ್ಪಾದಕ ದಾಳಿ ನಡೆದ ನಂತರ ಕಳೆ ಕಳೆದುಕೊಂಡಿರುವ ಪಾಕ್‌ನಲ್ಲಿ ಮತ್ತೆ ಆ ಕಳೆ ಮರಳಿ ಮೂಡುತ್ತದೆ ಎನ್ನುವ ಆಶಯ ಹೊಂದಿದ್ದೇವೆ. ನಮ್ಮ ಆಶಯಕ್ಕೆ ಲಂಕಾ ಕ್ರಿಕೆಟ್ ಮಂಡಳಿ ಸ್ಪಂದಿಸುತ್ತಿದೆ’ ಎಂದು ಪಿಸಿಬಿ ಕೂಡಾ ಹೇಳಿದೆ. ಈ ವಿಶ್ವಕಪ್‌ನಲ್ಲಿ ಪಾಕ್ ತಂಡದ ಪ್ರದರ್ಶನ, ಅಫ್ರಿದಿ ಅವರ ಸಕಾರಾತ್ಮಕ ಅಂಶಗಳು ಹಾಗೂ ಉತ್ತಮ ನಾಯಕತ್ವ ಮುಂದಿನ ದಿನಗಳಲ್ಲಿ ಪಾಕ್ ಕ್ರಿಕೆಟ್‌ಗೆ ಹೊಸ ಜೀವ ತುಂಬುವಲ್ಲಿ ನೆರವಾಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry