ಭಾನುವಾರ, ಮೇ 31, 2020
27 °C

ಹೊಸ ಮರಳು ನೀತಿಗೆ ಸರ್ಕಾರ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಎಂಟನೇ ತರಗತಿ ಮಕ್ಕಳಿಗೆ ಹಣದ ಬದಲು ಹಿಂದಿನ ಹಾಗೆ ಸೈಕಲ್ ನೀಡಿಕೆ, ತಮಿಳುನಾಡು ಮಾದರಿಯಲ್ಲಿ ನೂತನ ಮರಳು ನೀತಿ, ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಸೇರಿದಂತೆ ಹಲವು ಪ್ರಮುಖ ತೀರ್ಮಾನಗಳನ್ನು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹಣ ನೀಡುವುದಕ್ಕೆ ಶಾಸಕರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೈಕಲ್ ನೀಡಲಾಗುವುದು ಎಂದರು.

20 ದಿನಗಳ ಒಳಗೆ ಅಲ್ಪಾವಧಿ ಟೆಂಡರ್ ಕರೆದು ಸುಮಾರು ಆರು ಲಕ್ಷ ಸೈಕಲ್‌ಗಳನ್ನು ಖರೀದಿಸಲಾಗುವುದು. ಇದರ ಜವಾಬ್ದಾರಿಯನ್ನು ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ವಹಿಸಲಾಗಿದ್ದು, ಅವರ ಉಸ್ತುವಾರಿಯಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು.

ಮರಳು ನೀತಿ: ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ತಮಿಳುನಾಡು ಮಾದರಿಯಲ್ಲಿಯೇ ರಾಜ್ಯದಲ್ಲಿ ರೂಪಿಸಿರುವ ನೂತನ ಮರಳು ನೀತಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಬರುವ ಏಪ್ರಿಲ್ ಒಂದರಿಂದ ಇದು ಜಾರಿಗೆ ಬರಲಿದೆ. ಹಾಲಿ ಇರುವ ಗುತ್ತಿಗೆಗಳನ್ನು ಮಾರ್ಚ್ 31ಕ್ಕೆ ಮುಕ್ತಾಯಗೊಳಿಸಲಾಗುತ್ತದೆ. 31ರ ಒಳಗೆ ಮುಕ್ತಾಯಗೊಳ್ಳದ ಗುತ್ತಿಗೆಗಳನ್ನು ರದ್ದುಪಡಿಸಿ, ಗುತ್ತಿಗೆಯ ಉಳಿದ ಅವಧಿಯನ್ನು ಆಧರಿಸಿ ಗುತ್ತಿಗೆದಾರರಿಗೆ ಹಣ ಹಿಂತಿರುಗಿಸಲಾಗುತ್ತದೆ. ಹೊಸ ಮರಳು ನೀತಿ ಜಾರಿಗೆ ಹಾಲಿ ಇರುವ 1994ರ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.

ಭೌಗೋಳಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗಿದೆ. ಇದರ ಸಂಪೂರ್ಣ ಹೊಣೆಗಾರಿಕೆಯನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ವಹಿಸಲಾಗುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇರಿ ಸ್ಥಳೀಯವಾಗಿ ದರ ನಿಗದಿ ಮಾಡಲಿದ್ದಾರೆ ಎಂದರು.

ಹೊಸ ಮರಳು ನೀತಿ ಜಾರಿಯಾದ ನಂತರ ಬರುವ ಆದಾಯದಲ್ಲಿ ಶೇ 50ರಷ್ಟನ್ನು ಗ್ರಾಮ ಪಂಚಾಯಿತಿಗಳಿಗೆ ಹಾಗೂ ಇನ್ನುಳಿದ ಶೇ 50ರಷ್ಟನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗುತ್ತದೆ. ರಸ್ತೆಗಳ ನಿರ್ವಹಣೆಗಾಗಿ ಲೋಕೋಪಯೋಗಿ ಇಲಾಖೆ ಈ ಹಣ ಬಳಸಿಕೊಳ್ಳಲಿದೆ ಎಂದರು.

ಸದ್ಯ ಮರಳು ಗಣಿಗಾರಿಕೆಯಿಂದ ರೂ 11.5 ಕೋಟಿ ಆದಾಯ ಬರುತ್ತಿದ್ದು, ಹೊಸ ನೀತಿ ಜಾರಿ ನಂತರ ವಾರ್ಷಿಕ 80 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆ, ಫಿಲ್ಟರ್ ಮರಳಿನ ತಯಾರಿಕೆಯಲ್ಲಿ ತೊಡಗುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದರು.

ಪರಿಸರ ಮಾಲಿನ್ಯಕ್ಕೆ ಎಡೆಮಾಡಿಕೊಡುವ ಕರಾವಳಿಯ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆ ಅವಶ್ಯಕತೆಗೆ ಅನುಗುಣವಾಗಿ ಯಾಂತ್ರಿಕ ದೋಣಿ ಹಾಗೂ ಜೆಸಿಬಿಗಳನ್ನು ಬಳಸಬಹುದು.

ಬೆಂಬಲ ಬೆಲೆ: ತೊಗರಿ ಬೆಳೆಗಾರರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಪ್ರತಿ ಕ್ವಿಂಟಲ್ ತೊಗರಿಯನ್ನು ನಾಲ್ಕು ಸಾವಿರ ರೂಪಾಯಿ ಬೆಂಬಲ ಬೆಲೆಯಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ. ಗುಲ್ಬರ್ಗ, ಬೀದರ್, ರಾಯಚೂರು ಮತ್ತು ವಿಜಾಪುರ ಜಿಲ್ಲೆಯಲ್ಲಿ 30 ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೃಷಿ ಸಚಿವ ಉಮೇಶ್ ಕತ್ತಿ ತಿಳಿಸಿದರು.

ಈ ವರ್ಷ 9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಬೆಲೆ ಕುಸಿತದಿಂದಾಗಿ ರೈತರು ಆತಂಕಗೊಂಡಿದ್ದಾರೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಬಿತ್ತನೆ ಬೀಜದಲ್ಲಿನ ದೋಷದಿಂದಾಗಿ ಈ ವರ್ಷ ಕೆಲವೆಡೆ ತೊಗರಿ ಕಾಳು ಕಟ್ಟಿಲ್ಲ ಎಂಬ ದೂರುಗಳು ಬಂದಿವೆ. ಅಧಿಕಾರಿಗಳ ಮೂಲಕ ಈ ಬಗ್ಗೆ ಸರ್ವೇ ಮಾಡಿಸಲಾಗುತ್ತಿದೆ. ರೈತರನ್ನು ತೊಂದರೆಯಿಂದ ಮುಕ್ತಗೊಳಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಸೇತುವೆ ನಿರ್ಮಾಣ: ಉಡುಪಿ ಜಿಲ್ಲೆ ಕುಕ್ಕೆಹಳ್ಳಿ- ಬೆಳಂಪಳ್ಳಿ ಸುವರ್ಣ ನದಿಗೆ ಆರು ಕೋಟಿ ರೂಪಾಯಿ ವೆಚ್ಚದಲ್ಲಿ 10 ಮೀಟರ್ ಅಗಲದ ಸೇತುವೆ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದ್ದು, ತಕ್ಷಣ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಆಚಾರ್ಯ ತಿಳಿಸಿದರು.

ಬೆಂಗಳೂರು ದಕ್ಷಿಣ ತಾಲ್ಲೂಕು ದೊಡ್ಡಬೆಲೆ- ವೆಂಕಟಾಪುರ ಮಾರ್ಗದಲ್ಲಿ ದಿ. ಮಾಜಿ ಮುಖ್ಯಮಂತ್ರಿ ಬಿ.ಡಿ.ಜತ್ತಿ ಸಮಾಧಿವರೆಗೆ 5 ಕಿ.ಮೀ.ರಸ್ತೆ ಡಾಂಬರೀಕರಣಗೊಳಿಸಲು ನಿರ್ಧರಿಸಲಾಗಿದೆ.

ಸಂಸ್ಥೆಗಳಿಗೆ ಭೂಮಿ: ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ 51 ಎಕರೆ, ಬಾಗಲಕೋಟೆಯ ಎನ್.ಕೆ.ಯೂಟಿಲಿಟಿಸ್‌ಗೆ 170 ಎಕರೆ, ಸೇಡಂನ ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಘಟಕಕ್ಕೆ 383 ಎಕರೆ, ರಾಯಬಾಗ್ ತಾಲ್ಲೂಕು ಹಳಗವಾಡಿಯ ಬೀರೇಶ್ವರ ಸಕ್ಕರೆ ಕಾರ್ಖಾನೆಗೆ 133 ಎಕರೆ, ಸ್ವರ್ಣವಲ್ಲಿ ಮಠಕ್ಕೆ ಗೋಶಾಲೆ ತೆರೆಯಲು 111 ಎಕರೆ ಮತ್ತು ಚಿತ್ರದುರ್ಗ ಜಿಲ್ಲೆಯ ಪ್ರಕಾಶ್ ಪ್ಯಾಂಡ್ ಸಂಸ್ಥೆಗೆ 56 ಎಕರೆ ಜಮೀನು ನೀಡಲು ಒಪ್ಪಿಗೆ ನೀಡಲಾಗಿದೆ.

ಕ್ರಿಯಾ ಯೋಜನೆಗೆ ಒಪ್ಪಿಗೆ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಡಿಎನ್‌ಎ ಸೆಂಟರ್ ಅಭಿವೃದ್ಧಿಗೆ ರೂಪಿಸಿರುವ 15.15 ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ನಾಲ್ಕು ಕೋಟಿ ರೂಪಾಯಿ ಜೊತೆಗೆ, ಉಳಿದ 8.15 ಕೋಟಿ ರೂಪಾಯಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ. ಅನುವಂಶಿಕ ಕಾಯಿಲೆಗಳನ್ನು ಪತ್ತೆಹಚ್ಚಿ, ಅವುಗಳನ್ನು ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ ಈ ಕೇಂದ್ರದಲ್ಲಿ ಸಂಶೋಧನೆ ನಡೆಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.