ಹೊಸ ಎಂಡಿ ದರ್ಬಾರ್: 18 ಸಿಬ್ಬಂದಿ ದಿಢೀರ್ ವರ್ಗ

7

ಹೊಸ ಎಂಡಿ ದರ್ಬಾರ್: 18 ಸಿಬ್ಬಂದಿ ದಿಢೀರ್ ವರ್ಗ

Published:
Updated:

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರಾಗಿ ಲಕ್ಷ್ಮಣ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಎಂಟು ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 18 ಮಂದಿಯನ್ನು ಆಯಕಟ್ಟಿನ ಜಾಗಗಳಿಂದ ಎತ್ತಂಗಡಿ ಮಾಡಿದ್ದಾರೆ. ರೆಡ್ಡಿ ಅವರ ಈ ಕ್ರಮ ಕೆಎಂಎಫ್ ಸಿಬ್ಬಂದಿಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎ.ಎಸ್. ಪ್ರೇಮನಾಥ್ ಅವರ ಆಪ್ತ ಸಹಾಯಕ ಸತೀಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಶುಕ್ರವಾರ ಬೇರೆ ಸ್ಥಳ-ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.  ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ಹತ್ತು ದಿನಗಳ ಹಿಂದಷ್ಟೇ ಕೆಎಂಎಫ್‌ಗೆ ವರ್ಗಾವಣೆಯಾಗಿದ್ದ ರವಿಕುಮಾರ ಕಾಕಡೆ ಅವರನ್ನು ಪುನಃ ಈ ಹಿಂದೆ ಇದ್ದ ಸ್ಥಳಕ್ಕೇ ವರ್ಗಾವಣೆ ಮಾಡಲಾಗಿದೆ.

 

ರೆಡ್ಡಿ ಅವರಿಗಿಂತ ಕಾಕಡೆ ಅವರು ಸೇವಾ ಹಿರಿತನ ಹೊಂದಿದ್ದಾರೆ. ಕೆಎಂಎಫ್‌ನ ಗುಣಮಟ್ಟ ನಿಯಂತ್ರಣ ವಿಭಾಗದ ನಿರ್ದೇಶಕರಾಗಿದ್ದ ಶ್ರೀನಾಥ್ ಅವರನ್ನು ಚನ್ನರಾಯಪಟ್ಟಣ ಡೇರಿಯ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಹೆಚ್ಚುವರಿ ನಿರ್ದೇಶಕ (ಹಣಕಾಸು) ಮೋಹನ ಕೃಷ್ಣ ಅವರನ್ನು ಮದರ್ ಡೇರಿಗೆ ವರ್ಗಾಯಿಸಲಾಗಿದೆ.ಹೆಚ್ಚುವರಿ ನಿರ್ದೇಶಕ (ಆಡಳಿತ) ಡಾ.ಸುಧಾಕರ್ ಅವರನ್ನು ಕೋಲಾರ ಹಾಲು ಒಕ್ಕೂಟದ ಅದೇ ದರ್ಜೆಯ ಹುದ್ದೆಗೆ, ಹೆಚ್ಚುವರಿ ನಿರ್ದೇಶಕ (ಮಾರುಕಟ್ಟೆ) ಎಂ.ಡಿ.ಕುಲಕರ್ಣಿ ಅವರನ್ನು ಚನ್ನರಾಯಪಟ್ಟಣ ಡೇರಿಗೆ ವರ್ಗಾವಣೆ ಮಾಡಲಾಗಿದೆ.ಜಂಟಿ ನಿರ್ದೇಶಕ ಡಾ.ರಮೇಶ್ ಅವರನ್ನು ಗುಬ್ಬಿಯ ಪಶು ಆಹಾರ ಉತ್ಪಾದನಾ ಘಟಕಕ್ಕೆ ಹಾಗೂ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಅಕ್ಕಿ ಅವರನ್ನು ಧಾರವಾಡದ ತರಬೇತಿ ಕೇಂದ್ರಕ್ಕೆ ಎತ್ತಂಗಡಿ ಮಾಡಲಾಗಿದೆ.

ಪಶು ಆಹಾರಕ್ಕೆ ಬಳಸುವ ಕಚ್ಚಾ ವಸ್ತುಗಳ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಡಾ.ಬರ್ನಾರ್ಡ್ ಮತ್ತು ನರಸಿಂಹ ರೆಡ್ಡಿ ಅವರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಿದ್ದಾರೆ. ನರಸಿಂಹ ರೆಡ್ಡಿ ಅವರನ್ನು ಮದರ್ ಡೇರಿಗೆ ಹಾಗೂ ಬರ್ನಾರ್ಡ್ ಅವರನ್ನು ಬೆಂಗಳೂರು ಡೇರಿಯ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.ರಾಜೀನಾಮೆ ಬೇಡ: ದಿಢೀರ್ ವರ್ಗಾವಣೆಯಿಂದ ಬೇಸತ್ತು ಕೆಎಂಎಫ್ ಸೇವೆಗೆ ರಾಜೀನಾಮೆ ನೀಡಿರುವ ಪ್ರೇಮನಾಥ್ ಅವರನ್ನು ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಈ ಎಲ್ಲ 18 ಮಂದಿ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.`ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರಿಗೆ ಪಾಠ ಕಲಿಸಬೇಕಾದರೆ ರಾಜೀನಾಮೆ ಹಿಂದಕ್ಕೆ ಪಡೆಯುವುದು ಅನಿವಾರ್ಯ~ ಎಂದು ವರ್ಗಾವಣೆಗೊಂಡ ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ಗೊತ್ತಾಗಿದೆ. ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಅವರೂ ಪ್ರೇಮನಾಥ್ ಅವರಿಗೆ ದೂರವಾಣಿ ಕರೆ ಮಾಡಿ ರಾಜೀನಾಮೆ ವಾಪಸ್ ಪಡೆಯುವಂತೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry