ಬುಧವಾರ, ನವೆಂಬರ್ 20, 2019
22 °C

ಹೊಸ ಮುಖಗಳಿಗೇ ಅವಕಾಶ: ಸಿಂದಗಿ ವಿಶೇಷ

Published:
Updated:

ಸಿಂದಗಿ:  ಒಂದು ಬಾರಿ ಗೆಲ್ಲಿಸಿದ ಅಭ್ಯರ್ಥಿಯನ್ನು ಮತ್ತೆ ಗೆಲ್ಲಿಸದಿರುವುದು ಸಿಂದಗಿ ಮತಕ್ಷೇತ್ರದ ಮತದಾರರ ವಿಶೇಷ ಗುಣ.1957 ರಿಂದ 1972 ರ ವರೆಗಿನ ನಾಲ್ಕು ಅವಧಿಯಲ್ಲಿ ಇಬ್ಬರು ಅಭ್ಯರ್ಥಿಗಳು (ಶಂಕರಗೌಡ ಪಾಟೀಲ ಪಡಗಾನೂರ ಮತ್ತು ಸಿ.ಎಂ. ದೇಸಾಯಿ ಕಲಕೇರಿ) ಎರಡು ಬಾರಿ ಗೆದ್ದಿರುವುದನ್ನು ಹೊರತುಪಡಿಸಿದರೆ ನಂತರದಲ್ಲಿ ಯಾವೊಬ್ಬ ಅಭ್ಯರ್ಥಿಯೂ ಎರಡನೇ ಸಲ ಗೆದ್ದಿಲ್ಲ!ಈ ಕ್ಷೇತ್ರದಲ್ಲಿ ಈ ವರೆಗಿನ 12 ವಿಧಾನಸಭೆ ಚುನಾವಣೆಗಳಲ್ಲಿ ಏಳು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಷ್ಟ್ರೀಯ ಕಾಂಗ್ರೆಸ್ (ಸಂಸ್ಥಾ), ಜನತಾ ಪಕ್ಷ, ಜನತಾ ದಳ ಒಂದೊಂದು ಸಲ ಹಾಗೂ  ಬಿಜೆಪಿ ಎರಡು ಸಲ ಗೆದ್ದಿದೆ.ಚುನಾವಣೆಯ ಪಕ್ಷಿನೋಟ:  1957ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಡಗಾನೂರ ಗ್ರಾಮದ ಶಂಕರಗೌಡ ವೈ. ಪಾಟೀಲ ಆಯ್ಕೆಯಾದರು. 1962ರಲ್ಲಿ ಅದೇ ಪಕ್ಷದ ಸಿ.ಎಂ. ದೇಸಾಯಿ (ಕಲಕೇರಿ) ಚುನಾಯಿತರಾದರು. ಈ ಚುನಾವಣೆಯಲ್ಲಿ ಶಂಕರಗೌಡ ಪಾಟೀಲ ಪಕ್ಷೇತರರಾಗಿ ಸ್ಪರ್ಧಿಸಿ 2,146 ಮತ ಪಡೆದರು. 1967ರಲ್ಲಿ ಸಿ.ಎಂ. ದೇಸಾಯಿ ಅದೇ ಪಕ್ಷದಿಂದ ಸ್ಪರ್ಧಿಸಿ 16,668 ಮತಗಳನ್ನು ಪಡೆದು ಪುನರಾಯ್ಕೆಯಾದರು. ಪಕ್ಷೇತರ ಅಭ್ಯರ್ಥಿ ಶಂಕರಗೌಡ ಪಾಟೀಲ (ಪಡಗಾನೂರ) ಸೋತರು.1972ರ ಚುನಾವಣೆಯಲ್ಲಿ ಶಂಕರಗೌಡ ಪಾಟೀಲ (ಪಡಗಾನೂರ) ರಾಷ್ಟ್ರೀಯ ಕಾಂಗ್ರೆಸ್ (ಸಂಸ್ಥಾ) ಪಕ್ಷದಿಂದ  ಕಣಕ್ಕಿಳಿದು 17,516 ಮತ ಪಡೆದು ಚುನಾಯಿತರಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ  ವಕೀಲ ಎಂ.ಎಚ್. ಬೆಕಿನಾಳಕರ 16,558 ಮತ ಪಡೆದುಕೊಂಡಿದ್ದರು.1978ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) ಪಕ್ಷದಿಂದ ವಕೀಲ ಎಂ.ಎಚ್. ಬೆಕಿನಾಳಕರ ಸ್ಪರ್ಧಿಸಿ 19,592 ಮತ ಪಡೆದು ಜನತಾಪಕ್ಷದ ಶಂಕರಗೌಡ ಪಾಟೀಲ (18,268ಮತಗಳು) ಅವರನ್ನು ಪರಾಭವಗೊಳಿಸಿದರು.1983ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎನ್.ಆರ್. ಪಾಟೀಲ ಗೆಲುವು ಸಾಧಿಸಿದರು. 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಮಲ್ಲನಗೌಡ ದೌಲತ್‌ರಾಯ ಬಿರಾದಾರ (ಮಾಡಬಾಳ) 31,483 ಮತ ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ತಿಪ್ಪಣ್ಣ ಅಗಸರ (17,564 ಮತಗಳು) ವರನ್ನು ಸೋಲಿಸಿದರು. ಈ ಚುನಾವಣೆಯಲ್ಲಿ ಬಿಜೆಪಿಯ ಎಂ.ಎಸ್. ಮಠ  600, ಪಕ್ಷೇತರ ಅಭ್ಯರ್ಥಿ ಅಶೋಕ ಶಾಬಾದಿ ಕೇವಲ 189 ಮತ ಪಡೆದುಕೊಂಡಿದ್ದರು.1989ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಡಾ.ಆರ್.ಬಿ. ಚೌಧರಿ 29,798 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಜನತಾ ಪಕ್ಷದ ಎಂ.ಸಿ. ಮನಗೂಳಿ 21,169 ಮತ ಪಡೆದುಕೊಂಡಿದ್ದರು.1994ರಲ್ಲಿ ಜನತಾ ದಳ ಪಕ್ಷದಿಂದ ಸ್ಪರ್ಧಿಸಿದ ಎಂ.ಸಿ. ಮನಗೂಳಿ, 45,356 ಅತ್ಯಧಿಕ ಮತಗಳನ್ನು ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಡಾ.ಆರ್.ಬಿ. ಚೌಧರಿ (17,137 ಮತಗಳು) ಅವರನ್ನು ಪರಾಭವಗೊಳಿಸಿದರು.1999ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶರಣಪ್ಪ ತಿಪ್ಪಣ್ಣ ಸುಣಗಾರ 30,432 ಮತಗಳನ್ನು ಪಡೆದು ಆಯ್ಕೆಯಾಗಿ ಎಂ.ಸಿ. ಮನಗೂಳಿ (19,675) ಅವರನ್ನು ಸೋಲಿಸಿದರು. ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿದ್ದ ರಾಜೂ ಗುತ್ತೇದಾರ 15,629 ಮತಗಳು, ಅಶೋಕ ಶಾಬಾದಿ 13,921 ಮತಗಳನ್ನು ಪಡೆದುಕೊಂಡಿದ್ದರು.2004ರ ಚುನಾವಣೆಯಲ್ಲಿ ಅಶೋಕ ಗುರಪ್ಪ ಶಾಬಾದಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ 38,853 ಮತ ಪಡೆದು ಜಯಶಾಲಿಯಾದರು. ಜೆಡಿಎಸ್‌ನ ಎಂ.ಸಿ. ಮನಗೂಳಿ  29,803, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಶರಣಪ್ಪ ಸುಣಗಾರ 25,352 ಮತ ಪಡೆದುಕೊಂಡಿದ್ದರು.2008ರಲ್ಲಿ ರಮೇಶ ಬಾಳಪ್ಪ ಭೂಸನೂರ ಬಿಜೆಪಿ ಯಿಂದ ಸ್ಪರ್ಧಿಸಿ 35,227 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಜೆಡಿಎಸ್‌ನ ಎಂ.ಸಿ. ಮನಗೂಳಿ 20,466, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಶರಣಪ್ಪ ಸುಣಗಾರ 20,099 ಮತಗಳನ್ನು ಪಡೆದುಕೊಂಡಿದ್ದರು.

ಶಾಂತೂ ಹಿರೇಮಠ

ಪ್ರತಿಕ್ರಿಯಿಸಿ (+)