ಮಂಗಳವಾರ, ನವೆಂಬರ್ 12, 2019
28 °C

ಹೊಸ ಬರಹಗಾರರಿಂದ ಸಾಮಾಜಿಕ ಕಾಳಜಿ

Published:
Updated:
ಹೊಸ ಬರಹಗಾರರಿಂದ ಸಾಮಾಜಿಕ ಕಾಳಜಿ

ಶಿವಮೊಗ್ಗ: ಇಂದು ಸಮಾಜದ ವಿವಿಧ ವಲಯದ ಆನೇಕ ಹೊಸ ಬರಹಗಾರರು ಸಾಮಾಜಿಕ ಜವಾಬ್ದಾರಿಯ ಭಾರವನ್ನು ತಾವೇ ಹೊರುವ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಮರ್ಶಕಿ ಡಾ.ಸಬಿತಾ ಬನ್ನಾಡಿ ಅಭಿಪ್ರಾಯಪಟ್ಟರು.ನಗರದ ಕಮಲಾ ನೆಹರೂ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅಂತ:ಕರಣ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಸರ್ಜಾಶಂಕರ ಹರಳಿಮಠ ಅವರ `ಸುಡು ಹಗಲ ಸೊಲ್ಲು' ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ಸಾಹಿತ್ಯವನ್ನೇ ವೃತ್ತಿ ಆಗಿಸಿಕೊಂಡವರ ಸಾಹಿತ್ಯ ಇಂದು ಒಂದು ರೀತಿಯಲ್ಲಿ ಜಡ್ಡುಗಟ್ಟಿದ ಸ್ಥಿತಿಯಲ್ಲಿದೆ. ಈ ಹಿಂದೆ ಕ್ರಿಯಾಶೀಲರು, ಸೂಕ್ಷ್ಮಮತಿಗಳು ಹಾಗೂ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಇಂತಹವರು ಇಂದು ವಿಶ್ವವಿದ್ಯಾಲಯಗಳನ್ನು ಸೇರಿ ದ್ವೀಪವಾಗಿ, ದಿಕ್ಕೆಟ್ಟು ಹೋಗಿದ್ದಾರೆ. ಅಧಿಕಾರದ ಹಮ್ಮು, ಮನ್ನಣೆಯ ದಾಹ ಇವರಿಗೆ ಅಂಟಿಕೊಂಡಿದೆ. ಇಂತಹ ಸಂದರ್ಭದಲ್ಲಿ ವಿಭಿನ್ನ ವಲಯದ ಹೊಸ ಬರಹಗಾರರು ಸಾಹಿತ್ಯಕ್ಕೆ ಚಾಟಿ ಏಟು ಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದರು.ಸಾಹಿತ್ಯಕ್ಕೆ ಹೊಸ ನೀರು ಎಲ್ಲಿಂದ ಬೇಕಾದರೂ ಬರಲಿ ಎಂದ ಅವರು, ಅದು ಕಾರ್ಪೋರೇಟ್ ಜಗತ್ತಿನಿಂದ ಬೇಕಾದರೂ ಬರಲಿ, ಆದರೆ, ಕಾರ್ಪೋರೇಟಿಕರಣವಾಗಬಾರದು. ಹೀಗೆ ಬಂದವರು ಏನು ಬರೆಯುತ್ತಾರೆ? ಏನು ಹೇಳುತ್ತಿದ್ದಾರೆ ಎಂಬುದು ಮುಖ್ಯವಾಗಬೇಕು ಎಂದರು.ಸಾಹಿತಿಗಳು, ಚಳವಳಿಗೆ ಬರಬೇಕು ಎನ್ನುವ ಚರ್ಚೆ ಹಿಂದಿನಿಂದಲೂ ಇದೆ. ಇದೇ ಸಾಹಿತ್ಯ ಎಂಬ ನಿರ್ದಿಷ್ಟ ಕಟ್ಟುಪಾಡು ಹಾಕಿಕೊಂಡು ಬರೆಯುವವರು ಇದ್ದಾರೆ. ಇದರ ಮಧ್ಯೆ ಇದನ್ನು ನಿರ್ಲಕ್ಷಿಸಿ ಸಾಹಿತ್ಯ ರಚನೆಯಾಗುತ್ತಾ ಬಂದಿದೆ ಎಂದು ವಿಶ್ಲೇಷಿಸಿದರು.ಸಾಹಿತ್ಯದಲ್ಲಿ ಹೇರಿಕೆ ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಸಾಹಿತ್ಯಕ್ಕೆ ಸ್ವಾಯತ್ತ ಅಧಿಕಾರ ಇಲ್ಲ. ಇಂದು ಮಾರುಕಟ್ಟೆ ಕೇಂದ್ರೀತ ಸಮಾಜ ನಿರ್ಮಾಣವಾಗುತ್ತಿದೆ. ವ್ಯವಸ್ಥೆಯ ಆರ್ಥಿಕ ಸ್ವರೂಪ ಬದಲಾವಣೆ ಮಾಡಬೇಕಾಗಿದೆ ಎಂದು ಹೇಳಿದರು.ಪ್ರತ್ಯೇಕತೆ ಬೆಳೆಸುವ ಶಿಕ್ಷಣ, ದುಬಾರಿಯಾದ ಆರೋಗ್ಯ ಕ್ಷೇತ್ರ ಎರಡನ್ನೂ ಸಂಪೂರ್ಣ ರಾಷ್ಟ್ರೀಕರಣಗೊಳಿಸಬೇಕು ಎಂದು ಸಬಿತಾ ಬನ್ನಾಡಿ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.ಸಮಾನತೆ ಬೆಳೆಸಬೇಕಾದ ಶಿಕ್ಷಣ ಪ್ರತ್ಯೇಕಿಕರಣಗೊಳಿಸಿ ಸಮಾಜವನ್ನು ಕಲುಷಿತಗೊಳಿಸುತ್ತಿದೆ. ಜೀವಪರ ಸಂವೇದನೆಗಳನ್ನು ನಾಶಪಡಿಸಿ, ಜಾತಿ, ಧರ್ಮಗಳಿಗೆ ಸೀಮಿತಿಗೊಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಾಹಿತಿ ಪ್ರೊ.ಶ್ರೀಕಂಠ ಕೂಡಿಗೆ  ಭಾಗವಹಿಸಿದ್ದರು. ಲೇಖಕ ಸರ್ಜಾಶಂಕರ ಹರಳಿಮಠ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.ಕಿರಣ್ ಮಾರಶೆಟ್ಟಿಹಳ್ಳಿ ಸ್ವಾಗತಿಸಿದರು.

ಸಂತೋಷ್ ಪಿಳ್ಳಂಗೇರಿ ಸ್ಫೂರ್ತಿ ಗೀತೆ ಹಾಡಿದರು. ಕವಿ ಪ್ರಕಾಶ್ ಮರ‌್ಗನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಕೆ. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)