ಹೊಸ ಬಣ್ಣ-ಕನಸುಗಳ ಆಗದವರು

7

ಹೊಸ ಬಣ್ಣ-ಕನಸುಗಳ ಆಗದವರು

Published:
Updated:
ಹೊಸ ಬಣ್ಣ-ಕನಸುಗಳ ಆಗದವರು

ಕುಂಚ, ಕಲೆ, ಸಿನಿಮಾ, ಚಳವಳಿ, ಸಮಾನತೆ ಎಂದು ಹಚ್ಚಿಕೊಂಡಿರುವ ಒಂದಷ್ಟು ಯುವ ಮನಸ್ಸುಗಳ ಒಳಗುದಿಯ ಅಭಿವ್ಯಕ್ತಿ `ಆಗದವರು~ ಕಿರುಚಿತ್ರ. ಸಾಮಾಜಿಕ ತರತಮಗಳು ಹಾಗೂ ಅಪಾರ ಜೀವನಪ್ರೇಮವನ್ನು ಒಟ್ಟಿಗೇ ಹಿಡಿದಿಡುವಲ್ಲಿ ಯಶಸ್ವಿಯಾಗಿರುವ ಈ ಕಿರುಚಿತ್ರ ಎಲ್ಲ ವರ್ಗದವರ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸುತ್ತದೆ. ಇಲ್ಲಿನದು ಬೇಡುವ ಹಕ್ಕಲ್ಲ; ಕೇಳಿ ಪಡೆಯುವ ಹಕ್ಕು.ಕೇಳಿ ಹೊಂದುವ ಶಿಕ್ಷಣದ ಹಕ್ಕನ್ನು ಯಾವುದೇ ಅತಿರೇಕವಿಲ್ಲದೆ, ವಾಚ್ಯವಾಗಿಸದೆ, ಯಾರನ್ನೂ ದೂರದೆ ನಿರೂಪಿಸಿರುವುದು `ಆಗದವರು~ ಕಿರುಚಿತ್ರದ ವಿಶೇಷ. ಕಥೆಯೊಳಗಣ ಬಂಡಾಯವನ್ನೂ ಅತ್ಯಂತ ತಣ್ಣಗೆ, ಆದರೆ ಧ್ವನಿಪೂರ್ಣವಾಗಿ ಹೇಳಿರುವುದು ಗಮನಾರ್ಹ. ಉತ್ತರ ಕರ್ನಾಟಕದ ನುಡಿಗಟ್ಟು ಮತ್ತು ಪರಿಸರ (ಬಿಜಾಪುರ ಜಿಲ್ಲೆ) ಚಿತ್ರಕ್ಕೆ ಸಮೃದ್ಧ ಪ್ರಾದೇಶಿಕ ಸೊಗಡನ್ನು ಕಲ್ಪಿಸಿಕೊಟ್ಟಿದೆ.ಇಪ್ಪತ್ತೊಂದು ನಿಮಿಷಗಳ ಈ ಚಿತ್ರ ಶುರುವಾಗುವುದು ಒಂದು ಆರ್ದ್ರ ಸನ್ನಿವೇಶದ ಮೂಲಕ. ಅಜ್ಜಿಗೆ ಸುಡುಜ್ವರ. ಕೌದಿ ಹೊತ್ತು ಮಲಗಿದ್ದಾಳೆ. ಹಣೆಯ ಮೇಲೆ ತಣ್ಣೀರು ಬಟ್ಟೆ ಬದಲಿಸುತ್ತಾ ಮೊಮ್ಮಗ ಅಜ್ಜಿಯ ಸೇವೆ ಮಾಡುತ್ತಾನೆ. ಬಡತನವೇ ಮೈದಾಳಿದಂತಿರುವ ಮನೆಯಲ್ಲಿ ಅಜ್ಜಿ-ಮೊಮ್ಮಗ ಎರಡೇ ಜೀವಗಳು. ಹೀಗೆ, ಬಡತನದ ಸೂರಿನಡಿಯ ಬದುಕಿನ ಸೌಂದರ್ಯದ ಅನಾವರಣದೊಂದಿಗೆ ಕಿರುಚಿತ್ರ ಮುಂದುವರಿಯುತ್ತದೆ.ಬೆಳಗಾಗುವುದರೊಳಗೆ ಅಜ್ಜಿಗೆ ಜ್ವರ ಇಳಿಯುತ್ತದೆ. ಆದರೆ, ಆ ಹುಡುಗನೊಳಗೊಂದು ಹಿತವಾದ ಜ್ವರ ನಿಧಾನವಾಗಿ ಏರುತ್ತಿದೆ. ಶಾಲೆಯಲ್ಲಿ ಗಾಂಧಿಯ ಬಗ್ಗೆ ಮಾಡಿದ ಭಾಷಣಕ್ಕೆ ಅವನಿಗೊಂದು ಪೆನ್ನು ಬಹುಮಾನವಾಗಿ ದೊರೆತಿದ್ದು, ಆ ಪೆನ್ನು ಕನಸಿನಲ್ಲೂ ಅವನನ್ನು ಕಾಡುತ್ತಿದೆ. ಆದರೆ, ಶಾಲೆಗೆ ಹೋದ ಹುಡುಗನಿಗೊಂದು ಆಘಾತ ಕಾದಿದೆ. ಆ ಪೆನ್ನನ್ನು ಗೌಡರ ಮಗನಿಗೆ ಕೊಡಲಾಗಿದೆ!ಗೌಡರ ಮಗನಿಂದ ಬಡ ಅಜ್ಜಿಯ ಮೊಮ್ಮಗ ಪೆನ್ನನ್ನು ಮರಳಿ ಪಡೆಯುವುದೇ `ಆಗದವರು~ ಕಿರುಚಿತ್ರದ ಕಥೆ. ಗೌಡ ತನ್ನ ಮಗನನ್ನು ಸಮರ್ಥಿಸಿಕೊಳ್ಳುತ್ತಾನೆ. ಅಜ್ಜಿಯ ಮಗನಿಗೆ ಸ್ಪರ್ಧೆಯಲ್ಲಿ ಗೆಲ್ಲುವ ಸಾಮರ್ಥ್ಯವಾದರೂ ಎಲ್ಲಿಂದ ಬರಬೇಕು? ಎನ್ನುವುದು ಅವನ ತರ್ಕ.ಒಳಕೋಣೆಯಲ್ಲಿ ಎಲ್ಲವನ್ನೂ ಗಮನಿಸುವ ಗೌಡತಿ ತನ್ನ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ತನಗೆ ದಕ್ಕದ ಪೆನ್ನು ಇನ್ನೊಬ್ಬರಿಗೂ ದಕ್ಕಬಾರದು ಎನ್ನುವ ಸೇಡಿನಿಂದ ಮರಿಗೌಡ ತನ್ನಲ್ಲಿನ ಪೆನ್ನನ್ನು ನಾಯಿಗಳ ಬಳಿ ಎಸೆಯುತ್ತಾನೆ. ಕಚ್ಚಲು ಹಾತೊರೆವ ನಾಯಿಗಳಿಗೆ ಚಳ್ಳೆಹಣ್ಣು ತಿನ್ನಿಸುವ ಅಜ್ಜಿಯ ಮೊಮ್ಮಗ, ತನ್ನ ಪೆನ್ನನ್ನು ಎತ್ತಿಕೊಂಡು ಓಡುವುದರೊಂದಿಗೆ ಕಿರುಚಿತ್ರ ಮುಗಿಯುತ್ತದೆ.ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗದ ಕಾರಣಕ್ಕೆ ಬಹುಮಾನ ಕೈತಪ್ಪಿದರೂ, ಅದನ್ನು ಪಟ್ಟುಹಿಡಿದು ವಾಪಸ್ ಪಡೆಯುವ ಚಿತ್ರಣ ಕಿರುಚಿತ್ರದ ಉಜ್ವಲ ಭಾಗ. ಪ್ರಾಣಿಗಳನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಇಲ್ಲಿನ ಸೀಳುನಾಯಿಗಳಿಗೂ ಬಡವರನ್ನು ಪ್ರಾಣಿಗಳಂತೆ ಕಾಣಿಸುವ ದರ್ಪದ ವ್ಯಕ್ತಿಗಳಿಗೂ ಸಾಮ್ಯತೆಯಿದೆ.ಕೋಳಿ, ಕಾಗೆಗಳ ಮೂಲಕ ಹುಡುಗನ ಅವಸರದ ಸ್ನಾನವನ್ನು ಸೂಚಿಸುವ ಕ್ರಮವೂ ಚೆನ್ನಾಗಿದೆ. ಹೀಗೆ, ಎಲ್ಲಿಯೂ ವಾಚ್ಯವಾಗದೆ ಮೂಲಕಥೆಯೊಂದಿಗೆ ಜನಪದ ಬದುಕನ್ನು ಅನಾವರಣಗೊಳಿಸುತ್ತಾ ಹೋಗುವುದು `ಆಗದವರು~ ಚಿತ್ರದ ವಿಶೇಷ. ನರೇಶ ಮತ್ತು ಎಸ್. ವಿಷ್ಣುಕುಮಾರ್ ಕಿರುಚಿತ್ರದ ನಿರ್ದೇಶಕರು. ನರೇಶ್ `ಸಮುದಾಯ~ದಲ್ಲಿ ಇದ್ದುಬಂದವರು. ಕಿರುತೆರೆಯಲ್ಲಿಯೂ ಕೆಲಸ ಮಾಡಿರುವ ಅನುಭವಿ. ವಿಷ್ಣು ಬಣ್ಣಗಳ ಮೂಲಕ ಮಾತನಾಡುವ ಕಲಾವಿದರು, ದೃಶ್ಯಮಾಧ್ಯಮದ ಬಗ್ಗೆ ಒಲವುಳ್ಳವರು.ಇವರಿಬ್ಬರೂ ಯುವ ಕಥೆಗಾರ ಬಸವಣ್ಣೆಪ್ಪ ಕಂಬಾರರ `ಮಸಿಪೆನ್ನು~ ಕಥೆಯನ್ನು ತಮ್ಮ ಕಿರುಚಿತ್ರಕ್ಕೆ ಒಗ್ಗಿಸಿಕೊಂಡಿದ್ದಾರೆ. (ಚಿತ್ರಕಥೆ: ನರೇಶ, ಸಂಭಾಷಣೆ: ಸತ್ಯಮೂರ್ತಿ ಆನಂದೂರು). ಇವರಿಬ್ಬರ ನೇತೃತ್ವದ `ಆಗದವರು~ ತಂಡಕ್ಕೆ ಶಶಿಕಿರಣ್, ನಾಗರಾಜ್, ಮುರಳೀಧರ ಆಚಾರ್, ಮಧುಸೂದನ್ ನಿರ್ಮಾಪಕರಾಗಿ ಬೆಂಬಲ ನೀಡಿದ್ದಾರೆ.ಕಥೆ ನಡೆಯುವ ಪರಿಸರದ ಕಲಾವಿದರನ್ನೇ ಪಾತ್ರಗಳಾಗಿ ಬಳಸಿಕೊಂಡಿರುವುದು ಕಿರುಚಿತ್ರದ ಜೀವಂತಿಕೆಯನ್ನು ಹೆಚ್ಚಿಸಿದೆ. ಅಜ್ಜಿಯಾಗಿ ಸುಭದ್ರಮ್ಮ, ಮೊಮ್ಮಗನಾಗಿ ವಿಶಾಲ್ ಹಾಗೂ ಗೌಡನಾಗಿ ನಟಿಸಿರುವ ಬಾಬು, ಗೌಡತಿಯ ಪಾತ್ರದ ಸುನೀತಾ ಪಾಟೀಲ್- ಎಲ್ಲರೂ ಬಿಜಾಪುರ ಜಿಲ್ಲೆಯವರೇ.ಪರಮೇಶ್ ಅವರ ಕ್ಯಾಮೆರಾ ಹಾಗೂ ರಘು ಪ್ರಸಾದ್‌ರ ಸಂಕಲನ `ಆಗದವರು~ ಚಿತ್ರದ ತೀವ್ರತೆಯನ್ನು ಹೆಚ್ಚಿಸಿದೆ. ಜಾನಪದ ನೆಲೆಗಟ್ಟಿನ ಸಂಗೀತವನ್ನು ಬಳಸಿರುವ ಸಂಗೀತ ನಿರ್ದೇಶಕ ನೆಹೇಶ್ ಪೊಲ್, ಕಿರುಚಿತ್ರಕ್ಕೊಂದು ಕಾವ್ಯದ ಅನುಭೂತಿ ನೀಡಿದ್ದಾರೆ.

 

ಪೆನ್ನು ಪಡೆಯಲಿಕ್ಕಾಗಿ ಗೌಡರ ಮನೆಗೆ ನಡೆಯುವ ಅಜ್ಜಿ-ಮೊಮ್ಮಗನ ಪಯಣಕ್ಕೆ ಪ್ರಾರ್ಥನಗೀತೆಯಂತೆ ಜೋಗಿತಿಯರ ಪದ ಬಳಸಿಕೊಂಡಿರುವುದು ಸೊಗಸಾಗಿದೆ. ಪೆನ್ನನ್ನು ಒಂದು ರೂಪಕವಾಗಿ ಬಳಸಿಕೊಂಡಿರುವ `ಆಗದವರು~ ತನ್ನೊಳಗಿನ ಉಪ ಪಠ್ಯಗಳು ಹಾಗೂ ಪ್ರಾದೇಶಿಕ ಸೊಗಡಿನ ಕಾರಣದಿಂದಾಗಿ ಮುಖ್ಯವೆನ್ನಿಸುತ್ತದೆ.ನಿರ್ಮಾಪಕರು, ನಿರ್ದೇಶಕರು ಸೇರಿದಂತೆ `ಆಗದವರು~ ತಂಡದ ಬಹುತೇಕರು ಯುವಕರೇ ಆಗಿರುವುದು ವಿಶೇಷ. ಈಚಿನ ದಿನಗಳಲ್ಲಿ ದೃಶ್ಯಮಾಧ್ಯಮದ ಬಗ್ಗೆ ಒಲವುಳ್ಳ ತರುಣ ತರುಣಿಯರು ಕಿರುಚಿತ್ರಗಳ ಮೂಲಕ ಸಮಕಾಲೀನ ತವಕತಲ್ಲಣಗಳ ಮುಖಾಮುಖಿಗೆ ಪ್ರಯತ್ನಿಸುತ್ತಿದ್ದಾರೆ. ಅಂಥದೊಂದು ಪ್ರಯತ್ನವಾಗಿಯೂ `ಆಗದವರು~ ಗಮನಾರ್ಹ ಪ್ರಯತ್ನವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry