ಹೊಸ ಪಠ್ಯಪುಸ್ತಕಗಳ ರಚನೆಗೆ ಸಮಿತಿ: ಆಗ್ರಹ

ಶುಕ್ರವಾರ, ಜೂಲೈ 19, 2019
22 °C

ಹೊಸ ಪಠ್ಯಪುಸ್ತಕಗಳ ರಚನೆಗೆ ಸಮಿತಿ: ಆಗ್ರಹ

Published:
Updated:

ಬೆಂಗಳೂರು: `ಹಿಂದಿನ ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡಲು ಹೊರಟಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಿರುವ ಪಠ್ಯಪುಸ್ತಕಗಳು ಸುಳ್ಳಿನ ಕಂತೆಯಾಗಿವೆ' ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.ಕನ್ನಡ ಸಂಘರ್ಷ ಸಮಿತಿಯು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ `ಶಾಲಾ ಶಿಕ್ಷಣದಲ್ಲಿ ಪಠ್ಯಗಳು' ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಬಿಜೆಪಿ ಸರ್ಕಾರ ರಚಿಸಿರುವ ಪಠ್ಯಪುಸ್ತಕಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂತಿದ್ದು, ಕೂಡಲೇ ಈ ಪಠ್ಯಪುಸ್ತಕಗಳನ್ನು ಹಿಂತೆಗೆದುಕೊಳ್ಳಲು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.`ಹಿಂದಿನ ಸರ್ಕಾರವು ಪಠ್ಯಪುಸ್ತಕಗಳಲ್ಲಿ ಸುಳ್ಳನ್ನೇ ಬಿಂಬಿಸಿದೆ. ಇದರ ಪರಿಣಾಮವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಅನೇಕ ಸುಳ್ಳನ್ನು ಸೇರಿಸಿದ್ದಾರೆ. ಕೇಸರೀಕರಣಗೊಂಡಿರುವ ಮತ್ತು ಇತಿಹಾಸವನ್ನೇ ತಿರುಚಿ ಬರೆದಿರುವ ಪಠ್ಯದಲ್ಲಿನ ತಪ್ಪುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು' ಎಂದರು.`ಕಾಂಗ್ರೆಸ್ ಸರ್ಕಾರವು ಹೊಸ ಪಠ್ಯಪುಸ್ತಕಗಳ ರಚನೆಗೆ ತಜ್ಞರ ಸಮಿತಿಯನ್ನು ರಚನೆ ಮಾಡಬೇಕು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವಂತಹ ಮತ್ತು ದೇಶದ ವಾಸ್ತವ ಇತಿಹಾಸವನ್ನು ತಿಳಿಸುವಂತಹ ಪಠ್ಯವನ್ನು ರಚಿಸಬೇಕು' ಎಂದರು.`ಪ್ರಾಥಮಿಕ ಶಾಲಾ ಪಠ್ಯಕ್ರಮದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿರೋಧಿ ಅಂಶಗಳನ್ನು ಸೇರಿಸಲಾಗಿದೆ. ಮಠಗಳಿಗೆ ಹೆಚ್ಚಿನ ಒತ್ತನ್ನು ನೀಡಿರುವ ಅಂಶಗಳು ಅದರಲ್ಲಿವೆ. ಹಿಂದೂ ರಾಜರನ್ನು ಮತ್ತು ದೇವರನ್ನು ವೈಭವೀಕರಣ ಮಾಡುವಂತಿರುವ ಪಠ್ಯಗಳಿದ್ದು, ಅವುಗಳನ್ನು ಈ ಕೂಡಲೇ ಸರಿಪಡಿಸಬೇಕು. ಹೊಸ ಪಠ್ಯ ರಚನೆಗೆ  ರೂ.3 ಕೋಟಿ ಖರ್ಚಾಗಬಹುದು. ಮುಂದಿನ ದಿನಗಳಲ್ಲಿ ಆಗುವ ಅನಾಹುತವನ್ನು ತಪ್ಪಿಸಲು ಸರ್ಕಾರ ಮುಂದಾಗಬೇಕು' ಎಂದು ಆಗ್ರಹಿಸಿದರು.ಶಿಕ್ಷಣ ತಜ್ಞ ಡಾ.ಜಿ.ರಾಮಕೃಷ್ಣ ಮಾತನಾಡಿ, `ಪಠ್ಯದಲ್ಲಿ ಲಿಂಗ ಸಮಾನತೆ, ಜಾತಿ ಮತ್ತು ಧರ್ಮಗಳ ನಡುವಿನ ಐಕ್ಯತೆಯನ್ನು ಬೋಧಿಸುತ್ತಿಲ್ಲ. ಮಕ್ಕಳ ಮುಗ್ಧ ಮನಸ್ಸಿನಲ್ಲಿ ಭೇದ-ಭಾವವನ್ನು ಸೃಷ್ಟಿಸಿ ಮಕ್ಕಳು ಜೀರ್ಣಿಸಿಕೊಳ್ಳಲಾಗದಂತಹ ವಿಷಯಗಳನ್ನು ಅವರ ಮನಪಟಲದಲ್ಲಿ ಬಿತ್ತುತ್ತಿದ್ದೇವೆ' ಎಂದು ವಿಷಾದಿಸಿದರು.`ಪಠ್ಯಪುಸ್ತಕವು ವೈಚಾರಿಕವಾಗಿ, ವೈಜ್ಞಾನಿಕತೆಯನ್ನು ಬಿತ್ತುವ ವಾಸ್ತವ ಅಂಶಗಳನ್ನು ತಿಳಿಸುವಂತೆ ಇರಬೇಕು. ಪೂರ್ವಾಗ್ರಹಪೀಡಿತರಾಗದೆ, ವಿಶ್ಲೇಷಣಾತ್ಮಕವಾಗಿ, ವಿಮರ್ಶಾತ್ಮಕವಾಗಿ ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು' ಎಂದು ಹೇಳಿದರು.`ಕಲಿಯುವ  ಮಕ್ಕಳಿಗೆ ಸಮಾನ ಅವಕಾಶ, ಸಮಾನ ಸೌಲಭ್ಯ ನೀಡದೆ, ಪಠ್ಯದಲ್ಲಿ ಸಮಾನತೆ ತರಲು ಸಾಧ್ಯವಿಲ್ಲ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry