ಹೊಸ ದಿಗಂತ!

7

ಹೊಸ ದಿಗಂತ!

Published:
Updated:

ಉಡಾಫೆ ಪಾತ್ರಗಳಿಗೆ ಹೇಳಿಮಾಡಿಸಿದಂತಿರುವ ನಟ ದಿಗಂತ್‌ಗೆ ಸಿಕ್ಕುತ್ತಿರುವ ಪಾತ್ರಗಳ ಬಗ್ಗೆ ಏಕತಾನತೆ ಕಾಡುತ್ತಿದೆಯಂತೆ. ಹಾಗಾಗಿ ಅವರೀಗ ಅಂತಹ ಪಾತ್ರಗಳಿಗೆ ಬೆನ್ನುಮಾಡಿ ಹೊಸ ಪಾತ್ರಗಳಿಗೆ ಒಡ್ಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ತಮಗಂಟಿರುವ ಇಮೇಜ್‌ನಿಂದ ಹೊರಬರುವ ತವಕದಲ್ಲಿದ್ದಾರೆ.ದೂದ್‌ಪೇಡಾ ದಿಗಂತ್ ವರ್ಷಾಂತ್ಯದಲ್ಲಿ ಆ್ಯಕ್ಷನ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ಅವರು ತುಂಬಾ ಥ್ರಿಲ್ ಆಗಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಆದ್ದರಿಂದ ಈಗಿನಿಂದಲೇ ಸಾಕಷ್ಟು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಜತೆಗೆ ಜೂನ್‌ನಿಂದ ಇವರ ಎರಡು ಚಿತ್ರಗಳ ಚಿತ್ರೀಕರಣ ಶುರುವಾಗಲಿದೆಯಂತೆ. ಇವರು ನಟಿಸುತ್ತಿರುವ ಚಿತ್ರವೊಂದಕ್ಕೆ ರಮ್ಯಾ ನಾಯಕಿ. ದಿಗಂತ್ ಜತೆ ಅವರು ನಟಿಸುತ್ತಿರುವ ಎರಡನೇ ಚಿತ್ರ ಇದು. ಈ ಹಿಂದೆ ಇವರಿಬ್ಬರು ಟಿ.ಎನ್.ಸೀತಾರಾಮ್ ನಿರ್ದೇಶನದ `ಮೀರಾ ಮಾಧವ ರಾಘವ~ ಚಿತ್ರದಲ್ಲಿ ನಟಿಸಿದ್ದರು. `ರಮ್ಯಾ ಅವರು ಒಳ್ಳೆ ನಟಿ. ಅವರೊಂದಿಗೆ ನಟಿಸುವುದು ತುಂಬಾ ಖುಷಿ ತಂದಿದೆ~ ಎನ್ನುವುದು ದಿಗಂತ್ ಮಾತು.ದಿಗಂತ್ ಅವರ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವವರು ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ. ಭಾರತೀಯ ಪುರಾಣದ ಹಿನ್ನೆಲೆಯನ್ನಿಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಚಿತ್ರೀಕರಣ ಜೂನ್‌ನಿಂದ ಪ್ರಾರಂಭಗೊಳ್ಳಲಿದೆಯಂತೆ. ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ದಿಗಂತ್‌ಗೆ ತಮ್ಮ ಚಿತ್ರ ಬದುಕಿಗೆ ಒಂದೊಳ್ಳೆ ಬ್ರೇಕ್ ನೀಡುತ್ತದೆ ಎಂಬ ವಿಶ್ವಾಸವಿದೆ.ಅವರಿಗೆ ಬೈಕ್‌ಗಳೆಂದರೆ ತುಂಬಾ ಇಷ್ಟವಂತೆ. `ಹಿಂದೆಲ್ಲಾ ನನ್ನ ಬಳಿ ಸಾಕಷ್ಟು ಬೈಕ್‌ಗಳಿದ್ದವೂ, ಆದರೆ ಬೈಕ್ ತೆಗೆದುಕೊಂಡು ರೋಡಿಗಿಳಿದರೆ ಅಭಿಮಾನಿಗಳೆಲ್ಲಾ ಮುತ್ತಿಕೊಳ್ಳುತ್ತಿದ್ದರು. ರೋಡ್‌ನಲ್ಲಿ ಸುಖಾಸುಮ್ಮನೆ ನ್ಯೂಸೆನ್ಸ್ ಕ್ರಿಯೇಟ್ ಮಾಡೋದು ಬೇಡ ಅಂತ ಹೇಳಿ ಈಗ ಕಾರಿನೊಳಗೆ ಮೈತೂರಿಸಿಕೊಂಡು ನಗರ ಸುತ್ತುತ್ತೇನೆ.ಪೆಟ್ರೋಲ್ ಬೆಲೆ ಏರಿಕೆ ಬಿಸಿ ಸಿನಿಮಾದವರಿಗೂ ತಟ್ಟಿದೆ. ಚಿತ್ರೀಕರಣಕ್ಕೆಂದು ಬಳಸುವ ವಾಹನಗಳಿಗೆ ಪೆಟ್ರೋಲ್ ತುಂಬಿಸುವುದು ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಸುರಿದಂತಾಗಿದೆ. ಸೆಟ್‌ನಲ್ಲಿ ಕೆಲಸ ಮಾಡುವ ಹುಡುಗರಿಗೆ ಬೆಲೆ ಏರಿಕೆ ಬಿಸಿ ಸ್ವಲ್ಪ ಹೆಚ್ಚಾಗಿ ತಟ್ಟಿದೆ~ ಎನ್ನುತ್ತಾರವರು.ದಿನ ನಿತ್ಯ ಒಂದು ಗಂಟೆ ಜಿಮ್‌ನಲ್ಲಿ ಮೈ ಬೆವರಿಳಿಸುವ ದಿಗಂತ್‌ಗೆ ಬಿಡುವಿನ ವೇಳೆಯಲ್ಲಿ ಬ್ಯಾಡ್‌ಮಿಂಟನ್ ಆಡುವುದೆಂದರೆ ತುಂಬಾ ಇಷ್ಟ. ಇದೇ ತಮ್ಮ ಮೈಕಟ್ಟಿನ ಗುಟ್ಟು ಎನ್ನುವ ಅವರು ಊಟ-ತಿಂಡಿ ವಿಷಯದಲ್ಲಿ ಮಾತ್ರ ಬಾಯಿಕಟ್ಟುವುದಿಲ್ಲವಂತೆ. `ಇದುವರೆಗೂ ಸಾಕಷ್ಟು ಹುಡುಗಿಯರು ಅವರನ್ನು ಪ್ರಫೋಸ್ ಮಾಡಿದ್ದಾರೆ. ಆ ಸಂದರ್ಭಗಳು ಅವರಿಗೆ ಹೆಚ್ಚು ಖುಷಿ ಕೊಟ್ಟಿವೆಯಂತೆ. `ಒಬ್ಬ ನಟನಾಗಿ ಹುಡುಗಿಯರ ಹೃದಯದಲ್ಲಿ ನಾನು ಮನೆ ಮಾಡಿಕೊಂಡಿದ್ದೇನೆ ಎಂದು ನೆನೆದಾಗಲೆಲ್ಲಾ ನನ್ನಲ್ಲಿ ಪುಳಕ ಉಂಟಾಗುತ್ತದೆ. ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸಿದಾಗ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸೋಮಾರಿತನವೇ ಮೈವೆತ್ತಂತೆ ಇರುವ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದರೂ ನಿಜ ಜೀವನದಲ್ಲಿ ನಾನು ಗಂಭೀರ~ ಎನ್ನುತ್ತಾ ದಿಗಂತ್ ನಕ್ಕಾಗ ಕೆನ್ನೆ ಮೇಲೆ ಗುಳಿ ಮೂಡಿತು.ಜಪಾನ್ ಮೂಲದ ಸಿಟಿಜನ್ ವಾಚ್ ಕಂಪೆನಿಯ ಅಂಗ ಸಂಸ್ಥೆಯಾದ ಜಪಾನ್ ಸಿಬಿಎಂ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್ ಯುವ ಜನತೆಗೆ ಇಷ್ಟವಾಗುವಂತಹ ಆಕರ್ಷಕ ವಿನ್ಯಾಸದ `ಕ್ಯೂ ಅಂಡ್ ಕ್ಯೂ~ ಶ್ರೇಣಿಯ ವಾಚುಗಳನ್ನು ಹೊರತಂದಿದೆ. ನಟ ದಿಗಂತ್ ಈ ಸಂಗ್ರಹವನ್ನು ಬಿಡುಗಡೆ ಮಾಡಿದರು.ಕ್ಯೂ ಅಂಡ್ ಕ್ಯೂ ವಾಚ್‌ಗಳು ಯುವ ಜನರಿಗೆ ಇಷ್ಟವಾಗುತ್ತವೆ. 3500ಕ್ಕೂ ಅಧಿಕ ವಿನ್ಯಾಸದಲ್ಲಿ ಲಭ್ಯವಿರುವ ಈ ಬ್ರಾಂಡೆಡ್ ವಾಚುಗಳು ಎಲ್ಲರ ಕೈಗೆಟುಕುವಂತಿವೆ. `ನನಗಂತೂ ಈ ವಾಚ್ ತುಂಬಾ ಇಷ್ಟವಾಯಿತು~ ಎನ್ನುತ್ತಾ ಕೈನಲ್ಲಿದ್ದ ವಾಚ್‌ಗೆ ಮುತ್ತಿಕ್ಕಿದರು ದಿಗಂತ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry