ಹೊಸ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ:ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಸದಸ್ಯರ ಅಸಮಾಧಾನ

7

ಹೊಸ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ:ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಸದಸ್ಯರ ಅಸಮಾಧಾನ

Published:
Updated:

ಹುಬ್ಬಳ್ಳಿ: `ನಗರದ ನವೀಕೃತ ರೈಲು ನಿಲ್ದಾಣವನ್ನು ಏಷ್ಯಾದಲ್ಲೇ ಆಧುನಿಕ ರೈಲು ನಿಲ್ದಾಣ ಎಂದು ಹೇಳಲಾಗುತ್ತಿದೆ. ಆದರೆ ನಿಲ್ದಾಣದ ಯಾವ ಪ್ಲಾಟ್‌ಫಾರ್ಮ್‌ನಲ್ಲೂ ಕುಡಿಯುವ ನೀರಿಲ್ಲ~ ಎಂದು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಹಾಗೂ ಕೆಸಿಸಿಐ ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ ಅಸಮಾಧಾನ ವ್ಯಕ್ತಪಡಿಸಿದರು.ರೈಲ್ವೆ ಅಧಿಕಾರಿಗಳ ಕ್ಲಬ್‌ನಲ್ಲಿ ಮಂಗಳವಾರ ನಡೆದ ರೈಲ್ವೆ ಬಳಕೆದಾರರ 21ನೇ ಸಲಹಾ ಸಮಿತಿ ಸಭೆಯಲ್ಲಿ ಅವರು `ನಗರ ರೈಲು ನಿಲ್ದಾಣದಲ್ಲಿ ಖಾಸಗಿ ಮಿನರಲ್ ವಾಟರ್ ಬಾಟಲ್ ಹೆಜ್ಜೆಹೆಜ್ಜೆಗೂ ಸಿಗುತ್ತವೆ. ಆದರೆ ಎಲ್ಲರಿಗೂ ಬಾಟಲ್ ನೀರು ಕೊಳ್ಳುವ ಶಕ್ತಿ ಇರುವುದಿಲ್ಲ.ಪ್ಲಾಟ್‌ಫಾರ್ಮ್‌ಗಳಲ್ಲಿ ನೀರಿನ ಟ್ಯಾಂಕ್ ಇದ್ದರೂ ನೀರು ಪೂರೈಕೆ ಮಾಡಿಲ್ಲ, ಆ ಮೂಲಕ ಮಿನರಲ್ ನೀರು ಪೂರೈಕೆದಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೂಡಲೇ ನಿಲ್ದಾಣದ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಬೇಕು~ ಎಂದು ಆಗ್ರಹಿಸಿದರು.`ನವೀಕೃತ ನಿಲ್ದಾಣದಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಪ್ಲಾಟ್‌ಫಾರ್ಮ್ ಬದಲಾಯಿಸಲು ಯಾವುದೇ ಎವಿಲೇಟರ್ ಹಾಗೂ ಟ್ರಾಲಿ ಸೌಲಭ್ಯ ಮಾಡಿಲ್ಲ. ಎಲ್ಲರೂ ಎತ್ತರದ ಮೇಲುಸೇತುವೆ ಹತ್ತಿ, ಇಳಿಯಬೇಕು. ಇದರಿಂದ ಅಂಗವಿಕಲರು ಮತ್ತು ಹಿರಿಯ ನಾಗರಿಕರು ರೈಲು ನಿಲ್ದಾಣಕ್ಕೆ ಬರಲು ತೊಂದರೆಯಾಗುತ್ತಿದೆ. ಎವಿಲೇಟರ್ ಹಾಗೂ ಟ್ರಾಲಿ ನಿರ್ಮಾಣಕ್ಕೆ ಹಣದ ನಿಧಿ ಇದ್ದರೂ ಅದನ್ನು ಬಳಕೆ ಮಾಡದೆ ನವೀಕರಣ ಮಾಡಲಾಗಿದೆ.ಟ್ರಾಲಿ ಮತ್ತು ಎವಿಲೇಟರ್ ಇಲ್ಲದ ರೈಲು ನಿಲ್ದಾಣವನ್ನು ಹೇಗೆ ಏಷ್ಯಾದಲ್ಲೇ ಆಧುನಿಕ ವ್ಯವಸ್ಥೆಯುಳ್ಳ ರೈಲು ನಿಲ್ದಾಣ ಎಂದು ಕರೆಯಲು ಸಾಧ್ಯ~ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ವಲಯ ರೈಲ್ವೆ ವಲಯ ವ್ಯವಸ್ಥಾಪಕ ರಾಹುಲ್ ಜೈನ್ `ರೈಲ್ವೆ ನಿಲ್ದಾಣದ ಎಲ್ಲ ಪ್ಲಾಟ್‌ಫಾರ್ಮ್‌ಗಳಿಗೂ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.ಎವಿಲೇಟರ್  ಹಾಗೂ ಟ್ರಾಲಿ ನಿರ್ಮಾಣ ಕುರಿತಾದ ಸಲಹೆಯನ್ನು ರೈಲ್ವೆ ಮುಖ್ಯ ಕಚೇರಿ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.ಸಭೆಯಲ್ಲಿ ರೈಲ್ವೆ ವಲಯ ವಾಣಿಜ್ಯ ವ್ಯವಸ್ಥಾಪಕ ಎನ್.ಎಸ್. ಶ್ರೀಧರ್ ಮೂರ್ತಿ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಲಹಾ ಸಮಿತಿ ಸದಸ್ಯರು ಹಾಜರಿದ್ದರು.`ನಿಲ್ದಾಣದ ಮುಂದಕ್ಕೆ ಬಸ್ ಬರಲಿ~

`ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬಹುದೂರದಲ್ಲಿ ಬಸ್ ನಿಲ್ಲುತ್ತಿದ್ದು, ಪ್ರಯಾಣಿಕರಿಗೆ ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಲು ತೊಂದರೆಯಾಗಿದೆ. ಸಿಟಿ ಬಸ್‌ಗಳು ನಿಲ್ದಾಣದ ಮುಂದಕ್ಕೆ ಬಂದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ~ ಎಂದು ವಿಶ್ವನಾಥ ಗಿಣಿಮಾವ ಸಲಹೆ ನೀಡಿದರು.  ರೈಲು ನಿಲ್ದಾಣದ ಮುಂಭಾಗದಲ್ಲಿ ಸಾಕಷ್ಟು ಜಾಗವಿದ್ದು, ಅಲ್ಲಿಗೆ ಬಸ್ ಬರುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಹೆಚ್ಚುತ್ತಿರುವ ಟಿಕೆಟ್ ರಹಿತ ಪ್ರಯಾಣ


`ನೈರುತ್ಯ ರೈಲ್ವೆ ವ್ಯಾಪ್ತಿಗೆ ಬರುವ ಕೊಪ್ಪಳ, ಬಳ್ಳಾರಿ, ಹೊಸಪೇಟೆ ಇನ್ನಿತರ ರೈಲು ನಿಲ್ದಾಣಗಳಲ್ಲಿ ರಾತ್ರಿಯ ವೇಳೆ ವಿದ್ಯುತ್ ಹೋದರೆ ಪ್ರಯಾಣಿಕರು ಕತ್ತಲೆಯಲ್ಲಿ ಕಳೆಯಬೇಕಾದ ಸ್ಥಿತಿ ಇದೆ. ಆ ಸಂದರ್ಭದಲ್ಲಿ ಟಿಕೆಟ್ ನೀಡಲು ಸಾಧ್ಯವಾಗದ ಕಾರಣ ಟಿಕೆಟ್ ತೆಗೆದುಕೊಳ್ಳದೆ ರೈಲು ಹತ್ತುವವರ ಸಂಖ್ಯೆ ಹೆಚ್ಚುತ್ತಿದೆ.ಕೊಪ್ಪಳ ರೈಲು ನಿಲ್ದಾಣದಲ್ಲಿ ಹಳೆಯ ಒಂದೇ ಒಂದು ಕಂಪ್ಯೂಟರ್ ಇದ್ದು, ಅದು ಕೈ ಕೊಟ್ಟರೆ ಟಿಕೆಟ್ ವಿತರಣಾ ಕಾರ್ಯ ಸ್ಥಗಿತಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿಯೂ   ಪ್ರಯಾಣಿಕರು ಟಿಕೆಟ್ ರಹಿತವಾಗಿ ಪ್ರಯಾಣ ಮಾಡುತ್ತಾರೆ~ ಎಂದು ಸಲಹಾ ಸಮಿತಿ ಸದಸ್ಯ ಹಾಗೂ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಸದಸ್ಯ ಮಹವೀರ ಮೆಹತಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry