ಹೊಸ ಬಗೆ ಕಿರುಕುಳಗಳಿಗೆ ಕಡಿವಾಣ

7

ಹೊಸ ಬಗೆ ಕಿರುಕುಳಗಳಿಗೆ ಕಡಿವಾಣ

Published:
Updated:

ಅಸಭ್ಯ ಅಥವಾ ಅಶ್ಲೀಲ ಇಮೇಲ್ ಹಾಗೂ ಎಂಎಂಎಸ್‌ಗಳಿಗೆ  ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಬದಲಾದ ಕಾಲದ ಅಗತ್ಯಗಳಿಗೆ ಸ್ಪಂದಿಸುವಂತಹ ನಡೆಯಾಗಿದೆ ಇದು. ಈ ನಿಟ್ಟಿನಲ್ಲಿ 1986ರ ಮಹಿಳೆಯರ ಅಸಭ್ಯ ಚಿತ್ರಣ (ತಡೆ) ಕಾಯಿದೆಗೆ  ತಿದ್ದುಪಡಿ ತರುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕಾಯಿದೆ ರಚನೆಯಾಗಿ 26 ವರ್ಷಗಳ ನಂತರ ಇದೇ ಮೊದಲ ಬಾರಿಗೆ, ಎಲೆಕ್ಟ್ರಾನಿಕ್ ಸಂವಹನದ ಅಂಶಗಳು ಕಾಯಿದೆ ವ್ಯಾಪ್ತಿಗೆ ಸೇರಲಿವೆ.

ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದು ಅತ್ಯಂತ ಪ್ರಸ್ತುತವಾದದ್ದು. ಈ ತಿದ್ದುಪಡಿಗಳು ಕಾನೂನಾಗಿ ಜಾರಿಯಾದಲ್ಲಿ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಸಾಧ್ಯವಾಗಲಿದೆ. ಜೊತೆಗೆ ಗರಿಷ್ಠ ರೂ 5ಲಕ್ಷದಷ್ಟು ದಂಡವನ್ನು  ವಿಧಿಸಬಹುದಾಗಿದೆ. ಈ ಕಠಿಣ ಕ್ರಮಗಳು ಅಪರಾಧಗಳ ನಿಯಂತ್ರಣಕ್ಕೆಸಹಕಾರಿಯಾಗುವುದೆಂಬುದು ಆಶಯ.  ಮಹಿಳೆ ವಿರುದ್ಧದ ಹಿಂಸಾಚಾರ ಆಕೆ ಹುಟ್ಟುವ ಮೊದಲೇ ಆರಂಭವಾಗುವ ಕಾಲ ಇದು. ತಂತ್ರಜ್ಞಾನದ `ಅಭಿವೃದ್ಧಿ~ ಈ ಹಿಂಸಾಚಾರಕ್ಕೆ ಕೊಡುಗೆ ಸಲ್ಲಿಸುತ್ತಿರುವುದು ವಿಪರ್ಯಾಸ. ಗರ್ಭದಲ್ಲಿರುವ ಮಗು ಹೆಣ್ಣು ಅಥವಾ ಗಂಡು ಎಂಬುದನ್ನು ತಿಳಿದುಕೊಳ್ಳುವುದನ್ನು ತಂತ್ರಜ್ಞಾನ ಸುಲಭವಾಗಿಸಿದೆ. ಹೀಗಾಗಿ ಗಂಡುಮಗುವನ್ನೇ ಬಯಸುವ ನಮ್ಮ ಸಂಸ್ಕೃತಿಯಿಂದಾಗಿ ಹೆಣ್ಣು ಭ್ರೂಣಗಳ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು ಆಧುನಿಕ ಕಾಲದ ಹೊಸ ಪಿಡುಗಾಗಿದೆ.ಇದೇ ರೀತಿ ತಂತ್ರಜ್ಞಾನ ಮತ್ತೊಂದು ನೆಲೆಯಲ್ಲಿ ಹೆಣ್ಣುಮಕ್ಕಳನ್ನು ಕಾಡುತ್ತಿದೆ. ತಂತ್ರಜ್ಞಾನದ ಕ್ರಾಂತಿಯಿಂದಾಗಿ ಆಧುನಿಕ ಬದುಕಿನಲ್ಲಿ ಹೊಸ ಹೊಸ ಸಂವಹನದ ಸಾಧನಗಳು ಲಗ್ಗೆ ಇಟ್ಟಿವೆ ನಿಜ. ಆದರೆ ಬದುಕಿನ ಸುಖ ಸೌಲಭ್ಯಗಳನ್ನು ಹೆಚ್ಚಿಸುವ ಈ ಸಾಧನಗಳು ಕಿರುಕುಳದ ಹೊಸ ಸಾಧನಗಳಾಗಿಯೂ ದುರ್ಬಳಕೆಯಾಗುತ್ತಿರುವುದು ಮಾತ್ರ ದುರದೃಷ್ಟಕರ. ಅನುಭೋಗದ ವಸ್ತುವಾಗಿ ಹೆಣ್ಣುಮಕ್ಕಳನ್ನು ಕಾಣುವಂತಹ ದೃಷ್ಟಿಕೋನವನ್ನು ಪಸರಿಸುತ್ತಾ ಹಲವು ನೆಲೆಗಳಲ್ಲಿ ಹಿಂಸೆ ನೀಡುವ ಸಾಧನಗಳಾಗಿ ಈ ತಂತ್ರಜ್ಞಾನಗಳು ಬಳಕೆಯಾಗುತ್ತಿವೆ. ಹೀಗಾಗಿಯೇ 1986ರಲ್ಲಿ ಮುದ್ರಣ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದ ಕಾಯಿದೆಗೆ ದೃಶ್ಯ-ಶ್ರವ್ಯ ಮಾಧ್ಯಮ ಹಾಗೂ ವಿದ್ಯುನ್ಮಾನ ಸಂವಹನಗಳನ್ನೂ ಸೇರಿಸಿ ವ್ಯಾಪ್ತಿಯನ್ನು ವಿಸ್ತರಿಸಬೇಕಾಗಿರುವುದು ಅನಿವಾರ್ಯ ಕ್ರಮ.ಎಂಎಂಎಸ್ ಹಾಗೂ ವಿಡಿಯೊ ಕ್ಲಿಪ್‌ಗಳನ್ನು ಬಳಸಿ ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಹೀಗಿದ್ದೂ  ಕ್ರಮ ಕೈಗೊಳ್ಳಲು ಕಾನೂನಿನ ಆಯ್ಕೆಗಳು ಹೆಚ್ಚಿರಲಿಲ್ಲ. ಈಗ ಹೊಸ ಕಾನೂನು ಜಾರಿಯಾದಲ್ಲಿ ಇನ್ಸ್‌ಪೆಕ್ಟರ್ ಹಾಗೂ ಅವರಿಗಿಂತ ಹೆಚ್ಚಿನ ಅಧಿಕಾರವಿರುವ ಅಧಿಕಾರಿಗಳು ಶೋಧಕಾರ್ಯ ಕೈಗೊಳ್ಳಲು ಮುಂದಾಗಬಹುದು. ಸದ್ಯದ ಕಾನೂನಿನಲ್ಲಿ ರಾಜ್ಯ ಸರ್ಕಾರ ನಿಯೋಜಿಸಿದ ಅಧಿಕಾರಿಗಳಿಗೆ ಮಾತ್ರ  ಈ ಅಧಿಕಾರ ನೀಡಲಾಗಿತ್ತು. ಈಗ ಹೆಚ್ಚುವರಿ ಬದಲಾವಣೆಯಿಂದ ಕಾನೂನನ್ನು ಹೆಚ್ಚು ಸಮರ್ಪಕವಾಗಿ ಜಾರಿಗೊಳಿಸುವುದಕ್ಕೆ ಸಹಕಾರಿಯಾಗಬಹುದು ಎಂಬ ನಿರೀಕ್ಷೆ  ಹೊಂದಲಾಗಿದೆ. ಆದರೆ ಬಹಳ ಮುಖ್ಯವಾದದ್ದು ಸಂವೇದನಾಶೀಲ ಮನಸ್ಸು. ಅದಿಲ್ಲದಿದ್ದಲ್ಲಿ ಎಷ್ಟೇ ಬಲವಾದ ಕಾನೂನುಗಳಿದ್ದರೂ ಪ್ರಯೋಜನಕ್ಕೆ ಬಾರವು ಎಂಬುದನ್ನೂ ಮರೆಯುವಂತಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry