ಹೊಸ ಬ್ಯಾಂಕ್‌ಗಳ ಸಂ`ಕ್ರಾಂತಿ'

7

ಹೊಸ ಬ್ಯಾಂಕ್‌ಗಳ ಸಂ`ಕ್ರಾಂತಿ'

Published:
Updated:
ಹೊಸ ಬ್ಯಾಂಕ್‌ಗಳ ಸಂ`ಕ್ರಾಂತಿ'

ಹಲವು ವರ್ಷಗಳಿಂದ ಬ್ಯಾಂಕಿಂಗ್ ಕಾನೂನು ತಿದ್ದುಪಡಿಯನ್ನು ಕಾರ್ಮಿಕ ಸಂಘಗಳು ಹಾಗೂ ಎಡಪಂಥೀಯ ರಾಜಕೀಯ ಪಕ್ಷಗಳು ವಿರೋಧಿಸುತ್ತಾ ಬಂದಿದ್ದರೂ, ಉದಾರೀಕರಣ ಮತ್ತು ಸುಧಾರಣಾ ನೀತಿ ಪ್ರತಿಪಾದಕರು ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ ತರುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ.`ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ-2012' ಡಿಸೆಂಬರ್ 20ರಂದು ಲೋಕಸಭೆಯ ಸಮ್ಮತಿ ಪಡೆದಿದೆ. ಅದರ ಪರಿಣಾಮವಾಗಿ ಶೀಘ್ರದಲ್ಲಿಯೇ ಹೊಸ ಹೊಸ ಖಾಸಗಿ ಬ್ಯಾಂಕ್‌ಗಳು ದೇಶದ ವಿವಿಧೆಡೆ ತಲೆಯೆತ್ತಲಿವೆ.ಕಾರ್ಪೊರೇಟ್ ವಲಯದ ಹೆಸರಾಂತ ಉದ್ಯಮ ಸಂಸ್ಥೆಗಳು, ಮುಂಚೂಣಿ ನೆಲೆಯ ಉದ್ಯಮಪತಿಗಳು ಬ್ಯಾಂಕ್ ಆರಂಭಿಸಲು ಆಗಲೇ ತುದಿಗಾಲಿನಲ್ಲಿದ್ದಾರೆ. ಹೊಸ ಬ್ಯಾಂಕ್ ತೆರೆಯಲು ಅವಶ್ಯವಾದ ಪರವಾನಗಿಯ `ಮಾರ್ಗದರ್ಶಿ ಸೂತ್ರ'ದ ಪ್ರಕಟಣೆ ಯಾವಾಗ ಆಗುವುದೋ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನತ್ತ ದೃಷ್ಟಿ ನೆಟ್ಟಿದ್ದಾರೆ.ಈಗಿನ ತಿದ್ದುಪಡಿ ಮಸೂದೆಯಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತು ದೇಶದ ಅರ್ಥಿಕ ವ್ಯವಸ್ಥೆಯಲ್ಲಿ ಏನೇನು ಬದಲಾವಣೆಗಳು ಆಗಬಹುದು, ಈ ಬದಲಾವಣೆಗಳಿಂದ ಜನಸಾಮಾನ್ಯರಿಗೆ ಅನುಕೂಲವೋ ಅಥವಾ ಪ್ರತಿಕೂಲವೋ?ದೇಶದ ಖಾಸಗಿ ಕ್ಷೇತ್ರದಲ್ಲಿ ಶೀಘ್ರದಲ್ಲಿಯೇ ಇನ್ನಷ್ಟು ಬ್ಯಾಂಕ್‌ಗಳು ಜನ್ಮತಾಳಲಿವೆ ಎಂಬುದು ಸತ್ಯ. ಬ್ಯಾಂಕಿಂಗ್ ಕ್ಷೇತಕ್ಕೂ ವಿದೇಶಿ ಬಂಡವಾಳದ ಹಣದ ಹೊಳೆ ಹರಿಯಲಿದೆ, ಹೊಸ ಬ್ಯಾಂಕ್‌ಗಳಿಂದಾಗಿ ಉದ್ಯೋಗಾವಕಾಶವೂ ಹೆಚ್ಚಲಿದೆ ಎಂಬುದೂ ಅಷ್ಟೇ ಮುಖ್ಯವಾದ ಸಂಗತಿ. ಪ್ರಸ್ತುತ ದೇಶದಲ್ಲಿ ಅಂದಾಜು 174ಕ್ಕೂ ಹೆಚ್ಚು ಬ್ಯಾಂಕ್‌ಗಳಿವೆ. 1,01,261 ಶಾಖೆಗಳಿವೆ. ಸರಾಸರಿ 12 ಸಾವಿರ ಜನಕ್ಕೆ ಒಂದರಂತೆ ಬ್ಯಾಂಕ್ ಸೌಲಭ್ಯವಿದೆ. ಶೇ 41ರಷ್ಟು ಜನತೆ ಬ್ಯಾಂಕ್ ಖಾತೆ ಹೊಂದಿದವರಿದ್ದಾರೆ.`ವಿತ್ತೀಯ ಸೇರ್ಪಡೆ ಸಾಧನೆಗೆ ಬ್ಯಾಂಕಿಂಗ್ ಸೌಲಭ್ಯ ವಿಸ್ತರಿಸುವುದು, ಬಡವ-ಬಲ್ಲಿದ ಭೇದವಿಲ್ಲದೆ ಎಲ್ಲ ಪ್ರಜೆಗಳನ್ನೂ ಬ್ಯಾಂಕಿಂಗ್ ವ್ಯಾಪ್ತಿಗೆ ತರಬೇಕು. ಆ ಮೂಲಕ ವಿತ್ತೀಯ ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಬ್ಯಾಂಕಿಂಗ್ ಸೌಲಭ್ಯದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ಸಮರ್ಥವಾಗುವಂತೆ ದೇಶದ ಒಂದೆರಡು ಬ್ಯಾಂಕುಗಳನ್ನಾದರೂ ಸಜ್ಜುಗೊಳಿಸಬೇಕು ಎಂಬುದೇ ಈಗಿನ ತಿದ್ದುಪಡಿ ಉದ್ದೆೀಶ' ಎಂಬುದು ಕೇಂದ್ರ ಹಣಕಾಸು ಸಚಿವರ ಅಭಿಪ್ರಾಯ.ತುರುಸಿನ ಸ್ಪರ್ಧೆ

ಬ್ಯಾಂಕ್‌ಗಳು ಮತ್ತು ಶಾಖೆಗಳ ಸಂಖ್ಯೆ ಹೆಚ್ಚುವುದರಿಂದ ಬ್ಯಾಂಕಿಂಗ್ ಕ್ಷೇತ್ರ ವಿಸ್ತಾರಗೊಳ್ಳಲಿದೆ. ಹೊಸ ಬ್ಯಾಂಕ್‌ಗಳ ಸರಣಿ ಆರಂಭದಿಂದ ಬಹಳ ಸ್ಪರ್ಧಾತ್ಮಕವೂ ಆಗಲಿದೆ. ಖಾಸಗಿಯೋ ಅಥವಾ ಸರ್ಕಾರಿಯೋ, ಒಟ್ಟು ಹಳೆಯ ಬ್ಯಾಂಕ್‌ಗಳೆಲ್ಲವೂ ಗ್ರಾಹಕರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲಿಕ್ಕಾಗಿ ಮತ್ತು ಹೊಸಬರನ್ನು ಸೆಳೆಯುವುದಕ್ಕಾಗಿ ಸೇವೆಯ ಗುಣಮಟ್ಟ ಹೆಚ್ಚಿಸಬೇಕಾಗುತ್ತದೆ.ಲಾಕರ್ ಬಾಡಿಗೆ, ಹಣ ರವಾನೆ, ಫೋಲಿಯೋ ಶುಲ್ಕ, ಕನಿಷ್ಠ ಶಿಲ್ಕು ಕಡಿಮೆ ಮಾಡಬೇಕಾಗುತ್ತದೆ. ಚೆಕ್ ಪುಸ್ತಕ, ಮೊಬೈಲ್ ರಿಚಾರ್ಜ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೌಲಭ್ಯಗಳನ್ನು ಹೆಚ್ಚಿಸಬೇಕಾಗುತ್ತದೆ, ಜತೆಗೆ ಈವರೆಗೆ ವಿವಿಧ ಕಾರಣಗಳಿಗಾಗಿ ವಿಧಿಸುತ್ತಿದ್ದ ಶುಲ್ಕಗಳನ್ನೂ ಕಡಿಮೆ ಮಾಡಬೇಕಾಗುತ್ತದೆ. ಹೊಸ ಬ್ಯಾಂಕ್‌ಗಳ ಆರಂಭಕ್ಕೂ ಮುನ್ನವೇ ಈ ಎಲ್ಲ ಬದಲಾವಣೆ ಕಾಣಬರುವ ಸಾಧ್ಯತೆ ಇದೆ.ಸಮಯಕ್ಕೆ ಸರಿಯಾಗಿ ಪಾಸ್ ಪುಸ್ತಕ ದಾಖಲೆ ಪರಿಷ್ಕರಣೆ, ಠೇವಣಿ ರಸೀದಿ, ಹಣ ರವಾನೆ, ಕಲೆಕ್ಷನ್ ಚೆಕ್ ತ್ವರಿತ ವಿಲೇವಾರಿ, ಖಾತೆಗೆ ಕ್ಷಿಪ್ರವಾಗಿ ಜಮಾ ಮೊದಲಾದ ನಿತ್ಯದ ಪ್ರಕ್ರಿಯೆಗಳನ್ನು ಚುರುಕುಗೊಳಿಸುವುದು, ಗ್ರಾಹಕರಿಗೆ ತೃಪ್ತಿಯಾಗುವಂತೆ ಸೇವೆ ಸಲ್ಲಿಸುವುದು ಮೊದಲಾದ ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿದೆ. ಮುಖ್ಯವಾಗಿ ಗ್ರಾಹಕರ ಕುಂದುಕೊರತೆಗಳನ್ನು ಸೌಜನ್ಯದಿಂದ ವಿಚಾರಿಸಿ, ಮುಗುಳ್ನಕ್ಕು, ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಒದಗಿಸಲು ಸಿಬ್ಬಂದಿ ವರ್ಗ ತಯಾರಾಗುವುದು ಅನಿವಾರ್ಯವಾಗುತ್ತದೆ.`ಕೌಂಟರ್‌ನಲ್ಲಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಲಭ್ಯವಿಲ್ಲ'... `ಎಟಿಎಂ ಕೇಂದ್ರ ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೂ ಗಮನಿಸುವವರಿಲ್ಲ' ಅಥವಾ `ಎಟಿಎಂನಿಂದ ಹಣ ಸಿಗಲಿಲ್ಲ ಎಂಬ ದೂರು ನೀಡಿದರೂ ಸಮಸ್ಯೆ ಇತ್ಯರ್ಥಕ್ಕಾಗಿ ವಾರಗಟ್ಟಲೆ ಕಾಯಬೇಕು', `ಸಾಲ ಮಂಜೂರಾತಿಗೆ ಹಲವಾರು ಬಾರಿ ಬ್ಯಾಂಕಿಗೆ ಭೇಟಿ ಕೊಡಬೇಕಿದೆ' ಮೊದಲಾದವು ಇವತ್ತಿನ ಗ್ರಾಹಕರ ಮುಖ್ಯ ದೂರುಗಳಾಗಿವೆ.ಠೇವಣಿ ಮತ್ತು ಸಾಲ

ಬ್ಯಾಂಕಿಂಗ್ ವಹಿವಾಟಿನಲ್ಲಿ ಬಹಳ ಮುಖ್ಯವಾದುದು ಗ್ರಾಹಕರಿಂದ ವಿವಿಧ ಠೇವಣಿ ಸ್ವೀಕಾರ ಮತ್ತು ಸಾಲ ವಿತರಣೆ. ಠೇವಣಿ ಒಂದು ರೀತಿಯ ಕಚ್ಛಾ ಮಾಲು ಇದ್ದಂತೆ. ಬ್ಯಾಂಕ್ ಅಭಿವೃದ್ಧಿಗೆ ಅತ್ಯಗತ್ಯವಾದುದು. ಆದ್ದರಿಂದ ಎಲ್ಲ ಬ್ಯಾಂಕ್‌ಗಳೂ ಠೇವಣಿದಾರರಿಗೆ ಮಣೆ ಹಾಕುತ್ತವೆ. ಜತೆಗೆ ಸಾಲ ನೀಡಿ ಬಡ್ಡಿ ಗಳಿಸುವ ಮೂಲಕ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳುವುದು? ಎಂಬ ಕುರಿತೂ ಚಿಂತಿಸುತ್ತಿರುತ್ತವೆ.ಕ್ರೋಡೀಕರಿಸಿದ ಠೇವಣಿಯನ್ನು ಬ್ಯಾಂಕ್‌ಗಳು ಎಷ್ಟು ಸಮರ್ಪಕವಾಗಿ ಸಾಲ ವಿಭಾಗದಲ್ಲಿ ವಿನಿಯೋಜಿಸುತ್ತವೆ, ಸಾಲದ ವಸೂಲಿ ಹೇಗೆ ಮಾಡುತ್ತವೆ, ಬ್ಯಾಂಕಿಂಗ್ ಚಟುವಟಿಕೆಯ ನಿರ್ವಹಣಾ ವೆಚ್ಚವನ್ನು ಯಾವ ಪ್ರಮಾಣದಲ್ಲಿ ತಗ್ಗಿಸುತ್ತವೆ ಎಂಬ ಅಂಶಗಳೆಲ್ಲವೂ ಲಾಭ ಗಳಿಕೆ ಮತ್ತು ವೃದ್ಧಿಯನ್ನು ನಿರ್ಧರಿಸುವ ಅಂಶಗಳಾಗಿವೆ.ಈಗ ಹೊಸ ಬ್ಯಾಂಕ್‌ಗಳ ಆಗಮನದಿಂದಾಗಿ ಠೇವಣಿ ಸಂಗ್ರಹ ಮತ್ತು ಸಾಲ ವಿತರಣೆ ಎರಡೂ ಚಟುವಟಿಕೆಯಲ್ಲಿ ಸ್ಪರ್ಧೆ ಹೆಚ್ಚುತ್ತದೆ. ಅಂದರೆ, ಅಧಿಕ ಬಡ್ಡಿ ಆಮಿಷ ತೋರಿ ಠೇವಣಿ ಸಂಗ್ರಹ ಹೆಚ್ಚಿಸಿಕೊಳ್ಳುವುದು, ಕಡಿಮೆ ಬಡ್ಡಿದರದ ಆಕರ್ಷಣೆ ಮೂಲಕ ಸಾಲ ವಿತರಣೆ ಹೆಚ್ಚು ಮಾಡುವುದು ಪ್ರಮುಖ ಅಂಶಗಳಾಗಿರಲಿವೆ. ಆದರೆ, ಈ ಬಡ್ಡಿ ಆಮಿಷದ ಚಟುವಟಿಕೆಯನ್ನೂ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸುವ ಮಿತಿಯಲ್ಲಿಯೇ ನಡೆಸಬೇಕು.ಹೀಗೆ ಸ್ಪರ್ಧೆ ಎಂಬುದು ತಂತಿ ಮೇಲಿನ ನಡಿಗೆಯಂತೆ ಆಗುವುದರಿಂದ ಠೇವಣಿ-ಸಾಲ ಎರಡನ್ನೂ ಲಾಭದಾಯಕವಾಗಿ ನಿರ್ವಹಿಸುವ ಕೆಲಸವೇ ಬ್ಯಾಂಕಿನ ಅಭಿವೃದ್ಧಿ ಅಥವಾ ಹಿನ್ನಡೆಯನ್ನು ನಿರ್ಧರಿಸುವಂತಹುದಾಗಿರುತ್ತದೆ. ಒಂದೊಮ್ಮೆ ಸಾಲ ವಿತರಣೆಯಲ್ಲಿ ಸ್ಪರ್ಧೆ ವಿಪರೀತವಾದರೆ ಕೆಲವಾದರೂ ಬ್ಯಾಂಕುಗಳು ರೋಗಗ್ರಸ್ತವಾಗುತ್ತವೆ. ಆಗ,ಅವು ಇನ್ನೊಂದು ಬ್ಯಾಂಕಿನ ಜತೆ ವಿಲೀನಗೊಳ್ಳುವ ಸಂದರ್ಭವನ್ನೂ ತಳ್ಳಿಹಾಕುವಂತಿಲ್ಲ.ಆದರೆ ಲಾಭ ಗಳಿಕೆಯನ್ನೇ ಗುರಿಯಾಗಿಸಿಕೊಂಡ ಖಾಸಗಿ ಬ್ಯಾಂಕ್‌ಗಳು, ದೊಡ್ಡ ಉದ್ಯಮಿಗಳತ್ತಲೇ ಹೆಚ್ಚು ದೃಷ್ಟಿ ಹರಿಸಬಹುದು. ಅವು ಸಣ್ಣಪುಟ್ಟ ವ್ಯಾಪಾರಸ್ಥರಿಗೆ, ಸಣ್ಣ ಹೋಟೇಲ್‌ನವರಿಗೆ, ಕುಶಲಕರ್ಮಿಗಳಿಗೆ, ಸ್ವಉದ್ಯೋಗಿಗಳಿಗೆ ಸಾಲ ಕೊಡುತ್ತವೆಯೇ? ಆದ್ಯತಾ ಕ್ಷೇತ್ರವಾದ ಕೃಷಿ, ಸಣ್ಣ ಕೈಗಾರಿಕೆ, ಶಿಕ್ಷಣ ಸಾಲ ನೀಡುವ ಜವಾಬ್ದಾರಿಯೇನಿದ್ದರೂ ಈಗಿನಂತೆ ಆಗಲೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ದೊಡ್ಡ ಜವಾಬ್ದಾರಿ ಆಗಿರುತ್ತದೆಯೇ?ಇಲ್ಲಿ ವಿತ್ತೀಯ ಸೇರ್ಪಡೆ ವಿಚಾರ ಗಮನಾರ್ಹ ಅಂಶ. ಆ ಬಗ್ಗೆ ಈ ಕೆಳಗೆ ನೀಡಿರುವ ಕೋಷ್ಠಕದಿಂದ ಯಾರು, ಎಲ್ಲಿ, ಎಷ್ಟು ಪ್ರಮಾಣದಲ್ಲಿ ಸಾಲ ಪಡೆಯುತ್ತಾರೆ ಎಂಬುದನ್ನು ತಿಳಿಯಬಹುದು.ಹಾಗಾದರೆ, ವಿತ್ತೀಯ ಸೇರ್ಪಡೆ ಎಂಬುದು ಮರೀಚಿಕೆಯೇ? ಅದು ಕೇವಲ ಆದರ್ಶ ಘೋಷಣೆಯಾಗಿಯಷ್ಟೇ ಉಳಿಯುವುದಿಲ್ಲವೇ? ಆದರೆ ವಿತ್ತೀಯ ಸೇರ್ಪಡೆಗೂ ಮತ್ತು ಹೊಸ ಖಾಸಗಿ ಬ್ಯಾಂಕ್‌ಗಳಿಗೆ ಪರವಾನಗಿ ನೀಡುವ ವಿಚಾರಕ್ಕೂ ತಿದ್ದುಪಡಿ ಮಸೂದೆಯಲ್ಲಿ ಯಾವುದೇ ಸಂಬಂಧ ಕಲ್ಪಿಸಿಲ್ಲ!`ಅದ್ಯತಾ ವಲಯಕ್ಕೆ ಸಾಲ ವಿತರಿಸುವುದು ಎಲ್ಲ ಬ್ಯಾಂಕ್‌ಗಳಿಗೂ ಕಡ್ಡಾಯ. ಇಲ್ಲವಾದರೆ ಬ್ಯಾಂಕ್‌ಗಳು ದಂಡ ತೆರಬೇಕಾಗುತ್ತದೆ. ಬ್ಯಾಂಕ್‌ಗಳಿಗೆ ಲೈಸೆನ್ಸ್ ನೀಡುವ ಮಾರ್ಗದರ್ಶಿ ಸೂತ್ರದಲ್ಲಿ ವಿತ್ತೀಯ ಸೇರ್ಪಡೆ ಅಂಶ ಜಾರಿಗೆ ಅನುಕೂಲವಾಗುವ ಷರತ್ತುಗಳನ್ನು ವಿಧಿಸುತ್ತದೆ. ಇನ್ನು ಮುಂದೆ, ಖಾಸಗಿ ಅಥವಾ ಸರ್ಕಾರಿ ಬ್ಯಾಂಕ್‌ಗಳು ಸಣ್ಣಆರ್ಥಿಕ ಸಂಸ್ಥೆಗಳ(ಮೈಕ್ರೊ ಫೈನಾನ್ಸ್) ಮೂಲಕ ಸಾಲ ನೀಡುತ್ತವೆ. ಅಂತಹ ಸಂಸ್ಥೆಗಳಿಂದ ಪಡೆಯುವ ಸಾಲದ ಬಡ್ಡಿದರ ಶೇ 12 ಮೀರಬಾರದು ಎಂಬ ನಿರ್ಬಂಧವಿದೆ. ಆದ್ದರಿಂದ ಈ ಬಗ್ಗೆ ಆತಂಕ ಅನಗತ್ಯ. ಠೇವಣಿ ಮತ್ತು ಸಾಲದ ಬಡ್ಡಿದರ ಕಡಿಮೆ ಆಗುತ್ತದೆ, ಬಡ್ಡಿದರ ಹಣದುಬ್ಬರವನ್ನು ಅವಲಂಬಿಸಿದೆ' ಎಂಬುದು ಬ್ಯಾಂಕೊಂದರ ಉನ್ನತಾಧಿಕಾರಿಯ ಅಭಿಪ್ರಾಯ. ಆಧುನಿಕ ತಂತ್ರಜ್ಞಾನ ಬಳಕೆ

ಹೊಸ ಬ್ಯಾಂಕ್‌ಗಳ ಆಗಮನ ಆಧುನಿಕ ತಂತ್ರಜ್ಞಾನದ ನಂಟಿನೊಂದಿಗೇ ಆಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆಗ ಹಳೆಯ ಬ್ಯಾಂಕ್‌ಗಳೂ ಉನ್ನತ ಮಟ್ಟದ ತಂತ್ರಜ್ಞಾನದ ಬಳಕೆ ಹೆಚ್ಚಿಸಿಕೊಳ್ಳಬೇಕಾಗುತ್ತದೆ. (ಸದ್ಯ ಎಲ್ಲ ಬ್ಯಾಂಕ್‌ಗಳೂ ಕಂಪ್ಯೂಟರ್, ಅಗತ್ಯ ತಂತ್ರಜ್ಞಾನ ಅಳವಡಿಸಿಕೊಂಡಿವೆ). ಸ್ಪರ್ಧೆಯು ತಂತ್ರಜ್ಞಾನ ಬಳಕೆ ವಿಚಾರದಲ್ಲಿ ತೀವ್ರ ಸ್ವರೂಪ ಪಡೆಯುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆಗ ಬ್ಯಾಂಕಿಂಗ್ ವ್ಯವಹಾರಗಳು ಕ್ಷಿಪ್ರಗತಿಯಲ್ಲಿ ನಡೆಯುವಂತಾಗುತ್ತದೆ. ಬ್ಯಾಂಕಿಂಗ್ ಚಟುವಟಿಕೆ ಹೆಚ್ಚು ಮೊಬೈಲ್ ಮತ್ತು ಅಂತರ್ಜಾಲ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕವೇ(ಬಹುತೇಕ ನಗರ ಪ್ರದೇಶದಲ್ಲಿ) ನಡೆಯುತ್ತದೆ.ಹೊಸ ತಲೆಮಾರಿನ ಖಾಸಗಿ ಬ್ಯಾಂಕ್‌ಗಳಾದ ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ತಂತ್ರಜ್ಞಾನ ಬಳಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿವೆ. ಅವುಗಳ ಗ್ರಾಹಕರ ವಿದ್ಯುನ್ಮಾನ ಮಾರ್ಗ ಬಳಕೆಯ ಪ್ರಮಾಣ, ವಹಿವಾಟಿನ ರೀತಿ ನೋಡಿದರೆ ಈ ಖಾಸಗಿ ಬ್ಯಾಂಕ್‌ಗಳು ತಂತ್ರಜ್ಞಾನವನ್ನು ತಮ್ಮ ಗ್ರಾಹಕರಿಗೆ ತಲುಪಿಸುವಲ್ಲಿ ಬಹುತೇಕ ಯಶಸ್ಸು ಗಳಿಸಿವೆ ಎಂಬುದು ಮನದಟ್ಟಾಗುತ್ತದೆ. ಮೊಬೈಲ್ ಬ್ಯಾಂಕಿಂಗ್, ಅರ್‌ಟಿಜಿಎಸ್ ಮತ್ತು ನೆಫ್ಟ್ ವ್ಯವಹಾರಕ್ಕೆ ಸಂಬಂಧಿಸಿದ `ಆರ್‌ಬಿಐ' ಅಂಕಿ-ಅಂಶಗಳ ಪ್ರಕಾರ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ಹೊರತುಪಡಿಸಿದರೆ ಖಾಸಗಿ ಕ್ಷೇತ್ರದ ಎಚ್‌ಡಿಎಫ್‌ಸಿ, ಎಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್‌ಗಳೇ ಮುಂಚೂಣಿಯಲ್ಲಿವೆ.ಆದರೆ ದೇಶದ ಜನರಲ್ಲಿ ಅನಕ್ಷರಸ್ತರು ಮತ್ತು ಕಡಿಮೆ ವಿದ್ಯಾವಂತರ ಸಂಖ್ಯೆ ಹೆಚ್ಚಿರುವದರಿಂದ ಜನಸಾಮಾನ್ಯರನ್ನು ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ಸೇವೆಯಲ್ಲಿ ತೊಡಗಿಸುವುದು ದೊಡ್ಡ ಸವಾಲೇ ಸರಿ. ಆದರೆ ಈಗಿನ ತಿದ್ದುಪಡಿಯಲ್ಲಿ ಜನರಿಗೆ ಬ್ಯಾಂಕಿನ ಬಗ್ಗೆ ತಿಳುವನ್ನು ಹೆಚ್ಚಿಸುವ ಪ್ರಯತ್ನಕ್ಕೂ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಅನೇಕ ವರ್ಷಗಳಿಂದ ಚಾಲ್ತಿಯಲ್ಲಿಲ್ಲದ ಖಾತೆಗಳ ಹಣವನ್ನು ಉಪಯೋಗಿಸಿ ಜನರಿಗೆ ಮಾಹಿತಿ ಕೊಡುವ ವಿಚಾರದ ಪ್ರಸ್ತಾಪವೂ ತಿದ್ದುಪಡಿ ಮಸೂದೆಯಲ್ಲಿ ಇದೆ.

ಬ್ಯಾಂಕ್ ಶಾಖೆ ಪ್ರಾದೇಶಿಕ ಸಮತೋಲನ

ಬ್ಯಾಂಕ್‌ಗಳೇ ಇಲ್ಲದ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸುವುದರಿಂದ ಗ್ರಾಮೀಣ ಪ್ರದೇಶಗಳಿಗೂ ಬ್ಯಾಂಕಿಂಗ್ ಚಟುವಟಿಕೆ-ಸೇವೆ ಮುಟ್ಟಿಸಿದಂತಾಗುತ್ತದೆ. ಹೈನುಗಾರಿಕೆ, ವ್ಯವಸಾಯ, ತರಕಾರಿ ಬೆಳೆ, ಗೃಹ ಕೈಗಾರಿಕೆ, ಮೀನುಗಾರಿಕೆ ಮೊದಲಾದ ಅಲ್ಲಿನ ಆರ್ಥಿಕ ಚಟುವಟಿಕೆಗಳಿಗೂ ಅರ್ಥಿಕ ನೆರವು ದೊರಕಿಸಿಕೊಟ್ಟಂತಾಗುತ್ತದೆ. ಆದರೆ, ಪ್ರಸ್ತುತ ಅಂತಹ ಸನ್ನಿವೇಶವೇ ಸೃಷ್ಟಿಯಾಗಿಲ್ಲ ಎಂಬುದೇ ಬೇಸರದ ಸಂಗತಿ.ಖಾಸಗಿ ವಲಯದ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶದಲ್ಲಿ ವಹಿವಾಟು ವಿಸ್ತರಿಸಲು ಇಲ್ಲಿಯವರೆಗೂ ಹೆಚ್ಚು ಆಸಕ್ತಿ ತೋರಿಲ್ಲ ಎಂಬುದು ಮೇಲಿನ ಕೋಷ್ಠಕದಿಂದ ಮನದಟ್ಟಾಗುತ್ತದೆ.ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ವಿಚಾರದಲ್ಲಿ, ಹೊಸದಾಗಿ ಆರಂಭಿಸುವ ನಾಲ್ಕು ಶಾಖೆಗಳಲ್ಲಿ ಒಂದನ್ನಾದರೂ ಬ್ಯಾಂಕ್‌ಗಳೇ ಇಲ್ಲದ ಪ್ರದೇಶದ್ಲ್ಲಲಿ ತೆರೆಯಬೇಕು ಎಂಬ `ಆರ್‌ಬಿಐ' ಅದೇಶ ಹೊರತುಪಡಿಸಿದರೆ, ಬೇರೆ ಯಾವುದೇ ಮಾರ್ಗಸೂಚಿ ಇಲ್ಲ. ಹಾಗಾಗಿ, ಈ ಅಸಮತೋಲನ ಪ್ರವೃತ್ತಿ ಮತ್ತೂ ಮುಂದುವರಿಯುವ ಲಕ್ಷಣಗಳೇ ಇವೆ.ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಅದ್ಯತಾ ವಲಯಕ್ಕೆ ರಿಯಾಯಿತಿ ಬಡ್ಡಿದರದ ಸಾಲ ನೀಡಲು ಗ್ರಾಮೀಣ ಪ್ರದೇಶದಲ್ಲಿ ಶಾಖೆ ತೆರೆಯುವುದು ಅನಿವಾರ್ಯ. ಆದರೆ, ಖಾಸಗಿ ವಲಯದ ಹಾಗೂ ವಿದೇಶಿ ಬ್ಯಾಂಕ್‌ಗಳ ವಿಚಾರದಲ್ಲಿ ಇದೇ ಮಾತು ಹೇಳುವಂತಿಲ್ಲ. ನಗರ ಪ್ರದೇಶದಲ್ಲಿಯೇ ಖಾಸಗಿ ಬ್ಯಾಂಕ್‌ಗಳಿಗ ಹೆಚ್ಚಿನ ವರಮಾನ ಇರುವುದರಿಂದ ಅವು ವಹಿವಾಟು ವೃದ್ಧಿ-ಲಾಭ ಗಳಿಕೆ ಬಗ್ಗೆ ಚಿಂತಿಸುವಂತಿಲ್ಲ. ಹಾಗಾಗಿ ಈಗಿರುವ ಖಾಸಗಿ ಬ್ಯಾಂಕ್‌ಗಳಾಗಲೀ, ಮುಂದೆ ಆರಂಭಗೊಳ್ಳಲಿರುವ ಹೊಸ ಬ್ಯಾಂಕ್‌ಗಳಾಗಲೀ ಗ್ರಾಮೀಣ ಭಾಗದತ್ತ ಗಮನ ಹರಿಸುತ್ತವೆ ಎಂಬುದನ್ನು ನಿರೀಕ್ಷಿಸುವಂತಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ ಪಾತ್ರ

ಯಾವುದೇ ಬ್ಯಾಂಕ್ ಆರಂಭಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪರವಾನಗಿ ಅತ್ಯವಶ್ಯ. ಈಗಿನ ತಿದ್ದುಪಡಿ ಪ್ರಕಾರ ಹೊಸ ಖಾಸಗಿ ಬ್ಯಾಂಕ್ ಆರಂಭಿಸಲು ನೀಡುವ ಪರವಾನಗಿ ಮಾರ್ಗದರ್ಶಿ ಸೂತ್ರದ ತಯಾರಿ, ಬ್ಯಾಂಕುಗಳ ಕಾರ್ಯಾಚರಣೆ ಮೇಲುಸ್ತುವಾರಿ ಅಂಶಗಳು ಆರ್‌ಬಿಐ ಹೊಣೆ ಮತ್ತು ಅಧಿಕಾರ ವ್ಯಾಪ್ತಿ ಹೆಚ್ಚಿಸಿವೆ.

ಅಂದರೆ, ಯಾವುದೇ ಬ್ಯಾಂಕಿನ ಕಾರ್ಯಾಚರಣೆ ಅಸಮರ್ಪಕ ಎನಿಸಿದರೆ ಅದರ ನಿರ್ದೇಶಕ ಮಂಡಳಿಯನ್ನು ರದ್ದುಗೊಳಿಸಲು, ಆ ಬ್ಯಾಂಕ್‌ನ ಆಡಳಿತವನ್ನು 12 ತಿಂಗಳವರೆಗೆ ತನ್ನ ಕೈಗೆ ತೆಗೆದುಕೊಳ್ಳಲು ಆರ್‌ಬಿಐಗೆ ಅಧಿಕಾರವಿದೆ.* ಬ್ಯಾಂಕಿಗೆ ಸಂಬಂಧಪಟ್ಟ ಕಾರ್ಯಾಚರಣೆ ಬಗ್ಗೆ ಸಂಶಯ ಉಂಟಾದರೆ ಆ ಸಂಸ್ಥೆಯ ಸಮಗ್ರ ಲೆಕ್ಕ ಪರಿಶೋಧನೆ ಅಧಿಕಾರವೂ ಆರ್‌ಬಿಐಗೆ ಇದೆ.* ರಿಯಲ್ ಎಸ್ಟೇಟ್, ಷೇರು ದಲ್ಲಾಳಿ ವ್ಯವಹಾರ ಮತ್ತು ಅತಿಯಾದ ಅಪಾಯ ಇರುವಂತಹ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳನ್ನು ಬ್ಯಾಂಕಿಂಗ್ ಕ್ಷೇತ್ರ ಪ್ರವೇಶದಿಂದ ಹೊರಗಿಡುವ (ಉದಾ:ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ದಿವಾಳಿ) ಜವಾಬ್ದಾರಿಯೂ ಇದೆ.* ಬ್ಯಾಂಕ್ ಅರಂಭಿಸಲು ಪರವಾನಗಿ ಕೋರುವ ಸಂಸ್ಥೆ ಅಥವಾ ವ್ಯಕ್ತಿಯು ಹಲವು ಷರತ್ತುಗಳನ್ನು ಪಾಲಿಸಬೇಕಿದೆ. (1) ಅರ್ಥಿಕ ರಂಗದಲ್ಲಿ ಪರಿಣತಿ ಇರಬೇಕು (2) ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಹಾಗೂ ಗ್ರಾಹಕರ ದೂರಿಗೆ ಸೂಕ್ತ ಪರಿಹಾರ ಒದಗಿಸುವ ಸಾಮರ್ಥ್ಯವುಳ್ಳ ತಂಡವನ್ನು ಹೊಂದಿರಬೇಕಾದ್ದು ಅವಶ್ಯ (3) ಆಡಳಿತದಲ್ಲಿ ಪಾರದರ್ಶಕ ನೀತಿ ಮತ್ತು ಸಕಾಲದಲ್ಲಿ ಅಗತ್ಯ ಮಾಹಿತಿಗಳನ್ನು ಪ್ರಕಟಿಸುವ ಕ್ರಮ ಅನುಸರಿಸಬೇಕು.ಬ್ಯಾಂಕ್ ಪ್ರವರ್ತಕರೊಂದಿಗೆ (ಪ್ರಮೋಟರ್) ಅಥವಾ ಅವರಿಗೆ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಯಾವುದೇ ಸಂಬಂಧವಿರದ ಸ್ವತಂತ್ರ ನಿರ್ದೇಶಕರು ನಿರ್ದೇಶಕ ಮಂಡಳಿಯಲ್ಲಿ ಕನಿಷ್ಠ ಶೇ 50ರಷ್ಟು ಮಂದಿಯಾದರೂ ಇರಬೇಕು.ಹೊಸ ಬ್ಯಾಂಕ್‌ಗಳ ಆರಂಭದಿಂದ ಸ್ಪರ್ಧೆ ಹೆಚ್ಚಿ, ಭವಿಷ್ಯದಲ್ಲಿ ಎಲ್ಲ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆ ಮತ್ತು ಸೌಲಭ್ಯಗಳು ಬಹಳ ಸುಲಭವಾಗಿ ಕೈಗೆಟುಕಲಿವೆ. ಆ ಮೂಲಕ ದೇಶದ ಪ್ರಗತಿಗೆ ಪೂರಕವಾದ ಗುರುತರ ಜವಾಬ್ದಾರಿಯನ್ನು ಆರ್‌ಬಿಐ ಯಶಸ್ವಿಯಾಗಿ ನಿರ್ವಹಿಸಲಿದೆ.ಅಮೆರಿಕದಲ್ಲಿ ಬ್ಯಾಂಕ್‌ಗಳು ಗೃಹಸಾಲ ನೀಡುವ ವಿಚಾರದಲ್ಲಿ ಅನಾರೋಗ್ಯಕಾರಿ ಸ್ಪರ್ಧೆಗೆ ಬಿದ್ದು ಪತನದ ಹಾದಿಗೆ ಹೊರಳಿದ್ದನ್ನು, ದೇಶದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದ್ದನ್ನು ಗಮನದಲ್ಲಿಟ್ಟುಕೊಂಡು, ಇಂಥ ಅಪಾಯಗಳು ಭಾರತದಲ್ಲಿ ಆಗದಂತೆ ಆರ್‌ಬಿಐ ನಿಗಾವಹಿಸುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಏಕೆಂದರೆ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ವ್ಯವಸ್ಥೆ-ನಿರ್ವಹಣಾ ಕ್ರಮ ಬಹಳ ಕಠಿಣವಾದ ಮಾರ್ಗಸೂಚಿಗಳಡಿಯೇ ಇದೆ. ಆರ್‌ಬಿಐ ಸಹ ಪರಾಮರ್ಶೆ ನಡೆಸುವುದು, ಬಡ್ಡಿದರ-ಹೊಸ ನೀತಿಗಳ ಪ್ರಕಟಣೆ ಹೊರಡಿಸುವುದು ಮೊದಲಾದ ಕ್ರಮಗಳನ್ನು ನಿಗದಿಯಂತೆ ಮಾಡುತ್ತಲೇ ಬಂದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry