ಹೊಸ ಪಕ್ಷ ಕಟ್ಟುವೆ: ಬಿಎಸ್‌ವೈ

7

ಹೊಸ ಪಕ್ಷ ಕಟ್ಟುವೆ: ಬಿಎಸ್‌ವೈ

Published:
Updated:
ಹೊಸ ಪಕ್ಷ ಕಟ್ಟುವೆ: ಬಿಎಸ್‌ವೈ

ಮುಗುಳುವಳ್ಳಿ (ಚಿಕ್ಕಮಗಳೂರು): `ಸ್ವಾಭಿಮಾನ ಮತ್ತು ಗೌರವಕ್ಕೆ ಧಕ್ಕೆಯಾಗಿರುವ ಪಕ್ಷದಲ್ಲಿ ಯಾವ ಕಾರಣಕ್ಕೆ ಇರಬೇಕು. ಬೇರೆ ಯಾವುದೇ ಪಕ್ಷದ ಜತೆಗೂ ಗುರುತಿಸಿಕೊಳ್ಳುವುದಿಲ್ಲ. ಕಟ್ಟಿದರೆ ಹೊಸ ಪಕ್ಷ ಕಟ್ಟುತ್ತೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಹೊಸ ಪಕ್ಷ ಸ್ಥಾಪನೆಯ ಸಾಧಕ-ಬಾಧಕ ಅರಿಯಲು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ಮುಗಿದ ಅಧ್ಯಾಯ. ನನ್ನ ಮೂಗಿಗೆ ತುಪ್ಪ ಹಚ್ಚಿದ್ದು ಸಾಕು. ಈಗಾಗಲೇ ಸಾಕಷ್ಟು ನಗೆಪಾಟಿಲಿಗೆ ಈಡುಮಾಡಿದ್ದೀರಿ. ಸಾಕಷ್ಟು ಇರುಸುಮುರುಸು ಮಾಡಿದ್ದೀರಿ. ಇನ್ನು ಯಾರನ್ನೂ ಭೇಟಿ ಮಾಡುವುದಿಲ್ಲವೆಂದು ಬೆಂಗಳೂರಿನಲ್ಲಿ ಮಾತುಕತೆಗೆ ಆಹ್ವಾನಿಸಿದ ಅರುಣ್ ಜೇಟ್ಲಿ ಅವರಿಗೆ ಸ್ವಷ್ಟವಾಗಿ ತಿಳಿಸಿದ್ದೇನೆ~ ಎಂದರು.`ಇನ್ನೇನಿದ್ದರೂ ರಾಜ್ಯದ ಜನತೆಯನ್ನು ಭೇಟಿಯಾಗುತ್ತೇನೆ. ಡಿಸೆಂಬರ್‌ವರೆಗೆ ರಾಜ್ಯ ಪ್ರವಾಸ ಮುಂದುವರಿಯಲಿದೆ. ಸದ್ಯದಲ್ಲೇ ಚಿಕ್ಕಮಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ, ಮನದಾಳದ ಭಾವನೆಗಳನ್ನು ಜನರ ಮುಂದಿಡುತ್ತೇನೆ. ಜನರ ಸಲಹೆ ಪಡೆದು, ನನ್ನ ಮುಂದಿನ ರಾಜಕೀಯ ನಡೆ ಪ್ರಕಟಿಸುತ್ತೇನೆ~ ಎಂದು ಹೇಳಿದರು.`ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದ್ದೇಕೆ ಎನ್ನುವ ಪ್ರಶ್ನೆಯನ್ನು ಈಗಲೂ ಬಿಜೆಪಿ ರಾಷ್ಟ್ರೀಯ ವರಿಷ್ಠರ ಮುಂದಿಡುತ್ತೇನೆ. ಅನಂತಕುಮಾರ್ ಷಡ್ಯಂತ್ರದಿಂದ ಪಕ್ಷದೊಳಗಿನವರೇ ಅಡ್ವಾಣಿ ಮನವೊಲಿಸಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಮೂರು ಬಾರಿ ಪ್ರಯತ್ನಿಸಿದರು. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಗಣಿ ವರದಿಯಲ್ಲಿ ನಾನು ತಪ್ಪಿತಸ್ಥನಾಗಿರಲಿಲ್ಲ.ಆದರೆ, ಗಣಿ ವರದಿಯನ್ನೇ ಮುಂದಿಟ್ಟುಕೊಂಡು ಅಧಿಕಾರ ಕಿತ್ತುಕೊಂಡರು. ಕೊಟ್ಟ ಮಾತಿನಂತೆ ಮತ್ತೆ ಮುಖ್ಯಮಂತ್ರಿಯನ್ನಾಗಿಸಲಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯನ್ನೂ ನೀಡಲಿಲ್ಲ. ದಿನಕ್ಕೊಂದು ಕೇಸು ಹಾಕಿಸಿ, ಕೋರ್ಟು ಅಲೆಯುವಂತೆ ಮಾಡಿದರು. ಮತ್ತೆಂದೂ ಬಿಜೆಪಿಯಿಂದ ಮುಖ್ಯಮಂತ್ರಿ ಅಥವಾ ಪಕ್ಷದ ರಾಜ್ಯ ಅಧ್ಯಕ್ಷನಾಗಲಾರೆ. ಸದ್ಯಕ್ಕೆ ನಾನು ಬಿಜೆಪಿ ಸಾಮಾನ್ಯ ಸದಸ್ಯ~ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

`ಈ ಸರ್ಕಾರ 5 ವರ್ಷ ಪೂರ್ಣಗೊಳಿಸುತ್ತದೆ.

 

ನಾನು ಈಗಲೇ ಹೊಸ ಪಕ್ಷ ಕಟ್ಟಿದರೂ ನನ್ನ ಬೆಂಬಲಿಗ ಸಚಿವರಿಗೆ ಸರ್ಕಾರದ ಅವಧಿ ಪೂರ್ಣಗೊಳ್ಳುವವರೆಗೆ ಪಕ್ಷ ತೊರೆಯದಂತೆ ವಿನಂತಿಸುತ್ತೇನೆ. ಕಾರ್ಯಕರ್ತರನ್ನು ನನ್ನೊಂದಿಗೆ ಬರುವಂತೆ ಒತ್ತಾಯಿಸುವುದಿಲ್ಲ. ರಾಜ್ಯದ ಜನರು ನನ್ನನ್ನು ನಂಬಿದ್ದಾರೆ. ಮಾದರಿ ರಾಜ್ಯ ನಿರ್ಮಿಸಲು ರಾಜಕೀಯ ಹೋರಾಟ ಮುಂದುವರಿಸುತ್ತೇನೆ~ ಎಂದರು.`ಯಡಿಯೂರಪ್ಪ ಹಣ, ಜಾತಿ ಬಲ ಪ್ರದರ್ಶಿಸಿ, ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಪಕ್ಷವನ್ನು ಇಂತಹ ಸ್ಥಿತಿಗೆ ತಂದರೆಂದು ಪಕ್ಷದ ರಾಜ್ಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಕಂಡಕಂಡಲ್ಲಿ ಹೇಳಿಕೊಂಡುಬಂದರು. ನಮ್ಮ ಪಕ್ಷದಲ್ಲಿ ಇಬ್ಬರೇ ಶಾಸಕರು ಇದ್ದಾಗಿನಿಂದಲೂ ಜನಸಂಘದಿಂದ ಪಕ್ಷ ಕಟ್ಟಿಕೊಂಡು ಬಂದಿದ್ದೇನೆ.ಯಡಿಯೂರಪ್ಪ ಬಲ ಇರದಿದ್ದರೆ ಈಗಲೂ ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಸರ್ಕಾರ ಇರುತ್ತಿತ್ತು. ಬಿಜೆಪಿ ಇನ್ನೂ 20 ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ~ ಎಂದು ಹರಿಹಾಯ್ದರು.

`ನನ್ನನ್ನು ದುರ್ಬಲಗೊಳಿಸಿ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ಪಕ್ಷದಲ್ಲಿ ನಡೆಯುತ್ತಿದೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ~ ಎಂದು ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದರು.ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದು ಶಿವಮೊಗ್ಗಕ್ಕೆ ತೆರಳುವ ಮಾರ್ಗಮಧ್ಯೆ ಚಿಕ್ಕಮಗಳೂರು ನಗರದಲ್ಲಿ ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳ ಮನೆಗಳಿಗೆ ಯಡಿಯೂರಪ್ಪ ಭೇಟಿ ನೀಡಿದರು.

ಮುಗುಳವಳ್ಳಿ ಗ್ರಾಮಕ್ಕೂ ಭೇಟಿ ನೀಡಿ ಗೌರಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿದರು.ಗ್ರಾಮದಲ್ಲಿ ಪಟಾಕಿ ಸಿಡಿಸಿ, ಯಡಿಯೂರಪ್ಪ ಅವರನ್ನು ದೇವಸ್ಥಾನದವರೆಗೂ ವಾದ್ಯ ಮೇಳದೊಂದಿಗೆ ಗ್ರಾಮಸ್ಥರು ಬೃಹತ್ ಮೆರವಣಿಗೆ ಮಾಡಿದರು. ರಾಜ್ಯ ಪ್ರವಾಸ ರದ್ದು

ಬೆಂಗಳೂರು:
ಕಾವೇರಿ ಚಳವಳಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸವನ್ನು ರದ್ದು ಮಾಡಿದ್ದಾರೆ.ಚಿಕ್ಕಮಗಳೂರು ಮತ್ತು ತರೀಕೆರೆ ಕಾರ್ಯಕ್ರಮ ಮುಗಿಸಿಕೊಂಡು ಅವರು ಬುಧವಾರ ಶಿವಮೊಗ್ಗಕ್ಕೆ ತೆರಳಬೇಕಿತ್ತು. ಕಾರ್ಯಕ್ರಮ ದಿಢೀರನೆ ರದ್ದು ಮಾಡಿ, ಅವರು ನಗರಕ್ಕೆ ವಾಪಸಾಗಿದ್ದಾರೆ.ಕಾವೇರಿ ಚಳವಳಿ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸುತ್ತುವುದು ಸರಿಯಲ್ಲ ಎಂಬ ಕಾರಣಕ್ಕೆ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ಇದೇ 5ರಿಂದ ಹಮ್ಮಿಕೊಂಡಿದ್ದ ರಾಜ್ಯ ಪ್ರವಾಸವನ್ನೂ ಅವರು ರದ್ದು ಮಾಡಿದ್ದಾರೆ ಎಂದು ಯಡಿಯೂರಪ್ಪ ಅವರ ಆಪ್ತರು `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry