ಹೊಸ ಪದ್ಧತಿಯಲ್ಲಿ ಪೂರ್ವಭಾವಿ ಪರೀಕ್ಷೆ

7

ಹೊಸ ಪದ್ಧತಿಯಲ್ಲಿ ಪೂರ್ವಭಾವಿ ಪರೀಕ್ಷೆ

Published:
Updated:

ಬೆಂಗಳೂರು:  ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 350 ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನವೆಂಬರ್ ಮೊದಲ ವಾರ ಅಧಿಸೂಚನೆ ಹೊರಡಿಸಲಿದೆ.ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್ ಪರೀಕ್ಷೆ ಮಾದರಿಯಲ್ಲಿಯೇ ಈ ಬಾರಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಈಗಾಗಲೇ ನಿರ್ಧರಿಸಿದ್ದು ಇದಕ್ಕೆ ಸರ್ಕಾರದ ಅನುಮತಿಯೂ ದೊರೆತಿದೆ.ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 40 ತಹಸೀಲ್ದಾರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಹೊಸದಾಗಿ ಸೃಷ್ಟಿಸಿರುವ ಕಾರ್ಯನಿರ್ವಾಹಕ ಅಧಿಕಾರಿಯ 60 ಹುದ್ದೆಗಳು ಸೇರಿದಂತೆ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾರವು ಕೆಪಿಎಸ್‌ಸಿಗೆ ಪ್ರಸ್ತಾವ ಸಲ್ಲಿಸಿದೆ ಎಂದು ಆಯೋಗದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಹೊಸ ಪದ್ಧತಿಯಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಲು ಮತ್ತು ಹುದ್ದೆಗಳ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭವಾಗಿದೆ. ನವೆಂಬರ್ ಮೊದಲ ವಾರ ಅಧಿಸೂಚನೆ ಹೊರಡಿಸಿ ಫೆಬ್ರುವರಿಯಲ್ಲಿ ಪೂರ್ವಭಾವಿ ಪರೀಕ್ಷೆ, ಜೂನ್‌ನಲ್ಲಿ ಮುಖ್ಯ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.ಇದರಲ್ಲಿ ಸ್ವಲ್ಪ ಹೆಚ್ಚುಕಡಿಮೆ ಆಗಬಹುದು. ಆದರೆ 2012ರಲ್ಲೇ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂಬುದು ಆಯೋಗದ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.ಹಿಂದೆ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ವಿಷಯದ ಜೊತೆಗೆ 30 ಐಚ್ಛಿಕ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಳ್ಳಬೇಕಾಗಿತ್ತು. ಒಟ್ಟು 450 ಅಂಕಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯುತ್ತಿತ್ತು.ಆದರೆ ಹೊಸ ಪದ್ಧತಿಯಲ್ಲಿ ಆಯ್ಕೆಗೆ ಅವಕಾಶವಿಲ್ಲ. ತಲಾ 200 ಅಂಕಗಳ ಎರಡು ಪ್ರಶ್ನೆ ಪತ್ರಿಕೆಗಳು ಇರಲಿದ್ದು, ಪರೀಕ್ಷೆ ತೆಗೆದುಕೊಳ್ಳುವ ಎಲ್ಲ ಅಭ್ಯರ್ಥಿಗಳಿಗೂ ಈ ಪತ್ರಿಕೆಗಳು ಕಡ್ಡಾಯ.ಪೂರ್ವಭಾವಿ ಪರೀಕ್ಷೆಯ ಹೊಸ ಪಠ್ಯಕ್ರಮ ಅಂತಿಮಗೊಂಡಿದ್ದು, ಗೆಜೆಟ್‌ನಲ್ಲೂ ಪ್ರಕಟಿಸಲಾಗಿದೆ. ಅದಕ್ಕೆ ಅನುಗುಣವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆ ನಡೆಸಬಹುದು. ಈ ಬಾರಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಎಎಸ್ ಆಕಾಂಕ್ಷಿಗಳಿಗೆ ಅವಕಾಶಗಳು ಹೆಚ್ಚಿವೆ. ಆದರೆ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ಆಗಿರುವುದರಿಂದ ತೇರ್ಗಡೆಯಾಗಬೇಕಾದರೆ ಕಠಿಣ ಅಭ್ಯಾಸ ಅಗತ್ಯ ಎನ್ನುತ್ತಾರೆ ಆಯೋಗದ ಅಧಿಕಾರಿಗಳು.1998ರ ಸಾಲಿನಲ್ಲಿ 412 ಹುದ್ದೆಗಳನ್ನು ಭರ್ತಿ ಮಾಡಿದ್ದು ಬಿಟ್ಟರೆ ನಂತರದ ವರ್ಷಗಳಲ್ಲಿ 100ರಿಂದ 200 ಹುದ್ದೆಗಳನ್ನು ತುಂಬಲಾಗಿತ್ತು. 2010ನೇ ಸಾಲಿನಲ್ಲಿ 268 ಹುದ್ದೆಗಳ ಭರ್ತಿಗೆ ಆಯೋಗ ಪ್ರಕ್ರಿಯೆ ಆರಂಭಿಸಿದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪರೀಕ್ಷೆ, ಸಂದರ್ಶನ ಪೂರ್ಣಗೊಂಡಿದ್ದು, ಪಟ್ಟಿ ಪ್ರಕಟಿಸುವುದಷ್ಟೇ ಬಾಕಿ ಇದೆ. ಹಿಂದೆಲ್ಲ ಹುದ್ದೆಗಳ ಸಂಖ್ಯೆ ಕಡಿಮೆ ಇದ್ದುದರಿಂದ ಅವಕಾಶಗಳು ಕಡಿಮೆ ಇದ್ದವು. ಆದರೆ ಈ ಬಾರಿ ಹುದ್ದೆಗಳು ಜಾಸ್ತಿ ಇವೆ. ಪರೀಕ್ಷಾ ಮಾದರಿಯೂ ಬದಲಾಗಿದೆ. ಪ್ರತಿಯೊಂದು ಪ್ರಶ್ನೆಪತ್ರಿಕೆ ತಲಾ ಎರಡು ಅಂಕಗಳ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಿಧಾನ, ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನ, ಬೌದ್ಧಿಕ ಸಾಮರ್ಥ್ಯ, ಪರಿಸರ ಇತ್ಯಾದಿ ವಿಷಯಗಳು ಪಠ್ಯಕ್ರಮದಲ್ಲಿ ಸೇರಿವೆ.ಹಳೆ ಪದ್ಧತಿ: ಪೂರ್ವಭಾವಿ ಪರೀಕ್ಷೆ ಹೊಸ ಪದ್ಧತಿಯಲ್ಲಿ ನಡೆದರೂ, ಮುಖ್ಯಪರೀಕ್ಷೆ ಸದ್ಯಕ್ಕೆ ಹಳೆ ಪದ್ಧತಿಯಲ್ಲಿಯೇ ನಡೆಯಲಿದೆ. ಮುಖ್ಯಪರೀಕ್ಷೆಯಲ್ಲಿ ಆಯ್ಕೆಗೆ ಅವಕಾಶವಿದ್ದು, 30 ವಿಷಯಗಳಲ್ಲಿ ಯಾವುದಾದರೂ ಎರಡು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.ಬರುವ ದಿನಗಳಲ್ಲಿ ಮುಖ್ಯಪರೀಕ್ಷೆಯಲ್ಲೂ ಬದಲಾವಣೆ ತರಲು ಆಯೋಗ ತೀರ್ಮಾನಿಸಿದೆ. ಆದರೆ ಈಗ ಅಧಿಸೂಚನೆ ಹೊರಡಿಸುವ 2011ನೇ ಸಾಲಿನ ಕೆಎಎಸ್ ಪರೀಕ್ಷೆಗೆ ಇದು ಅನ್ವಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷ ಕೆಎಎಸ್ ಪರೀಕ್ಷೆ ನಡೆಸುವ ಸಂಬಂಧ 2009ರಲ್ಲೇ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. 2010ನೇ ಸಾಲಿನ ನೇಮಕಾತಿಗೆ ಕಳೆದ ವರ್ಷ ಜನವರಿಯಲ್ಲೇ ಅಧಿಸೂಚನೆ ಹೊರಡಿಸಲಾಗಿತ್ತು.ಈ ವರ್ಷವೂ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲು ಆಯೋಗ ಉದ್ದೇಶಿಸಿತ್ತು. ಆದರೆ ಪೂರ್ವಭಾವಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುವ ಸಂಬಂಧ ಆಯೋಗ ಕಳುಹಿಸಿದ್ದ ಪ್ರಸ್ತಾವಕ್ಕೆ ಸರ್ಕಾರದ ಒಪ್ಪಿಗೆ ಸಿಗುವುದು ವಿಳಂಬವಾಯಿತು. ಹೀಗಾಗಿ 2011ನೇ ಸಾಲಿನ ಅಧಿಸೂಚನೆ ಹೊರಡಿಸುವುದು ತಡವಾಗಿದೆ ಎಂದು ಅವರು ವಿವರಿಸಿದರು.ಪಾರದರ್ಶಕ ವ್ಯವಸ್ಥೆ: ಮೌಲ್ಯಮಾಪನದಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಆಯೋಗದ ಕೇಂದ್ರ ಕಚೇರಿಯಲ್ಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಿಸಿಟಿವಿ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೊ ಚಿತ್ರೀಕರಣ ಮಾಡುವುದರಿಂದ ನಕಲು ಮಾಡಲು ಅವಕಾಶ ಇರುವುದಿಲ್ಲ. ಪಾರದರ್ಶಕವಾಗಿ ಆಯೋಗ ಪರೀಕ್ಷೆಗಳನ್ನು ಆಯೋಜಿಸುತ್ತಿದೆ ಎಂಬುದಾಗಿ ಹೇಳಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry