ಹೊಸ ತಂತ್ರಜ್ಞಾನದ ಇಟ್ಟಿಗೆ

7

ಹೊಸ ತಂತ್ರಜ್ಞಾನದ ಇಟ್ಟಿಗೆ

Published:
Updated:

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು- ಇದು ಹಿರಿಯರು ಹೇಳಿದ ಗಾದೆ. ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಎರಡೂ ಸಾಹಸದ ಕೆಲಸವೇ.  ಆದರೆ, ಇತ್ತೀಚಿಗೆ ಮದುವೆ ಮಾಡುವುದು ಸುಲಭವಾಗಿದೆ.  ಬಾಳ ಸಂಗಾತಿಯನ್ನು ಅವರವರೇ ಆಯ್ಕೆ ಮಾಡಿಕೊಂಡರೆ, ಇನ್ನು ಮದುವೆಯ ಸಿದ್ಧತೆ ಅಷ್ಟೊಂದು ತಲೆನೋವಿನ ವಿಷಯವಾಗಿ ಉಳಿದಿಲ್ಲ. ದುಡ್ಡು ಕೊಟ್ಟರೆ ಎಲ್ಲವೂ ಸಿದ್ಧ. ಈಗ ಏನಿದ್ದರೂ ಮನೆಕಟ್ಟಿ ನೋಡುವುದೊಂದೇ ಸವಾಲಿನ ಕೆಲಸ.ಮನೆ ಕಟ್ಟುವುದು ಅನೇಕರ ಪಾಲಿಗೆ ಬಹಳ ದುಬಾರಿಯಾಗಿ ಪರಿಣಮಿಸಿರುತ್ತದೆ.  ಬಡವರು ಮಧ್ಯಮವರ್ಗದವರಿಗಂತೂ ಮನೆ ನಿರ್ಮಾಣಕ್ಕೆ ಹಣ ಹೊಂದಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಮರಳಿಗೆ ಚಿನ್ನದ ಬೆಲೆ. ದುಡ್ಡು ಕೊಟ್ಟರೂ ಸಿಗುತ್ತಿಲ್ಲ. ಸಿಮೆಂಟ್ ಬೆಲೆ ಗಗನಕ್ಕೇರುತ್ತಿದೆ. ಕಟ್ಟಡ ನಿರ್ಮಾಣ ಕೂಲಿ - ಕಾರ್ಮಿಕರು ಸರಿಯಾದ ಸಮಯಕ್ಕೆ   ಸಿಗುವುದಿಲ್ಲ. ಹಲವಾರು ಕಾರಣಗಳಿಗೆ ಅನೇಕ ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಲ್ಲುತ್ತವೆ.  ಮನೆ ಕಟ್ಟುವವರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ  ಕಡಿಮೆ ವೆಚ್ಚದ ಪರಿಸರ ಸ್ನೇಹಿ ಮನೆಗಳು ನೆರವಿಗೆ ಬರುತ್ತವೆ.ಕಡಿಮೆ ವೆಚ್ಚದ ಮನೆಗಳ ನಿರ್ಮಾಣಕ್ಕೆ ನೆರವಾಗುವ ಹೊಸ ತಂತ್ರಜ್ಞಾನದ ಇಟ್ಟಿಗೆಗಳನ್ನು ತಯಾರಿಸುವ ಉದ್ದಿಮೆಯಲ್ಲಿ ತೊಡಗಿಕೊಂಡಿರುವ  ನಿವೇದಿತಾ ಸಿ. `ಪರಿಸರ ಸ್ನೇಹಿ~ ಮನೆಗಳ ನಿರ್ಮಾಣಕ್ಕೆ ನೆರವು ನೀಡುತ್ತಿದ್ದಾರೆ.ಬೆಂಗಳೂರಿನ ಬಿ.ಎಂ.ಎಸ್. ಕಾಲೇಜಿನಲ್ಲಿ ಎಂಜಿನಿಯರಿಂಗ್ (ಆರ್ಕಿಟೆಕ್ಟ್) ಪದವಿ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಒಳ್ಳೆಯ ಸಂಬಳ ಪಡೆಯುತ್ತಿದ್ದರೂ ಬೆಂಗಳೂರಿನ ಒತ್ತಡ ಜೀವನಕ್ಕೆ ವಿದಾಯ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ದೇವವೃಂದ ಗ್ರಾಮದ ತಮ್ಮ ಕಾಂಚಿಘರ್ ಕಾಫಿ ಎಸ್ಟೇಟ್‌ನಲ್ಲಿ ಹೊಸ ತಂತ್ರಜ್ಞಾನದ ಮನೆ ತಯಾರಿಕೆಗೆ ಬೇಕಾದ ಇಟ್ಟಿಗೆಗಳು (Compressed Stabilized Earth Blocks- CSEB)  ತಯಾರಿಸುವ ಘಟಕ  ಸ್ಥಾಪಿಸಿದ್ದಾರೆ. ಒಳ್ಳೆಯ ಮಣ್ಣು, ಮರಳು, ಸ್ವಲ್ಪ ಭಾಗ ಸಿಮೆಂಟ್ ಸೇರಿಸಿ  ಯಂತ್ರದ ಸಹಾಯದಿಂದ 15 ಟನ್ ಭಾರದ ಒತ್ತಡದಿಂದ ಒತ್ತಿ  ಬೇಕಾದ ಆಕಾರದ ವಿವಿಧ ಮಾದರಿಯ ಇಟ್ಟಿಗೆಗಳನ್ನು ತಯಾರಿಸುತ್ತಿದ್ದಾರೆ.  ಈ ಹೊಸ ತಂತ್ರಜ್ಞಾನವನ್ನು (CSEB)  ಮೊದಲ ಬಾರಿಗೆ ಪರಿಚಯಿಸಿದ್ದು ಕೊಲಂಬಿಯಾ ದೇಶದ ರಾವೂಲ್ ರೆಮಿರೆಜ್.  ಪುದುಚೇರಿಯ  ಅರೋವಿಲ್ಲಾ ಅರ್ಥ್ ಸಂಸ್ಥೆಯು ಈ ತಂತ್ರಜ್ಞಾನ  ಜನಪ್ರಿಯಗೊಳಿಸಲು ಶ್ರಮಿಸುತ್ತಿದೆ. ಸಂಸ್ಥೆಯು ಇಟ್ಟಿಗೆ ತಯಾರಿಕೆಯ ಕಾರ್ಯಾಗಾರ ಏರ್ಪಡಿಸಿ ತರಬೇತಿ ನೀಡಿ ಆಸಕ್ತರಲ್ಲಿ ಈ ತಂತ್ರಜ್ಞಾನದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಫ್ರಾನ್ಸ್, ಬ್ರೆಜಿಲ್, ಮೆಕ್ಸಿಕೊ, ಕೊಲಂಬಿಯಾ ದೇಶಗಳಲ್ಲಿಯೂ  ಈ ಇಟ್ಟಿಗೆಗಳನ್ನು ಬಳಸುತ್ತಿದ್ದಾರೆ. 

ಪುದುಚೇರಿ, ಕೇರಳ, ಮಹಾರಾಷ್ಟ್ರ ಸೇರಿದಂತೆ ರಾಜ್ಯದಲ್ಲಿಯೂ ಈ ಇಟ್ಟಿಗೆಗಳ ಬಳಕೆ ಜನಪ್ರಿಯಗೊಳ್ಳುತ್ತಿದೆ.ಮನೆ ಕಟ್ಟಲು ಬೆಂಕಿಯಲ್ಲಿ ಬೇಯಿಸಿದ ಇಟ್ಟಿಗೆಗಳನ್ನು (Country fired Bricks or Table Moulded Bricks)  ಸಾಮಾನ್ಯವಾಗಿ ಎಲ್ಲೆಡೆ ಬಳಸುತ್ತಾರೆ.  ಇದರಿಂದ ಪರಿಸರ ಮಾಲಿನ್ಯ ಮತ್ತು ಅರಣ್ಯ ನಾಶವಾಗುತ್ತದೆ.ಆದರೆ `ಸಿಎಸ್‌ಇಬಿ~ ತಂತ್ರಜ್ಞಾನದಲ್ಲಿ ಇಟ್ಟಿಗೆಗಳನ್ನು ಬೆಂಕಿಯಲ್ಲಿ ಬೇಯಿಸುವುದಿಲ್ಲ. ಇದರ ಬೆಲೆಯೂ ಕಡಿಮೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಇದನ್ನು ತಯಾರಿಸುತ್ತಾರೆ. ಇದಕ್ಕೆ ನುರಿತ ಕಾರ್ಮಿಕರೂ ಬೇಡ.ಮನೆ ಕಟ್ಟುವ ಜಾಗದಲ್ಲಿಯೇ ಈ ಇಟ್ಟಿಗೆಗಳನ್ನು ತಯಾರು ಮಾಡಿಕೊಡುತ್ತಾರೆ. ಇದರಿಂದ ಸಾಗಾಣಿಕೆ ವೆಚ್ಚ, ಇಂಧನ ಉಳಿಯುತ್ತದೆ. ಸ್ಥಳೀಯವಾಗಿ ಉದ್ಯೋಗ ಅವಕಾಶಗಳೂ ದೊರೆಯುತ್ತವೆ.ಇಂತಹ ಇಟ್ಟಿಗೆಗಳು ಅತ್ಯಂತ ದೃಢವಾದ ಮತ್ತು ಗುಣಮಟ್ಟದಿಂದ ಕೂಡಿವೆ ಎಂದು 50 ವರ್ಷದಿಂದಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೃಢೀಕರಿಸಲಾಗಿದೆ.ಈ ಇಟ್ಟಿಗೆಗಳನ್ನು ಬಳಸಿ ಮನೆ ಕಟ್ಟುವಾಗ ಉಪಯೋಗಿಸುವ ಸಿಮೆಂಟ್ ಪ್ರಮಾಣ ಶೇ 8 ರಷ್ಟು ಮಾತ್ರ.  ಮರಳು ಶೇ 21ಕ್ಕಿಂತ ಕಡಿಮೆ. ಆದರೆ, ಸಾಂಪ್ರದಾಯಿಕ ಇಟ್ಟಿಗೆಗಳಿಗೆ ಶೇ 17ರಷ್ಟು ಸಿಮೆಂಟ್ ಖರ್ಚಾಗುತ್ತದೆ. ಅಡಿಪಾಯ ಕಟ್ಟುವಾಗಲೇ ಇದನ್ನು ಬಳಕೆ ಮಾಡುವುದರಿಂದ ಕಲ್ಲು, ಸಿಮೆಂಟ್ ಮರಳಿನಲ್ಲಿ ಉಳಿತಾಯವಾಗುತ್ತದೆ.ಮನೆ ಕಟ್ಟುವ ವೆಚ್ಚದಲ್ಲಿ ಶೇ 30ರಷ್ಟು ಖರ್ಚು ಕಡಿಮೆಯಾಗುತ್ತದೆ.  1500 ಚದರ ಅಡಿ ಮನೆಯನ್ನು ಕೇವಲ 30 ದಿವಸದಲ್ಲಿ ಕಟ್ಟಬಹುದು.  ಪ್ಲ್ಯಾಸ್ಟರಿಂಗ್ ಬೇಡ. ಪೇಂಟ್ ಹಚ್ಚುವ ರಗಳೆಯೂ ಬೇಡ.