ಮಂಗಳವಾರ, ಮಾರ್ಚ್ 9, 2021
23 °C

ಹೊಸ ಜಗತ್ತನ್ನು ಕಾಣುವ ಶಕ್ತಿ ಅಂಧರಿಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಜಗತ್ತನ್ನು ಕಾಣುವ ಶಕ್ತಿ ಅಂಧರಿಗಿದೆ

ಬೆಂಗಳೂರು: `ಕಣ್ಣಿಲ್ಲದಿದ್ದರೂ ತಮ್ಮ ಕಲ್ಪನೆಯ ಹೊಸ ಜಗತ್ತನ್ನು ಕಾಣುವ ಅದ್ಭುತವಾದ ಶಕ್ತಿ ಅಂಧರಿಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ನಗರದ ಮತ್ತಿಕೆರೆಯ ಐಡಿಎಲ್ ಸಂಘಟನೆಯಲ್ಲಿ ಬುಧವಾರ ಅಂಧರೊಂದಿಗೆ ಕೆಲ ಸಮಯ ಕಳೆದ ಅವರು, `ಕಣ್ಣಿದ್ದೂ ನಾವು ನಿತ್ಯ ಜೀವನದ ಹಲವು ಸಂದರ್ಭಗಳನ್ನು ನೋಡದೇ ಹೋಗುತ್ತೇವೆ.

 

ಆದರೆ ಕಣ್ಣಿಲ್ಲದಿದ್ದರೂ ತಮ್ಮ ಇತರೆ ಇಂದ್ರಿಯಗಳ ಮೂಲಕ ಜಗತ್ತನ್ನು ನೋಡುವ ಅಂಧರ ಒಳನೋಟ ನನಗೆ ಆಶ್ಚರ್ಯ ಹುಟ್ಟಿಸುತ್ತದೆ. ಅಂಧರ ಬದುಕನ್ನು ಕಂಡಾಗಲೆಲ್ಲಾ ನನಗೆ ವಾಸ್ತವದ ಅರಿವಾಗುತ್ತದೆ~ ಎಂದು ಭಾವುಕರಾದರು.`ಅಂಧರೂ ಸೇರಿದಂತೆ ಎಲ್ಲ ಅಂಗವಿಕಲರ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಉತ್ತಮ ಯೋಜನೆಗಳನ್ನು ರೂಪಿಸಿದೆ. ಈ ಬಾರಿಯ ಬಜೆಟ್‌ನಲ್ಲೂ ಅಂಗವಿಕಲರಿಗಾಗಿ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಐಡಿಎಲ್ ಸಂಘಟನೆಯು ವಿಶೇಷವಾಗಿ ಅಂಧರ ಬದುಕಿಗೆ ಸ್ವಾವಲಂಬನೆ ನೀಡುವ ಉತ್ತಮ ಕಾರ್ಯವನ್ನು ಮಾಡುತ್ತಾ ಬಂದಿದೆ~ ಎಂದು ಅವರು ಶ್ಲಾಘಿಸಿದರು.`ಅಂಧರ ನಡುವೆ ಕಳೆದ ಸಮಯವೆಲ್ಲಾ ನನಗೆ ಅಮೂಲ್ಯವೆನಿಸುತ್ತದೆ. ಅಂಗವಿಕಲರ ಅಭಿವೃದ್ಧಿಗಾಗಿ ಐಡಿಎಲ್ ಸಂಘಟನೆಯು ಮಾಡುತ್ತಿರುವ ಕೆಲಸಕ್ಕೆ ಸರ್ಕಾರ ಪ್ರೋತ್ಸಾಹ ನೀಡಲು ಸದಾ ಸಿದ್ಧವಿದೆ. ಅಂಧರ ಬದುಕಿಗೆ ಭರವಸೆ ತುಂಬುವ ಇನ್ನಷ್ಟು ಕೆಲಸಗಳು ಸಂಘಟನೆಯಿಂದ ಆಗಲಿ~ ಎಂದು ಅವರು ಆಶಿಸಿದರು.ಸಂಘಟನೆಯ ಮುಖ್ಯಸ್ಥ ಪಿ.ಕೆ.ಪೌಲ್ ಮಾತನಾಡಿ, `ಅಂಗವಿಕಲರ ಸ್ವಾವಲಂಬನೆಗಾಗಿ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅಂಗವಿಕಲರಿಗಾಗಿಯೇ ಪ್ರತ್ಯೇಕ ಬಜೆಟ್ ರೂಪಿಸುವ ಬಗ್ಗೆ ಮುಖ್ಯಮಂತ್ರಿಗಳು ಚಿಂತನೆ ನಡೆಸಬೇಕು~ ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಐಡಿಎಲ್ ಅಂಧರ ವಾದ್ಯ ಸಮೂಹದ ಸದಸ್ಯರು ಕೆಲವು ಗೀತೆಗಳನ್ನು ಹಾಡಿದರು. ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ, ಉಪ ಮೇಯರ್ ಎಸ್.ಹರೀಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.ಭೂ ಮಾಫಿಯಾಕ್ಕೆ ಕಡಿವಾಣ : ಸಿಎಂಕಾರ್ಯಕ್ರಮದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, `ಬೆಂಗಳೂರಿನಲ್ಲಿ ಭೂಮಿಯ ಬೆಲೆ ಚಿನ್ನದ ದರದಂತೆ ಏರುತ್ತಿರುವುದರಿಂದ ಎಲ್ಲರ ಕಣ್ಣೂ ಈಗ ಭೂಮಿಯ ಮೇಲಿದೆ. ವಿಶೇಷ ಕೋಟಾದಡಿ ನಿವೇಶನಗಳ ದುರುಪಯೋಗವಾಗದಂತೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ನಗರದಲ್ಲಿ ಭೂ ಮಾಫಿಯಾಕ್ಕೆ ಕಡಿವಾಣ ಹಾಕಲು ಸರ್ಕಾರ ಸಿದ್ಧವಿದೆ~ ಎಂದರು.`ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆ ಪ್ರಕರಣವನ್ನು ಈಗಾಗಲೇ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಅಕ್ರಮವಾಗಿ ನಿವೇಶನಗಳನ್ನು ಪಡೆದ ಶಾಸಕರ ಪ್ರಕರಣ ಸದ್ಯ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ನ್ಯಾಯಾಲಯದ ತೀರ್ಪನ್ನು ಸರ್ಕಾರ ಗೌರವಿಸಲಿದೆ~ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.