ಸೋಮವಾರ, ಜೂನ್ 14, 2021
24 °C
ಚಿತ್ರ: ರಂಗನ್ ಸ್ಟೈಲ್

ಹೊಸ ತಲೆಮಾರಿಗೆ ಮತ್ತೊಂದು ಪ್ರೇಮಕಥೆ

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

ನಿರ್ಮಾಣ: ಆರೇಂಜ್‌ ಬ್ರದರ್ಸ್‌

ನಿರ್ದೇಶನ: ಎಸ್. ಪ್ರಶಾಂತ್

ತಾರಾಗಣ: ಪ್ರದೀಪ್, ಕನ್ನಿಕಾ ತಿವಾರಿ, ತಬಲಾ ನಾಣಿ, ಸಾಧುಕೋಕಿಲ, ಶರತ್‌ ಲೋಹಿತಾಶ್ವ, ಸುದೀಪ್, ಮತ್ತಿತರರು
ಹುಡುಗನೊಬ್ಬನ ದುರಂತ ಪ್ರೇಮಕಥೆಯನ್ನು ನಿರ್ದೇಶಕ ಎಸ್‌. ಪ್ರಶಾಂತ್ ಯುವ ತಲೆಮಾರನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾದಲ್ಲಿ ಹೇಳಿದ್ದಾರೆ. ಎಲ್ಲ ಕಾಲದ ಯುವಜನಾಂಗಕ್ಕೆ ಇಷ್ಟವಾಗುವ ಪ್ರೇಮ ಇದರ ವಸ್ತು. ‘ಹಳೆ ಕಬ್ಣ ಹಳೆ ಪಾತ್ರೆ’ ಎಂಬಂತೆ ಅದೇ ಹಳೆಯ ರೀತಿಯಲ್ಲಿ ಕಥೆ ಸಾಗುತ್ತದೆ.ಪ್ರೀತಿ, ಪ್ರೇಮ ಎಂದರೆ ಮಾರು ದೂರ ಹಾರುವ ಹುಡುಗನೊಬ್ಬ ಅಚಾನಕ್ ಆಗಿ ಹುಡುಗಿಯೊಬ್ಬಳಿಗೆ ಮಾರು ಹೋಗುತ್ತಾನೆ. ಮುಂದಿನದೆಲ್ಲ ನಿರೀಕ್ಷಿತ. ದುಡ್ಡಿದ್ದ ದೊಡ್ಡವರ ಮನೆಯ ಹುಡುಗಿ, ಅನಾಥ ಹುಡುಗ ಇದ್ದ ಮೇಲೆ ಏನೇನು ಆಗಬೇಕೋ ಅದೆಲ್ಲ ಆಗುತ್ತದೆ. ಎಂದಿನಂತೆ ಹುಡುಗಿಯ ದೊಡ್ಡಪ್ಪನೇ ಈ ಪ್ರೇಮಿಗಳ ವಿಲನ್.  ಇವರ ಪ್ರೇಮ ಅವನಿಗೆ ಗೊತ್ತಾದ ಮೇಲೆ ಪ್ರೇಮಿಗಳು ತಪ್ಪಿಸಿಕೊಳ್ಳುವುದು, ಅವರ ಬೆನ್ನಟ್ಟುವಿಕೆ, ಕೊನೆಯಲ್ಲಿ ಸುಖಾಂತ್ಯವಾಗುತ್ತದೆ ಎನ್ನುವಷ್ಟರಲ್ಲಿ ಬೇರೇನೊ ತಿರುವು ತೆಗೆದುಕೊಳ್ಳುವುದು ಇವೆಲ್ಲ ಆಗುತ್ತವೆ. ಈ ಹಿಂದೆ ಬಂದಿರುವ, ಮುಂದೂ ಬರಲಿರುವ ಇಂಥ ಕಥೆಯನ್ನು ಲವಲವಿಕೆಯಿಂದ ಹೇಳಲು ನಿರ್ದೇಶಕರು ಯತ್ನಿಸಿದ್ದಾರೆ. ಅದೇ ಇದರ ಆಕರ್ಷಕ ಹಾಗೂ ಮುಖ್ಯ ಗುಣ. ಅದಕ್ಕೆ ಕಾರಣವೂ ಇದೆ.ಪಂಚ್ ಇರುವ ಸಂಭಾಷಣೆಗಳನ್ನು ಬರೆದಿರುವ ಮಂಜು ಮಾಂಡವ್ಯ ಇದಕ್ಕೆ ಕೊಂಚ ಜೀವ ತುಂಬಲು ಪ್ರಯತ್ನಿಸಿದ್ದಾರೆ. ಜೊತೆಗೆ ಸಿನಿಮಾದ ನಾಯಕ ಪ್ರದೀಪ್, ನಾಯಕಿ ಕನ್ನಿಕಾರ ಜೋಡಿ ಸಿನಿಮಾವನ್ನು ಕಥೆಯ ಹೊರತಾಗಿ ತಮ್ಮ ಅಭಿನಯದಿಂದ ಮೇಲಕ್ಕೆ ಎತ್ತಿದೆ. ಅವರೇ ಇದರ ಪ್ಲಸ್‌ ಪಾಯಿಂಟ್ ಕೂಡ.ಸಿನಿಮಾದಲ್ಲಂತೂ ಸರ್ವವ್ಯಾಪಿಯಾಗಿರುವ ಪ್ರೇಮದ ಕಥೆಯನ್ನು ಹುಡುಗರು ಮೆಚ್ಚುವಂತೆ ಹೇಳಲು ಅದಕ್ಕೊಂದು ತೀವ್ರತೆ ಬೇಕಾಗುತ್ತದೆ; ನಿರೂಪಣೆಗೆ ಹಲವು ದಾರಿಗಳನ್ನು ಹುಡುಕಬೇಕಾಗುತ್ತದೆ. ಅಂಥ ಅವಕಾಶವಿದ್ದೂ ನಿರ್ದೇಶಕರಿಗೆ ಅದನ್ನು ಮಾಡಲು ಸಾಧ್ಯವಾಗಿಲ್ಲ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪರಸ್ಪರ ನೋಡಿರದ ಹುಡುಗಿಗೂ ನಾಯಕನಿಗೂ ಪರಿಚಯವಾಗಿರುತ್ತದೆ. ಆ ಪರಿಚಯ ಮಾತ್ರದಿಂದಲೇ ನಾಯಕನನ್ನು ಭೇಟಿಯಾಗಲು ಬರುವ ಆ ಹುಡುಗಿಗೂ ಅವನಿಗೂ ಸಂಬಂಧವಿದೆ ಎಂದು ನಾಯಕಿ ನಂಬುತ್ತಾಳೆ. ಈ ದೃಶ್ಯ ಮಾತ್ರ ಹಾಸ್ಯಾಸ್ಪದವಾಗಿದೆ. ಏಕೆಂದರೆ, ಫೇಸ್‌ಬುಕ್‌ನಲ್ಲಿ ಆದ ಪರಿಚಯದಿಂದಲೇ ಯಾರೂ ಯಾರನ್ನೂ ತಪ್ಪಾಗಿ ತಿಳಿಯುವ ಕಾಲ ಇದಲ್ಲ. ಇದರ ಹೊರತಾಗಿ ಸಡಿಲವಾಗಿ, ಜಾಲಿಯಾಗಿ, ತಮಾಷೆಯಾಗಿ ಕಥೆಯನ್ನು ಹೇಳಿಕೊಂಡು ಹೋಗಿದ್ದಾರೆ ಎನ್ನುವುದನ್ನು ಬಿಟ್ಟರೆ ಇದರಲ್ಲಿ ಹೊಸದು ಅನ್ನುವಂಥದ್ದು ಏನಿಲ್ಲ.ಹೊಸ ನಾಯಕ ಪ್ರದೀಪ್‌ಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ನಾಯಕ ಸುದೀಪ್ ಇದರಲ್ಲಿ ನಟಿಸಿದ್ದಾರೆ. ಪೊಲೀಸ್‌ ಅಧಿಕಾರಿಯಾಗಿ ಮುಖದ ಮೇಲೆ ಇಳಿಬೀಳುವ ತಲೆಗೂದಲು, ಗಡ್ಡ ಬಿಟ್ಟುಕೊಂಡು ತಮ್ಮ ಗಡಸು ಕಂಠದಿಂದ ತಮ್ಮ ಇಮೇಜ್‌ಗೆ ತಕ್ಕುದಾದ ನಾಲ್ಕಾರು ಸಂಭಾಷಣೆಗಳನ್ನು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.