ಭಾನುವಾರ, ಏಪ್ರಿಲ್ 18, 2021
33 °C

ಹೊಸ ಪರಂಪರೆಯ ದಾರಿಯಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮ ಘಟ್ಟದ ಕೆಲವು ಪ್ರದೇಶಗಳು ಕೊನೆಗೂ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಜಾಗ ಸಿಕ್ಕಿರುವುದನ್ನು ಪರಿಸರ ಕಾರ್ಯಕರ್ತರು, ವಿಜ್ಞಾನಿಗಳು ಹಾಗೂ ಪರಿಸರ ಅಧ್ಯಯನದಲ್ಲಿ ದಶಕಗಳಿಂದ ತೊಡಗಿಕೊಂಡಿರುವ ತಜ್ಞರು ಸ್ವಾಗತಿಸಿದರೆ, ರಾಜ್ಯ ಸರ್ಕಾರ ವಿರೋಧಿಸುತ್ತಿದೆ. ಬಹುಶಃ ರಾಜ್ಯದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಇದರಿಂದಾಗಿ ಇರುಸು ಮುರುಸು ಆಗಿರುವುದು ಖಚಿತ.ಕೇಂದ್ರ ಸರ್ಕಾರವು ವಿಶ್ವಸಂಸ್ಥೆಗೆ ಈ ಬೇಡಿಕೆಯನ್ನು ಸಲ್ಲಿಸುವ ಮುಂಚೆ, ತನ್ನನ್ನು ಕೇಳದೇ ನಿರ್ಣಯ ತೆಗೆದುಕೊಂಡದ್ದನ್ನು ಈ ಹಿಂದೆಯೆ ಪ್ರಶ್ನಿಸಿ, ಜನಪ್ರತಿನಿಧಿಗಳು ಬೊಬ್ಬೆ ಹಾಕಿದ್ದರು.ಅದಕ್ಕೆ ಸರ್ಕಾರ ಹೆದರಿ  ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕರ್ನಾಟಕದಲ್ಲಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಯಾವ ಕ್ಷೇತ್ರವನ್ನೂ ಪಾರಂಪರಿಕ ತಾಣ ಮಾಡಕೂಡದೆಂದು ಖಚಿತವಾಗಿ ವಿರೋಧಿಸಿತ್ತು. ಈ ವಿರೋಧವನ್ನು ಕೇಂದ್ರ ಸರ್ಕಾರ ಕಡೆಗಣಿಸಿದ್ದು ಸ್ಪಷ್ಟವಾಗಿದೆ.ಈ ಹಿನ್ನೆಲೆಯಲ್ಲಿ ನಾವಿಂದು ಈ ಘೋಷಿತ ತಾಣಗಳ ಮೇಲೆ ಆಗಬಹುದಾದ ಪರಿಣಾಮ ಬಗ್ಗೆ ಅವಲೋಕನ ಮಾಡುವದು ಉಚಿತ ಎನ್ನಿಸುತ್ತಿದೆ. ರಾಜ್ಯ ಸರ್ಕಾರವು ಇನ್ನು ಮುಂದೆ ತನ್ನ ನಿಲುವಿಗೆ ಅಂಟಿಕೊಂಡಿದ್ದು ನಿರ್ವಹಣೆ ಮಾಡುವಾಗ ವಿಶ್ವಪಾರಂಪರಿಕ ತಾಣಗಳನ್ನು  ಸಲಹೆ, ನೀತಿಗಳನ್ನು ಅನುಮೋದಿಸಲಿದೆಯೇ?ಅಥವಾ ಅಲಕ್ಷಿಸಲಿದೆಯೆ?ಲಾಭಗಳೇನು?: ವಿಶ್ವ ಪಾರಂಪರಿಕ ತಾಣಗಳೆಂದು ಘೋಷಣೆಯಾದ ಮೇಲೆ ಈ ಪ್ರದೇಶಗಳಿಗೆ ಕೋಟ್ಯಂತರ ರೂಪಾಯಿ ಹಣ ಹರಿದು ಬರಲಿದೆಯೇ? ಇದರ ವಿಶಿಷ್ಟತೆಯನ್ನು ಅರಿಯಲು ತಂಡೋಪತಂಡವಾಗಿ ಅಂತರರಾಷ್ಟ್ರೀಯ ವಿಜ್ಞಾನಿಗಳ ಹಾಗೂ ಪ್ರವಾಸಿಗಳು ಪಶ್ಚಿಮಘಟ್ಟಕ್ಕೆ ಲಗ್ಗೆ ಇಡಬಹುದೆ? ಇದರಿಂದ ಸ್ಥಳೀಯ ಜನರಿಗೆ ಯಾವ ರೀತಿಯ ಲಾಭ ಅಥವಾ ಹಾನಿ ಆಗಲಿದೆ?ಬಹುಶಃ ಈ ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾದರೆ ನಾವು ಈಗಾಗಲೇ ಈ ಹಣೆಪಟ್ಟಿಯನ್ನು ಪಡೆದಿರುವ ಸ್ಥಳಗಳ ಅನುಭವದಿಂದ ನಿಖರವಾದ ಉತ್ತರಗಳನ್ನು ಪಡೆಯಬಹುದಾಗಿದೆ. ಭಾರತದಲ್ಲಿ ಹೀಗೆ ಘೋಷಿತವಾಗಿರುವ ಐತಿಹಾಸಿಕ ಸ್ಥಳಗಳು ಹಲವಾರು ಇವೆ. ಇವುಗಳಲ್ಲಿ ಹಂಪಿಯೂ ಒಂದು.ನಿಸರ್ಗದತ್ತ ಪ್ರದೇಶಗಳ ಪಟ್ಟಿಯಲ್ಲಿ ಹರಿಯಾಣ ರಾಜ್ಯದಲ್ಲಿರುವ ಭರತಪುರ ಪಕ್ಷಿಧಾಮ ಹಾಗೂ ಅಸ್ಸಾಂ ರಾಜ್ಯದಲ್ಲಿರುವ ಮಾನಸ ಅಭಯಾರಣ್ಯಗಳನ್ನು  ವಿಶ್ವ ಪಾರಂಪರಿಕ  ತಾಣಗಳ ಪಟ್ಟಿಯಡಿಯಲ್ಲಿ ಸೇರಿಸಿ ಕೆಲವು ವರ್ಷಗಳೇ ಸಂದಿವೆ. ಇಂದು ಈ ಸ್ಥಳಗಳಿಗೆ ಭೇಟಿ ನೀಡಿದರೆ ಏನಾದರೂ ಬದಲಾವಣೆ ಕಾಣ ಸಿಗುವುದೆ? ಅಲ್ಲಿಯ ಸ್ಥಳೀಯ ಜನರಿಗೆ  ತೊಂದರೆ ಉಂಟಾಗಿದೆಯೆ?ಖಂಡಿತವಾಗಿಯೂ ಅಂತಹ ಮೂಲಭೂತ ಬದಲಾವಣೆ ಈ ಎರಡೂ ಪ್ರದೇಶಗಳಲ್ಲಿ ಆಗಿಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಇವುಗಳ ಮಹತ್ವ ಹೆಚ್ಚಿದೆ. ಇಂದು ಭರತಪುರ ಪಕ್ಷಿಧಾಮದಲ್ಲಿ ಲಕ್ಷಾಂತರ ಸಂಖ್ಯೆಗಳಲ್ಲಿ ಬರುತ್ತಿದ್ದ ಹಕ್ಕಿಗಳು ಸಾವಿರ ಸಂಖ್ಯೆಗಳಿಗೆ ಇಳಿದಿವೆ.ಹಕ್ಕಿಗಳನ್ನು ಆಕರ್ಷಿಸುತ್ತಿದ್ದ ನೀರಿನ ಸೆಲೆಗಳು ಬತ್ತಿವೆ, ಅವುಗಳ ವಾಸಸ್ಥಾನಗಳೇ ನಾಶವಾಗಿದೆ. ಹೀಗೆಯೆ ಮಾನಸ ಅಭಯಾರಣ್ಯದಲ್ಲಿಯೂ ಸಹ ಪ್ರಾಣಿಗಳ ಸಂಖ್ಯೆ ಕ್ಷಿಣಿಸಿದೆ. ಸ್ಥಳೀಯ ಜನರ ಬದುಕಿನಲ್ಲಿ ಸಹ ಯಾವುದೇ ಬದಲಾಣೆ ಆಗಿಲ್ಲ. ಇವುಗಳ ನಿರ್ವಹಣೆಗೆ ಕೆಲ ಮಟ್ಟದಲ್ಲಿ ಹಣ ಬಂದಿದೆ. ಆದರೆ ಕೋಟ್ಯಂತರ ರೂಪಾಯಿಗಳಲ್ಲ! ಸ್ಥಳೀಯ ಜನರನ್ನು ಒಕ್ಕಲು ಎಬ್ಬಿಸಿಲ್ಲ.ಈ ಹಿನ್ನೆಲೆಯಲ್ಲಿ ನಾವಿಂದು ಪಶ್ಚಿಮ ಘಟ್ಟದಲ್ಲಿನ 39 ತಾಣಗಳನ್ನು ವಿಶ್ಲೇಷಿಸಬೇಕಾಗಿದೆ. ಈ ಘೋಷಣೆಯಿಂದ ಪಶ್ಚಿಮ ಘಟ್ಟ ಪ್ರದೇಶಕ್ಕೆ ಒಂದು ತರಹದ ಜಾಗತಿಕ ಮನ್ನಣೆ ಸಿಕ್ಕಿದಂತಾಗಿದೆ. ಜೀವ ಸಂಕುಲದ ಕೊಂಡಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಈ ಪ್ರದೇಶಗಳು ಹೇಗೆ ಮನುಕುಲಕ್ಕೆ ಒಂದು ಆದರ್ಶಪ್ರಾಯವಾದ ಸಂಪತ್ತು ಎಂಬುದನ್ನು ಬಿಂಬಿಸುತ್ತದೆ.ಒಬ್ಬ ವ್ಯಕ್ತಿಯ ಜೀವಮಾನದ ಕೊಡುಗೆಯನ್ನು ಗಣನೆಗೆ ತೆಗೆದುಕೊಂಡು ನಾವು ಕೆಲವರಿಗೆ  ಭಾರತ ರತ್ನ  ಪ್ರಶಸ್ತಿ ನೀಡುವದಿಲ್ಲವೆ? ಅದೇ ರೀತಿ ಜಾಗತಿಕ ಮಟ್ಟದಲ್ಲಿ ನಾವು ಪಶ್ಚಿಮಘಟ್ಟದ  ಪ್ರದೇಶಗಳಿಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿದ್ದೇವೆ, ಆರ್ಥಿಕ ಲಾಭಕ್ಕಿಂತ ಈ ತರಹದ ಮನ್ನಣೆ ನೀಡಿ ಜಾಗತಿಕ ಸಮಾಜವು ಇಂತಹ ಅಪರೂಪದ ನಿಸರ್ಗ ತಾಣಗಳ ಸಂರಕ್ಷಣೆ ಮಾಡಲಿ ಎಂಬುದೇ ಪ್ರಮುಖ ಉದ್ದೇಶ.ಇನ್ನು ಈ ಉದ್ದೇಶದ ಈಡೇರಿಕೆಗಾಗಿ ಯಾವ ರೀತಿಯ ನಿರ್ವಹಣಾ ಕಾರ್ಯಗಳನ್ನು, ಯೋಜನೆಗಳನ್ನು ಜಾರಿಗೊಳಿಸಬಹುದು? ಇದಕ್ಕಾಗಿ ಅವುಗಳ ಪಾಲನೆಯಿಂದ ಸ್ಥಳೀಯ ಜನಾಂಗಗಳ, ಅವರ ಪರಂಪರಾಗತವಾಗಿ ನಡೆಸಿಕೊಂಡು ಬಂದಿರುವ ಬದುಕನ್ನು  ಕೈಬಿಡಬೇಕಾಗಬಹುದೆ?ಬಹುಶಃ ಈ ಮೇಲಿನ ಪ್ರಶ್ನೆಗಳು ಸೃಷ್ಟಿಸಿರುವ ಗೊಂದಲದಿಂದಾಗಿ ಇಂದು ರಾಜ್ಯದಲ್ಲಿ ಹೆಚ್ಚಿನ ವಿವಾದ ಉಂಟಾಗಿದೆ. ಇದರ ಬಗ್ಗೆ ಸ್ಪಷ್ಟವಾದ ನೀತಿಗಳಿದ್ದರೂ ಸಹ ಗೊಂದಲ ಉಂಟಾಗಿರುವುದನ್ನು ನೋಡಿದಲ್ಲಿ ಇದರ ಹಿಂದೆ ಅಡಗಿರುವ ಹಿತಾಸಕ್ತಿಗಳ ತಂತ್ರಗಾರಿಕೆ ಬೆಳಕಿಗೆ ಬರುತ್ತದೆ.

 

ವಿಶ್ವಸಂಸ್ಥೆಯ ಅಡಿಯಲ್ಲಿರುವ ವಿಶ್ವಪರಂಪರೆಯ ತಾಣಗಳ ಸಮಿತಿ ಈ ತಾಣಗಳ ನಿರ್ವಹಣೆ ಬಗ್ಗೆ ಒಂದು ವಿವರವಾದ ಸಲಹೆಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.ಈ ಸಲಹೆಗಳ ಅಡಿಯಲ್ಲಿ ಈ ಪರಂಪರೆಯ ತಾಣಗಳ ನಿರ್ವಹಣೆಯನ್ನು ಸ್ಥಳೀಯವಾಗಿ ರಾಜ್ಯ ಸರ್ಕಾರ ಮಾಡಬೇಕಾಗುತ್ತದೆ. ಆದರೆ ಈ ಸಮಿತಿ ಕೇವಲ  ಸಲಹೆ  ಹಾಗೂ ಮಾರ್ಗಸೂಚಿಗಳನ್ನು ಮಾತ್ರ ನೀಡಬಲ್ಲದು, ಅದನ್ನು ನಿಜವಾಗಿಯೂ ಕಾರ್ಯ ರೂಪಕ್ಕೆ ತರುವ ಕೆಲಸ ರಾಜ್ಯ ಹಾಗೂ ಕೇಂದ್ರ ಸರಕಾರದ್ದು. ಇವುಗಳನ್ನು ನಿರ್ಲಕ್ಷಿಸಿದಲ್ಲಿ ವಿಶ್ವಸಂಸ್ಥೆ ಯಾವ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗದು.

 

ಅದು ಕೇವಲ ಎಚ್ಚರಿಕೆಯ ಮಾತನ್ನು ಹೇಳಬಹುದು. ತಾಣಗಳನ್ನು ನಾಶ ಮಾಡಿದರೆ ಮನುಕುಲಕ್ಕೆ ಆಗಬಹುದಾದ ಹಾನಿಯನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಪ್ರಯತ್ನಿಸುವುದೇ ಹೊರತು ತನ್ನ ನಿಲುವನ್ನು ಭಾರತ ಅಥವಾ ರಾಜ್ಯ ಸರ್ಕಾರದ ಮೇಲೆ ಹೇರುವ ಸಾಧ್ಯತೆಗಳು ಇಲ್ಲ.ಇದಲ್ಲದೆ ಈ ತಾಣಗಳನ್ನು ನಿರ್ವಹಿಸುವಾಗ ಸ್ಥಳಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರದ್ದೆ ಆದ ಸಂಸ್ಥೆ (ಉದಾಹರಣೆಗೆ: ದೇವರ ಕಾಡು)ಯ ಜೊತೆಗೂಡಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.ಆದರೆ ಈ ಸತ್ಯವನ್ನು ಮನಗಾಣದೆ ಇಂದು ರಾಜ್ಯದಲ್ಲಿ ಈ ತಾಣಗಳಿಗೆ ನೀಡಿದ ವಿಶ್ವ ಪರಂಪರೆಯ ಹಣೆ ಪಟ್ಟಿಯಿಂದಾಗಿ ಮುಂಬರುವ ದಿನಗಳಲ್ಲಿ ಯಾವ ರೀತಿಯ ಅಭಿವೃದ್ಧಿಗೆ ಅವಕಾಶ ಇಲ್ಲದಂತಾಗುತ್ತದೆ, ಸ್ಥಳೀಯ ಜನರ ಹಕ್ಕನ್ನು ಮೊಟಕುಗೊಳಿಸುವ ಎಲ್ಲ ಸಾಧ್ಯತೆಗಳಿವೆ ಮತ್ತು ಅವರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ಮಿಥ್ಯೆಯನ್ನು ರಾಜಕಾರಣಿಗಳು ಹುಟ್ಟು ಹಾಕಿರುವದು ಖೇದಕರ.ಈ ತಾಣಗಳಿಗೆ ಯಾವುದೇ ರೀತಿಯ ಅಪಾಯ, ಅಲ್ಲಿನ ಜೀವಸಂಕುಲಗಳಿಗೆ ಅಪಾಯ ಒದಗಿದರೆ ಅದನ್ನು ವಿಶ್ವ ಪಾರಂಪರಿಕ ತಾಣಗಳ ಸಮಿತಿಯು ಗಮನಕ್ಕೆ ತೆಗೆದುಕೊಳ್ಳುತ್ತದೆ. ಈ ಕುರಿತು ಎಚ್ಚರಿಕೆ ನೀಡಿದರೆ, ಅದು ತಪ್ಪೆ?ಈ ಎಚ್ಚರಿಕೆಯೂ ತಮಗೆ ಬೇಡ, ನಾವು ಈ ಪ್ರದೇಶಗಳಲ್ಲಿ ತಮಗೆ ಬೇಕಾದ ಹಾಗೆ ಗಣಿಗಾರಿಕೆ, ವಿಲಾಸಿ ಪ್ರವಾಸೋದ್ಯಮ ತಾಣಗಳನ್ನು ನಿರ್ಮಿಸುತ್ತೇವೆ, ಇದೇ ಜನರಿಗೆ ಬೇಕಾಗಿರುವ  ಅಭಿವೃದ್ಧಿ  ಎಂದು ಜನಪ್ರತಿನಿಧಿಗಳ ವಾದ. ಆದರೆ ಇವುಗಳ ಹಿಂದೆ ಯಾವ ಹಿತಾಸಕ್ತಿಗಳ ಕೈವಾಡವಿದೆ ಎಂಬುದನ್ನು ಗಮನಿಸುವುದು ಅವಶ್ಯವಾಗಿದೆ.ವಿಶ್ವಸಂಸ್ಥೆ ನೀಡಿರುವ ಈ ಹಣೆ ಪಟ್ಟಿಯಿಂದ ಸ್ಥಳಿಯ ಜನರ ಹಾಗೂ ಅಲ್ಲಿನ ಜೀವಸಂಕುಲದ ಮೇಲೆ ಯಾವ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರಲಾರದು.ಆದರೆ ಇದನ್ನೆ ಬಂಡವಾಳ ಮಾಡಿಕೊಂಡು ಗುಲ್ಲೆಬ್ಬಿಸುವ ಸ್ವಹಿತಾಸಕ್ತಿ ಉಳ್ಳ ಗುಂಪುಗಳಿಗೆ ಇಲ್ಲಿನ ಮೂಕ ಪ್ರಾಣಿಸಂಕುಲಗಳ, ಅಪರೂಪದ ಜೀವ ವಿವಿಧತೆಗಳ ರಕ್ಷಣೆ ಬೇಕಾಗಿಲ್ಲ. ಇವುಗಳನ್ನು ನಾಶಪಡಿಸಿ ಹಣ ಗಳಿಸುವುದೊಂದೇ ನಮ್ಮನ್ನಾಳುವ ನೇತಾರರ ಉದ್ದೇಶವಾಗಿದೆ.

 

ವಿಶ್ವದ ಸೃಷ್ಟಿ ಪಥದಲ್ಲಿ ಹಲವಾರು ವಿಶಿಷ್ಟವಾದ ಹೆಜ್ಜೆ ಗುರುತುಗಳಿವೆ. ಅವುಗಳಲ್ಲಿ ಪಶ್ಚಿಮ ಘಟ್ಟದ ಕಾಡು, ಇಲ್ಲಿನ ವನ್ಯಪ್ರಾಣಿಗಳು, ಜೀವಜಂತುಗಳು ಒಂದು. ಇವುಗಳನ್ನು ಈಗಾಗಲೆ ನಾಶ ಪಡಿಸಿದ್ದೇವೆ. ಅಳಿದುಳಿದ ತಾಣಗಳನ್ನು ರಕ್ಷಿಸಬೇಕಾದದ್ದು ಮನುಕುಲದ ನೈತಿಕ ಜವಾಬ್ದಾರಿ.ಈ ಹೊಣೆಗಾರಿಕೆಯನ್ನು ಸೂಚಿಸುವ ಪಾರಂಪರಿಕ ತಾಣಗಳನ್ನು ರಕ್ಷಿಸಿ, ಮಾತು ಬಾರದ ಪ್ರಾಣಿಗಳ, ಜೀವ ಸಂಕುಲಗಳಿಗೆ ಭದ್ರತೆಯನ್ನು ಒದಗಿಸಿದಲ್ಲಿ ನಮ್ಮಲ್ಲಿಯೂ ಮನುಷ್ಯತ್ವ ಇನ್ನೂ ಉಳಿದಿದೆ, ನಮ್ಮ ಸ್ವಾರ್ಥಕ್ಕಿಂತ ಇತರ ಜೀವಿಗಳ ಬಗ್ಗೆ ಸಹ ನಮಗೆ ಕಳಕಳಿ ಇದೆ ಎಂಬುದನ್ನು ತೋರಿಸಿಕೊಟ್ಟಂತಾಗುತ್ತದೆ. ಆಫ್ರಿಕಾ ದೇಶದ ಮಾಲಿಯ ಟಿಂಬಕ್‌ಟೂ ಎಂಬಲ್ಲಿ ನೂರಾರು ವರ್ಷಗಳ ಹಿಂದಿನ ದರ್ಗಾಗಳನ್ನೂ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿ ಹಲವಾರು ವರ್ಷಗಳಾಗಿವೆ.

 

ಈ ವಾರ ಅಲ್ಲಿನ ಮುಸ್ಲಿಂ ಉಗ್ರಗಾಮಿಗಳು, ಅವುಗಳು ತಮ್ಮ ಶರಿಯಾ ಕಾನೂನಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಧ್ವಂಸಗೊಳಿಸಿದ್ದಾರೆ. ಬಹುಶಃ ಇದೇ ದುಷ್ಟ ಪರಂಪರೆಯನ್ನು ಕರ್ನಾಟಕದಲ್ಲಿಯೂ ಸಹ ಮುಂದುವರಿಸಿಕೊಂಡು ಹೋಗುವ ಸೂಚನೆಯನ್ನು ಸರ್ಕಾರ ಹಾಗೂ ನಮ್ಮ ನೇತಾರರು ನೀಡಿದ್ದಾರೆ!

-ಲೇಖಕರು ಪರಿಸರವಾದಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.