ಬುಧವಾರ, ಜೂಲೈ 8, 2020
27 °C

ಹೊಸ ಚಿಗುರು ಹಳೆ ಬೇರು, ಕೂಡಿದರೆ ಮರ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾಮಿ ವಿವೇಕಾನಂದರು ಜನಿಸಿ ಇನ್ನೇನು 150 ವರ್ಷಗಳು ತುಂಬುತ್ತಿವೆ. ಆದರೂ ವಿವೇಕಾನಂದರನ್ನು ನಾವು ಮರೆಯುತ್ತಿದ್ದೇವೆ ಎಂಬ ಆತಂಕ ಸಾಮಾನ್ಯವಾಗಿ ನಮ್ಮನ್ನು ಕಾಡುವುದಿಲ್ಲ. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವೇ ಆಂತಹದು. ಅದ್ಭುತ ನೆನಪಿನ ಶಕ್ತಿ, ವಿಚಾರ ಮಂಡನೆಯಲ್ಲಿ ತೂಕ ತಪ್ಪದ ಸಮತೋಲನ, ಕಾಲದ ಬಹುದೂರದಾಚೆಗೆ ನೋಡಬಲ್ಲ ದೂರದೃಷ್ಟಿ ಅವರನ್ನು ನವಭಾರತದ ಅಸಾಮಾನ್ಯ ವ್ಯಕ್ತಿತ್ವಗಳಲ್ಲಿ ಪ್ರಮುಖರನ್ನಾಗಿ ಮಾಡಿತು.1890ರಲ್ಲಿ ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಸಂಚಾರ ಕೈಗೊಂಡರು. ಈ ಏಕಾಕಿ ಪರ್ಯಟನೆಯಲ್ಲಿ ಇಡೀ ರಾಷ್ಟ್ರದ ನರನಾಡಿಗಳನ್ನರಿಯುತ್ತ ಉತ್ತರ ಭಾರತವನ್ನೆಲ್ಲ ಸಂಚರಿಸಿ ದಕ್ಷಿಣದ ಕಡೆಗೆ ಬಂದರು. 1892ರ ಅಕ್ಟೋಬರ್ 15 ರಂದು ಕರ್ನಾಟಕದ ಬೆಳಗಾವಿಯನ್ನು ತಲುಪಿದರು. ಬೆಳಗಾವಿಯಲ್ಲಿ  ಭಾಟೆ ಎಂಬುವವರ ಮನೆಯಲ್ಲಿ ಅತಿಥಿಯಾದರು.ಭಾಟೆಯವರ ಮಗ ಸಂಸ್ಕೃತ ವ್ಯಾಕರಣ ‘ಅಷ್ಟಾಧ್ಯಾಯಿ’ಅನ್ನು ಅರ್ಥ ಮಾಡಿಕೊಳ್ಳಲಾರದೆ ಕಷ್ಟ ಪಡುತ್ತಿದ್ದಾಗ ಸ್ವಾಮೀಜಿಯವರು ಅದನ್ನು ಕಂಠಪಾಠ ಮಾಡಿದವರಂತೆ ಒಪ್ಪಿಸಿಬಿಟ್ಟರು. ಬೆಳಗಾವಿಯಲ್ಲಿ ಹರಿಪಾದ ಮಿತ್ರ ಎಂಬ ಬಂಗಾಳಿ ವ್ಯಕ್ತಿಯ ಪರಿಚಯವೂ ಆಯಿತು. ಅವನ ಎದುರು ‘ಪಿಕ್‌ವಿಕ್ ಪೇಪರ್ಸ್‌’ ಪುಸ್ತಕದ ಪುಟಗಳನ್ನು ನಿರರ್ಗಳವಾಗಿ ಕಂಠಪಾಠ ಮಾಡಿದವರಂತೆ ಹೇಳಿದರು.  ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಪುಸ್ತಕವನ್ನು ಒಂದು ಬಾರಿ ಓದಿಯೇ ಅದರ ಯಾವುದೇ ಪುಟವನ್ನು ಕಂಠಪಾಠ ಮಾಡಿದವರಂತೆ ಹೇಳುವ ಸಾಮರ್ಥ್ಯ ಅವರಿಗಿತ್ತು.ಕರ್ನಾಟಕದಲ್ಲಿ ಸಂಚರಿಸುವಾಗ ಮೈಸೂರು ಮಹಾರಾಜರಾದ ಚಾಮರಾಜ ಒಡೆಯರ್ ಅವರ ಪರಿಚಯವಾಯಿತು. ಚಾಮರಾಜ ಒಡೆಯರ್ ಅವರು ಆಗ ಮೂವತ್ತು ವರ್ಷದ ಯುವಕ. ಸ್ವಾಮಿ ವಿವೇಕಾನಂದರಿಂದ ಬಹಳ ಬೇಗ ಪ್ರಭಾವಿತರಾದರು. ಅವರಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು. ಸ್ವಾಮೀಜಿ ಅಮೆರಿಕದಲ್ಲಿ ಪ್ರಸಿದ್ಧರಾದ ಮೇಲೆ ಮೈಸೂರು ಮಹಾರಾಜರಿಗೆ ಹೀಗೆ ಪತ್ರ ಬರೆದರು. ‘ನನ್ನ ನೆಚ್ಚಿನ ಮಹಾರಾಜ, ಜೀವನ ಕ್ಷಣಿಕವಾದುದು, ಭೋಗಗಳು ತಾತ್ಕಾಲಿಕ. ಆದರೆ ಯಾರು ಇತರರಿಗಾಗಿ ಬದುಕುತ್ತಾರೊ ಅವರೇ ನಿಜವಾಗಿ ಬದುಕಿರುವವರು. ಇತರರು ಬದುಕಿದ್ದೂ ಸತ್ತಂತೆ’.ಸ್ವಾಮಿ ವಿವೇಕಾನಂದರು ಬರೆದದ್ದು ಎಂದರೆ ಪತ್ರಗಳು ಮಾತ್ರ. ಭಾವಸ್ಫುರಣವಾದಾಗ ಕೆಲವು ಕವಿತೆಗಳನ್ನು ಬರೆದರು. ಈ ಸಮಯದಲ್ಲಿ ಭಾವದ ಅಲೆಗಳು ಅವರನ್ನು ಎಷ್ಟು ಜೋರಾಗಿ ಅಪ್ಪಳಿಸುತ್ತಿದ್ದವು ಎಂದರೆ ಬರೆದ ನಂತರ ಅವರು ನಿಶ್ಯಕ್ತಿಯಿಂದ ಬಳಲಿ ಬೆಂಡಾಗಿ ಬಿಡುತ್ತಿದ್ದರು. ಕೃತಿಶ್ರೇಣಿಯಲ್ಲಿ ಇಂದು ನಮಗೆ ಲಭ್ಯವಿರುವ ಸ್ವಾಮಿ ವಿವೇಕಾನಂದರ ಸಾಹಿತ್ಯವೆಲ್ಲ ಅವರ ಭಾಷಣಗಳು. ಅದರಲ್ಲೂ ಮುಖ್ಯವಾಗಿ ಆಂಗ್ಲ ಶೀಘ್ರಲಿಪಿಕಾರ ಗುಡ್ ವಿನ್ ಸ್ವಾಮಿಜೀಯವರ ಅದ್ಭುತ ವಾಗ್ಝರಿಯನ್ನು ಲೇಖನಿಯಲ್ಲಿ ಸೆರೆಹಿಡಿದು ನಮಗೆ ಸಾಹಿತ್ಯವಾಗಿ ಒದಗಿಸಿದ್ದಾನೆ. ಸ್ವಾಮೀಜಿ ವಿವಿಧ ಸಂದರ್ಭಗಳಲ್ಲಿ ಭಾರತೀಯ ಅಥವಾ ಪಾಶ್ಚಾತ್ಯ ಶ್ರೋತೃಗಳನ್ನು ಉದ್ದೇಶಿಸಿ ಮಾಡಿದ ಭಾಷಣಗಳಿವು.ಭಾರತೀಯರನ್ನು ಉದ್ದೇಶಿಸಿ ಮಾತನಾಡಿದಾಗ ನಮ್ಮ ಜಾತಿ ಪದ್ದತಿಯನ್ನು, ಅಸ್ಪೃಶ್ಯತೆಯನ್ನು ನೇರ ನುಡಿಗಳಲ್ಲಿ ಖಂಡಿಸುತ್ತಾರೆ. ವಿದೇಶಿ ನೆಲದಲ್ಲಿ ನಮ್ಮ ದೇಶದ ಜಾತಿ ಪದ್ಧತಿ ಬಗ್ಗೆ ಬಲವಾದ ಟೀಕೆಗಳು ಬಂದಾಗ ಪ್ರಪಂಚದ ಎಲ್ಲ ಕಡೆಯೂ ಒಂದಲ್ಲ ಒಂದು ಜಾತಿ ಪದ್ಧತಿ ಇದ್ದೇ ಇದೆ ಎಂದು ಹೇಳುತ್ತಾ ಬಣ್ಣದ ಕಾರಣಕ್ಕಾಗಿ ಮನುಷ್ಯ ಬಣ ಭಿನ್ನವಾಗಿರುವುದನ್ನು ಉದಾಹರಿಸುತ್ತಾರೆ.‘ನಿಮ್ಮ ಜಾತಿ ಪದ್ಧತಿಗಳಿಗಿಂತ ನಮ್ಮ ಜಾತಿ ಪದ್ಧತಿಯೇ ಎಷ್ಟೋ ಮೇಲು; ಏಕೆಂದರೆ ನಾವು ಜಾತಿ ಪದ್ಧತಿಯಿಂದ ಆರಂಭಿಸಿದರೂ ಸಂಸ್ಕೃತಿಯ ದ್ವಾರದ ಮೂಲಕ ಸಮಾಜವಾದದೆಡೆಗೆ ವಿಕಾಸವಾಗುತ್ತೇವೆ. ನಾವು ಎಲ್ಲರನ್ನು ಕೆಳಗೆಳೆಯುವ ಮೂಲಕ ಸಮಾನತೆಯನ್ನು ಸಾಧಿಸುವುದಿಲ್ಲ. ಬದಲಾಗಿ ಎಲ್ಲರನ್ನು ಮೇಲಕ್ಕೆ ಕರೆದೊಯ್ಯುವ ಮೂಲಕ ಸಮಾನತೆಯನ್ನು ಸಾಧಿಸುತ್ತೇವೆ’ ಎಂದು ವಾದಿಸುತ್ತಾರೆ.ನಮ್ಮದೇ ನೆಲದಲ್ಲಿ ಮಲಬಾರ್ ಪ್ರದೇಶದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆಯನ್ನು ಕಂಡು ಕೆಂಡಾಮಂಡಲವಾಗಿ ಹೀಗೆ ಹೇಳುತ್ತಾರೆ: ‘ನಾನು ಮಲಬಾರಿನಲ್ಲಿ ಕಂಡದ್ದಕ್ಕಿಂತ ಹೆಚ್ಚು ಅವಿವೇಕವಾದದ್ದು ಪ್ರಪಂಚದಲ್ಲಿ ಹಿಂದೆ ಎಲ್ಲಾದರೂ ಇತ್ತೆ? ಬಡ ಭಂಗಿಯೊಬ್ಬ ಉತ್ತಮ ಕುಲದವರು ನಡೆದಾಡುವ ಬೀದಿಯಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಆದರೆ ಅವನು ಕ್ರೈಸ್ತನಾಗಿ ಅಥವಾ ಮಹಮದೀಯನಾಗಿ ತನ್ನ ಹೆಸರನ್ನು ಬದಲಿಸಿಕೊಂಡರೆ ಸಾಕು, ಅವನು ಉತ್ತಮ ಕುಲದವರ ಬೀದಿಯಲ್ಲಿ ನಿರಾಂತಕವಾಗಿ ನಡೆಯಬಹುದು. ಇಂತಹದ್ದನ್ನು ಕಂಡ ಮೇಲೆ ಈ ಮಲಬಾರಿನ ಜನ ಹುಚ್ಚರು ಎಂದು ನಿರ್ಧರಿಸುವುದನ್ನು ಬಿಟ್ಟರೆ ಮತ್ತೇನು ಸಾಧ್ಯ. ಇವರ ಮನೆಗಳೆಲ್ಲ ಹುಚ್ಚಾಸ್ಪತ್ರೆಗಳೇ ಸರಿ.. ಇವರಿಗೆ ನಾಚಿಕೆಯಾಗಬೇಕು, ತಮ್ಮ ಮನೆ ಮಕ್ಕಳನ್ನು ಹಸಿವಿನಿಂದ ಸಾಯಲು ಬಿಡುತ್ತಾರೆ, ಆದರೆ ಅವರು ಮತ್ತೊಂದು ಧರ್ಮಕ್ಕೆ ಮತಾಂತರಗೊಂಡ ಕೂಡಲೆ ಆದರಣೀಯರಾಗಿ ಬಿಡುತ್ತಾರೆ. ಭಾರತದ ಮೇಲಿನ ಮಹಮದೀಯರ ವಿಜಯ ತುಳಿತಕ್ಕೆ ಒಳಗಾದವರಿಗೆ ವರದಾನವಾಯಿತು. ಅದ್ದರಿಂದಲೇ ಅಲ್ಲವೆ ಭಾರತದ ಐದನೆ ಒಂದು ಭಾಗ ಜನ ಮಹಮದೀಯರಾಗಿರುವುದು, ನೀವು ಮದರಾಸಿನ ಜನ ಈ ವಿಷಯವಾಗಿ ಗಮನ ಕೊಡದೆ ಇದ್ದರೆ ನಿಮ್ಮ ಅರ್ಧಭಾಗ ಕ್ರೈಸ್ತರಾಗುವುದರಲ್ಲಿ ಸಂಶಯವೇ ಇಲ್ಲ’.ಸ್ವಾಮೀಜಿ ಅಸ್ಪೃಶ್ಯತೆಯನ್ನು ಖಂಡಿಸಿದರು. ಆದರೆ ಅವರು ಜಾತಿ ಪದ್ಧತಿಯನ್ನು ಸಾರಾಸಗಟಾಗಿ ತಿಸ್ಕರಿಸುವುದಿಲ್ಲ. ಅವರು ಹೇಳುತ್ತಾರೆ ‘ನಮ್ಮ ಜಾತಿ ಪದ್ಧತಿ ಮತ್ತು  ಧರ್ಮ ನಮ್ಮನ್ನು ಒಂದು ದೇಶವಾಗಿ ರಕ್ಷಿಸಲು ನಮಗೆ ಬೇಕಾಗಿತ್ತು’. ಮತ್ತೆ ಹೇಳುತ್ತಾರೆ ‘ಒಂದು ವೇಳೆ ಜಾತಿ ಪದ್ಧತಿ ಇಲ್ಲದಿದ್ದರೆ ನಮ್ಮ ಸಂಸ್ಕೃತ ಗ್ರಂಥಗಳು ಉಳಿಯುತ್ತಿರಲಿಲ್ಲ.ವಿದೇಶಿಯರ ಅಧ್ಯಯನಕ್ಕೂ ಅವು ಸಿಕ್ಕುತ್ತಿರಲಿಲ್ಲ’. ಇದರರ್ಥ ಜಾತಿ ಪದ್ಧತಿ ಮುಂದುವರೆಯಬೇಕೆಂದು ಸ್ವಾಮೀಜಿ ಅಭಿಪ್ರಾಯ ಪಡುತ್ತಾರೆ ಎಂದು ಭಾವಿಸಬೇಕೆ? ಖಂಡಿತ ಇಲ್ಲ. ಅವರ ಪ್ರಕಾರ ಉನ್ನತ ವರ್ಗದವರೆಲ್ಲ ತಮ್ಮ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ವಹಿಸಿಕೊಟ್ಟು ಸ್ವಯಂ ಪ್ರೇರಣೆಯಿಂದ ಆ ಸ್ಥಾನವನ್ನು ತೆರವುಗೊಳಿಸಿ ನಿರ್ಗಮಿಸಬೇಕು.ವರ್ತಮಾನದ ಜಾತಿಪದ್ದತಿಯನ್ನು ಕುರಿತು ಹೀಗೆ ಹೇಳುತ್ತಾರೆ: ‘ಆಧುನಿಕ ಜಾತಿಪದ್ದತಿ ನಮ್ಮ ಭಾರತದ ಪ್ರಗತಿಗೆ ಮಾರಕವಾಗಿದೆ. ಇದು ನಮ್ಮ ಪ್ರಗತಿಯನ್ನು ಕುಗ್ಗಿಸುತ್ತದೆ, ತೊಡಕಾಗಿ ಕಾಡುತ್ತದೆ, ಕೊನೆಗೆ ವೈಚಾರಿಕ ಪ್ರಗತಿಯ ಎದುರು ಮುದುರಿ ಬೀಳುತ್ತದೆ’. ಎಂದರೆ ವೈಚಾರಿಕತೆಯ ಆಳ ಹೆಚ್ಚಾದಂತೆ ಯಾರೂ ಯಾವ ಕಾರಣಕ್ಕೂ ಈ ಜಾತಿಪದ್ದತಿಯನ್ನು ಸಮರ್ಥಿಸಲಾರರು ಎಂಬುದು ಈ ಮಾತಿನ ಅರ್ಥ.  ಸಾವಿರಾರು ವರ್ಷಗಳ ಪರ್ಯಂತ ಒಂದು ಸಂಸ್ಕೃತಿ ತಾನೆ ತಾನಾಗಿ ಹರಿದು ಬಂದಿರುವುದು ಕಣ್ಣಿಗೆ ಕಾಣುವಾಗ, ಅನ್ಯಧರ್ಮೀಯರ, ಅನ್ಯ ಜನಾಂಗದವರ ಆಕ್ರಮಣ-ದುರಾಡಳಿತಗಳ ನಡುವೆಯೂ ತನ್ನ ಮೂಲಭೂತ ರಚನೆಯನ್ನು ಕಳೆದುಕೊಳ್ಳದೇ ಉಳಿದುಕೊಂಡಿರುವಾಗ ಆ ಸಂಸ್ಕೃತಿಯ ಬಗ್ಗೆ ತೀರ್ಪುಗಾರರಾಗಿ ನಿಲ್ಲಲು ಸ್ವಾಮೀಜಿ ನಿರಾಕರಿಸಿದರು.ಪ್ರಪಂಚದ ಇತರ ನಾಗರಿಕತೆಗಳ ಏಳು-ಬೀಳುಗಳನ್ನು ಉದಾಹರಿಸುತ್ತಾ ಭಾರತೀಯ ನಾಗರಿಕತೆ-ಸಂಸ್ಕೃತಿ ಉಳಿದುಕೊಂಡು ಬಂದಿರುವುದು ಸಾಮಾನ್ಯ ಸಂಗತಿಯಲ್ಲ ಎಂದು ಹೇಳುತ್ತಾರೆ. ಬೌದ್ಧ, ಜೈನ, ಕ್ರೈಸ್ತ, ಮುಸಲ್ಮಾನ ಮುಂತಾದ ಧರ್ಮಗಳು ಒಟ್ಟಿಗೆ ಬೆರೆತು ಬಾಳಬಹುದಾದ ಒಂದು ಭದ್ರ ಸಾಂಸ್ಕೃತಿಕ ಬುನಾದಿಯ ಅಸ್ತಿತ್ವವನ್ನು ನಿರಾಕರಿಸುವುದಾದರೂ ಹೇಗೆ?ಈ ಸಂದರ್ಭದಲ್ಲಿ ಸ್ವಾಮೀಜಿಯವರು ಒಂದು ಜನಸಮುದಾಯ ಪಡೆದುಕೊಂಡ ಸಂಸ್ಕೃತಿ ಹಾಗೂ ಮಾಹಿತಿ ಜ್ಞಾನದ ಕುರಿತು ಹೀಗೆ ವಿಶ್ಲೇಷಿಸುತ್ತಾರೆ: ‘ಕೇವಲ ಸಂಸ್ಕೃತಿ ಮಾತ್ರ ದೊಡ್ಡ ಆಘಾತಗಳನ್ನು ತಡೆದುಕೊಳ್ಳಬಲ್ಲದು. ಜ್ಞಾನದ ದೊಡ್ಡ ಹೊರೆಯೊಂದನ್ನು ಮಾತ್ರ ಪಡೆದಿದ್ದರೆ ಸಾಲದು.  ಜ್ಞಾನಭಂಡಾರವನ್ನು ಮಾತ್ರ ಶೇಖರಿಸಿಟ್ಟುಕೊಂಡ ರಾಷ್ಟ್ರಗಳು ಇಂದು ಏನಾಗಿವೆ? ಅವುಗಳೆಲ್ಲವೂ ಹುಲಿಯಂತೆ ಅಥವಾ ಬರ್ಬರವಾದ ಕ್ರೂರಿಗಳಂತೆ. ಅವರ ಜ್ಞಾನವೆಲ್ಲ ಚರ್ಮದಾಳ ಮಾತ್ರ; ಸ್ವಲ್ಪ ಕೆದಕಿದರೆ ಸಾಕು, ಕ್ರೌರ್ಯ ಹೊರಹೊಮ್ಮುತ್ತದೆ. ಸಂಸ್ಕೃತಿಯೇ ಇಲ್ಲದಾಗ ಇಂತಹ ಅಪಾಯಗಳು ಆಗುವುದುಂಟು. ಜನಸಾಮಾನ್ಯರಿಗೆ ಅವರದೇ ಭಾಷೆಯಲ್ಲಿ ಬೋಧಿಸಿ; ಅವರಿಗೆ ಭಾವನೆಗಳನ್ನು ಕೊಡಿ, ವಿಚಾರಗಳನ್ನು ಅವರೇ ಸಂಗ್ರಹಿಸುತ್ತಾರೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ಸಂಸ್ಕೃತಿ. ಅವರಿಗೆ ಸಂಸ್ಕೃತಿಯನ್ನು ಕೊಡಿ. ಅವರನ್ನು ಸುಸಂಸ್ಕೃತರನ್ನಾಗಿ ಮಾಡದ ಹೊರತು ಅವರು ಏರಿದ ಎತ್ತರದಲ್ಲಿ ಸ್ಥಾಯಿಯಾಗಿ ನಿಲ್ಲಲಾರರು’.ಮೂಲತಃ ಸ್ವಾಮೀಜಿಯವರು ಎಲ್ಲ ಬಗೆಯ ಶೋಷಣೆಯ ವಿರುದ್ಧ ದನಿ ಎತ್ತಿದರು. ಜಾತಿ ಪದ್ಧತಿ ಶೋಷಣೆಯ ಸಾಧನವಾಗದೆ ವೈವಿಧ್ಯಮಯವಾದ ಸೃಜನಶೀಲ ವ್ಯಕ್ತಿಗಳು ರೂಪುಗೊಳ್ಳಬಹುದಾದ ಒಂದು ಆದರ್ಶಪ್ರಾಯ ಸ್ಥಿತಿಯನ್ನು ಕುರಿತು ಸ್ವಾಮೀಜಿ ಚಿಂತಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಎಂದರೆ ಯಾರು ಎಂದು ವಿವರಿಸುತ್ತಾ, ‘ಎಳ್ಳಷ್ಟೂ ಪ್ರಾಪಂಚಿಕತೆ ಇಲ್ಲದವನೆ ಬ್ರಾಹ್ಮಣ’ ಎಂದು ಹೇಳುತ್ತಾರೆ. ಆದರೆ ಈ ಆದರ್ಶಪ್ರಾಯ ಸ್ಥಿತಿ ವಾಸ್ತವ ಜಗತ್ತಿನಲ್ಲಿ ಎಂದೂ ಸಾಧ್ಯವಾಗುವುದೇ ಇಲ್ಲ. ಆದ್ದರಿಂದ ಇಂತಹ ಕನಸುಗಳಿಗೆ ಅರ್ಥವೂ ಇಲ್ಲ. ಇಂದು ಜಾತಿ ಪದ್ಧತಿ ಶೋಷಣೆಯ ಅತ್ಯಂತ ಪ್ರಬಲ ಸಾಧನವಾಗಿದೆ. ಹಾಗೆಯೇ ವ್ಯಾಪಾರಿ ವರ್ಗದ ಶೋಷಣೆಯಿಂದ ಬಡರೈತರು ಬಳಲುತ್ತಿರುವ ಬಗ್ಗೆಯೂ ಸ್ವಾಮೀಜಿ ವಿರೋಧ ವ್ಯಕ್ತಪಡಿಸುತ್ತಾರೆ. ಮತ್ತೆ ಹೇಳುತ್ತಾರೆ: ‘ಉಳುವವರು ಯಾರೋ, ಕೊಳ್ಳುವವರು ಯಾರೋ. ಆದರೆ ನಡುವೆ ವ್ಯಾಪಾರ ಮಾಡುವ ಜನ ಲಾಭದ ಸಿಂಹಪಾಲನ್ನು ದೋಚಿಕೊಳ್ಳುತ್ತಿದ್ದಾರೆ’.ಕಷ್ಟಪಟ್ಟು ಕೆಲಸ ಮಾಡುವ ವರ್ಗವನ್ನು ಒಂದು ಕಡೆ ಅಧಿಕಾರಿಶಾಹಿಗಳು ಶೋಷಿಸಿದರೆ ಮತ್ತೊಂದೆಡೆಯಿಂದ ವ್ಯಾಪಾರಿ ವರ್ಗ ಶೋಷಣೆ ಮಾಡುತ್ತಿರುವುದನ್ನು ಕಂಡು ಸ್ವಾಮೀಜಿ ಹೇಳುತ್ತಾರೆ: ‘ಈ ದುಡಿಯುವ ವರ್ಗ ಮೌನವಾಗಿ ದೇಶವನ್ನು ಕಟ್ಟುತ್ತಿದೆ. ಪ್ರಪಂಚದಾದ್ಯಂತ ದುಡಿಯುವ ವರ್ಗ ಶೋಷಣೆಗೆ ಒಳಗಾಗಿದೆ, ನಾಲ್ಕು ಧರ್ಮಗ್ರಂಥಗಳನ್ನು ಕೆಲವು ಮಹಾಕಾವ್ಯಗಳನ್ನು ಬರೆದುಬಿಟ್ಟರೆ ಆಯಿತೆ? ಓ ದುಡಿಯುವ ವರ್ಗವೇ, ನಿಮಗೆ ತಲೆಬಾಗುತ್ತೇನೆ’.   ಸ್ವಾತಂತ್ರ್ಯಪೂರ್ವದಲ್ಲಿ ಅನೇಕಾನೇಕ ಪರಿಣತರು ಭಾರತ ಒಂದು ಸ್ವತಂತ್ರ ರಾಷ್ಟ್ರವಾಗಿ ಉಳಿಯುವ ಯಾವ ಚಿಹ್ನೆಯೂ ಕಾಣುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ ಇಂದಿಗೂ ಭಾರತ ಒಂದು ರಾಷ್ಟ್ರವಾಗಿ ಛಿದ್ರಗೊಳ್ಳದೆ ಮುಂದುವರೆಯುತ್ತಿದೆ. ಹೀಗೆ ರಾಷ್ಟ್ರವನ್ನು ಒಗ್ಗೂಡಿಸಿದ ಸಲಕರಣೆಗಳಲ್ಲಿ ಜಾತಿಪದ್ಧತಿಯೂ ಸೇರಿರಬಹುದು. ಆದರೆ ವರ್ತಮಾನದಲ್ಲಿ ಇದರ ಕರಾಳ ಪರಿಣಾಮಗಳನ್ನು ಗುರುತಿಸಿ ಇದನ್ನು ತೊಲಗಿಸದೆ ಬೇರೆ ದಾರಿಯಿಲ್ಲ.ಈ ನೆಲದ ಸಂಸ್ಕೃತಿಯಲ್ಲಿ ಜಾತಿ ಪದ್ಧತಿಯ ಜೊತೆ ಜನಮಾನಸದ ಅಪ್ರಜ್ಞೆಯ ಸ್ತರದಲ್ಲಿ ಹಾಸುಹೊಕ್ಕಾಗಿರುವ ಯಾವುದೊ ಗಾಢ ನಂಬಿಕೆಗಳು, ದಟ್ಟವಾಗಿ ಹಬ್ಬಿರುವ ಧಾರ್ಮಿಕ ವಿಧಿ-ವಿಧಾನಗಳು, ಭೌಗೋಳಿಕವಾಗಿ ವೈವಿಧ್ಯಮಯವಾಗಿದ್ದರೂ ಆಳದಲ್ಲಿ ಎಲ್ಲಿಯೋ ಒಂದೆಡೆ ಶ್ರುತಿಗೆಡದೆ ಸೇರಿ ಧ್ವನಿಸುವ ಸಮಾನ ಸಾಮರಸ್ಯಗಳನ್ನು ನಾವು ಗುರುತಿಸದೆ ವಿಧಿಯಿಲ್ಲ. ಈ ಸಾಮರಸ್ಯದ ಉಗಮ ಸ್ವಾಮೀಜಿಯವರು ಹೇಳುವಂತೆ ಅನೇಕ ಶತಶತಮಾನಗಳ ಕಾಲ ಜನಸಮುದಾಯ ವಿಕಾಸಗೊಂಡು ಕಡೆದು ತೆಗೆದ ತಿರುಳು.ಈ ತಿರುಳಿನ ಅನೇಕ ಭಾಗಗಳು ಮೌಢ್ಯದಿಂದ ಕೂಡಿರುವುದು ಸಹಜ. ಹಾಗಾಗಿ ವರ್ತಮಾನದ ಸಂದಿಗ್ಧ ನಾವು ನಿಂತಿದ್ದೇವೆ ಎಂಬ ಕಾರಣಕ್ಕೆ ಏಕಾಏಕಿ ಎಲ್ಲವನ್ನೂ ತಿರಸ್ಕರಿಸುವ ಹಕ್ಕು ನಮಗಿಲ್ಲ ಎಂಬುದನ್ನು ಸ್ವಾಮೀಜಿ ನಮಗೆ ಮನನ ಮಾಡಿಕೊಡುತ್ತಾರೆ. ‘ಹೊಸ ಚಿಗುರು ಹಳೆ ಬೇರು, ಕೂಡಿದರೆ ಮರ ಸೊಬಗು’ ಎಂಬ ಮಾತನ್ನು ಆರೋಗ್ಯಕರವಾಗಿ ಅರ್ಥಮಾಡಿಕೊಡರೆ ಮಾತ್ರ ಸ್ವಾಮೀಜಿಯವರ ಮಾತು ನಮಗೆ ಸರಿಯಾಗಿ ಅರ್ಥವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.