ಇತ್ತೀಚಿಗೆ `ಹುಡ್ಕೊ~ ಸಂಸ್ಥೆಯೂ ಇಂತಹ ಇಟ್ಟಿಗೆಗಳಿಂದ ಕಟ್ಟಿದ ಮನೆಗಳ ಅನುಕೂಲತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಇದೆ.ನಿವೇದಿತಾ ಅವರು ಮಲೆನಾಡಿನ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಈ ಇಟ್ಟಿಗೆಗಳ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುತ್ತಾ ಇದ್ದಾರೆ.ಈ ಇಟ್ಟಿಗೆ ಬಳಸಿ ಕಾಫಿ, ಮೆಣಸು, ಅಡಿಕೆ ಇತರೆ ಕೃಷಿ ಉತ್ಪನಗಳನ್ನು ಸಂಗ್ರಹಿಸಿಡಲು ಗೋದಾಮುಗಳನ್ನು ಕಟ್ಟಿಸಬಹುದು. ಹಾಗೆಯೇ ಕಾರ್ಮಿಕರ ವಸತಿಗೃಹ, ಹೋಂ ಸ್ಟೇ ಮುಂತಾದವುಗಳನ್ನು ಕಡಿಮೆ ವೆಚ್ಚದಲ್ಲಿ ಕಟ್ಟಬಹುದು.  ಮುಂಬರುವ ದಿನಗಳಲ್ಲಿ  ನಿವೇದಿತಾ ಅವರು ತಮ್ಮ ಇನ್ನೊಂದು ಕನಸನ್ನು ಕಾರ್ಯಗತಗೊಳಿಸಲು ಮುಂದಾಗಲಿದ್ದಾರೆ.   ನೂರಾರು ವಿನ್ಯಾಸ (ಡಿಸೈನ್) ಇರುವ ಮನೆಗಳ ಚಿತ್ರ ಇರುವ ಪುಸ್ತಕ ಹೊರ ತರಲಿದ್ದಾರೆ. ಸ್ವಂತ ಮನೆಯ ಕನಸು ನನಸು ಮಾಡಿಕೊಳ್ಳಲು ಹೊರಟವರು ತಮಗೆ  ಇಷ್ಟವಾದ ಚಿತ್ರವನ್ನು  ಆಯ್ಕೆ ಮಾಡಿದರೆ, ಅದಕ್ಕೆ ತಗುಲುವ ವೆಚ್ಚದ ವಿವರಗಳನ್ನು ನಿವೇದಿತಾ ನೀಡುತ್ತಾರೆ. ಮನೆ  ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಅವರೇ ನಿಭಾಯಿಸುತ್ತಾರೆ.ಕೃಷಿ ಜೊತೆಗೆ ಇಟ್ಟಿಗೆ ತಯಾರಿಕೆ ಉದ್ಯಮವನ್ನು ಪ್ರೀತಿಸುವ ನಿವೇದಿತಾ, ಕಡಿಮೆ ವೆಚ್ಚದ ಮನೆಗಳು ಬಡವರು, ಕಡಿಮೆ ಆದಾಯ ಹೊಂದಿದವರ ಅವಶ್ಯಕತೆಗಳನ್ನೆಲ್ಲ ಪೂರೈಸುತ್ತವೆ ಎಂದು ಹೇಳುತ್ತಾರೆ.ಇಂದು ಕೆಲವರಿಗೆ `ಪರಿಸರ ಸ್ನೇಹಿ~ ವಸ್ತುಗಳನ್ನು ಬಳಸುವುದು ಫ್ಯಾಷನ್  ಆಗಿದೆ. ಆದರೆ, ಮುಂಬರುವ ದಿನಗಳಲ್ಲಿ ಇದು ಫ್ಯಾಷನ್ ಆಗಿ ಉಳಿಯುವುಲ್ಲ. ಅದು ಜೀವನದ ಅವಶ್ಯಕತೆ ಆಗುತ್ತದೆ ಎಂದೂ ನಿವೇದಿತಾ ಹೇಳುತ್ತಾರೆ.    ಮಾಹಿತಿಗೆ   ಸಂಪರ್ಕಿಸಿ 94825 81220,e-mail: nivnig@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry