ಗುರುವಾರ , ಜೂನ್ 17, 2021
22 °C

ಹೊಸ ಬರಹಗಾರರಿಗೆ ಲಂಕೇಶರಲ್ಲಿ ವಿಶ್ವಾಸಾರ್ಹತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಲಂಕೇಶ್ ಸಾವಿನ ನಂತರ ಅವರ ಬರಹವನ್ನೇ ಕೆಲವರು ಒಂದು ರೀತಿಯ ಅವೈಜ್ಞೆ ಮಾಡುತ್ತಿರುವ ಈ ಸಂದರ್ಭದಲ್ಲಿ ಹೊಸ ಬರಹಗಾರರು ಲಂಕೇಶರಲ್ಲಿ ವಿಶ್ವಾಸಾರ್ಹತೆ ಕಾಣುತ್ತಿರುವುದು ಹೊಸ ಬೆಳವಣಿಗೆ ಎಂದು ಸಂಸ್ಕೃತಿ ಚಿಂತಕ ಪ್ರೊ.ನಟರಾಜ ಹುಳಿಯಾರ್ ಅಭಿಪ್ರಾಯಪಟ್ಟರು.ನಗರದ ಕುವೆಂಪು ರಂಗಮಂದಿರದಲ್ಲಿ ರಂಗಾಯಣ ಶಿವಮೊಗ್ಗ ಹಮ್ಮಿಕೊಂಡಿದ್ದ `ಪಿ. ಲಂಕೇಶ್ ನಾಟಕೋತ್ಸವ~ದ ಸಮಾರೋಪ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.ಲಂಕೇಶರು ಬೈಯುತ್ತಿದ್ದರು ಎನ್ನುವುದನ್ನು ಪ್ರಚಾರಗೊಳಿಸಿ, ಅವರು ತಿದ್ದುತ್ತಿದ್ದರು ಎನ್ನುವುದನ್ನು ಮರೆತು ಬಿಡುತ್ತಿದ್ದಾರೆ ಎಂದು ವಿಶ್ಲೇಷಿಸಿದ ಅವರು, ನೀನಾಸಂನ ಕೆ.ವಿ. ಅಕ್ಷರ ಅಂತಹವರು ಲಂಕೇಶರ ಹಲವು ನಾಟಕಗಳಲ್ಲಿ ಎರಡು ನಾಟಕಗಳು ಮಾತ್ರ ಮುಖ್ಯ ಎನ್ನುವ ಅರ್ಥದಲ್ಲಿ ಈಗ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಅಲ್ಲದೇ, ಲಂಕೇಶರಿಗೆ ಚಿತ್ರನಿರ್ದೇಶನಕ್ಕೆ `ಸ್ವರ್ಣ ಕಮಲ~ ಪ್ರಶಸ್ತಿ ಬಂದರೂ ಅದನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಡುವ ಪ್ರಯತ್ನ ಬುದ್ದಿಜೀವಿ ಸಿನಿಮಾ ನಿರ್ದೇಶಕ ವಲಯದಿಂದ ನಡೆದಿದೆ ಎಂದು ಆರೋಪಿಸಿದರು.ಲಂಕೇಶ್ ಬಹುದೊಡ್ಡ ಚಿಂತಕ. ಚಿಕಿತ್ಸಕ ದೃಷ್ಟಿಯಿಂದ ಸಮಾಜವನ್ನು ನೋಡುವ ಬರಹಗಾರ. ಅಭಿಪ್ರಾಯ ಮೂಡಿಸುವಂತಹ ನಮ್ಮಂತವರು ಅವರ ಚಿಂತನೆಗಳನ್ನು ಜನಮಾನಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಇಂದು ಆಗಬೇಕಿದೆ ಎಂದು ಸಲಹೆ ಮಾಡಿದರು.ಇಂದು ಮಾಧ್ಯಮದವರು, ವಕೀಲರು, ಪ್ರಾಧ್ಯಾಪಕರೆಲ್ಲರೂ ರಾಜಕೀಯ ಭಾಷೆಯಲ್ಲಿ ಮಾತನಾಡಲು ಆರಂಭಿಸಿದ್ದೇವೆ. ಸಮಾಜದಲ್ಲಿ ಆಗಿದ್ದು, ರಾಜಕೀಯದಲ್ಲಿ ನಡೆಯುತ್ತಿದೆ ಎಂದು ವಿಶ್ಲೇಷಿಸಿದ ಅವರು, ರಾಜಕಾರಣಿಯೊಬ್ಬ ಯಾವುದೋ ಒಂದು ಪ್ರಕರಣದಲ್ಲಿ ಕಂಡ ಗೆಲುವನ್ನು ಮಾಧ್ಯಮಗಳು ಸೇರಿದಂತೆ ಎಲ್ಲರೂ ಸಂಭ್ರಮಿಸುತ್ತಿರುವುದನ್ನು ಹೇಗೆ ವಿಶ್ಲೇಷಿಸಬೇಕು ಎಂದು ಅವರು ಪ್ರಶ್ನಿಸಿದರು.ರಾಜಕಾರಣಿ ಇಂದು ನಿರುದ್ಯೋಗಿಯಾಗಿದ್ದು, ಯಾವ ದೈಹಿಕ, ಬೌದ್ಧಿಕ ಚಟುವಟಿಕೆಗಳನ್ನು ಅವರು ಮಾಡುತ್ತಿಲ್ಲ. ಹಾಗಾಗಿ, ಅವರಲ್ಲಿ ನೀಚತನ ಹುಟ್ಟುತ್ತಿದೆ ಎಂದು ಅವರು ಹೇಳಿದರು.ಬಲಗೊಳ್ಳುತ್ತಿರುವ ಬಲಪಂಥೀಯ: ಜಾತಿ, ಮತದ ರಾಜಕೀಯ ಇಟ್ಟುಕೊಂಡೇ ಬಲಪಂಥೀಯ ವ್ಯವಸ್ಥೆ ಬಲಗೊಳ್ಳುತ್ತದೆ ಎಂಬುದನ್ನು ಈ ಹಿಂದೆಯೇ ಲಂಕೇಶ್ ಗುರುತಿಸಿದ್ದರು ಎಂದು ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.ಹಣ ಮತ್ತು ಜಾತಿ ಮೂಲಕ ಸಮಾಜದಲ್ಲಿ ಹೇಗೆ ಅದು ಪ್ರತಿಷ್ಠಾಪನೆಗೊಳ್ಳುತ್ತದೆ ಎಂಬುದರ ಬಗ್ಗೆ ಮುನ್ನೋಟ ಹೊಂದಿದ್ದ ಲಂಕೇಶ್, ಇದರಿಂದ ನಾಗರಿಕ ಸಮುದಾಯ ನಾಶವಾಗುತ್ತದೆ. ಸ್ವಾತಂತ್ರ್ಯ ಇರುವುದಿಲ್ಲ ಎಂಬ ಅಪಾಯಗಳನ್ನು  ಅರಿತಿದ್ದರು ಎಂದು ವಿಶ್ಲೇಷಿಸಿದರು.ಸಂಭ್ರಮದಿಂದ ಮಾತನಾಡುವ ಸ್ಥಿತಿ ಈಗಿಲ್ಲ. ಸಮಾಜದಲ್ಲಿ ನೈತಿಕ ಭ್ರಷ್ಟಾಚಾರ, ಹಣ ಸಂಬಂಧಿ ಹಪಹಪಿಕೆ ನಡೆಯುತ್ತಿದೆ. ಮುಗ್ಧ ಸಂತನೂ ಕೂಡ ಇಂದು ಸಿನಿಕನಾಗುವ ಸನ್ನಿವೇಶವಿದೆ. ಈ ಎಲ್ಲವನ್ನೂ ಅಮೂಲಾಗ್ರವಾಗಿಯೇ ಯೋಚನೆ ಮಾಡಬೇಕಿದೆ ಎಂದರು.ಈ ಸಂದರ್ಭದಲ್ಲಿ ಲಂಕೇಶ್ ಇದ್ದಿದ್ದರೆ ಹೀಗೆಲ್ಲಾ ಸಾಧ್ಯವಾಗುತ್ತಿತ್ತೇ ಎಂಬ ಮಾತುಗಳು ಕೇಳಿಬರುತ್ತಿವೆ. ನಮ್ಮ ಎಲ್ಲಾ ಪಾಪಗಳ ಭಾರವನ್ನು ಲಂಕೇಶ್ ಎಂಬ ಪ್ರತಿಮೆ ಮಾಡಿ ಆ ಮೂಲಕ ಪರಿಹಾರ ಕಾಣುವ ಪ್ರಯತ್ನ ಮಾಡುತ್ತಿವೆ. ಇದು ನಮ್ಮ ಹತಾಶೆಯನ್ನೂ ತೋರಿಸುತ್ತದೆ ಎಂದು ಚೆನ್ನಿ ವಿಶ್ಲೇಷಿಸಿದರು.ರೈತ ಮುಖಂಡ ಕಡಿದಾಳು ಶಾಮಣ್ಣ ಸಮಾರೋಪ ಭಾಷಣ ಮಾಡಿದರು. ಅಂಕಣಕಾರ ಬಿ. ಚಂದ್ರೇಗೌಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.