ಹೊಸ ಪಡಿತರ ಚೀಟಿ ತಿಂಗಳೊಳಗೆ ವಿತರಣೆ!

7

ಹೊಸ ಪಡಿತರ ಚೀಟಿ ತಿಂಗಳೊಳಗೆ ವಿತರಣೆ!

Published:
Updated:

ಮಡಿಕೇರಿ: ಪಡಿತರ ಚೀಟಿ ಪಡೆಯಲು ಕಾತುರರಾಗಿರುವವರಿಗೆ ಇಲ್ಲೊಂದು ಸಂತಸದ ಸುದ್ದಿ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ (ಎಪಿಎಲ್ ಕಾರ್ಡ್) ನೀಡಲು ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ತಿಂಗಳೊಳಗೆ ಪಡಿತರ ಚೀಟಿ ವಿತರಣೆ ಆರಂಭವಾಗಲಿದೆ. ಪ್ರಸ್ತುತ ರಾಜ್ಯದಾದ್ಯಂತ ರೇಷನ್ ಕಾರ್ಡ್‌ಗೆ 22 ಲಕ್ಷ ಆನ್‌ಲೈನ್ ಅರ್ಜಿಗಳು ಬಂದಿವೆ. ಇದರಲ್ಲಿ 7 ಲಕ್ಷ ಅರ್ಜಿಗಳು ಗ್ರಾಮಾಂತರ ಪ್ರದೇಶಗಳಿಂದ ಬಂದಿರುವುದು ವಿಶೇಷ. ಈ ಅರ್ಜಿಗಳ ಮಾಹಿತಿಯನ್ನು ಇಲಾಖೆಯು ಪರಿಶೀಲಿಸುತ್ತಿದೆ. ಅರ್ಜಿದಾರರ ಹೆಬ್ಬೆಟ್ಟು ಗುರುತು ಪಡೆಯಲು ಹಾಗೂ ಪಡಿತರ ಚೀಟಿಯನ್ನು ವಿತರಿಸಲು ಫ್ರಾಂಚೈಸಿ ಕಂಪೆನಿಗಳ ಆಯ್ಕೆ ಬಹುಮಟ್ಟಿಗೆ ಪೂರ್ಣಗೊಂಡಿದೆ.ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಸುಮಾರು 13,000 ಅರ್ಜಿಗಳು ಬಂದಿವೆ. ಜಿಲ್ಲೆಯಲ್ಲಿ ನಾಲ್ಕು ಫ್ರಾಂಚೈಸಿ ಕಂಪೆನಿಗಳನ್ನು ಆಯ್ಕೆ ಮಾಡಲಾಗಿದೆ. ಮಡಿಕೇರಿಯಲ್ಲಿ 2, ವಿರಾಜಪೇಟೆ ಹಾಗೂ ಸೋಮವಾರ ಪೇಟೆಯಲ್ಲಿ ತಲಾ ಒಂದೊಂದು ಕಂಪೆನಿಗಳು ಆಯ್ಕೆಯಾಗಿವೆ. ತಿಂಗಳೊಳಗೆ ಪಡಿತರ ಚೀಟಿ ವಿತರಣೆ ಆರಂಭವಾಗಲಿದೆ ಎಂದು ಇಲಾಖೆಯ ಕೊಡಗು ಜಿಲ್ಲೆಯ ಉಪನಿರ್ದೇಶಕ ರಾಜಣ್ಣ `ಪ್ರಜಾವಾಣಿ~ಗೆ ತಿಳಿಸಿದರು.ಇಲಾಖೆಯಿಂದ ಆದೇಶ ಬಂದ ನಂತರ ಈ ಕಂಪೆನಿಗಳು ಅರ್ಜಿದಾರರನ್ನು ಬಯೊಮೆಟ್ರಿಕ್ ಪರೀಕ್ಷೆಗೆ ಒಳಪಡಿಸಿ, ಅವರ ಹೆಬ್ಬೆಟ್ಟು ಗುರುತು ಪಡೆದುಕೊಳ್ಳುವವು. ನಂತರ 2-3 ದಿನಗಳಲ್ಲಿ ಪಡಿತರ ಚೀಟಿ ವಿತರಿಸಲಿವೆ.ದಾಖಲೆ ಪರಿಶೀಲನೆ:
ಗ್ರಾಹಕರು ನೀಡಿರುವ ದಾಖಲೆಗಳನ್ನು ಪರಿಶೀಲಿಸಲು ಆಹಾರ ನಿರೀಕ್ಷಕರು ಪ್ರತಿ ಮನೆ ಮನೆಗಳಿಗೆ ತೆರಳುವರು. ವಿದ್ಯುತ್ ಮೀಟರ್‌ನ ಆರ್.ಆರ್ ಸಂಖ್ಯೆ, ಕುಟುಂಬ ಸದಸ್ಯರ ಮಾಹಿತಿ, ಮನೆ ವಿಳಾಸ, ಇವರ ಹೆಸರಿನಲ್ಲಿಯೇ ಬೇರೆ ಪಡಿತರ ಚೀಟಿಗಳೇನಾದರೂ ಇವೆಯೇ ಎನ್ನುವುದನ್ನು ಅವರು ಪರಿಶೀಲನೆ ಮಾಡುವರು. ಆಹಾರ ನಿರೀಕ್ಷಕರು ಮನೆಗಳಿಗೆ ಭೇಟಿ ನೀಡುವ ಮೊದಲು ನಿಮ್ಮ ದೂರವಾಣಿಗೆ (ಆನ್‌ಲೈನ್ ಅರ್ಜಿಯಲ್ಲಿ ನೀಡಿರುವ ಸಂಖ್ಯೆಗೆ) ಕರೆ ಮಾಡಿ ತಾವು ಬರುವ ದಿನ ಹಾಗೂ ಸಮಯದ ಬಗ್ಗೆ ಮುಂಚಿತವಾಗಿಯೇ ತಿಳಿಸಲಿದ್ದಾರೆ. ಇದರಿಂದ ಅಂದು ಅರ್ಜಿದಾರರು ಮನೆಯಲ್ಲಿ ಇರಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.ಅರ್ಜಿದಾರರ ಎಲ್ಲ ಮಾಹಿತಿ ಸರಿಯಾಗಿದ್ದರೆ, ಅದನ್ನು ಪ್ರೊಸೆಸ್ ಮಾಡಲು ಫ್ರಾಂಚೈಸಿ ಕೇಂದ್ರಗಳಿಗೆ ನೀಡಲಾಗುತ್ತದೆ. ಫ್ರಾಂಚೈಸಿ ಕೇಂದ್ರಗಳಲ್ಲಿ ಅರ್ಜಿದಾರರ ಹೆಬ್ಬೆಟ್ಟು ಅಥವಾ ದೇಹದ ಮೇಲಿರುವ ವಿಶಿಷ್ಟ ಗುರುತುಗಳನ್ನು ಕಂಪ್ಯೂಟರ್‌ನಲ್ಲಿ ಚಿತ್ರೀಕರಿಸಲಾಗುತ್ತದೆ. ನಂತರ 2-3 ದಿನಗಳಲ್ಲಿ ಪಡಿತರ ಚೀಟಿಯನ್ನು ಅರ್ಜಿದಾರರಿಗೆ ದೊರೆಯಲಿದೆ.ಬೋಗಸ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಬೇಕೆಂದು ಇಲಾಖೆಯ ಅಧಿಕಾರಿಗಳು ಕಳೆದ ಒಂದೂವರೆ ವರ್ಷದಿಂದ ಪಡಿತರ ಚೀಟಿ ವಿತರಣೆಯನ್ನು ಸ್ಥಗಿತಗೊಳಿಸಿದ್ದರು. ಈ ಸಮಯದಲ್ಲಿ ಲಕ್ಷಾಂತರ ಬೋಗಸ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.ಹೊಸ ಪಡಿತರ ಚೀಟಿ ಪಡೆಯಲು ಬಯಸುವವರಿಂದ (ಆನ್‌ಲೈನ್) ಅರ್ಜಿಗಳನ್ನು ಕಳೆದ ನವೆಂಬರ್ ತಿಂಗಳಿನಲ್ಲಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಯಾವುದೇ ಅಂತಿಮ ದಿನಾಂಕವಿಲ್ಲ. ನಾಗರಿಕರು ತಮಗೆ ಅನುಕೂಲಕ್ಕೆ ತಕ್ಕಂತೆ ಅರ್ಜಿ ಸಲ್ಲಿಸಬಹುದಾಗಿದೆ. ಕಂಪ್ಯೂಟರ್ (ಆನ್‌ಲೈನ್) ಸೌಲಭ್ಯ ಇಲ್ಲದವರು ಸಮೀಪದ ಗ್ರಾಮ ಪಂಚಾಯಿತಿ ಕಚೇರಿಗಳಿಂದಲೂ ಅರ್ಜಿ ಸಲ್ಲಿಸಬಹುದಾಗಿದೆ.ಮುಖ್ಯವಾಗಿ ಕುಟುಂಬದ ಸದಸ್ಯರ ಹೆಸರು, ಜನ್ಮದಿನಾಂಕ, ಮನೆಯ ವಿಳಾಸ, ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯ ವಿವರವನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನೀಡಲೇಬೇಕು. ಇಲಾಖೆಯ ವೆಬ್‌ಸೈಟ್‌ಗೆ (http://­ahara.kar.nic.in ) ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry