ಬುಧವಾರ, ಮೇ 12, 2021
18 °C

`ಹೊಸ ಪ್ರಪಂಚ ತೆರೆದಿಡುವ ತಂತ್ರಶಾಸ್ತ್ರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ರಾಯೋಗಿಕ ಜಗತ್ತನ್ನೇ ನೆಚ್ಚಿಕೊಂಡಿರುವ ಈ  ಹೊತ್ತಿನಲ್ಲಿ ಇದರಾಚೆಗೆ ಒಡಮೂಡಿರುವ ಅದ್ಬುತ ಪ್ರಪಂಚವನ್ನು ತಂತ್ರಶಾಸ್ತ್ರ ಪರಿಚಯಿಸುತ್ತದೆ' ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ತಿಳಿಸಿದರು.ಅಂಕಿತ ಪುಸ್ತಕ ಪ್ರಕಾಶನವು ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಕೆ.ಎಂ.ಸೀತಾರಾಮಯ್ಯ ಅವರು ಅನುವಾದಿಸಿರುವ ಡಾಂಟೆಯ `ಡಿವೈನ್ ಕಾಮಿಡಿ', ಜಿ.ಬಿ. ಹರೀಶ ಸಂಪಾದಿಸಿರುವ `ತಂತ್ರ ದರ್ಶನ' ಮತ್ತು `ಸರ್ ಜಾನ್ ವುಡ್ರೋಫ್ ಅವರ ತಂತ್ರಶಾಸ್ತ್ರ ಪ್ರವೇಶ' ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ಮನುಷ್ಯನ ಮನಃಶಾಸ್ತ್ರವನ್ನು ವೇದಾಂತ, ತಂತ್ರಗಳು, ಅನುಭಾವ ಸೇರಿದಂತೆ ವಿವಿಧ ಮಜಲುಗಳಲ್ಲಿ ಅರ್ಥೈಸಿಕೊಂಡಾಗ ಮಾತ್ರ ಪರಿಪೂರ್ಣ ಮನೋವಿಜ್ಞಾನ ದಕ್ಕುತ್ತದೆ. ತಂತ್ರಶಾಸ್ತ್ರವು ಬೌದ್ಧಿಕ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಇದನ್ನು ಲೇಖಕರು ಬಹಳ ಆಸ್ಥೆಯಿಂದ ಸಂಪಾದಿಸಿದ್ದಾರೆ' ಎಂದು ಶ್ಲಾಘನೆ ವ್ಯಕ್ತಪಡಿಸಿದರು.`ಇಟಲಿಯ ಹೋಮರ್‌ನಂತೆ ಡಾಂಟೆ ಕೂಡ ಮಹಾಕಾವ್ಯವನ್ನು ರಚಿಸುವ ಮೂಲಕ ಜಗದ್ವಿಖ್ಯಾತನಾದವನು. ಈ `ಡಿವೈನ್ ಕಾಮಿಡಿ'ಯು ಬದಕುವ ಮಾರ್ಗವನ್ನು ತಿಳಿಸುತ್ತದೆ. ಇದನ್ನು ಕನ್ನಡದ  ನೆಲಕ್ಕೆ ತಂದಿರುವುದು ಮತ್ತೊಂದು ಹೆಮ್ಮೆ' ಎಂದು ಹರ್ಷ ವ್ಯಕ್ತಪಡಿಸಿದರು.ಗೋರಖ್‌ಪುರ ಮಠದ ನೀಲಕಂಠ ಸ್ವಾಮೀಜಿ, `ಬಾಹ್ಯ ಜಗತ್ತಿನಲ್ಲಿದ್ದುಕೊಂಡೇ ವ್ಯಕ್ತಿ ಅಂರ್ತಮುಖದ ದರ್ಶನ ಪಡೆಯಲು ಇಚ್ಛಿಸುತ್ತಾನೆ. ಆದರೆ ಇದನ್ನು ಸಾಧಿಸುವಲ್ಲಿ ಕೆಲವೇ ಬೈರಾಗಿಗಳು ಮುಂದಾಗುತ್ತಾರೆ. ಸಾಧನೆಯ ಹಾದಿಗೆ ತಂತ್ರಶಾಸ್ತ್ರವು ಹೊಸ ದಿಕ್ಕನ್ನು ಸೂಚಿಸುತ್ತದೆ. ಅನ್ಯ ನೆಲದವನಾಗಿದ್ದರೂ ವುಡ್ರೋಫ್ ಅವರು  ಸನ್ಯಾಸಿಯಾಗಿ ಮಾರ್ಪಾಡಾಗಿ ತಂತ್ರಶಾಸ್ತ್ರದ ಅಳ ಅಧ್ಯಯನಕ್ಕೆ ತೊಡಗಿದರು' ಎಂದು ಅವರು ಹೇಳಿದರು.ಲೇಖಕ ಜಿ.ಬಿ.ಹರೀಶ್, `ತಂತ್ರಶಾಸ್ತ್ರವೆಂದರೆ ಕಣ್ಕಟ್ಟು, ವಾಮವಿದ್ಯೆ ಎಂಬ ತಪ್ಪುಕಲ್ಪನೆಯಿದೆ. ಆದರೆ ಮಾನವೀಯ ಸೂಕ್ಷ್ಮ ಸಂಬಂಧಗಳ ಹೊಸ ವ್ಯಾಖ್ಯಾನವಾಗಿ ತಂತ್ರಶಾಸ್ತ್ರ ರೂಪುಗೊಂಡಿದೆ. ವರಕವಿ ದ.ರಾ ಬೇಂದ್ರೆ ಅವರು ತಾಂತ್ರಿಕ ವಿದ್ಯೆಯಲ್ಲಿ ಆಸಕ್ತಿ ಉಳ್ಳವರಾಗಿದ್ದರು. ಹಾಗಾಗಿ ಅವರ `ಅರಳು ಮರಳು' ಕೃತಿಯ ನಂತರ ಬಂದ ಕವಿತೆಗಳು ಸಾಮಾನ್ಯ ಜನರಿಗೆ ಅರ್ಥವಾಗಲು ಕಷ್ಟವಾಯಿತು' ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.