ಹೊಸ ಪಿಚ್ ಮೇಲೆ ರೋಚಕ ಹೋರಾಟದ ನಿರೀಕ್ಷೆ

7

ಹೊಸ ಪಿಚ್ ಮೇಲೆ ರೋಚಕ ಹೋರಾಟದ ನಿರೀಕ್ಷೆ

Published:
Updated:

ನವದೆಹಲಿ: ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಹೊಸ ಪಿಚ್ ಹೇಗೆ ವರ್ತಿಸುತ್ತದೆ ಎಂದು ಯಾರಿಗೂ ಗೊತ್ತಿಲ್ಲ. 2009 ರ ಡಿಸೆಂಬರ್‌ನಲ್ಲಿ ಕೆಟ್ಟ ಪಿಚ್ ಕಾರಣ ಭಾರತ ಮತ್ತು ಶ್ರೀಲಂಕಾ ಪಂದ್ಯ ರದ್ದಾಗಿದ್ದರ ಬಗ್ಗೆ ದಕ್ಷಿಣ ಆಫ್ರಿಕ ತಂಡದ ನಾಯಕ ಗ್ರೇಮ್ ಸ್ಮಿತ್ ಹಾಗೂ ವೆಸ್ಟ್‌ಇಂಡೀಸ್ ನಾಯಕ ಡರೆನ್ ಸ್ಯಾಮಿ ಅವರಿಗೆ ಗೊತ್ತಿದೆ. ಆದರೆ ಈಗ ಹೊಸ ಪಿಚ್ ಕೆಟ್ಟದಾಗೇನೂ ವರ್ತಿಸುವುದಿಲ್ಲ ಎಂಬ ವಿಶ್ವಾಸ ಇಬ್ಬರೂ ನಾಯಕರಿಗಿದೆ.ವಿಶ್ವ ಕಪ್ ಕ್ರಿಕೆಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಗುರುವಾರ, ಟಾಸ್ ಗೆದ್ದರೆ ಮೊದಲು ಫೀಲ್ಡ್ ಮಾಡುವ ಇಂಗಿತವನ್ನೇ ಇಬ್ಬರೂ ನಾಯಕರು ನೀಡಿದರು. ರಾತ್ರಿ ಇಬ್ಬನಿಯಿಂದಾಗಿ ಬೌಲಿಂಗ್ ಮಾಡುವುದು ಕಷ್ಟ ಎಂಬ ಅಭಿಪ್ರಾಯವನ್ನು ಇಬ್ಬರೂ ವ್ಯಕ್ತಪಡಿಸಿದರು.ವೆಸ್ಟ್‌ಇಂಡೀಸ್ ತಂಡದ ಸಾಮರ್ಥ್ಯದ ಬಗ್ಗೆ ಗ್ರೇಮ್ ಸ್ಮಿತ್ ಮೆಚ್ಚುಗೆಯ ಮಾತುಗಳನ್ನೇ ಅಡಿದರು. “ವೆಸ್ಟ್‌ಇಂಡೀಸ್ ತಂಡದಲ್ಲಿ ಸ್ಫೋಟಕ ಆಟಗಾರರಿದ್ದಾರೆ. ಯಾವ ಆಟಗಾರನಿಗೆ ಯಾವ ದಿನ ಹೇಗಿರುತ್ತದೆ ಎಂದು ಹೇಳುವುದು ಕಷ್ಟ. ನಾವಂತೂ ಪೂರ್ಣ ಸಿದ್ಧತೆಯೊಂದಿಗೆ ಈ ವಿಶ್ವ ಕಪ್‌ಗೆ ಬಂದಿದ್ದೇವೆ. ನಾಯಕನಾಗಿ ನನ್ನ ಕೆಲವು ತಂತ್ರಗಳು ಯಶಸ್ವಿಯಾಗುವ ವಿಶ್ವಾಸ ನನಗಿದೆ. ಜ್ಯಾಕ್ ಕ್ಯಾಲಿಸ್ ನಮ್ಮ ತಂಡದ ಬೆನ್ನೆಲುವು. ಹದಿನೈದು ವರ್ಷಗಳಿಂದ ದಕ್ಷಿಣ ಆಫ್ರಿಕದ ಪ್ರಮುಖ ಆಟಗಾರನಾಗಿರುವ ಅವರು ಈ ವಿಶ್ವ ಕಪ್‌ನಲ್ಲಿ ಹೆಚ್ಚು ರನ್ ಹೊಡೆಯುವ ನಂಬಿಕೆ ನಮಗಿದೆ. ನಮ್ಮ ಬೌಲಿಂಗ್ ಕೂಡ ಉತ್ತಮವಾಗಿದ್ದು ಸ್ಪಿನ್ ದಾಳಿಯೂ ಸಮರ್ಪಕವಾಗಿದೆ. ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಹೇಗಿದ್ದಾರೆ ಎಂದು ನೀವೇ ಕಾಯ್ದುನೋಡಿ” ಎಂದು ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.ಡರೆನ್ ಸ್ಮಿತ್ ಅವರಿಗೆ ವೆಸ್ಟ್‌ಇಂಡೀಸ್‌ನ ಗತವೈಭವವನ್ನು ಮರಳಿ ತಂದುಕೊಡುವ ಗುರಿ. ಈ ವಿಶ್ವ ಕಪ್ ಮೂಲಕ ಆ ಪ್ರಯತ್ನವನ್ನು ಮಾಡುವುದಾಗಿ ಅವರು ಹೇಳಿದರು. “ನಮಗೆ ಎದುರಾಳಿ ಯಾರು ಎಂಬುದು ಮುಖ್ಯವಲ್ಲ. ಒಂದು ದಿನದ ಕ್ರಿಕೆಟ್‌ನಲ್ಲಿ ಪ್ರತಿಯೊಂದು ದಿನವೂ ಪ್ರತಿಯೊಂದು ತಂಡವೂ ಹೊಸತೇ. ದಕ್ಷಿಣ ಆಫ್ರಿಕ ತಂಡ ಬಲಿಷ್ಠ ತಂಡ. ಆದರೆ ನಮ್ಮ ಗೆಲುವಿನ ಯತ್ನಕ್ಕೆ ಈ ಅಂಶವೇನೂ ಅಡ್ಡಿಯಾಗುವುದಿಲ್ಲ. ನಾವೂ ಉತ್ತಮ ಕ್ರಿಕೆಟ್ ಆಡಲಿದ್ದೇವೆ” ಎಂದು ಅವರು ಹೇಳಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry