ಭಾನುವಾರ, ಜೂನ್ 13, 2021
21 °C

ಹೊಸ ಓದು: ಚಂದ್ರನ ಪ್ರಖರ ತುಂಡುಗಳು!

ನಟರಾಜ Updated:

ಅಕ್ಷರ ಗಾತ್ರ : | |

ಹೊಸ ಓದು: ಚಂದ್ರನ ಪ್ರಖರ ತುಂಡುಗಳು!

ಒಂದು ಚಂದ್ರನ ತುಂಡು

ಲೇ: ಮುದ್ದು ತೀರ್ಥಹಳ್ಳಿ, ಪು: 136; ಬೆ: ರೂ. 70, ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, 100  ಅಡಿ  ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ- 577 201.ತೀರ್ಥಹಳ್ಳಿಯ ಮುದ್ದು (ವಿತಾಶಾ ರಿಯಾ) ಕನ್ನಡ ಸಾರಸ್ವತ ಲೋಕದ ಪ್ರಚಂಡ ಪುಟಾಣಿಗಳಲ್ಲಿ ಒಬ್ಬಳು. `ಹೂಗೊಂಚಲು~ ಎನ್ನುವ ಕಥೆ-ಕವಿತೆಗಳ ಗೊಂಚಲು, `ಕಾನನ ಕಲರವ~ ಮತ್ತು `ಎಷ್ಟು ಬಣ್ಣದ ಇರುಳು!~ ಎನ್ನುವ ಕವನ ಸಂಕಲನಗಳನ್ನು ಪ್ರಕಟಿಸಿರುವ ಎಂಟನೇ ತರಗತಿಯ ಈ ಪುಟ್ಟ ಕವಯತ್ರಿ, `ಮಂದಾನಿಲ~ ಎನ್ನುವ ಮಾಸಿಕವನ್ನು ತನ್ನ ಸೋದರಿ ವಿನಿಶಾಳ ಜೊತೆಗೂಡಿ ಪ್ರಕಟಿಸುತ್ತಿದ್ದಾಳೆ. ಸಾಮಾನ್ಯ ಮಕ್ಕಳೊಂದಿಗೆ ತಾನೂ ಕಲಿಯಬೇಕು ಎನ್ನುವ ಉದ್ದೇಶದಿಂದ ಕಾನ್ವೆಂಟ್ ಶಾಲೆ ಬಿಟ್ಟು ಕನ್ನಡ ಶಾಲೆ ಸೇರಿದ್ದಾಳೆ. ತನ್ನ ಬರಹ-ಕೃತಿಗಳಿಗೆ ಹಲವು ಬಹುಮಾನಗಳನ್ನೂ ಪಡೆದಿರುವ ಮುದ್ದುವಿನ ಹೊಸ ಪುಸ್ತಕ `ಒಂದು ಚಂದ್ರನ ತುಂಡು~.ಲೇಖಕಿಯೇ ಸಂಪಾದಿಸುವ `ಮಂದಾನಿಲ~ ಪತ್ರಿಕೆಯೂ ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳು `ಒಂದು ಚಂದ್ರನ ತುಂಡು~ ಸಂಕಲನದಲ್ಲಿ ಒಟ್ಟಾಗಿವೆ. ಚಂದ್ರನ ಅನೇಕ ತುಣುಕುಗಳಂತೆ ಕಾಣುವ ಈ ಬರಹಗಳನ್ನು ಮುದ್ದು `ಪುಟ್ಟ ಪುಟ್ಟ ಬರಹಗಳು, `ಲಘು ಬರಹಗಳು~ ಎಂದು ಹೆಸರಿಸಿದ್ದಾಳೆ.ಮುದ್ದುವಿನ ಪ್ರತಿಭಾ ವಿಲಾಸವನ್ನು ಅರ್ಥ ಮಾಡಿಕೊಳ್ಳಲು `ಹೆಜ್ಜೆ ಹೆಜ್ಜೆಗೆ ಕನಸು~ ಹಾಗೂ `ಸತ್ಯದ ವಾಸನೆ~ ಬರಹಗಳನ್ನು ನೋಡಬಹುದು. `ಹೆಜ್ಜೆ ಹೆಜ್ಜೆಗೆ ಕನಸು~ ಬರಹ ಒಂದು ರಮ್ಯ ರೋಚಕ ಕನಸಿನೊಂದಿಗೆ ಪ್ರಾರಂಭವಾಗುತ್ತದೆ. ನಂತರದಲ್ಲಿ ಕನಸಿನ ಕುರಿತ ಕಥೆಗಳು, ನಂಬಿಕೆಗಳು, ವಿಶ್ಲೇಷಣೆಗಳೊಂದಿಗೆ `ಕನಸಿನ ಲೋಕ~ ವಿಸ್ತರಿಸುತ್ತದೆ. ಈ ಲೋಕ ಬಾಲಕಿಯೊಬ್ಬಳ ಮಾನಸ ಸರೋವರದಲ್ಲಿ ಮೂಡಿದ ಕಾಮನಬ್ಲ್ಲಿಲು ಮಾತ್ರವಲ್ಲ; ಅದು, ಕನಸುಗಳ ನೆಪದಲ್ಲಿ ಬಾಲಕಿಯೊಬ್ಬಳು ವರ್ತಮಾನಕ್ಕೆ ಸ್ಪಂದಿಸುವ ರೀತಿ ಹಾಗೂ ತನ್ನ ಸುತ್ತಲಿನ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಬಗೆ. ಒಂದು ಲಲಿತ ಪ್ರಬಂಧದಂತೆ ಓದಿಸಿಕೊಳ್ಳುವ ಈ ಬರಹ, ಪುಟ್ಟ ಲೇಖಕಿಯ ಬರವಣಿಗೆಯ ಕಸುಬುದಾರಿಕೆ ಹಾಗೂ ಕಥನ ಕಲೆಗೆ ಉದಾಹರಣೆಯಂತಿದೆ.`ಸತ್ಯದ ವಾಸನೆ~ ತನ್ನ ಶೀರ್ಷಿಕೆಯಿಂದಲೇ ಸಹೃದಯರನ್ನು ಬೆಚ್ಚಿ ಬೀಳಿಸುವ ಬರಹ. ಈ ಕಾಲದಲ್ಲಿ ತುಂಬಾ ತುಟ್ಟಿಯಾದ ಸತ್ಯದ ಬಗ್ಗೆ ಮಾತನಾಡುವ ಅರ್ಹತೆ ಮಕ್ಕಳಿಗಷ್ಟೇ ಇದೆಯೇನೊ? `ನಾವು ಸುಳ್ಳು ಹೇಳಬಾರದು. ಯಾಕೆಂದರೆ ಅದೆಷ್ಟೇ ಸುಳ್ಳು ಹೇಳಿದರೂ ನಮ್ಮೆರಡು ಕಣ್ಣುಗಳೇ ನಮಗೆ ವಿರುದ್ಧವಾಗಿ ನಿಂತು ಸತ್ಯವನ್ನು ಹೇಳತೊಡಗುತ್ತವೆ. ಇಲ್ಲವೇ ಯಾವುದೇ ಸಮಯದಲ್ಲಿ ಯಾವುದಾದರೂ ಮೂಲೆಯಿಂದ ಸತ್ಯ ಹೊರಬಂದು ಬಿಡುತ್ತದೆ. ಆದರೂ ಸಂದರ್ಭ ಬಂದಾಗ ಸತ್ಯವೇ ನಾಚಿ ಕರಗುವಷ್ಟು ಸುಳ್ಳುಗಳನ್ನು ಹೇಳುತ್ತೇವೆ~ ಎನ್ನುವ ಲೇಖಕಿಯ ಮಾತು, ಸತ್ಯ-ಸುಳ್ಳುಗಳ ನಡುವೆ ತ್ರಿಶಂಕುಗಳಾದ ನಮ್ಮ ಆತ್ಮಸಾಕ್ಷಿಯನ್ನು ಕಲಕುವಂತಿದೆ.ಸಂಕಲನದ ಶೀರ್ಷಿಕೆ ಬರಹವಾದ `ಒಂದು ಚಂದ್ರನ ತುಂಡು~ ಅಡಿ ಟಿಪ್ಪಣಿಯ ವಿವರದಂತೆ ನಿಜವಾಗಿಯೂ ಪುಟ್ಟ ಬರಹವೇ. ಎದುರು ಮನೆಯ ಕೂಸಕ್ಕ ಎನ್ನುವ ಅಜ್ಜಿಯ ಕುರಿತಾದ ಈ ಬರಹ ತನ್ನ ಆರ್ದ್ರತೆಯಿಂದ, ಚಿತ್ರಕ ಶಕ್ತಿಯಿಂದ ಓದುಗರನ್ನು ತಟ್ಟುತ್ತದೆ. ಗಾತ್ರದಲ್ಲಿ ದೊಡ್ಡದಾದ `ಮುಚ್ಚಿದ ಬಾಗಿಲು~ ಮುದ್ದುವಿನ ಚಿಂತನೆಗಳ ಹಲವು ಬಾಗಿಲುಗಳನ್ನು ಒಮ್ಮೆಲೇ ತೆರೆದಂತಿದೆ. ಈ ಸಂಕಲನದ `ರಶೀದಾ ಆಂಟಿ~, `ಬೆಕ್ಕಿನ ಹೆಸರು~, `ಪೆದ್ದಿ ಪದುಮಕ್ಕ~, `ಡೂಪು ಭೋರಾನ ಕವಿಗೋಷ್ಠಿ~ ಮುಂತಾದ ಬರಹಗಳಲ್ಲಿ ಲೇಖಕಿಯ ವಯಸ್ಸಿಗೆ ಮೀರಿದ ಪ್ರೌಢತೆ ಕಾಣಿಸುತ್ತದೆ.ಚಿಣ್ಣರಿಗಾಗಿ ಪ್ರೀತಿಯಿಂದ ಕಥೆ-ಕವಿತೆ ಬರೆಯುವ ಆನಂದ ವಿ. ಪಾಟೀಲರು ಮುದ್ದುವಿನ ಪುಸ್ತಕಕ್ಕೆ ಒಂದು ಅರ್ಥಪೂರ್ಣ ಮುನ್ನುಡಿ ಬರೆದಿದ್ದಾರೆ. ಮಕ್ಕಳಿಗೆ ಮಾತ್ರವಲ್ಲದೆ, ದೊಡ್ಡವರೂ ಓದಲು ಒತ್ತಾಯಿಸುವ ಪುಸ್ತಕದ ಬರಹಗಳ ಗುಣವನ್ನು ಸರಿಯಾಗಿಯೇ ಗುರ್ತಿಸಿರುವ ಅವರು, “ಮುದ್ದು ಬರೆದಿರುವುದು ಅಂತ ಕೇವಲ ಮಕ್ಕಳೇ ಓದಬೇಕು ಎನ್ನುವುದನ್ನ ಇಲ್ಲಿನ ಬರಹಗಳು ಸುತಾರಾಂ ತಳ್ಳಿಹಾಕುತ್ತವೆ, ದೊಡ್ಡವರೂ ಅಷ್ಟೇ ಆಸಕ್ತಿಯಿಂದ ಓದಬೇಕು ಎನ್ನುವ ಹಂಬಲ ವ್ಯಕ್ತಪಡಿಸುತ್ತವೆ. ನನಗೆ ಇನ್ನೂ ಗುಮಾನಿ ಕಾಡುವುದೆಂದರೆ ಕೆಲ ಪಾಲಕರು ಇಲ್ಲಿನ ಬರಹಗಳನ್ನ ತಮ್ಮ ಮಕ್ಕಳು ಓದದಿರುವುದೇ ವಾಸಿ ಎಂದುಕೊಂಡುಬಿಟ್ಟಾರೇನೋ ಎನ್ನುವುದು!” ಎಂದು ಬರೆಯುವ ಪಾಟೀಲರು, ಮತ್ತೂ ಮುಂದುವರೆದು- “ಆಡುತ್ತ ಆಡುತ್ತ ಈ ಹುಡುಗಿ ಈಗಲೇ ಬದುಕಿನ ಏನೇನೆಲ್ಲವನ್ನ ನೋಡತೊಡಗಿತಲ್ಲ ಅಂತ ನಮಗೆಲ್ಲ ಅನಿಸಿಯೇ ಅನಿಸಿದೆ” ಎನ್ನುತ್ತಾರೆ. ಹೀಗೆ, ಅನಿಸುವಂತೆ ಬರೆಯುವ ಕಾರಣದಿಂದಲೇ `ಮುದ್ದು ಬರಹಗಳು~ ಮಕ್ಕಳ ಇತರ ಬರಹಗಳಿಗಿಂತಲೂ ವಿಶಿಷ್ಟ ಎನಿಸುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.