ಹೊಸ ಚಿಕ್ಕನಹಳ್ಳಿ : ಬೆಂಕಿಗೆ ನಲುಗಿದ ಜನರ ನರಕದ ಬದುಕು
ಹೊಸ ಚಿಕ್ಕನಹಳ್ಳಿಗೆ ಸಿಕ್ಕೀತೆ ಮೂಲ ಸೌಕರ್ಯ, ತಲೆ ಮೇಲೊಂದು ಸೂರು?
ದಾವಣಗೆರೆ: ಕೇವಲ ಐದು ತಿಂಗಳ ಹಿಂದೆ ಬೆಂಕಿಯ ಜ್ವಾಲೆಗೆ ನಲುಗಿದ ಆ ಕುಟುಂಬಗಳು ಇಂದು ಮಳೆ-ಗಾಳಿಗೆ ಮುದುಡಿಕೊಂಡು ಶೆಡ್ ಒಳಗೆ ಕಾಲನೂಕುತ್ತಿವೆ. 275 ಮನೆಗಳಿರುವ ಆ ಪುಟ್ಟ ಗ್ರಾಮದಲ್ಲಿ ಒಂದೂ ಚರಂಡಿ ಇಲ್ಲ. ಕುಡಿಯುವ ನೀರಿಲ್ಲ. ರಸ್ತೆ ಕೇಳಲೇ ಬೇಡಿ. ಮನೆಯ ಒಳಗಿನ ಚಿಮಣಿ ಬುಡ್ಡಿಯ ಮಂದ ಬೆಳಕು ಹೊರತು ಪಡಿಸಿದರೆ ಅವರ ಬಾಳ ಒಳಗೂ, ಹೊರಗೂ ಬರೀ ಕತ್ತಲು...
ಇದು ನಗರದ ಎಪಿಎಂಸಿ ಆವರಣಕ್ಕೆ ತಗುಲಿಕೊಂಡಿರುವ ಹೊಸ ಚಿಕ್ಕನಹಳ್ಳಿಯ ನೋಟ.
ಈ ಬಡಾವಣೆಯಲ್ಲಿ ಇದ್ದ ಗುಡಿಸಲುಗಳಿಗೆ ಇದೇ ವರ್ಷದ ಮಾರ್ಚ್ನಲ್ಲಿ ನುಗ್ಗಿದ ಅಗ್ನಿದೇವ ಅನ್ನ, ನೀರು, ಕೋಳಿ, ಕುರಿ ಎನ್ನದೇ ಅಲ್ಲಿನ ಜನರ ಇಡೀ ಬದುಕನ್ನು ಕಿತ್ತುಕೊಂಡ. ಹಲವು ವರ್ಷಗಳಿಂದ ಜಾಗದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿದರೂ, ಕಿವಿಗೊಡದ ಜಿಲ್ಲಾಡಳಿತ ತಕ್ಷಣ ಹೆಚ್ಚೆತ್ತುಕೊಂಡು ಅಗ್ನಿ ಆಕಸ್ಮಿಕದಲ್ಲಿ ನಿರಾಶ್ರಿತರಾದ ಅಲ್ಲಿನ ಜನರಿಗೆ ತಲಾ ನಾಲ್ಕು ತಗಡಿನ ಶೀಟ್, ಪಾತ್ರೆ ಪಡಗ, ಚಾಪೆ-ಹೊದಿಕೆ ವಿತರಿಸಿತು. ಕೆಲ ದಿನ ಗಂಜಿಕೇಂದ್ರ ತೆರೆದು ಹಸಿದ ಹೊಟ್ಟೆಗಳಿಗೆ ಅನ್ನ ನೀಡಿತು.ಆದರೆ, ಘಟನೆ ನಡೆದ ಕೆಲ ದಿನ ಕರುಣೆ ತೋರಿದ್ದು ಬಿಟ್ಟರೆ ಮತ್ತೆ ಯಾವ ಅಧಿಕಾರಿಯೂ ಅತ್ತಮುಖ ಮಾಡಿಲ್ಲ. ಅಲ್ಲಿನ ಜನರು ನಿತ್ಯವೂ ನರಕದ ಜೀವನ ನಡೆಸುತ್ತಿದ್ದಾರೆ.
`ನಗರದ ಕೊಳಚೆ ನೀರು ಹರಿಯುವ ಹಳ್ಳದ ಬದಿಯಲ್ಲೇ ಇರುವ ಈ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಸುತ್ತಲೂ ಕೊಳಚೆ ಪ್ರದೇಶ ಇರುವ ಕಾರಣ ಕ್ರೀಮಿ-ಕೀಟಗಳ ಹಾವಳಿ ಇದೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ರಾತ್ರಿಯಾದರೆ ಕೆಟ್ಟ ಹುಳುಗಳ ಕಾಟ ಎಂದು ಹೆದರಿ ಹೊರಗೆ ಕಾಲಿಡುವುದಿಲ್ಲ. ನೀರು ಸಬರಾಜು ಇಲ್ಲದ ಕಾರಣ ಎರಡು ಕಿ.ಮೀ. ದೂರದಿಂದ ನೀರು ತರಬೇಕು. ನಾಲ್ಕು ಹನಿ ಮಳೆಬಂದರೆ ಸಾಕು ನೀರು ಮನೆಯ ಒಳಗೆ ನುಗ್ಗುತ್ತದೆ. ಚರಂಡಿ ಇಲ್ಲದ ಕಾರಣ ಎಲ್ಲರ ಸ್ನಾನಗೃಹದ ನೀರೂ ರಸ್ತೆಗೆ ಬರುತ್ತದೆ. ಮಕ್ಕಳು ಅದರಲ್ಲೇ ಆಡುತ್ತವೆ~ ಎಂದು ಅಲ್ಲಿನ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಡುತ್ತಾರೆ ಅಲ್ಲಿನ ನಿವಾಸಿಗಳಾದ ಮೈಲಮ್ಮ, ನಿಂಗಮ್ಮ, ಬಾಲಪ್ಪ,ಚಂದ್ರಪ್ಪ.
ಅಲ್ಲಿ ದಲಿತರು, ಮುಸ್ಲಿಮರು ಸೇರಿದಂತೆ ವಿವಿಧ ಜಾತಿಜನಾಂಗದ ಕಡುಬಡವರು ನೆಲೆಸಿದ್ದಾರೆ. ಮನೆಗೆಲಸ, ಮಿಲ್ ಕೆಲಸ, ಕಟ್ಟಡ ನಿರ್ಮಾಣ ಕೆಲಸ, ಹಮಾಲಿ, ಟೈಲರಿಂಗ್ ಸೇರಿದಂತೆ ಹಲವು ವೃತ್ತಿಗಳ ಜನ ಅಲ್ಲಿ ಬದುಕು ನಡೆಸುತ್ತಿದ್ದಾರೆ. ಬೆಂಕಿ ಆಕಸ್ಮಿಕದ ನಂತರ ಶೆಡ್ ನಿರ್ಮಿಸಿಕೊಳ್ಳಲು ತಗಡು ನೀಡಿದ ಜಿಲ್ಲಾಡಳಿತ ಬಾಗಿಲನ್ನೇ ನೀಡಿಲ್ಲ. ಅಲ್ಲಿನ ಬಹುತೇಕ ಮಂದಿ ಈಗಲೂ ಬಾಗಿಲಿಲ್ಲದ ಶೇಡ್ನಲ್ಲೇ ದಿನ ದೂಡುತ್ತಿದ್ದಾರೆ.
`ದುರಂತದದ ನಂತರ ಜಿಲ್ಲಾಡಳಿತ ಅಲ್ಲಿನ ನಿವಾಸಿಗಳಿಗೆ 20 ಇಂಟು 30ರ ಅಳತೆಯ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡುವ ಜತೆಗೆ ಆಶ್ರಯ ಯೋಜನೆಗಳ ಅಡಿ ಮನೆ ನೀಡುವ ಭರಸವೆ ನೀಡಲಾಗಿತ್ತು. ಆದರೆ, ಇದುವರೆಗೂ ನಿವೇಶನ, ಹಕ್ಕುಪತ್ರ ನೀಡಿಲ್ಲ. ಈ ಸಂಬಂಧ ಶೀಘ್ರದಲ್ಲೇ ಮತ್ತೆ ಹೋರಾಟ ಆರಂಭಿಸುತ್ತೇವೆ~ ಎನ್ನುತ್ತಾರೆ ದಸಂಸ ರಾಜ್ಯ ಸಂಘಟನಾ ಸಂಚಾಲಕ ಆಲೂರು ನಿಂಗರಾಜ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.