ಗುರುವಾರ , ಏಪ್ರಿಲ್ 22, 2021
29 °C

ಹೊಸ ನಕ್ಷತ್ರದ ಸಮಸ್ಯೆ

ಬಿ.ಎಸ್. ಶೈಲಜಾ Updated:

ಅಕ್ಷರ ಗಾತ್ರ : | |

ವೃಷಭ ರಾಶಿಯ ಒಂದು ನಕ್ಷತ್ರ ವಿಶಿಷ್ಟಪೂರ್ಣವಾಗಿದೆ ಎಂಬುದನ್ನು 1852ರಲ್ಲಿ ಜಾನ್ ರಸೆಲ್ ಹಿಂದ್ ಎಂಬ ವಿಜ್ಞಾನಿ ಗಮನಿಸಿದ್ದನಾದರೂ ಅದರ ವೈಶಿಷ್ಟ್ಯವನ್ನು ಬರ್ನ್‌ಹ್ಯಾಂ ಎಂಬ ವೀಕ್ಷಕ 1890ರಲ್ಲಿ ನಿಖರವಾಗಿ ವರದಿ ಮಾಡಿದ. ಆ ನಕ್ಷತ್ರಕ್ಕೆ ಸ್ವಲ್ಪ ದೂರದಲ್ಲಿ ಹತ್ತಿಯಂತಹ ರಚನೆ ಕಂಡುಬಂದಿತ್ತು. ಅದರ ವೈಶಿಷ್ಟ್ಯ ಏನು ಎಂದು ತಿಳಿದಿರಲಿಲ್ಲ.ಹತ್ತಿರದ ನಕ್ಷತ್ರವೊಂದರ ಬೆಳಕನ್ನು ಹೀರಿಕೊಂಡು ಉತ್ಸರ್ಜಿಸುತ್ತಿರುವ ನೆಬ್ಯುಲಾ (ಎಮಿಷನ್ ನೆಬ್ಯುಲಾ) ಎಂದು ಭಾವಿಸಲಾಗಿತ್ತು. ಆ ನಕ್ಷತ್ರಕ್ಕೆ ಚಂಚಲ ನಕ್ಷತ್ರಗಳ ಪಟ್ಟಿಯಲ್ಲಿ ‘ಟಿ - ಟೌರಿ’ (ವೃಷಭ ರಾಶಿಯಲ್ಲಿ ಗುರುತಿಸಲಾದ ಐದನೆಯ ಚಂಚಲ ನಕ್ಷತ್ರ) ಎಂಬ ಹೆಸರಿದೆ. ಇದರ ಪಕ್ಕದಲ್ಲಿಯೇ ಕಾಣುವ ನೆಬ್ಯುಲಾಕ್ಕೆ ಹಿಂದ್ ನೆಬ್ಯುಲಾ ಎಂದೇ ಹೆಸರು. ಇದರ ಆಚೆಗೆ ಇನ್ನೂ ಒಂದು ನೆಬ್ಯುಲಾ ಇದೆ.

ಅದೇ ಬರ್ನ್‌ಹಾಂ ನೆಬ್ಯುಲಾ. ಇದಲ್ಲದೆ ಹೊಸ ನಕ್ಷತ್ರಗಳ ಉಗಮದ ಸುಳಿವಾಗಿ ಕಾಣುವ ಚಿಲುಮೆಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಇದು ಹರ್ಬಿಗ್ ಮತ್ತು ಹ್ಯಾರೋ ತಯಾರಿಸಿದ ಪಟ್ಟಿಯಲ್ಲಿ 255ನೆಯ ನಮೂದು.  ನಮ್ಮಿಂದ ಸುಮಾರು 460 ಜ್ಯೋತಿರ್ವರ್ಷ ದೂರದಲ್ಲಿರುವ ‘ಟಿ ಟೌರಿ’ ಎಂಬ ಹೆಸರಿನ ಈ ನಕ್ಷತ್ರದ ಸುತ್ತ ವೈವಿಧ್ಯಮಯ ನೆಬ್ಯುಲಾಗಳು ಕಾಣುತ್ತಿವೆ. ಅದು ಆಗಿದ್ದಾಂಗೆ ಬೆಳಕಿನಲ್ಲಿ ವ್ಯತ್ಯಾಸವನ್ನು ತೋರಿಸುತ್ತಿದ್ದುದರಿಂದ ಚಂಚಲ ನಕ್ಷತ್ರ ಎನ್ನಿಸಿಕೊಂಡಿತು. ದೊಡ್ಡ ದೂರದರ್ಶಕಗಳ ಮೂಲಕ ವೀಕ್ಷಿಸಿದಾಗ ಇದಕ್ಕೊಂದು ಸಂಗಾತಿ ಇರುವುದು ಕಂಡುಬಂದಿತು. ಇವೆರಡನ್ನೂ ಈಗ ಎನ್ (ಉತ್ತರ) ಮತ್ತು ಎಸ್ (ದಕ್ಷಿಣ) ಎಂಬ ಉಪಾಧಿಗಳಿಂದ ಗುರುತಿಸಲಾಗುತ್ತಿದೆ.ಈಚೆಗೆ ನೆಬ್ಯುಲಾದಂತೆ ಕಾಣುವ ಚಿಲುಮೆಯ ಅಧ್ಯಯನ ಪ್ರಕಟವಾಯಿತು. ಸೆಕೆಂಡಿಗೆ 90 ಕಿಮೀ ವೇಗದಲ್ಲಿ ವಸ್ತು ಚಿಮ್ಮುತ್ತಿದೆ ಎಂದು ತಿಳಿಯಿತು. ಇಲ್ಲಿ ಆಘಾತ ತರಂಗಗಳ ಪಾತ್ರ ಬಹಳ ಹಿರಿದು ಎಂದೂ ತಿಳಿಯಿತು. ನಕ್ಷತ್ರದ ದಕ್ಷಿಣಭಾಗದಲ್ಲಿ ಬಹುಶಃ ಯಮಳದ ಗುರುತ್ವ ಕೇಂದ್ರವಿರಬಹುದು. ಅಲ್ಲಿ ಹೈಡ್ರೋಜನ್ ಅನಿಲದ ವೇಗವನ್ನು ಅಳೆದು ಅದು ಅತಿ ಕಡಿಮೆ (ಸೆಕೆಂಡಿಗೆ ಸುಮಾರು 25 ಕಿಮೀ ಮಾತ್ರ!) ಎಂದು ತಿಳಿಯಲಾಗಿದೆ. ಇದರ ಸುತ್ತ ಬಹುಶಃ ಆಕ್ಸಿಜನ್ ಮತ್ತು ನೈಟ್ರೋಜನ್ ಅನಿಲಗಳ ಅಯಾಣುಗಳು ಹರಡಿವೆ. ಅವು ಬಹಳ ವೇಗದಿಂದ ಹೊರಕ್ಕೆ ಚಿಮ್ಮುತ್ತಿವೆ. ಆಘಾತ ತರಂಗಗಳ ಚಲನೆಯನ್ನು ಗುರುತಿಸುವುದು ಸಾಧ್ಯವಾಗಿದೆ.ಅಳತೆ ಮಾಡಿದ ವೇಗದ ಆಧಾರದ ಮೇಲೆ ಲೆಕ್ಕ ಹಾಕಿದ್ದಕ್ಕಿಂತ ಸುಮಾರು 100 ಪಟ್ಟು ಹೆಚ್ಚು ವಿಸ್ತಾರವಾಗಿ ನೆಬ್ಯುಲಾ ಹರಡಿರುವುದಕ್ಕೆ ಕಾರಣ ಇನ್ನೂ ಗೊತ್ತಿಲ್ಲ.ಈ ನಕ್ಷತ್ರ ಜೋಡಿಯ ಚಲನೆಯನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುತ್ತಿರುವವರಿಗೆ ಮೂರನೆಯದೊಂದು ನಕ್ಷತ್ರವೂ ಇರಬಹುದು. ಅಂದರೆ ಇದು ತ್ರಿವಳಿ ಇರಬಹುದು ಎಂಬ ಅನುಮಾನವೂ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.